ಛತ್ರಪತಿ ಶಿವಾಜಿಯ “ವಂಶಸ್ಥರ ಮೂಲ ಕರ್ನಾಟಕ”.....llll

ಛತ್ರಪತಿ ಶಿವಾಜಿಯ “ವಂಶಸ್ಥರ ಮೂಲ ಕರ್ನಾಟಕ”.....llll
ದೇವರಗುಡ್ಡದಲ್ಲಿರುವ ಮರಾಠ ಭಕ್ತನ ವಿಗ್ರಹ

ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಮಧ್ಯದಲ್ಲಿರುವ ರಾಜಕೀಯ ಗಡಿಯಿಂದಾಗಿ ಅಕ್ಕ-ಪಕ್ಕದಲ್ಲಿರುವ ಈ ರಾಜ್ಯಗಳು ಬೇರೆಯಾಗಿವೆ ಹೊರತು ಅಲ್ಲಿರುವ ಜನರಿಂದಾಗಲ್ಲಾ. ಕಾರಣ ಅವೆರಡು ರಾಜ್ಯಗಳಲ್ಲಿರುವ ಜನರು ಒಂದೇ. “ಒಂದು ಕಾಲದ ಕರ್ನಾಟವೇ ಇಂದು ಮಹಾರಾಷ್ಟ್ರವಾಗಿದೆ. ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಭೇದವಿಲ್ಲ” ಎಂಬ ಲೋಕಮಾನ್ಯ ತಿಲಕರ ಮಾತು ಇದನ್ನು ಪುಷ್ಠಿಕರಿಸುತ್ತದೆ.

ಒಂಬಂತ್ತನೇಯ ಶತಕದ ಪ್ರಾರಂಭಕ್ಕೆ ನರ್ಮದಾ ಗೋಧೆಯರ ನಡುವಣ ನಾಡು “ಆರಿಯರ”(ಉದಾಹರಣೆಗೆ ರಾಣೇಬೆನ್ನೂರ ತಾಲೂಕಿನ ಆರೆಮಲ್ಲಾಪುರ ಆರೆಯರ ವಾಸಸ್ಥಾನವಾಗಿದೆ) ನಾಡು ಆಗಿತ್ತು ಎಂಬ ಒಪ್ಪಿಗೆಯನ್ನು ರಾಷ್ಟ್ರಕೂಟ “ನೃಪತುಂಗದೇವಾನುಮತಮಪ್ಪ” ಕವಿರಾಜ ಮಾರ್ಗವೇ ಇತ್ತಿದೆ. ‘ವಿದರ್ಭ’ವೆಂಬ “ಮರಹಟ್ಟಿ” ದೇಶಕ್ಕೆ ವಲಸೆಗೆ ಬಂದ, ಸಂಸ್ಕೃತ-ಪ್ರಾಕೃತ ಭಾಷಿಕರು ಮತ್ತು ಸ್ಥಳೀಯ ದೇಶಿಕರು ಇವರೊಳಗಿನ ಲೌಕಿಕ ವ್ಯವಹಾರದಲ್ಲಿ ಮರಾಠಿಯು ತನ್ನ ವಿಶಿಷ್ಟ ರೂಪ-ಆಕೃತಿಯನ್ನು ಪಡೆಯಿತೆನ್ನುವುದು ಆ ಮನುಸ್ಮೃುತಿಯನ್ನು ಕಣ್ಣಾಡಿಸಿದಾಗ ಗೊತ್ತಾಗುತ್ತದೆ.

