ಕೋಳೂರು ಕೊಡಗೂಸು: ಹಾವೇರಿಯ ಕೋಳೂರು??

ಹಾವೇರಿ ತಾಲೂಕಿನ "ಕೋಳೂರು" ಹಾವೇರಿಯಿಂದ ಉತ್ತರಕ್ಕೆ ಸುಮಾರು 16ಕಿ.ಮೀ. ದೂರದಲ್ಲಿದೆ. ಈ ಊರು ವರದಾ ನದಿಯ ದಂಡೆಯ ಮೇಲಿದ್ದು ಕರ್ಜಗಿ ಹಾಗೂ ದೇವಗಿರಿಗಳ ಮಧ್ಯಭಾಗದಲ್ಲಿದೆ.

ಕ್ರಿ.ಶ. 9-10 ನೇ ಶತಮಾನದಲ್ಲಿ ಬಾಸವೂರು-140 ಕ್ಕೆ ಸೇರಿದ್ದ ಈ ಊರಲ್ಲಿ ಎರಡು ಶಾಸನಗಳಿವೆ. ಕಲ್ಯಾಣದ ಚಾಳುಕ್ಯ ಅರಸ ಒಂದನೇಯ ಸೋಮೇಶ್ವರನ.
ಕ್ರಿ.ಶ. 1045ರ ಶಾಸನ ಕಲಿಯಮರಸನು ಬಾಸವೂರು-140 ಆಳುವಾಗ ರಾಜ ಗುರುದೇವನೊಂದಿಗೆ ಜಂಟಿಯಾಗಿ ಕೋಳೂರ ಕಲಿದೇವೇಶ್ವರ (ಈಗಿನ ಕೊಡಗುಸು)ದೇಗುಲಕ್ಕೆ ನೀಡಿದ ಭೂದಾನದ ಬಗ್ಗೆ ಹೇಳಿದರೆ, ಆರ್ಮಡಿ ವಿಕ್ರಮಾದಿತ್ಯನ ಕಾಲದ ಶಾಸನ ಗ್ರಾಮೇಶ್ವರ (ಈಗಿನ ಡೊಳ್ಳೇಶ್ವರ) ದೇವರಿಗೆ ನೀಡಿದ ಸುಂಕಗಳ ದಾನದ ಬಗ್ಗೆ ತಿಳಿಸುತ್ತದೆ. ಕ್ರಿ.ಶ. 1085ರ ಮತ್ತೊಂದು ಶಾಸನ ಕಲಿಯಮರಸನು ಬಾಸವೂರನ್ನಾಳುವಾಗ (ಈಗಿನ ಚಿಕ್ಕ ಬಾಸೂರು) ಬಿಟ್ಟ ಭೂದಾನದ ಬಗ್ಗೆ ಹೇಳುತ್ತದೆ. ಊರುಳಿವಿಗಾಗಿ ಹೋರಾಡಿ ಮಡಿದ ಬೀರಬೋವನಿಗೆ ತ್ರಿಭುವನಸಿಂಗಿ ಮತ್ತು ಊರಗೌಡ ದಾನಕೊಟ್ಟ ವಿಷಯವನ್ನು ವೀರಗಲ್ಲು ಶಾಸನವೊಂದು ಹೇಳುತ್ತದೆ. ಯಾದವ ಸಿಂಘನ ಕಾಲಕ್ಕೆ ಸೇರಿದ ಶಾಸನ ದೇವಂಗೇರಿಯ(ದೇವಗಿರಿಯ) 1000 ಪರಿವಾರದಿಂದ "ಕೋಳೂರ ಕ್ಷೇತ್ರಪಾಳನಿಗೆ"(ಬಹುಶ: ಹುಲ್ಲಪ್ಪನ ಗುಡಿ) ಭೂದಾನ ಮಾಡಿದನ್ನು ದಾಖಲಿಸಿದೆ. ಈ ಶಾಸನ ಬಂಕಾಪುರದ ಇಂದ್ರೇಶ್ವರ ದೇವರಿಗೆ ಸೇರಿದ 12 ಬಾಡಗಳ ಬಗ್ಗೆ ಉಲ್ಲೇಖಿಸುತ್ತ ಅದರ ಆಚಾರ್ಯ ರಾಜಗುರು ದೇವರ ಪ್ರಸ್ತಾಪವನ್ನೂ ಒಳಗೊಂಡಿದೆ, ಕೋಳೂರು 'ಕೊಡಗೂಸಿ'ನಿಂದಾಗಿ ಜನಪ್ರಿಯವಾಗಿದೆ. ಹಸುಳೆಯೊಂದರ ಅನನ್ಯ ಭಕ್ತಿಯನ್ನು ಮೆಚ್ಚಿ ಕೃಪೆ ತೋರಿದ ಶಿವನು ಕೂಸನ್ನು ತನ್ನಲ್ಲೇ ಐಕ್ಯಮಾಡಿಕೊಂಡ ಘಟನೆಯಿಂದಾಗಿ ಕೋಳೂರು ಕೂಡಗೂಸ ಬಸವಣ್ಣನ ಗುಡಿ ಪ್ರಸಿದ್ಧವಾಗಿದೆ. ಈ ಜನಪದ ನಂಬಿಕೆ ಈ ಭಾಗದಲ್ಲಿ ಪ್ರಚಲಿತವಿದೆ. ಹರಿಹರನ ರಗಳೆಯಲ್ಲಿ ಬರುವ " "ಸತ್ಯಭಾಷಣಿ" ಹಾಗೂ " ಪಿಡ್ಡಮ್ಮ" ಪದಗಳನ್ನು ಹೊಲುವ ಸತ್ಯಮ್ಮನವರ ಹಾಗೂ "ಪಿಡ್ಡಿ" ಇವುರುಗಳ ಮನೆತನಗಳು ಇಲ್ಲಿರುವುದು ಗಮನಿಸಬೇಕು ಹಾಗೂ ಅವರ ಮನೆಯ ದೇವರು ಬಸವಣ್ಣನಾಗಿರುವುದು ವಿಶೇಷ. ಎತ್ತರವಾದ ಸ್ಥಳದ ಮೇಲಿರುವ ಈ ಗುಡಿ ನವರಂಗವನ್ನು ಹೊಂದಿದ್ದು ಒಳಹೋಗುತ್ತಿದ್ದಂತೆ ಎಡಭಾಗದಲ್ಲಿ ಎರಡು ಕಿರು ಗರ್ಭಗೃಹಗಳಿವೆ. ಒಂದರಲ್ಲಿ ಶಿವಲಿಂಗ, ಮತ್ತೊಂದರಲ್ಲಿ ಈಶ್ವರ,
ಪೂರ್ವಾಭಿಮುಖವಾಗಿ ಸಾಲಾಗಿ ನಿಲ್ಲಿಸಿರುವ ಕೇಶವ, ವಿಷ್ಣು ವೀರಭದ್ರ ಮತ್ತು ಪಾರ್ವತಿ-ಪರಮೇಶ್ವರ ಶಿಲ್ಪಗಳು, ಇವುಗಳ ಎಡಕ್ಕೆ ಸೂರ್ಯನಾರಯಣ ಮೂರ್ತಿಗಳಿವೆ ನವರಂಗದಲ್ಲಿ ನಂದಿಯಿದೆ. ಈ ನಂದಿಗೆ ಧರಿಸುವ ಮಾಲೆ ಬೆಳ್ಳಿ ನಾಣ್ಯಗಳದಾಗಿದ್ದು ಇದರಲ್ಲಿ 1910, 1913, 1918 ಹಾಗೂ ಇತರ ವರ್ಷಗಳ ನಾಣ್ಯಗಳಿವೆ. ಗುಡಿಯ ಹೊರಗೆ ಆಳುದ್ದದ ಮುಕ್ಕಾದ ವಿಷ್ಣು ಶಿಲ್ಪವಿದೆ. ಈ
ಗುಡಿಯಲ್ಲಿರುವ ಎಲ್ಲಾ ಶಿಲ್ಪಗಳು ಸುಮಾರು 4.5 ಅಡಿ ಎತ್ತರವಿದ್ದು ಆಕರ್ಷಕವಾಗಿದೆ. ಚತುರ್ಭುಜ ವಿಷ್ಣು ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಗಿದೆ. ಆಲಿಂಗನ ಮುದ್ರೆಯಲ್ಲಿರುವ ಇಲ್ಲಿನ ಪಾರ್ವತೀ ಪರಮೇಶ್ವರ ಮೂರ್ತಿ ಬಹಳ ಸುಂದರ ಕಲಾಕೃತಿಯಾಗಿದ್ದು ಶಿವ ಪಾರ್ವತಿ, ಗಣಪತಿ, ಷಣ್ಮುಖ, ದಿಕ್ಷಾಲಕರುಗಳ ಸುಂದರ ಸಮ್ಮಿಲನವಾಗಿದೆ. 

ಅದೇ ರೀತಿ ಸಮಭಂಗಿಯಲ್ಲಿ ನಿಂತ ಸೂರ್ಯನ ಮೂರ್ತಿಯು ಗಮನ ಸೆಳೆಯುತ್ತದೆ ( ಕ್ರಿ.ಶ 1045 ರಲ್ಲಿ ಈ ದೇವರ ದೀಪ ಬೆಳಗಿಸಲು  ಖಚರ ವಂಶದ ಕಲಿಯಮ್ಮರಸ ದಾನ ನೀಡುತ್ತಾನೆ). ಈ ಗುಡಿಯ ಲಕ್ಷಣಗಳನ್ನು ಗಮನಿಸಿದಾಗ ಇದು ತ್ರಿಕೂಟವಾಗಿದ್ದಿರಬೇಕೆಂದು ಹೇಳಬೇಕಾಗುತ್ತದೆ. ಊರ ಹೊರಗೆ ಗರ್ಭಗೃಹ, ಅಂತರಾಳವಷ್ಟೆ ಉಳಿದಿರುವ ಕಲ್ಯಾಣದ ಚಾಲುಕ್ಯರ
ಕಾಲಕ್ಕೆ ಸೇರಿದ ಶಿಥಿಲವಾಗಿರುವ ಡೊಳೇಶ್ವರ ಗುಡಿಯಿದೆ ( ಈಗ ಸಂಪೂರ್ಣವಾಗಿ ಹೊಸ ರೂಪವನ್ನ ಪಡೆದಿದೆ) ಈ ಗುಡಿಯ ಪರಿಸರದಲ್ಲಿ ಒಂದೆರಡು ವೀರಗಲ್ಲುಗಳು ನಿಂತಿವೆ. ಇವುಗಳ ಜೊತೆಗೆ ಊರಲ್ಲಿ ಬಸವಣ್ಣ, ದ್ಯಾಮವ್ವ, ಮೈಲಾರಲಿಂಗ, ಗಣಪತಿ ಮತ್ತು ಹುಲ್ಲಪ್ಪನ ಗುಡಿಗಳಿವೆ. ದ್ಯಾಮವ್ವನ ಗುಡಿಯಲ್ಲಿ ಕಟ್ಟಿಗೆಯ ದುರ್ಗಾಮೂರ್ತಿ ಉಗ್ರವಾಗಿದ್ದರೂ ಚೆನ್ನಾಗಿದೆ. ಹುಲ್ಲಪ್ಪನ ಜಾತ್ರೆ ಮೇ ತಿಂಗಳಲ್ಲಿ ನಡೆಯುತ್ತದೆ. ಊರಲ್ಲಿ ಒಂದು ಮಸೀದಿ ಹಾಗೂ
ಎರಡು ದರ್ಗಾಗಳಿದ್ದು, ಅದರಲ್ಲೊಂದು ಮೆಹಬೂಬ ಸುಬಾನಿಯದಾಗಿದ್ದು, ಅನುಕೂಲವಾದಾಗ ಉರುಸು ಆಚರಿಸುತ್ತಾರೆ. ದೇವಗಿರಿ ರಸ್ತೆಯಲ್ಲಿರುವ ಮುಸ್ಲಿಂ ಸಶಾನದಲ್ಲಿ ಅದಿಲ್‌ಷಾಹಿ ಕಾಲದ ಸುಂದರವಾದ ಕಟ್ಟಡವಿದ್ದು ಅದನ್ನು ಸುಂದರವಾದ ಕಮಾನುಗಳು,
