ಕನಕಾಪುರ
ಕನಕಾಪುರ
ಹಾವೇರಿ: ಕನಕಾಪುರದ ಶಕ್ತಿ ಕೇಂದ್ರವಾದ ‘ಕಂದಾರಮ್ಮ’ ದೇವಸ್ಥಾನದಲ್ಲಿ ಸುಮಾರು ಕ್ರಿ.ಪೂ. ಅಂತ್ಯ ಕಾಲಕ್ಕೆ ಸೇರಿರಬಹುದಾದ ‘ದೇವಿಯ ಉಬ್ಬು ಆಕೃತಿಯಿರುವ ಮಣ್ಣಿನ ಮಡಿಕೆ’ಯನ್ನು ಉಪನ್ಯಾಸಕರಾದ ಪ್ರಮೋದ.ನಲವಾಗಲ ಹಾಗೂ ಡಾ.ರಮೇಶ ತೆವರಿ ಪತ್ತೆ ಮಾಡಿದ್ದಾರೆ.
ಮಡಿಕೆ(ಕುಂಬ)ಯು ಕಪ್ಪು ಬಣ್ಣದಾಗಿದ್ದು ಬಹುಶ; ಚಕ್ರದ ಮೇಲೆ ಮಾಡಿದಾಗಿದ್ದು, ೧ ಅಡಿ ಎತ್ತರವಾದ ತಳಭಾಗ ಸಮತಟ್ಟಾಗಿದೆ. ಅದರ ಮೇಲೆ ಇತಿಹಾಸ ಪೂರ್ವ ಕಾಲಕ್ಕೆ ಸೇರಿರಬಹುದಾದ ಕೋಣನ ಮೇಲೆ ಅಯುದ ಹಿಡಿದು ನಿಂತಿರುವ ಶಕ್ತಿ ದೇವಿಯ ಆಕೃತಿ ಕಂಡು ಬಂದಿದೆ. ಶಕ್ತಿ ದೇವತೆಯ ಅಕ್ಕಪಕ್ಕದಲ್ಲಿ ಇಬ್ಬರು ಮಾನವರ ಚಿತ್ರಗಳಿವೆ. ಇದರಲ್ಲಿ ದೇವಿಯ ಎಡಭಾಗದಲ್ಲಿ ನಿಂತಿರುವ ಮನುಷ್ಯನ ಶಿರಛ್ಚೇದವಾಗಿದ್ದು, ಈ ದೃಶ್ಯವು ಕುತೂಹಲವನ್ನು ಸೃಷ್ಟಿಸುತ್ತದೆ. ಈ ಕುರಿತು ಸ್ಥಳೀಯ ಮುಖಂಡರನ್ನು ವಿಚಾರಿಸಲಾಗಿ ಮಡಿಕೆಯು ಪುರಾತನವಾದದ್ದು ನಮಗೂ ಇದರ ಕಾಲಘಟ್ಟದ ಕುರಿತು ಮಾಹಿತಿ ಇಲ್ಲ ಎನ್ನುತ್ತಾರೆ. ಆದರೆ ಎಂಟು ವರ್ಷಗಳ ಹಿಂದೆ ‘ಕನಕಾಪುರ ಹಾಗೂ ಹೊಂಬರಡಿ’ ಗ್ರಾಮಗಳ ಮಧ್ಯದದಲ್ಲಿರುವ ಗುಡ್ಡದಲ್ಲಿ ಕೆಲಸ ಮಾಡುವಾಗ ಎಲಬು ಹಾಗೂ ಬೂದಿ ತುಂಬಿದ ಮಡಿಕೆ ಸಿಕ್ಕಿತ್ತು, ಅರಿವಿಗೆ ಬಾರದೆ ಅದನ್ನು ಬಿಸಾಡಿದೆವು ಎಂಬ ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟರು. ಇದನ್ನು ಗ್ರಹಿಸಿದ ಸಂಶೋಧಕರು ಕನಕಾಪುರವು ‘ಇತಿಹಾಸ ಪೂರ್ವ’ ಕಾಲದ ನೆಲೆ ಆಗಿದ್ದು, ಕಬ್ಬಿಣಯುಗದ ಬೃಹತ್ ಶಿಲಾಯುಗ ಸಂಸ್ಕೃತಿಯ ಅಥವಾ ಇತಿಹಾಸ ಆರಂಭದ ಪೂರ್ವಕಾಲ ಅಂದರೆ ಸುಮಾರು ೨೨೦೦ ವರ್ಷಗಳ ಹಿಂದೆ ಇಲ್ಲಿ ‘ಅಸ್ತಿ ಪಾತ್ರೆ ದಫನ’ ಪದ್ದತಿ ಜಾರಿಯಲ್ಲಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಜಿಲ್ಲೆಯ ಸಂಶೋಧಕರಾದ ಡಾ. ಭೋಜರಾಜ ಪಾಟೀಲರ ಜೋತೆ ಚರ್ಚಿಸಿದಾಗ “ಶಕ್ತಿ ದೇವತೆಯ ಆರಾಧನೆ ವೇದಗಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದ್ದು, ಅಲ್ಲಿ ದೇವಿಯ ವಿಗ್ರಹ ಅಥವಾ ಕೋಣನ ತೆಲೆಯ ಕಲ್ಲು ಇರುವುವದು ಸಾಮಾನ್ಯ. ಆದರೆ ಇಲ್ಲಿ ಇವೆರಡು ಇರದೆ ಉದ್ಭವ ಮೂರ್ತಿಯನ್ನು ಸ್ಥಳೀಯರು ಬಹುಕಾಲದಿಂದ ಪೂಜಿಸುವದರಿಂದ ಹಾಗೂ ಆ ಶಕ್ತಿ ದೇವತೆಯ ಆಕೃತಿ ಮಡಿಕೆ ಮೇಲಿರುವುದರಿಂದ ಬಹುಶ: ಇದು ಇತಿಹಾಸ ಪೂರ್ವ ಕಾಲಕ್ಕೆ ಸಂಬಂಧಿಸಿರಬಹುದೆಂಬ” ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಲವು ಕುತೂಹಲಕಾರಿ ವಿಷಯಗಳು: ಕನಕಾಪುರ ಗ್ರಾಮದ ಇತಿಹಾಸ ಕುರಿತು ಶೋಧÀನೆ ನಡೆಸುತ್ತಿರುವಾಗ ಕೆಲವು ಕುತೂಹಲಕಾರಿ ವಿಷಯಗಳು ಕಂಡು ಬಂದವು. ಎರಡು ಶಾಸನಗಳು ದೊರೆತಿದ್ದು ಅದರಲ್ಲಿ ಒಂದು ಶಾಸನ ಅಸ್ಪಷ್ಟವಾಗಿದ್ದು ಇನ್ನೂಂದು ಶಾಸನ ತಕ್ಕ ಮಟ್ಟಿಗೆ ಸ್ಪಷ್ಟತೆ ಹೊಂದಿದ್ದು‘ಶ್ರೀ ವಿನಾಯಕ ದೇವರ ಆಶ್ರಿತ’ ಎಂಬ ಅಕ್ಷರಗಳ ಸಾಲು ಕಂಡು ಬರುತ್ತದೆ. ಈ ವಾಕ್ಯವನ್ನು ಅವಲೋಕಿಸಿದಾಗ ಇಲ್ಲಿ ಸುಮಾರು ೫೦೦ ವರ್ಷಗಳ ಹಿಂದೆ ಗಣೇಶ(ವಿನಾಯಕ)ನ ದೇವಸ್ಥಾನ ಇದ್ದಿರಬಹುದೆಂಬ ಮಾಹಿತಿಯನ್ನು ಸೂಚಿಸುತ್ತದೆ. ಈ ಕುರಿತು ಹೆಚ್ಚು ಅಧ್ಯಯನ ನಡೆಸಿದಾಗ ಈ ಹಿಂದೆ ಇದ್ದ ಗಣೇಶನ ದೇವಾಲಯ ನಶಿಸಿ ಹೋಗಿರಬಹುದೆಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಗುಡ್ಡದ ಮೇಲ್ಭಾಗದಲ್ಲಿ ಮಹಿಷಾಸುರನ ಹಾಗೂ ‘ಮಹಿಷಾಸುರ ಮರ್ದಿನಿ’ ಚಿತ್ರವನ್ನು ಬಂಡೆಯ ಮೇಲೆ ಕಂಡರಿಸಿರುವ ದೃಶ್ಯ, ಜಕಾತಿ ಕಲ್ಲು, ಅಪರೂಪದ ವಾಮನ ಕಲ್ಲುಗಳು, ಶಂಖ-ಚಕ್ರಗಳಿರುವÀ ದಾನಶಾಸನಗಳು ಹಾಗೂ ತ್ರುಟಿತ ಶಕ್ತಿದೇವತೆಯ ವಿಗ್ರಹಗಳು ದೊರೆತಿರುವದು ಕುತೂಹಲವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕಂದಾರಮ್ಮ (ಕನ್ನಿಕಾ ಪರಮೇಶ್ವರಿ) ದೇವಿಯ ನಾಮ ವಿಶೇಷ: ಕಂದಾರಮ್ಮ ದೇವಿಯ ಹೆಸರನ್ನ ಸಂಶೋಧನೆಯ ಹಿನ್ನಲೆಯಲ್ಲಿ ನೋಡಿದಾಗ ‘ಕಂದರ’ ಎಂದರೆ ಬೆಟ್ಟ, ಗುಡ್ಡ, ಗುಹೆ, ಕಣವಿ ಎಂದಾಗುತ್ತದೆ. ಅಂದರೆ ಇಗಿರುವ ಉದ್ಭವ ಮೂರ್ತಿಯಾದ ಕಂದಾರೆಮ್ಮ ದೇವಿಯ ಸ್ಥಳ ಈ ಹಿಂದೆ ಬಹುಶ: ಕಣವಿಯಾಗಿದ್ದು ಅಲ್ಲಿನ ಗುಹೆಯೊಂದರಲ್ಲಿ ಪೂಜಿಲ್ಪಡುತ್ತಿದ್ದು, ಅಂದಿನಿಂದ ಕಂದಾರೆಮ್ಮ ಎಂದು ಕರೆಯುವ ಪದ್ದತಿ ರೂಡಿಗೆ ಬಂದಿರಬಹುದು. ಕಾಲಾಂತರದಲ್ಲಿ ಆ ಹಿಂದಿನ ಗುಹೆಯು ಮಾರ್ಪಾಡಾಗಿ ಶಕ್ತಿ ದೇವತೆಯ ಗುಡಿಯ ರೂಪ ತಾಳಿ ಸರ್ವರಿಂದಲೂ ಪೂಜಿಸಲ್ಪಡುವ ದೇಗುಲವಾಗಿದೆ ಎನ್ನಬಹುದು. ಗ್ರಾಮದಲ್ಲಿ ಕಂಡುಬರುವ ಅವಶೇಷಗಳನ್ನು ನೋಡಿದಾಗ, ಈ ಕುರಿತು ಇತಿಹಾಸ ತಜ್ಞರು ಸಂಶೋಧನೆ ಕೈಗೊಂಡಲ್ಲಿ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದೆಂದು ಸಂಶೋಧಕರು ತಿಳಿಸಿದ್ದಾರೆ.
Comments
Post a Comment