 ವರರುಚಿಯ ವ್ಯಾಕರಣದ ಕೃತಿಯಲ್ಲಿ ಮಹಾರಾಷ್ಟ್ರ ಎಂಬ ಶಬ್ದದ ಮೊದಲ ದರ್ಶನ ಕಾಣಿಸಿಕೊಂಡಿದೆ. “ವರರುಚಿ” ಕ್ರಿಸ್ತ ಶಕೆಯ ಆರಂಭದ ಕಾಲದ್ದು. ಆಗ “ರಾಷ್ಟ್ರವೆಂದು” ಈ ದೇಶ ಅಸ್ತಿತ್ವದಲ್ಲಿರದಿದ್ದರೂ ಭಾಷೆಯ ದೃಷ್ಟಿಯಿಂದ ಇದಕ್ಕೆ ಗೌರವದ ಸ್ಥಾನವಿತ್ತೆಂದು ವರರುಚಿಯ ವ್ಯಾಕರಣ ಕೃತಿ ಹೇಳುತ್ತದೆ. “ಶೇಷಂ ಮಹಾರಾಷ್ಟ್ರೀವರ್” ಎಂಬ ಹೆಗ್ಗಳಿಕೆಯಿಂದ “ಮಹಾರಾಷ್ಟ್ರೀ” ಎಂಬ ಶಬ್ದ ಪ್ರಾಚೀನ ಕಾವ್ಯಗಳಲ್ಲಿ ಕಾಣಸಿಗುವುದರಿಂದ ಇದೇ ಈ ಪ್ರದೇಶದ ಮೂಲ ರೂಪವಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇದರಿಂದ ಕ್ರಮೇಣ “ಮರಹಟ್ಟಿ” ಮತ್ತು “ಮರ್ಹಾಟಿ” ಶಬ್ದಗಳು ರೂಪಗೊಂಡಿರುವ ಸಾಧ್ಯತೆಗಳಿವೆ ಎಂಬುದು ವಿದ್ವಾಂಸರ ಅನಿಸಿಕೆ. 

ಸುಮಾರು ಆರನೇ ಶತಮಾನದಲ್ಲಿ ಬರೆಯಲಾದ ಪಾಲಿ ಗ್ರಂಥ” ಮಹಾವಂಶಿದಲ್ಲಿ ಮಹಾರಾಷ್ಟ್ರವನ್ನು “ಮಹಾರಟ್ಟ”ವೆಂದು ಕರೆಯಲಾಗಿದೆ. ಪಂಪಕವಿ (ಕ್ರಿ.ಶ.941) ಆದಿಪುರಾರಣದಲ್ಲಿ “ಮಹಾರಾಷ್ಟ್ರದ ಪ್ರಸ್ತಾಪವಿದೆ. 12ನೇ ಶತಮಾನದ ಶಿವಶರಣರಾದ ಅಲ್ಲಮಪ್ರಭುಗಳು, ಚನ್ನಮಲ್ಲಿಕಾರ್ಜುನ ಹಾಗೂ ಸೊನ್ನಲಗಿ ಸಿದ್ಧರಾಮರ ವಚನಗಳಲ್ಲಿ ಮರಾಠಿ ಪದಗಳು ಬಳಕೆಯಾಗಿವೆ.

ಶಾತವಾಹನರ ಅನೇಕ ಶಾಸನಗಳಲ್ಲಿ “ಮಹಾರಠಿಕ”ರು ಎಂಬ ಪದ ಬಳಕೆಯಲ್ಲಿದೆ. ಕನ್ನಡದ ಪಂಪ ತನ್ನ ಭಾರತದಲ್ಲಿ ಅರ್ಜುನನ್ನು ಹೊಗಳುವ ಸಂದರ್ಭದಲ್ಲಿ ದ್ರೋಣರ ಬಾಯಿಯಿಂದ “ಅರೆ ಹೋಯ್” ಎಂಬ ಶಬ್ದವನ್ನು ಉಚ್ಛರಿಸಿದ್ದಾನೆ. ಕ್ರಿ.ಶ. 1209ರಲ್ಲಿ ಜನ್ನನು ತನ್ನ ಅನಂತಪುರಾಣದಲ್ಲಿ “ಊಠಿ ಊಠಿ ಮಾಗಾ ಬೈಸ್ ಜಾತೂ ಹಳೊ” (ಏಳು ಏಳು ನಿಧಾನವಾಗಿ ನೀನು ಹೋಗಿ ಕುಳಿತುಕೊ) ಎಂದು ಮರಾಠಿ ವಾಕ್ಯವನ್ನು ಬರೆದಿದ್ದಾನೆ. ಇವುಗಳನ್ನು ನಾವು ಗಮನಿಸಿದಾಗ ಮರಾಠಿ ಭಾಷೆ ಅತೀ ಪ್ರಾಚೀನವಾದುದು ಎಂದೆನಿಸದೇ ಇರುವುದಿಲ್ಲ.

ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸಂಬಂಧ ಬಹಳ ಹಳೆಯದ್ದು. ಮರಾಠಿ ಭಾಷೆಯ ಶಾಸನ (ಸುಮಾರು 10ನೇ ಶತಮಾನದ್ದು) ಪ್ರಪ್ರಥಮವಾಗಿ ಕರ್ನಾಟಕದ ಶ್ರವಣಬೆಳಗೋಳದಲ್ಲಿ ದೊರೆತಿದೆ. ಇಲ್ಲಿಯೇ ನಿಂತಿರುವ ಗೊಮ್ಮಟೇಶ್ವರನ ಪಾದದ ಬುಡದಲ್ಲಿ “ಶ್ರೀ ಚಾವುಂಡರಾಜೇ ಕರವೀಯಲೇ” ಎಂದೂ ಹಾಗೂ “ಗಂಗಾರಾಜೇ ಸುತಾಲೆ ಕರವೀಯಲೇ” ಎಂಬ ವಾಕ್ಯಗಳು ಕಾಣಸಿಗುತ್ತವೆ. ಇದನ್ನು ಗಮನಸಿದಾಗ ಈ ಭಾಗದಲ್ಲಿ ಸುಮಾರು 9 ನೇ ಶತಮಾನದಲ್ಲಿಯೇ ಮರಾಠಿ ಭಾಷೆ ಪ್ರಚಲಿತದಲ್ಲಿತ್ತು ಎನಿಸುತ್ತದೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಜೈನರ ಭಾಷೆ ಮರಾಠಿಯಾಗಿತ್ತೆಂಬುದು ವಿಶೇಷ. ಮರಾಠಿ ಸಾಹಿತಿಯಾದಂತಹ ಮುಕ್ತೇಶ್ವರನ ತಂದೆ ಬಾಲಕೃಷ್ಣ ಪಂಥ ಗದಗ ಹತ್ತಿರ ಡಂಬಳದವರು. ಅವರಿಗೆ ಹಾಗೂ ಕುಮಾರವ್ಯಾಸರಿಗೆ ಹಾವೇರಿಯ ಚೌಡದಾನಪುರದ ಮುಕ್ತೇಶ್ವರನ ಕೃಪೆಯಿತ್ತೆಂದು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದದ “ವಾರಕರೀ ಪಂಥ” ಹಾಗೂ ಕನ್ನಡ ನಾಡಿನ ದಾಸ ಪಂಥಗಳು ಒಂದೇ ಕಾಲದಲ್ಲಿ ಹುಟ್ಟಿದವುಗಳು. ಈ ಎರಡು ಪಂಥಗಳ ಮುಖ್ಯವಸ್ತು ಕೃಷ್ಣ ಭಕ್ತಿ ಅಥವಾ ವಿಠಲ ಭಕ್ತಿಯಾಗಿದೆ. ಮರಾಠಿ ಜನರ ಶ್ರದ್ಧಾ ಸ್ಥಾನಗಳಲ್ಲಿ ಜ್ಞಾನೇಶ್ವರನು ಒಬ್ಬ. 

13ನೇ ಶತನಮಾನದ ಈತ ಸಂಸ್ಕೃತದ ಭಗವದ್ಗೀತೆಯನ್ನು ಜನಭಾಷೆಯಾಗಿರುವ ಮರಾಠಿಯಲ್ಲಿ ಬರೆದ. ಈತನ ಕೈಯಿಂದ ದೇವಭಾಷೆಯ ಭಗವದ್ಗೀತೆ ಮನುಷ್ಯ ಭಾಷೆಯಲ್ಲಿ “ಜ್ಞಾನೇಶ್ವರಿ” ಆಯಿತು. ಈ ಜ್ಞಾನೇಶ್ವರಿಯಲ್ಲಿ ಅಸಂಖ್ಯಾತ ಕನ್ನಡ ಪದಗಳಿದ್ದವು. ಜ್ಞಾನೇಶ್ವರನೇ ಮೊಟ್ಟಮೊದಲಿಗೆ ಪಂಡರಾಪುರದ ವಿಠಲನು ಕನ್ನಡದವನೆಂದು ಹೇಳಿದ್ದಾನೆ. ಈತನಿಗೆ ಕನ್ನಡ ಬಹಳ ಚೆನ್ನಾಗಿ ಬರುತ್ತಿದ್ದರಿಂದ ಆತನ ಪದ್ಯವನ್ನು ಪುರಂದರದಾಸರು ಯಥಾವತ್ತಾಗಿ ಬರೆದಿದ್ದು ವಿಶೇಷ.

 ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡಿದ ಆ ಶ್ರೇಯಸ್ಸು ಮರಾಠ ಪೇಶ್ವೆಗಳಿಗೆ ಸಲ್ಲುತ್ತದೆ. ಪೇಶ್ವೆ ಮಾಧವರಾಯ ಜನಿಸಿದ್ದು ಹಾವೇರಿಯ ಸವಣೂರಿನಲ್ಲಿರುವ ಹಕೀಂ ಖಾನ್‍ನ ಅರಮನೆಯಲ್ಲಿ ಅಂದರೆ ಆಹೊತ್ತಿಗೆ ಈ ಭಾಗದಲ್ಲಿ ಅವರು ಅನೇಕ ಸಾಮಂತರಿಗೆ ಪ್ರೀಯರಾಗಿದ್ದರು ಎನಿಸುತ್ತದೆ. 

ಮರಾಠಿಯಲ್ಲಿ ಬರುವ ಅನೇಕ ಪದಗಳು ಕನ್ನಡದ ಪದಗಳ ಅರ್ಥಕ್ಕೆ ಸರಿಯಾಗಿವೆ. ಇದಕ್ಕೊಂದು ಉದಾಹರಣೆಯೆಂದರೆ “ಮೊರ” ಎಂದರೆ ಹಳಗನ್ನಡದಲ್ಲಿ ಮೊಸರು ಎಂದರ್ಥ. ಇದೇ ಪದವು ಮರಾಠಿಯಲ್ಲಿಯೂ ಅದೇ ಅರ್ಥವನ್ನು ನೀಡುತ್ತದೆ. ಸಮಯವನ್ನು ಸೂಚಿಸುವ “ತಾಸು” ಎಂಬ ಮರಾಠಿ ಪದ ನಮ್ಮಲ್ಲಿ ಇನ್ನೂ ಸಹ ಬಳಕೆಯಲ್ಲಿದೆ. ಸಿಂಧಗಿಯ ಜಕ್ಕಪ್ಪಯ್ಯನವರ “ಅಗ್ನಿಪರೀಕ್ಷೆ” ಅರ್ಥಮಾಡಿಕೊಳ್ಳಬೇಕಾದರೆ ಕನ್ನಡ ಅವಶ್ಯಕವಾಗಿ ಬರಲೇಬೇಕು, ಅಂದರೆ ಅಲ್ಲಿ ಭಾಷೆಗಳ ಸಮ್ಮಿಲನ ನಮಗೆ ಅರ್ಥವಾಗದೇ ಇರಲಾರದು. ಕನ್ನಡದ ವರಕವಿ ದ.ರಾ.ಬೇಂದ್ರೆ ಹಾಗೂ ಶಂಭಾ ಜೋಷಿಯವರ ಮನೆಯ ಭಾಷೆ ಮರಾಠಿಯಾಗಿತ್ತು. ಕುಮಾರಗಂಧರ್ವ, ಭೀಮಸೇನ್ ಜೋಷಿ ಮುಂತಾದವರನ್ನು ಮಹಾರಾಷ್ಟ್ರ ಅಪ್ಪಿಕೊಂಡಿತ್ತೆಂದರೆ ಈ ಭಾಷಿಕರ ಸಂಬಂಧ ಹಳೆಯದ್ದೆನ್ನಿಸದಿರುವುದಿಲ್ಲ. 

ಮರಾಠಾ ಸಮಾಜದ ಪೂಜ್ಯನೀಯ ವ್ಯಕ್ತಿ, ವೀರಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರು ಪುಣೆಯ ಶಿವನೇರಿ ದುರ್ಗದಲ್ಲಿ “ಶಿವನೇಯಿಯ” ಕೃಪೆಯಿಂದ ತಂದೆ ಶಹಜಿರಾಜೇ ಭೋಸ್ಲೆ ಹಾಗೂ ತಾಯಿ ಜೀಜಾಬಾಯಿಯ ನಾಲ್ಕನೇ ಮಗನಾಗಿ 19 ಫೆಬ್ರುವರಿ 1627ರಲ್ಲಿ ಜನಸಿದನು. ಈತನ ಮೂಲ ವಂಶಸ್ಥರು ಕರ್ನಾಟಕದವರು ಎಂಬ ವಿಷಯ ನಮಗೆಲ್ಲರಿಗೂ ಅಚ್ಛರಿಯನ್ನು ಮೂಡಿಸದಿರುವುದಿಲ್ಲ. ಕಾರಣ ಛತ್ರಪತಿ ಶಿವಾಜಿ ಮಹಾರಾಜರ ಮೂಲಪುರುಷರು ಕರ್ನಾಟಕದ ಗದಗ ಜಿಲ್ಲೆಯ ಸೊರಟೂರಿನಿಂದ ಮಹಾರಾಷ್ಟ್ರಕ್ಕೆ ಹೋಗಿ ನೆಲೆ ನಿಂತರು. ಸೊರಟೂರಿನಿಂದ ಮಹಾರಾಷ್ಟ್ರಕ್ಕೆ ಹೋದ ಬಳಿಯಪ್ಪ (ಬಳಪನೇ) ಛತ್ರಪತಿ ಶಿವಾಜಿ ಮಹಾರಾಜರ ವಂಶದ ಮೂಲ ಪುರುಷ. ಶಿವಾಜಿ ಮಹಾರಾಜರು ಅಡ್ಡಹೆಸರು “ಭೋಂಸಲೆ” ಹೊಯ್ಸಳರ ಮೂಲವಾಗಿದೆ. ಶಿವಾಜಿ ಮಹಾರಾಜರ ತಂದೆ ಶಹಜೀ ಭೋಸ್ಲೆಯು ವಿಜಾಪುರದ ಆದಿಲ್ ಶಾಹಿಗಳ ಆಡಳಿತದಲ್ಲಿ ಗೌರ್ನರ್ ಆಗಿದ್ದನು. ತನ್ನ ಪರಾಕ್ರಮದಿಂದ ದೊಡ್ಡಬಳ್ಳಾಪುರ, ತುಮಕೂರ, ಕುಣಿಗಲ್, ಚಿಕ್ಕನಾಯಕನಹಳ್ಳಿ ಹಾಗೂ ರಾಮಗಿರಿ ದುರ್ಗಗಳನ್ನು ಗೆದ್ದುಕೊಂಡ ಆತ ವಿಜಾಪುರ ಆದಿಲ್‍ಶಾಹಿಗಳ ಆಡಳಿತಕ್ಕೆ ಒಳಪಟ್ಟಿದ್ದರೂ ಬೆಂಗಳೂರಿನಲ್ಲಿ ಅರಮನೆಯನ್ನು ಕಟ್ಟಿ, ಆಡಳಿತ ಸಂಸ್ಥೆಗಳನ್ನು ಸ್ಥಾಪಿಸಿ ರಾಜವೈಭದಿಂದ ಮೆರೆಯುತ್ತಿದ್ದನು. 

ಷಹಜಿಯವರು ತಮ್ಮ ಪ್ರಾಣವನ್ನು ತೆತ್ತ ನೆಲವು ಈ ಕನ್ನಡ ಭೂಮಿಯಲ್ಲಿ ಹೀಗಾಗಿ ಅವರ ಸಮಾಧಿಯನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದ್ದಿಗೆರೆಯಲ್ಲಿ ಈಗಲೂ ಸಹ ನೋಡಬಹುದು. ಯುದ್ಧವನ್ನು ಮಾಡುತ್ತಾ ಕೊಪ್ಪಳ ಜಿಲ್ಲೆಯ ಕನಕಪುರದಲ್ಲಿ ಛತ್ರಪತಿ ಶಿವಾಜಿಯವರ ಅಣ್ಣ ಸಂಭಾಜಿರಾಜೆ ಭೋಸ್ಲೆ ಅಸುನೀಗಿದ್ದರಿಂದ ಇಲ್ಲಿಯೇ ಆ ಹೊತ್ತಿನಲ್ಲಿ ಅವನ ಸಮಾಧಿ ನಿರ್ಮಾಣವಾಯಿತು.

ಛತ್ರಪತಿ ಶಿವಾಜಿಯವರ ಮೂಲ ವಂಶಸ್ಥರ ಮನೆದೇವರು ಶ್ರೀಶೈಲದ ಮಲ್ಲಿಕಾರ್ಜುನ. ಈ ದೇವರಿಗೆ ಶಿವಾಜಿ ಮಹಾರಾಜರು ಉಂಬಳಿ ಹಾಕಿಕೊಟ್ಟಿದ್ದರು. ಶ್ರೀಶೈಲದಲ್ಲಿ ಈಗಲೂ ಶಿವಾಜಿ ಗೋಪುರ ಇರುವುದನ್ನು ಯಾರಾದರೂ ನೋಡಬಹುದು. ಛತ್ರಪತಿ ಶಿವಾಜಿಯವರ ಕರ್ನಾಟಕ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ಬೆಳವಡಿ ಮಲ್ಲಮ್ಮಳ ಜೊತೆಗೆ ನಡೆದ ಯುದ್ಧ ಅನಂತರ ಮಲ್ಲಮ್ಮಳಲ್ಲಿ ತನ್ನ ತಾಯಿ ಜೀಜಾಬಾಯಿಯ ಪ್ರತಿಬಿಂಬವನ್ನು ಕಂಡಿದ್ದು, ಶಿವಾಜಿ ಮಹಾರಾಜರ ಮಗನಾದ ರಾಜಾರಾಮನಿಗೆ ಮೊಘಲರ ಸೈನ್ಯ ಬೆನ್ನಟ್ಟಿದ್ದಾಗ ಆತನನ್ನು ಕೆಳದಿ ಚೆನ್ನಮ್ಮಳು ಆಶ್ರಯ ನೀಡಿ ರಕ್ಷಿಸಿದ್ದು ಅವಿಸ್ಮರಣೀಯ. ಇಂತಹ ಘಟನೆಗಳನ್ನು ನೋಡಿದಾಗ ಕನ್ನಡ-ಮರಾಠಿಗರ ಸೌಹಾರ್ದತೆಯ ಸಂಕೇತವೆನಿಸುತ್ತದೆ. ಬಹುಶಃ ಅಂದಿನ ಅಖಂಡ “ಕರ್ನಾಟ”ದಲ್ಲಿ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿಕೊಂಡಿರಬಹುದು. ಹೀಗಾಗಿ ಕರಳುಬಳ್ಳಿಯ ಕೂಗಿನಿಂದಾಗಿ ಸಂಬಂಧಗಳೂ ಸಹ ನಡೆಯುತ್ತಿರುವುದು ವಿಶೇಷ. ಆದರೆ ಈಗಿನ ರಾಜಕೀಯ ಗಡಿರೇಖೆಯು ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳನ್ನು ಬೇರೆ-ಬೇರೆ ಮಾಡಿರುವುದೇ ಹೊರತು ಅವುಗಳಲ್ಲಿ ವಾಸಿಸುವ ಜೀವಿಗಳ ಮನಸ್ಸನ್ನಲ್ಲ ಎಂಬುದು ನನ್ನ ಅಂತರಾಳದ ಅನಿಸಿಕೆಯಾಗಿದೆ.

           # ಪ್ರಮೋದ ನಲವಾಗಲ #


Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು