ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು
ಇಂತಹ ವಿಶ್ವಗುರು ಬಸವಣ್ಣನವರು ಹಾವೇರಿ ಜಿಲ್ಲೆಯೊಂದಿಗೆ ಸಂಬಂಧವನ್ನು ಹೊಂದಿದ್ದರು ಎನ್ನಲು ಅನೇಕ ಸಾಕ್ಷಿಗಳು ನಮ್ಮ ಮುಂದೆ ಇನ್ನೂ ಜೀವಂತವಾಗಿವೆ. ರಾಣೇಬೆನ್ನೂರ ತಾಲೂಕಿನ ಚೌಡದಾನಪುರ ಗ್ರಾಮವನ್ನು ಶಾಸನಗಳಲ್ಲಿ " ಗೋಪೆ"(ಗೊಪೆ) ಎಂದು ಕರೆಯಲಾಗಿದೆ. ಬಹುಶಃ 10 ಗ್ರಾಮಗಳ ಒಡೆಯನಿಗೆ ಗೋಪೆ ಎನ್ನುತ್ತಿದ್ದರು. ಇದನ್ನು ಪುಷ್ಟಿಕರಿಸಲು " ಮುಕ್ತೇಶ್ವರ ದೇವಸ್ಥಾನದ ಆವರಣದಲ್ಲಿ ಗೋಪಸ್ವಾಮಿ ದೇವಸ್ಥಾನವಿದೆ. ನಂತರದ ಶಾಸನಗಳಲ್ಲಿ "ಶಿವಪುರ" ದಕ್ಷಿಣ ವಾರಣಾಸಿ, ಶಿವದೇವಪುರವೆಂದು ಉಲ್ಲೇಖಿಸಲಾಗಿದೆ. ಇಲ್ಲಿಯ ಮುಕ್ತೇಶ್ವರ ದೇವಸ್ಥಾನದ ಹತ್ತಿರವಿರುವ ಕ್ರಿ.ಶ 1226 ರ ಶಿಲಾಶಾಸನದ 14 ನೇ ಸಾಲಿನಲ್ಲಿ '' ಪ್ರಭು ನನ್ದಿನಾಥನ ಮೊಗನ್ನೋಡಲ್ಕೆ ಶ್ರೀ ಸಂಗಮೇಶನ ವರಪುತ್ರಂ ಬಸವಯ್ಯ" ಎಂಬುದನ್ನು ಉಲ್ಲೇಖಿಸಲಾಗಿದೆ. ಬಸವಣ್ಣನವರ ಹೆಸರು ಬಳಸಿರುವ ಅತಿ ವಿರಳವಾದ ಶಾಸನಗಳಲ್ಲೊಂದು ಇದಾಗಿದೆ ಎನ್ನಬಹುದು. ಇದೇ ಶಾಸನದಲ್ಲಿ ಶಿವದೇವಮುನಿಗಳು ಶುದ್ಧ ಸೋಮವಾರ ಚಂದ್ರೋಪರಾಗ ಪುಣ್ಯತಿಥಿಯ ಮಧ್ಯಾಹ್ನ ಸಮಯದೊಳು ( ಕ್ರಿ.ಶ 1226) ಮುಕ್ತಿಕ್ಷೇತ್ರವನ್ನು ಪ್ರವೇಶಿಸಿದರು ಎಂದಿದೆ. ಈ ಶಾಸನವನ್ನು ಶಿವದೇವಮುನಿಗಳು ಬರೆಸಿದ್ದಾರೆ. ಶಿವದೇವಮುನಿಗಳು ತಮ್ಮನ್ನು ಬಸವಣ್ಣನವರ ಅವತಾರಿಗಳೆಂದು ಹೇಳಿಕೊಂಡಿದ್ದಾರೆಂದು ಸಂಶೋಧಕರಾದ ಫ.ಗು.ಹಳಕಟ್ಟಿಯವರು ತಿಳಿಸಿದ್ದಾರೆ.
ಶರಣರ ಪಾದದ ಧೂಳದ ಧೂಳು
ಶಿವದೇವಮುನಿಗಳಿಗೂ ಹಾಗೂ ಶಿಗ್ಗಾಂವ ತಾಲೂಕಿನ ಕಾರಡಗಿ ಗ್ರಾಮಕ್ಕೂ ಇರುವ ಸಂಬಂಧದ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ. ಚೌಡದಾನಪುರದ 1226 ರ ಶಾಸನ ಬುದ್ದನ ಅನುಯಾಯಿಗಳು ಈ ಸ್ಥಳದಲ್ಲಿ ವಾಸಿಸುತಿದ್ದರು ಎಂಬ ಹೊಸ ವಿಷಯವನ್ನು ಬಿಚ್ಚಿಡುತ್ತದೆ. ಹಾಗಾದರೆ ಅವರ ಜನಸಂಖ್ಯೆ ಇಲ್ಲಿ ಹೆರಳವಾಗಿತ್ತೇ? ಎಂಬ ಪ್ರಶ್ನೆಗೆ ಕ್ಷೇತ್ರ ಅಧ್ಯಾಯನದಿಂದ ಮಾತ್ರ ಉತ್ತರಿಸಬಹುದಾಗಿದೆ.
ಇಲ್ಲಿ ದೊರೆತಿರುವ ಯಾವ ಶಾಸನಗಳಲ್ಲಿಯು ಈ ಗ್ರಾಮದ ಹೆಸರನ್ನು 'ಚೌಡದಾನಪುರ' ಅಥವಾ ಚೌಡಯ್ಯದಾನಪುರ ಎಂದಿರದೇ ಇರುವುದು ಕುತೂಹಲ ಕೆರಳಿಸುತ್ತದೆ. ಈ ಕ್ಷೇತ್ರದಲ್ಲಿ ನಂದಿಯ ಹಲವು ವಿಗ್ರಹಗಳುವಿರುವುದು ಬಹುಶಃ ಬಸವಣ್ಣನವರ ಸೂಚಕವಾಗಿಯೆ ಇರಬಹುದೆ ?. 'ಅಬ್ಬಲೂರ ಚರಿತೆಯಲ್ಲಿ ' ಏಕಾಂತ ರಾಮಯ್ಯನಿಗೆ ವಿಜಯ ಪತ್ರವನ್ನು ಕೊಡಲು ಬಿಜ್ಜಳನ ಜೊತೆಯಲ್ಲಿ ಬಸವಣ್ಣನವರು ಈ ಕ್ಷೇತ್ರಕ್ಕೆ ಬಂದರು ಎಂಬುದನ್ನು ತಿಳಿಸುತ್ತದೆ. ಆದರೆ ಇಲ್ಲಿಯ ಶಿಲಾಶಾಸನದಲ್ಲಿ ಬಸವಣ್ಣನವರ ಹೆಸರು ಉಲ್ಲೇಖಿಸದೆ ಇರುವುದು ಗಮನಾರ್ಹವಾಗಿದೆ. ಹಾವೇರಿ ಸಮೀಪದ 'ಜಂಗಮನಕೊಪ್ಪಕ್ಕೆ' ಶೊನ್ಯ ಪೀಠದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳು ಆಗಮಿಸಿದಾಗ, ಅಗಡಿ ಗ್ರಾಮದ ಜನರ ಹಾಗೂ ತಮ್ಮ ಸಂಬಂಧಿಕರ ಒತ್ತಾಸೆಯ ಮೇರೆಗೆ ಬಂದು ಪಾದ ಪೂಜೆಯನ್ನು ಸ್ವಿಕರಿಸಿದ್ದರು. ಆ ಪುಣ್ಯ ಸ್ಥಳದಲ್ಲಿ ಪವಿತ್ರವಾದ ಪ್ರಭುಸ್ವಾಮಿ ಮಠವನ್ನು ನಾವು ಈಗಲೂ ಸಹ ನೋಡಬಹುದು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಸವಣ್ಣನವರು ಪ್ರಭಾವ ಅಪಾರವಾಗಿ ಜಿಲ್ಲೆಯ ಮೇಲಿತ್ತು ಎನ್ನಬಹುದು.
ಈ ಹಿಂದೆ ಹಾವೇರಿಯು ಪಕ್ಕದ ಪುಲಿಗೆರೆ (ಲಕ್ಷ್ಮೇಶ್ವರ) ಕ್ಷೇತ್ರಕ್ಕೆ ಸೇರಿತ್ತು. ಬಸವಣ್ಣನವರ ವಂಶಾವಳಿಯನ್ನು ತಿಳಿಸುವ ''ಅರ್ಜುನವಾಡಿ' ಶಾಸನದಲ್ಲಿ ಬರುವ 'ಚವಡಿ ಶೆಟ್ಟಿಯು' ಬಸವಣ್ಣನವರ ಸಂಬಂಧಿಯಾಗಿದ್ದು , ಇತನೇ ಲಕ್ಷ್ಮೇಶ್ವರದಲ್ಲಿ ಗೋಲಗೇರಿಮಠವನ್ನು ( ಗೋಳಕಿಮಠ) ನಿರ್ಮಿಸಿದನು. ಅದೇ ಶಾಸನ ಬಸವಣ್ಣನವರಿಗೆ 'ದೇವರಾಜನೆಂಬ' ಅಣ್ಣನಿದ್ದನು ಹಾಗೂ ಮಗನಿದ್ದನು ಎಂಬುದ್ದನ್ನು ತಿಳಿಸುತ್ತದೆಯಾದರು ಇದನ್ನು ಸಂಶೋಧನೆಯಿಂದ ಖಚಿತಪಡಿಸಿಕೊಳ್ಳಬಹುದಾಗಿದೆ. ಬಸವಣ್ಣನವರಿಗೆ ಒರ್ವ ಮಗನಿರುವ ಬಗ್ಗೆ ವಚನಗಳಲ್ಲಿ ಉಲ್ಲೇಖಿಸಿರುವುದು ಕೂತಹಲಕಾರಿಯಾಗಿದೆ. ಅರ್ಜುನವಾಡ ಶಾಸನ ಹೊರತುಪಡಿಸಿದರೆ ನಮಗೆ ಸಿಗುವ ಇನ್ನೊಂದು ಸಾಕ್ಷಿಯಂದರೆ ಬಾಗೇವಾಡಿ ಸಮೀಪದಲ್ಲಿಯ 'ಇಂಗಳೇಶ್ವರ' ಗ್ರಾಮದ 'ಕುಲಕಣಿ೯ಯವರ' ಮನೆಯಲ್ಲಿರುವ ವಂಶಾವಳಿಯ ಚಿತ್ರ. ಇದರಲ್ಲಿ ಮಾದಲಾಂಭಿಕೆ, ಅವಳ ಸಹೋದರನಾದ ಬಲದೇವ, ಸಿದ್ದರಸ ಹಾಗೂ ಅಕ್ಕನಾಗಮ್ಮನ ಗಂಡ ಶಿವದೇವರ ಉಲ್ಲೇಖಗಳಿರುವುದು ವಿಶೇಷ. ಸಂಶೋಧಕರಾದ ಡಾ.ಕಾಂತೇಶರಡ್ಡಿ ಗೂಡಿಹಾಳರೊಂದಿಗೆ ಕೂಡಲಸಂಗಮ ಹಾಗೂ ಸುತ್ತ-ಮುತ್ತಲ ಗ್ರಾಮಗಳ ಕ್ಷೇತ್ರ ಅಧ್ಯಯನಕ್ಕೆ ನಾನು ಹೋದಾಗ ಹತ್ತು ಹಲವು ಸಾಕ್ಷಿಗಳನ್ನು ನನಗೆ ಅವರು ನೀಡಿದರು. ಬಸವನಬಾಗೇವಾಡಿಯ (ಹುನಗುಂದ ತಾಲೂಕಿನ) ಸಮೀಪದ ಗ್ರಾಮವಾದ 'ಗಂಜಿಹಾಳ'ದಲ್ಲಿ ಭಗ್ನಗೊಂಡ 'ನೀಲಾಂಬಿಕೆಯ ' ವಿಗ್ರಹವು ಬಸವಣ್ಣನವರ ಹೋರಾಟವನ್ನು ಕಣ್ಣಮುಂದೆ ಇನ್ನೂ ಜೀವಂತವಾಗಿಸದಿರದು. ಹಾಗೇಯೇ ' ಬೆಳಗಲ್'' ಗ್ರಾಮದಲ್ಲಿ 'ಸಂಗಮನಾಥ' ದೇವಾಲಯದ ತಲನಕ್ಷೆಯನ್ನು ಈಗಲೂ ಸಹ ನಾವು ನೋಡಬಹುದಾಗಿದೆ. ಸಂಶೋಧಕರ ಹಾಗೂ ಸ್ಥಳೀಯರ ಅಭಿಪ್ರಾಯದ ಪ್ರಕಾರ ಇಲ್ಲಿಯ ಕಲ್ಲುಗಳನ್ನೇ ಸಂಗಮನಾಥ ದೇವಾಲಯವನ್ನು ನಿರ್ಮಿಸಲು ಉಪಯೋಗಿಸಿದರು ಎಂದು ತಿಳಿಸುತ್ತಾರೆ. ಬಸವಣ್ಣನವರು ದಾನವನ್ನು ವಿರೋಧಿಸಿ ದಾಸೋಹವನ್ನು ಪ್ರಚೋದಿಸಿದರು. ಮಾನವನ ಕಲ್ಯಾಣಕ್ಕೆ ತಮ್ಮನ್ನೇ ತ್ಯಾಗ ಮಾಡಿಕೊಂಡ ತ್ಯಾಗಮಯಿ ಜೀವಿಗಳು ಬಸವಣ್ಣನವರು. ಕೂಡಲ ಸಂಗಮನಾಥನ ಸಾನಿದ್ಯದಲ್ಲಿಯೇ ಐಕ್ಯರಾದ ಬಸವಣ್ಣನವರು ಎಂದೆಂದಿಗೂ ಲೋಕಕಲ್ಯಾಣವನ್ನು ಬಯಸಿದವರು. ಅಂಬಿಗರ ಚೌಡಯ್ಯನವರು ಹೇಳುವಂತೆ " ನಿನ್ನಾತ್ಮನ ನೀ ತಿಳಿ ಜಗವೆಲ್ಲ ನಿನ್ನೊಳಗೆ" ಎನ್ನುವಂತೆ. ಬಸವಣ್ಣನವರಂತೆ ಹಾಗೂ ಅವರು ಬರೆದ ವಚನಗಳಂತೆ ಜೀವನದಲ್ಲಿ ನಡೆದರೆ ಸಾಕು ಅದರಕ್ಕಿಂತ ಮಿಗಿಲಾದ ಸ್ವರ್ಗ ಬೇರೊಂದಿಲ್ಲ ಎನ್ನಬಹುದು.
ಶರಣರ ಪಾದದ ಧೂಳದ ಧೂಳು
~ ಪ್ರಮೋದ ಎಸ್. ನಲವಾಗಲ, ಹಾವೇರಿ ###
9686168202
9686168202

Comments
Post a Comment