ಆಕರ್ಷಕವಾದ ಮಿನಾರೆಟ್‌ಗಳು ಅಲಂಕರಿಸಿದ್ದು ಒಳಗೆ ಐದು ಸಾಲಿನ ಪರ್ಷಿಯನ್ ಶಾಸನವಿದೆ. ಅದೇ ರೀತಿ ಹೊಳೆ ದಂಡೆಯಲ್ಲಿ ಆದಿಲ್‌ಷಾಹಿ ಕಾಲಕ್ಕೆ ಸೇರಿದ ಕಲಾತ್ಮಕವಾದ ಮಸೀದಿಯಿದೆ.

ಡೊಳ್ಳೇಶ್ವರ ( 11 ನೇ ಶತಮಾನ- ಕಲ್ಯಾಣ ಚಾಲುಕ್ಯರ ಕಾಲದ)
ಊರಿನ ಪ್ರಮುಖ ದೇವಾಲಯಗಳಲ್ಲಿ ಡೊಳೇಶ್ವರ ದೇವಾಲಯವು ಒಂದು. ಗರ್ಭಗೃಹ, ಅಂತರಾಳಗಳು ಮಾತ್ರ ಉಳಿದುಕೊಂಡಿವೆ. ಗರ್ಭಗೃಹದಲ್ಲಿ ಲಿಂಗ, ಅಂತರಾಳದಲ್ಲಿ ನಂದಿ ವಿಗ್ರಹಗಳಿವೆ. ಹೆಚ್ಚು ಕಡಿಮೆ ವಿನಾಶದ ಅಂಚಿನಲ್ಲಿರುವ ಈ ದೇವಾಲಯದ
ಹೊರಗೋಡೆಗಳನ್ನು ಸ್ಥಳೀಯ ಚಕ್ಕೆಕಲ್ಲು ಹಾಗೂ ಮಣ್ಣಿನಿಂದ ದುರಸ್ತಿಗೊಳಿಸಲಾಗಿದೆ. ದೇವಾಲಯವು ಬಹುಶಃ ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದ್ದಿರಬಹುದು.ಗತದಿನಗಳಲ್ಲಿ ಇದೊಂದು ಪ್ರಮುಖ ಆಲಯವೇ ಸರಿ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನ (ಕ್ರಿ. ಶ. ೧೦೭೯)ಕಾಲದ
ಶಾಸನವೊಂದಿದೆ. ಇದರಲ್ಲಿ ಗ್ರಾಮೇಶ್ವರ ದೇವಾಲಯ ಎಂಬ ಉಲ್ಲೇಖವಿರುವುದರಿಂದ.
ಇಂದಿನ ಡೊಳೇಶ್ವರನೆ ಅಂದಿನ ಗ್ರಾಮೇಶ್ವರನಾಗಿರಬಹುದು

ಕೊಳೂರು ಕೊಡಗೂಸು ( ಕಲ್ಯಾಣ ಚಾಲುಕ್ಯರ ಕಾಲದ)
ಆಯತಾಕಾರದ ತಲವಿನ್ಯಾಸ ಹೊಂದಿರುವ ಈ ದೇವಾಲಯವು ಹಲವಾರು ಮಾರ್ಪಾಡುಗಳನ್ನು ಹೊಂದಿರುವುದು. ಗರ್ಭಗೃಹ ಎಂದೆನಿಸಿಕೊಳ್ಳುವ ಭಾಗದಲ್ಲಿ ಎತ್ತರದ ಕಟ್ಟೆ (ಹಿಂದಿನ ಒಳ ಗೋಡೆಗೆ ಹೊಂದಿಕೊಂಡಂತೆ)ಯನ್ನು ಕಟ್ಟಲಾಗಿದೆ. ಈ
ಕಟ್ಟೆಯ ಮೇಲೆ ಕಪ್ಪು ಶಿಲೆಯ ಸುಂದರವಾದ ವಿಷ್ಣು (ಎಡ) ವೀರಭದ್ರ (ಮಧ್ಯ) ಹಾಗೂ ಶಿವ ಪಾರ್ವತಿಯರ (ಬಲ)ಮೂರ್ತಿ ಶಿಲ್ಪಗಳನ್ನು ಇಟ್ಟಿದ್ದಾರೆ. ಈ ಶಿಲ್ಪಗಳ ಹಿಂದಿನ ಗೋಡೆಯಲ್ಲಿ ಕಿಟಕಿಗಳಿವೆ. ಇವುಗಳ ಮುಂದಿನ ಭಾಗದಲ್ಲಿ ಎದುರು-ಬದುರಾಗಿ ಎರಡು ಗರ್ಭಗೃಹಗಳನ್ನು ನಿರ್ಮಿಸಿದ್ದಾರೆ. ಎಡಭಾಗದ ಗರ್ಭಗೃಹದಲ್ಲಿ ಸೂರ್ಯನಾರಾಯಣನ ಶಿಲ್ಪವನ್ನು ಇಟ್ಟಿದ್ದಾರೆ. ಬಲಭಾಗದ ಗರ್ಭಗೃಹದಲ್ಲಿ ಲಿಂಗವಿದ್ದು. ಇದಕ್ಕೆ ಅಂತರಾಳವು ಸಹ ಇದೆ. ಈ ಎರಡು ಗರ್ಭಗೃಹಗಳ ಮಧ್ಯೆ ನಾಲ್ಕು ಕಂಬಗಳುಳ್ಳ ನವರಂಗವನ್ನು ನಿರ್ಮಿಸಿದ್ದಾರೆ. ಮತ್ತೆ ಇದರ ಮುಂಭಾಗ (ನವರಂಗ)ದಲ್ಲಿ ಆರು ಕಂಬಗಳುಳ್ಳ ವಿಸ್ತಾರವಾದ ಜಾಗೆಯಿದೆ. ಇದಾದ ನಂತರ ಬಲಭಾಗದಲ್ಲಿ ಲಿಂಗವುಳ್ಳ ಗರ್ಭಗೃಹ ರಚಿಸಿದ್ದು ಇದಕ್ಕೆ ತೆರೆದ ಅಂತರಾಳವಿದೆ. ಇದರ ಮುಂಭಾಗದಲ್ಲಿ ಕೆತ್ತನೆಯ ನಾಲ್ಕು ಕಂಬಗಳಿಂದ ಕೂಡಿದೆ.

ಇದರಲ್ಲಿನ ಎತ್ತರದ ಕಟ್ಟೆಯ ಮೇಲೆ ನಂದಿಯನ್ನು ಸ್ಥಾಪಿಸಿದ್ದಾರೆ. ಮೇಲಿನ ಗರ್ಭಗೃಹಕ್ಕೆ ಹೊಂದಿಕೊಂಡಂತೆ ಬಲಭಾಗದ ಗೋಡೆಯಲ್ಲಿ ಎರಡು ಕೋಷ್ಠಗಳಿವೆ. ಒಂದರಲ್ಲಿ ಅಕ್ಕಮಹಾದೇವಿ ಶಿಲ್ಪವನ್ನು ಇಟ್ಟು ಪೂಜಿಸುತ್ತಿದ್ದಾರೆ. ಇನ್ನೊಂದರಲ್ಲಿ ವಿಷ್ಣುಶಿಲ್ಪವನ್ನು ಇಟ್ಟಿದ್ದಾರೆ. ದೇವಾಲಯಕ್ಕೆ ಮುಖಮಂಟಪದ ತರಹದ ರಚನೆಯಿದೆ. ಇದರ ಮುಂದೆ ಎತ್ತರದ ಕಟ್ಟೆ ಕಟ್ಟಿದ್ದು. ಈ ಕಟ್ಟೆಯ ಮೇಲೆ ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಕಲ್ಲುಗಳನ್ನು ನಿಲ್ಲಿಸಿದ್ದಾರೆ. ದೇವಾಲಯಕ್ಕೆ ಪ್ರಾಕಾರ ಗೋಡೆ ಇದೆ. ಈ ಪ್ರಾಕಾರದಲ್ಲಿ ವಿಷ್ಣು. ನಾಗ ಶಿಲ್ಪಗಳನ್ನು ಇಟ್ಟಿದ್ದಾರೆ (ಈ ಹಿಂದೆ ಬನವಾಸಿ-12000 ಆಡಳಿತಕ್ಕೆ ಸೇರಿದ್ದರಿಂದ ನಾಗ ಆರಧನೆ ಇತ್ತೆಂದು ಹೇಳಬಹುದು) ಅಧಿಷ್ಟಾನದ ಭಾಗವು ಸ್ಪಷ್ಟವಾಗಿ ಗೋಚರಿಸುತ್ತದೆ.
ಆದರೆ ಅಲ್ಲಲ್ಲಿ ಗಾರೆಯಿಂದ ದುರಸ್ತಿಗೊಳಿಸಿದ್ದಾರೆ. ಈ ದೇವಾಲಯವು ಅನೇಕ ಮಾರ್ಪಾಟುಗಳನ್ನು ಹೊಂದಿದೆ ಎಂದು ಅಭಿಪ್ರಾಯಿಸಬಹುದು.
ಕೋಳೂರು ಗ್ರಾಮವು ಬನವಾಸಿ-12000 ಪ್ರಾಂತಾಡಳಿತದ, ಚಿಕ್ಕ ಕಂಪಣವಾದ
ಬಾಸೂರು-140ರ ಆಡಳಿತಕ್ಕೊಳಪಟ್ಟಿತ್ತು. ಈ ಬಾಸೂರು-140ರ ಕಂಪಣದ
ಕಲಿಯಮ್ಮರಸನು ಇಲ್ಲಿನ ಕಲಿದೇವೇಶ್ವರ ದೇವಾಲಯಕ್ಕೆ ಗೃಹ ಮತ್ತು ಭೂದಾನ ನೀಡಿದ
ಉಲ್ಲೇಖವನ್ನು ಶಾಸನವು ತಿಳಿಸುತ್ತದೆ. ಇದು ಕಲ್ಯಾಣ ಚಾಲುಕ್ಯರ ಒಂದನೆಯ ಸೋಮೇಶ್ವರನ ಕಾಲಕ್ಕೆ ಸಂಬಂಧಿಸಿದ್ದು, ಬಹುಶಃ ಶಾಸನಕೃತ ಕಲಿದೇವೇಶ್ವರ
ಕಾಲಕ್ರಮೇಣ ಕೋಳೂರಿನ ಕೊಡಗೂಸು ಎಂಬ ಹೆಸರು ಪಡೆದಿರಬಹುದು. ಕನ್ನಡ ಸಾಹಿತ್ಯದ ಅನೇಕ ಪ್ರಸಿದ್ಧ ಗ್ರಂಥಗಳಲ್ಲಿ ಕೋಳೂರಿನ ಕೊಡಗೂಸು ಬಸವಣ್ಣನ ಪ್ರಸ್ತಾಪ ಇರುವುದು ಗಮನಾರ್ಹ.

                ~  ಪ್ರಮೋದ ನಲವಾಗಲ ~

Comments

Post a Comment

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು