ಇತಿಹಾಸದ ಹಾದಿಯಲ್ಲಿ ಕೂನಬೇವು: ತಾಮ್ರ ಶಿಲಾಯುಗದಿಂದ ಇಂದಿನವರೆಗೆ*
ರಾಣೇಬೆನ್ನೂರಿನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಕೂನಬೇವು 3000 ಜನ ಸಂಖ್ಯೆಯನ್ನು ಹೊಂದಿದ್ದು ಕೃಷಿ ಆಧಾರಿತ ಕುಟುಂಬಳೆ ಹೆಚ್ಚು. ಸರ್ವಧರ್ಮಗಳ ಶಾಂತಿಯ ತೋಟವಾದ ಈ ಗ್ರಾಮವು ಇತಿಹಾಸಪೂರ್ವ ಕಾಲದ ನೆಲೆಯಾಗಿ ಗಮನಾರ್ಹವಾಗಿದೆ.
ಗ್ರಾಮನಾಮದ ಮೂಲವನ್ನು ಗಮನಿಸಿದರೆ, ಇಲ್ಲಿ ಬೆಳೆಯುತ್ತಿದ್ದ ಬೇವಿನ ಗಿಡಗಳು ವಕ್ರವಾಗಿ (ಕೂನಾಗಿ) ಬೆಳೆಯುತ್ತಿದ್ದವು ಎಂಬ ಸ್ಥಳೀಯ ಪರಂಪರೆ ಕಾಣಿಸುತ್ತದೆ. ಈ ಪ್ರದೇಶದಲ್ಲಿ ಗಾಳಿ ನಿರಂತರವಾಗಿ ಒಂದೇ ದಿಕ್ಕಿನಿಂದ ಬಲವಾಗಿ ಬೀಸುವುದು ಹಾಗೂ ನೀರಿನ ಪೂರೈಕೆ ಒಂದೇ ಭಾಗದಲ್ಲಿ ಹೆಚ್ಚು ದೊರಕುವುದು ಇಂತಹ ಪರಿಸರೀಯ ಕಾರಣಗಳಿಂದ ಬೇವಿನ ಗಿಡಗಳು ವಕ್ರವಾಗಿ ಬೆಳೆಯುತ್ತಿದ್ದಿರಬಹುದು. ಈ ವಿಶೇಷ ಲಕ್ಷಣದ ಆಧಾರದಿಂದಲೇ ಈ ಊರಿಗೆ “ಕೂನಬೇವು” ಎಂಬ ಹೆಸರು ಬಂದಿರಬಹುದು ಎಂಬ ಊಹೆ ಮಾಡಬಹುದು.
ಈ ಭಾಗದಲ್ಲಿರುವ ಕದಿರಮಂಡಲಗಿ, ಅಸುಂಡಿ ಹಾಗೂ ಕೂನಬೇವು ಗ್ರಾಮಗಳು ಪುರಾತತ್ವದ ದೃಷ್ಟಿಯಿಂದ ಮಹತ್ವ ಹೊಂದಿದ್ದು, 1959ರ ಉತ್ಖನನದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ತಾಮ್ರ ಶಿಲಾಯುಗದ ನೆಲೆಯೆಂದು ಘೋಷಿಸಲಾಯಿತು.
ಈ ಕಾಲದಲ್ಲಿ ಮಾನವ ಸಮಾಜವು ಪ್ರಕೃತಿಯ ಅವಲಂಬಿತ ಜೀವನದಿಂದ ಕ್ರಮೇಣ ಸಂಸ್ಕೃತ ಜೀವನದತ್ತ ಹೆಜ್ಜೆ ಇಡುತ್ತಿರುವ ಪರಿವರ್ತನೆಯ ಹಂತದಲ್ಲಿತ್ತು. ಕಲ್ಲಿನ ಆಯುಧಗಳ ಬಳಕೆಯಿಂದ ಮುಂದೆ ಸಾಗುತ್ತಾ, ಜನರು ತಾಮ್ರವನ್ನು ಉಪಯೋಗಿಸಿ ಆಯುಧಗಳು ಮತ್ತು ಉಪಕರಣಗಳನ್ನು ತಯಾರಿಸುವ ಜ್ಞಾನವನ್ನು ಪಡೆಯಲು ಆರಂಭಿಸಿದ್ದರು.
ಆ ಸಮಯದಲ್ಲಿ ಆಹಾರಕ್ಕಾಗಿ ಬೇಟೆಯಾಡುವುದು ಪ್ರಮುಖ ಜೀವನಾಧಾರವಾಗಿತ್ತು. ಇಂತಹ ಬೇಟೆಗಾರರ ಸಣ್ಣ ಗುಂಪುಗಳು ಸುರಕ್ಷಿತವಾಗಿರುವ ಹಾಗೂ ನೀರು ದೊರಕುವ ಪ್ರದೇಶಗಳನ್ನು ತಮ್ಮ ವಾಸಸ್ಥಾನಗಳಾಗಿ ಆಯ್ಕೆ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ಹಳ್ಳದ ಬಲದಂಡೆಯ ಎತ್ತರದ ಪ್ರದೇಶವೇ ಅವರ ವಾಸಸ್ಥಾನವಾಗಿರಬಹುದೆಂದು ಊಹಿಸಲಾಗುತ್ತದೆ. ಬಹುಶಃ ಈಗಿನ “ಮಳಿ ಚೌಡವ್ವನ” ಪ್ರದೇಶವೇ ಆ ಪ್ರಾಚೀನ ನೆಲೆಯಾಗಿರಬಹುದು. ಸ್ಥಳೀಯ ಹಿರಿಯರಾದ ಚನ್ನಬಸಪ್ಪ ಗುಡ್ಡಪ್ಪ ಸರವಂದ ಅವರ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಹಿಂದೆ ವೃತ್ತಾಕಾರದ ಶಿಲಾಗೋರಿಗಳು ಇದ್ದವು ಎಂಬುದು ಈ ಪ್ರದೇಶದ ಪುರಾತನ ನೆಲೆಯ ಬಗ್ಗೆ ಸುಳಿವು ನೀಡುತ್ತದೆ.
ತಾಮ್ರ ಶಿಲಾಯುಗದ ಜನರು ಮೂಲತಃ ಭೀಮಾ ಮತ್ತು ಕೃಷ್ಣಾ ನದಿಗಳ ತೀರ ಪ್ರದೇಶಗಳಿಂದ ಇತರ ಭಾಗಗಳಿಗೆ ಪ್ರಸರಣಗೊಂಡಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಈ ಜನರು ಸುಟ್ಟ ಮಣ್ಣಿನಿಂದ ಮಡಿಕೆಗಳನ್ನು ತಯಾರಿಸುವ ಕಲೆ, ಸುಧಾರಿತ ಕೃಷಿ ವಿಧಾನಗಳು, ಹಾಗು ಮಡಿಕೆಗಳ ಮೇಲೆ ಅಲಂಕಾರಿಕ ಚಿತ್ರಗಳನ್ನು ಬಿಡಿಸುವ ನೈಪುಣ್ಯವನ್ನು ಹೊಂದಿದ್ದರು. ಜೊತೆಗೆ ಅವರು ತಾಮ್ರವನ್ನು ಸಂಸ್ಕರಿಸುವ ತಂತ್ರಜ್ಞಾನವನ್ನು ಕೂಡ ತಿಳಿದುಕೊಂಡಿದ್ದರು.
ಇಂತಹ ಸಂಸ್ಕೃತಿಯ ಸಮುದಾಯವು ಸುಮಾರು ಕ್ರಿ.ಪೂ. 1300 ರಿಂದ 800ರ ಅವಧಿಯಲ್ಲಿ, ಅಂದರೆ ಇಂದಿನಿಂದ ಸುಮಾರು 3326 ರಿಂದ 2826 ವರ್ಷಗಳ ಹಿಂದೆ, ಈ ಭಾಗದ ಹಳ್ಳದ ದಡದಲ್ಲಿ ನೆಲೆಸಲು ಪ್ರಾರಂಭಿಸಿದರು ಎನ್ನಲು ಇಲ್ಲಿ 1959ರಲ್ಲಿ ನೆಡೆದ ಉತ್ಖನದಿಂದ ಖಚಿತವಾಗುತ್ತದೆ . ಈ ದೃಷ್ಟಿಯಿಂದ ನೋಡಿದರೆ, ಕೂನಬೇವು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಇತಿಹಾಸಪೂರ್ವ ಮಾನವ ಜೀವನದ ಮಹತ್ವದ ನೆಲೆಗಳಾಗಿ ಪರಿಗಣಿಸಬಹುದಾಗಿದೆ.
*ಕೂನಬೇವು ಗ್ರಾಮದ ಜೀವಜಲ:*
ಅಸುಂಡಿಯ ಕೆರೆಗೆ " ಪಿರಿಯಕೆರೆ" ಎಂಬ ಹೆಸರನ್ನು 1074 ಅಸುಂಡಿಯ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದೇ ಶಾಸನದಲ್ಲಿ ಇಲ್ಲಿಂದ ಹುಟ್ಟಿದ ಹಳ್ಳಕ್ಕೆ " ಕರಿಯಂಗೆರೆ ಹಳ್ಳ" ಎಂದು ಹೇಳಲಾಗಿದೆ. ಇದು ಕೂನಬೇವು ಗ್ರಾಮದ ಮುಖಾಂತರ ಮುಂದೆ ಮೈದೂರು ಗ್ರಾಮದಲ್ಲಿ ಹರಿದು ಹೋಗುತ್ತದೆ. ಅಲ್ಲಿಯ 1187ರ ಶಾಸನದಲ್ಲಿ " ಕುಡಕಂದಿ ಹಳ್ಳ" ( ಸಂಗಮವಾಗುವ ಹಳ್ಳ ಎಂದರ್ಥ) ಎಂದು ಕರೆಯಲಾಗಿದೆ. ಬ್ರಿಟಿಷ್ ಆಡಳಿತದಲ್ಲಿ "ಲಾರ್ಡ್ ರಿಪ್ಪನ್" ಅವರು 1882ರಲ್ಲಿ ಸ್ಥಳೀಯ ಸ್ವರಾಜ್ಯ ವ್ಯವಸ್ಥೆಯನ್ನು ಆರಂಭಿಸಿದರು. ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಆಡಳಿತ ಸಂಸ್ಥೆ ಇದ್ದು ಅದನ್ನು ಲೋಕಲ್ ಬೋರ್ಡ್ ಎಂದು ಕರೆಯುತ್ತಿದ್ದರು. ಇದೇ ಸಮಯದಲ್ಲಿ ಗ್ರಾಮದ ಮಧ್ಯದಲ್ಲಿ ಸಾರ್ವಜನಿಕರಿಗೆ ನೀರು ಪೂರೈಕೆಗಾಗಿ ವೃತ್ತಾಕಾರದ ಮೆಟ್ಟಿಲುಗಳನ್ನುಳ್ಳ ಬಾವಿ ನಿರ್ಮಾಣ ಮಾಡಲಾಯಿತು. ಸುಮಾರು 150ವರ್ಷಗಳನ್ನು ಪೂರೈಸಿದ ಬಾವಿ ಪಾಳು ಸ್ಥಿತಿಯಲ್ಲಿರುವುದು ವಿಷಾದನೀಯ.
*ರಾಜಮನೆತನಗಳ ಆಡಳಿತದಲ್ಲಿ ಗ್ರಾಮ*
ಕೂನಬೇವು ಗ್ರಾಮದ ಇತಿಹಾಸವು ವಿವಿಧ ರಾಜವಂಶಗಳ ಆಡಳಿತದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇತಿಹಾಸ ಪ್ರಾಧ್ಯಾಪಕರಾದ ಶ್ರೀನಿವಾಸ ಪಾಡಿಗಾರ ಅವರು ಈ ಪ್ರದೇಶದಲ್ಲಿ ನಡೆಸಿದ ಅಧ್ಯಯನದ ಸಂದರ್ಭದಲ್ಲಿ ಇಲ್ಲಿ ಶಾತವಾಹನರ ಕಾಲಕ್ಕೆ ಸೇರಿದ ಅವಶೇಷಗಳು ಕಂಡುಬಂದಿವೆ ಎಂದು ಉಲ್ಲೇಖಿಸಿದ್ದಾರೆ.
ಇದರಿಂದ ಈ ಪ್ರದೇಶವು ಪ್ರಾಚೀನ ಕಾಲದಿಂದಲೇ ಮಾನವ ವಾಸಸ್ಥಾನವಾಗಿದ್ದು, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಂಬಂಧ ಹೊಂದಿದ್ದಿರಬಹುದು ಎಂಬುದು ತಿಳಿಯುತ್ತದೆ.
ಅಂದು ಈ ಪ್ರದೇಶವು ಬನವಾಸಿ-12000 ಆಡಳಿತ ವ್ಯಾಪ್ತಿಗೆ ಸೇರಿದ್ದಿರಬಹುದೆಂದು ಊಹಿಸಲಾಗುತ್ತದೆ. ಅದೇ ಸಂದರ್ಭದಲ್ಲಿ ಬಿಂನವೂರ–12 ಎಂದು ಕರೆಯಲ್ಪಟ್ಟ ಆಡಳಿತ ಕೇಂದ್ರ (ಇಂದಿನ ರಾಣೇಬೆನ್ನೂರು) ಇದರ ಸಮೀಪದಲ್ಲಿದ್ದ ಕಾರಣ, ಕೂನಬೇವು ಆ ಆಡಳಿತ ವ್ಯವಸ್ಥೆಗೆ ಒಳಪಟ್ಟ ಒಂದು ಗ್ರಾಮವಾಗಿರಬಹುದೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತದೆ.
ಮುಂದಿನ ಕಾಲಘಟ್ಟದಲ್ಲಿ ಈ ಭಾಗವು ಗುತ್ತವೊಳಲದ ಗುತ್ತರಸರ ಆಡಳಿತಕ್ಕೂ ಸಂಬಂಧ ಹೊಂದಿರಬಹುದೆಂದು ಕಾಣಿಸುತ್ತದೆ. ಈ ರೀತಿಯಾಗಿ ಕೂನಬೇವು ಗ್ರಾಮವು ವಿವಿಧ ರಾಜವಂಶಗಳ ಆಡಳಿತದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿತ್ತು ಎಂದು ಹೇಳಬಹುದು.
ಗ್ರಾಮದ ಇತಿಹಾಸದ ಸಾಕ್ಷಿಗಳಾಗಿ ಇಲ್ಲಿ ಕಂಡುಬರುವ ಕೆಲವು ಪುರಾತನ ಸ್ಮಾರಕಗಳು ವಿಶೇಷವಾಗಿ ಗಮನಾರ್ಹವಾಗಿವೆ. ಗ್ರಾಮದಲ್ಲಿರುವ ಹನುಮಂತ ದೇವಾಲಯದ ಸಂಕೀರ್ಣದಲ್ಲಿ ಕಾಣುವ ದಾನ ಶಿಲಾಫಲಕ ಹಾಗೂ ವೀರಗಲ್ಲುಗಳು ಆ ಕಾಲದ ಜನರ ಧಾರ್ಮಿಕ ಭಕ್ತಿ, ದಾನಶೀಲತೆ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತವೆ. ವೀರಗಲ್ಲುಗಳು ಸಾಮಾನ್ಯವಾಗಿ ಯುದ್ಧದಲ್ಲಿ ಅಥವಾ ಸಮಾಜದ ರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ವೀರರನ್ನು ಸ್ಮರಿಸುವ ಸ್ಮಾರಕಗಳಾಗಿದ್ದು, ಅವು ಈ ಪ್ರದೇಶದ ಜನರ ಧೈರ್ಯ ಮತ್ತು ಸಾಹಸ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ.
ಇದೇ ಪ್ರದೇಶದ ಪಕ್ಕದಲ್ಲಿರುವ ಚನ್ನಾಪುರ ಗ್ರಾಮದಲ್ಲಿ ಟಿಪ್ಪು ಸುಲ್ತಾನನ ಕಾಲಕ್ಕೆ ಸೇರಿದ ಕನ್ನಡ ಶಾಸನ ಕಂಡುಬರುವುದರಿಂದ, ಆತನ ಆಡಳಿತದ ಪ್ರಭಾವವು ಈ ಭಾಗದ ಮೇಲೂ ಬೀಳದೇ ಇರಲಾರದು. ಇದರಿಂದ ಕೂನಬೇವು ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳು ಕಾಲಕ್ರಮೇಣ ವಿವಿಧ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿ ಬೆಳವಣಿಗೆಯನ್ನು ಕಂಡಿವೆ ಎಂಬುದು ಸ್ಪಷ್ಟವಾಗುತ್ತದೆ.
ಈ ಎಲ್ಲ ಅಂಶಗಳನ್ನು ಒಟ್ಟಾಗಿ ನೋಡಿದರೆ, ಕೂನಬೇವು ಗ್ರಾಮವು ಇತಿಹಾಸಪೂರ್ವ ಕಾಲದಿಂದ ಆರಂಭವಾಗಿ ಶಾತವಾಹನರಿಂದ ಹಿಡಿದು ನಂತರದ ವಿವಿಧ ರಾಜವಂಶಗಳ ಆಡಳಿತದವರೆಗೆ ತನ್ನ ಇತಿಹಾಸವನ್ನು ಸಾಗಿಸಿಕೊಂಡು ಬಂದಿರುವ ಒಂದು ಮಹತ್ವದ ಐತಿಹಾಸಿಕ ನೆಲೆ ಎಂಬುದಾಗಿ ಹೇಳಬಹುದು.
*ಪುರಾತನ ಗ್ರಾಮದ ಸಂಕೇತ – ಕರಿಕಲ್ಲು*
ಪ್ರಾಚೀನ ಕಾಲದಿಂದಲೂ ಗ್ರಾಮಗಳ ಜೀವನದಲ್ಲಿ ಕೆಲವು ವಿಶೇಷ ಸಂಕೇತಗಳು ಮಹತ್ವದ ಸ್ಥಾನವನ್ನು ಪಡೆದಿವೆ. ಅಂತಹ ಸಂಕೇತಗಳಲ್ಲಿ ಒಂದಾಗಿ ಕರಿಕಲ್ಲು ಈ ಗ್ರಾಮದ ಜನರ ನಂಬಿಕೆ ಮತ್ತು ಸಂಪ್ರದಾಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಸಾಮಾನ್ಯವಾಗಿ ಪುರಾತನ ಗ್ರಾಮಗಳ ಅಗಸಿ ಬಾಗಿಲಲ್ಲಿ ಒಂದು ಕಲ್ಲು ಸ್ಥಾಪಿಸಲ್ಪಟ್ಟಿದ್ದು, ಅದನ್ನು ಗ್ರಾಮಸ್ಥರು ಭಕ್ತಿಯಿಂದ ಪೂಜಿಸುತ್ತಾರೆ. ಜನಸಾಮಾನ್ಯರು ಈ ಕಲ್ಲನ್ನು “ *ಕರಿ ಕಲ್ಲು* ” ಎಂದು ಕರೆಯುತ್ತಾರೆ.
ಗ್ರಾಮದ ಜನರ ನಂಬಿಕೆಯ ಪ್ರಕಾರ, ಈ ಕರಿಕಲ್ಲು ಗ್ರಾಮದ ಆಧ್ಯಾತ್ಮಿಕ ರಕ್ಷಕ ಸಂಕೇತವಾಗಿದೆ. ಈ ಗ್ರಾಮದಲ್ಲಿ ಹೊಸದಾಗಿ ಜನಿಸುವ ಜೀವಾತ್ಮಗಳು ಹಾಗೂ ತಮ್ಮ ಜೀವನದ ಕರ್ಮಗಳನ್ನು ಮುಗಿಸಿಕೊಂಡು ಈ ಲೋಕವನ್ನು ತೊರೆಯುವ ಜೀವಾತ್ಮಗಳು ಕೂಡ ಕರಿಕಲ್ಲಿನ ಅನುಮತಿ ಇಲ್ಲದೆ ಗ್ರಾಮಕ್ಕೆ ಬರುವುದೂ ಇಲ್ಲ, ಹೋಗುವುದೂ ಇಲ್ಲ ಎಂಬ ನಂಬಿಕೆ ಜನಮನಗಳಲ್ಲಿ ಬೇರೂರಿದೆ. ಆದ್ದರಿಂದ ಊರಿನಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗಿಂತ ಮೊದಲು ಕರಿಕಲ್ಲಿಗೆ ಪೂಜೆ ಸಲ್ಲಿಸುವ ಪದ್ಧತಿ ಇಂದಿಗೂ ಜೀವಂತವಾಗಿದೆ.
ಈ ಸಂಪ್ರದಾಯದೊಂದಿಗೆ ಸಂಬಂಧಿಸಿದ ಒಂದು ವಿಶಿಷ್ಟ ಆಚರಣೆ ಕಾರಹುಣ್ಣಿಮೆಯ ದಿನ ನಡೆಯುತ್ತದೆ. ಆ ದಿನ ಗ್ರಾಮ ಅಗಸಿಯಲ್ಲಿ ತಳಿರು ತೋರಣಗಳನ್ನು ಕಟ್ಟಲಾಗುತ್ತದೆ. ನಂತರ ಬಿಳಿ ಮತ್ತು ಕೆಂಪು ಬಣ್ಣದ ಎರಡು ಬಲಿಷ್ಠ ಎತ್ತುಗಳನ್ನು ಓಡಿಸುವ ಸಂಪ್ರದಾಯ ಇದೆ. ಕರಿಕಲ್ಲಿನ ಮುಂಭಾಗದಲ್ಲಿ “ಕರಿ” ಎಂದು ಕರೆಯಲ್ಪಡುವ ವಿಶೇಷ ನಾರಿನ ಹಗ್ಗವನ್ನು ಕಟ್ಟಲಾಗುತ್ತದೆ. ಓಡಿಬರುವ ಎತ್ತುಗಳು ಆ ಕರಿಯನ್ನು ಹರಿದು ಗ್ರಾಮದೊಳಗೆ ನುಗ್ಗಬೇಕು.
ಈ ಸಂದರ್ಭದಲ್ಲಿ ಜನರಲ್ಲಿ ಒಂದು ವಿಶಿಷ್ಟ ನಂಬಿಕೆ ಇದೆ.
ಕೆಂಪು ಎತ್ತು ಮೊದಲು ಕರಿಯನ್ನು ಹರಿದು ಒಳಗೆ ಬಂದರೆ ಮುಂಗಾರು ಮಳೆ ಚೆನ್ನಾಗಿ ಬಿದ್ದು ಬೆಳೆ ಸಮೃದ್ಧಿಯಾಗುತ್ತದೆ ಎಂದು ನಂಬುತ್ತಾರೆ. ಬಿಳಿ ಎತ್ತು ಮೊದಲು ಒಳಗೆ ಬಂದರೆ ಹಿಂಗಾರು ಬೆಳೆ ಉತ್ತಮವಾಗುತ್ತದೆ ಎಂಬ ವಿಶ್ವಾಸ ಇದೆ. ಅದರ ಜೊತೆಗೆ, ಎತ್ತುಗಳು ಹರಿದುಬಿಟ್ಟ ಆ ಕರಿಯ ತುಂಡುಗಳನ್ನು ಬೀಜಗಳೊಂದಿಗೆ ಸೇರಿಸಿ ಬಿತ್ತುವ ಪದ್ಧತಿಯೂ ಹಿಂದೆ ರೂಡಿಯಲ್ಲಿತ್ತು. ಇದು ಬೆಳೆ ಸಮೃದ್ಧಿ ಮತ್ತು ಶುಭಫಲವನ್ನು ಕೋರುವ ಸಂಕೇತವಾಗಿತ್ತು.
ಇದೇ ಕರಿಕಲ್ಲು ಮರಣಾಚರಣೆಯಲ್ಲಿಯೂ ಪ್ರಮುಖ ಸ್ಥಾನ ಪಡೆದಿದೆ. ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ, ಅಂತಿಮ ವಿಧಿಗಳಿಗೆ ದೇಹವನ್ನು ಗ್ರಾಮದಿಂದ ಹೊರತೆಗೆದ ಮೊದಲು ಅಗಸಿಯ ಬಳಿ ಇರುವ ಕರಿಕಲ್ಲಿನ ಮುಂದೆ ಕ್ಷಣಕಾಲ ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಕರಿಕಲ್ಲಿನ ಅನುಮತಿ ಪಡೆಯುವ ಆಚರಣೆ ಎಂದು ಪರಿಗಣಿಸಲಾಗುತ್ತದೆ. ನಂತರವೇ ಆ ದೇಹವನ್ನು ಗ್ರಾಮ ಗಡಿ ದಾಟಿಸಿ ಅಂತಿಮ ವಿಧಿಗಳನ್ನು ನೆರವೇರಿಸುವ ಪದ್ಧತಿ ಇಂದಿಗೂ ಕೆಲವಡೆ ಮುಂದುವರಿದಿದೆ.
ಒಟ್ಟಾರೆಯಾಗಿ ನೋಡಿದರೆ, ಕರಿಕಲ್ಲು ಕೇವಲ ಒಂದು ಕಲ್ಲು ಮಾತ್ರವಲ್ಲ; ಅದು ಗ್ರಾಮದ ಸಂಸ್ಕೃತಿ, ನಂಬಿಕೆ, ಆಚರಣೆ ಮತ್ತು ಸಮುದಾಯದ ಏಕತೆಯನ್ನು ಪ್ರತಿಬಿಂಬಿಸುವ ಪುರಾತನ ಸಂಕೇತವಾಗಿದೆ. ಈ ಕಾರಣದಿಂದಲೇ ಕರಿಕಲ್ಲು ಈ ಗ್ರಾಮದ ಹೆಮ್ಮೆ ಮತ್ತು ಪರಂಪರೆಯ ಜೀವಂತ ಚಿಹ್ನೆ ಎಂದು ಹೇಳಬಹುದು.
*ದ್ರಾವೀಡ ಸಂಪ್ರದಾಯದ : ಕೋಣನ ತಲೆ ಕಲ್ಲು*
ಗ್ರಾಮದ ಗಡಿ ಭಾಗದಲ್ಲಿ (ಈಗ ಅಲ್ಲಿ ಪ್ಲಾಟಗಳಾಗಿವೆ)ಒಂದು ವಿಶಾಲವಾದ "ಕೋಣನ ತಲೆಯ ಕಲ್ಲನ್ನು ನೋಡಬಹುದು. ಇದನ್ನು ಮಹಿಷ ಬಲಿ ಕಲ್ಲು ಎಂದು ಸಹ ಕರೆಯುತ್ತಾರೆ. ಇಂತಹ ಕಲ್ಲುಗಳನ್ನು ಹೊಂದಿದ ಗ್ರಾಮ ಬಹಳ ಪುರಾತನವಾದದ್ದು ಎಂದು ತಿಳಿಸುತ್ತದೆ. ನಾಲಿಗೆಯನ್ನು ಹೊರ ಚಾಚಿರುವ, ಉದ್ದವಾದ ಕೊಂಬುಗಳನ್ನು ಹೊಂದಿರುವ ಈ ಕಲ್ಲು ಸಾಮಾನ್ಯವಾಗಿ ಶಾತವಾಹನರ ಕಾಲದಿಂದ ವಿಜಯನಗರದ ಕಾಲದವರೆಗೆ ತನ್ನ ಆಚರಣೆಯ ಜೀವಂತಿಗೆಯನ್ನು ಉಳಿಸಿಕೊಂಡು ಬಂದಿದೆ. ಕೋಣನ ಬಲಿಯ ನಂತರ ಇದರ ಮೇಲೆ ದೀಪ ಹಚ್ಚಲಾಗುತ್ತಿತ್ತು ನಂತರ ಕೊನೆಯ ದಿನ ಪೂರ್ವ ದಿಕ್ಕಿಗೆ ಮೂಕ ಮಾಡಿರುವ ಈ ಕೋಣದ ಕಲ್ಲಿನ ಕೆಳಗೆ ಬಲಿ ಹೊಂದಿದ ಕೋಣನ ತೆಲೆಯಿಡುವುದು ಸಂಪ್ರದಾಯ. ಈ ಆಚರಣೆಯಿಂದ ಗ್ರಾಮವನ್ನು ರೋಗಗಳಿಂದ ಹಾಗೂ ದುಷ್ಟ ಶಕ್ತಿಗಳಿಂದ ರಕ್ಷಿಸಿ, ಗ್ರಾಮವನ್ನು ಸಂಪದ್ಭರಿತವಾಗಿಡಬಹುದು ಎಂಬ ನಂಬಿಕೆ ಆ ಪರಂಪರೆಯ ಜನರಲ್ಲಿತ್ತು.
*ಸಪ್ತಫಣನಾಗ* : ಇವುಗಳು ಸುಮಾರ 14-17ನೆಯ ಶತಮಾನದ ವಿಗ್ರಹವಾಗಿದೆ.
ಇದು ಜೋಡಿಯಾಗಿ ಇರುವುದರಿಂದ ಇದರ ಅರ್ಥ ಸಾಮಾನ್ಯವಾಗಿ: ನಾಗ–ನಾಗಿನಿ (ಸರ್ಪ ದಂಪತಿ) ಅಥವಾ
ನಾಗಕನ್ಯೆಗಳ ಜೋಡಿ ಎಂದು ವ್ಯಾಖ್ಯಾನಿಸಬಹುದು.
ಧಾರ್ಮಿಕ ಅರ್ಥ: ಇಂತಹ ನಾಗಶಿಲ್ಪಗಳನ್ನು ಸಾಮಾನ್ಯವಾಗಿ:
ಸಂತಾನ ಪ್ರಾಪ್ತಿಗಾಗಿ (ಸಂತಾನ ನಾಗ)ಕುಟುಂಬ ರಕ್ಷಣೆಗಾಗಿ, ನಾಗದೋಷ, ನಿವಾರಣೆಗೆ ಪೂಜಿಸುತ್ತಾರೆ.
ಕೂನಬೇವು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಇತಿಹಾಸಪೂರ್ವ ಮಾನವ ಸಂಸ್ಕೃತಿಯ ನೆನಪುಗಳನ್ನು ಹೊತ್ತಿರುವ ಮಹತ್ವದ ನೆಲೆಗಳಾಗಿವೆ. ಈ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಭವಿಷ್ಯದಲ್ಲಿ ಈ ಭಾಗದಲ್ಲಿ ಹೆಚ್ಚಿನ ಪುರಾತತ್ವ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಯುವುದರಿಂದ ಕೂನಬೇವು ಗ್ರಾಮದ ಪ್ರಾಚೀನ ಇತಿಹಾಸ ಇನ್ನಷ್ಟು ಸ್ಪಷ್ಟವಾಗಲಿದೆ ಎಂಬ ಆಶೆಯೊಂದಿಗೆ, ಈ ಗ್ರಾಮದ ಸಮೃದ್ಧ ಪರಂಪರೆ ಮುಂದಿನ ಪೀಳಿಗೆಗಳಿಗೂ ಬೆಳಕಾಗಲಿ ಎಂಬುದು ನನ್ನ ಈ ಲೇಖನದ ಆಶಯವಾಗಿದೆ.
Comments
Post a Comment