ಕರ್ನಾಟಕದಲ್ಲಿಯೇ ಮೊಟ್ಟಮೊದಲ ತ್ರಿವರ್ಣ ಧ್ವಜಾರೋಹಣವಾಗಿದ್ದು ಹಾವೇರಿಯ ಮುನಸಿಪಾಲಿಟಿಯ ಕಛೇರಿಯ ಮೇಲೆ....ll
ಕರ್ನಾಟಕದಲ್ಲಿಯೇ ಮೊಟ್ಟಮೊದಲ ತ್ರಿವರ್ಣ ಧ್ವಜಾರೋಹಣವಾಗಿದ್ದು ಹಾವೇರಿಯ ಮುನಸಿಪಾಲಿಟಿಯ ಕಛೇರಿಯ ಮೇಲೆ....ll
ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ದೇಶವನ್ನು ಸ್ವಾತಂತ್ರ ಗೊಳಿಸಬೇಕೆಂಬ ಉದ್ದೇಶದಿಂದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಾದ್ಯಂತ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರು.
ಈ ಹೋರಾಟದ ಕಿಚ್ಚು ಇಮ್ಮಡಿಯಾಗಲೆಂದು ಭಾರತದೇಶದಲ್ಲಿ ಸ್ಥಾನಿಕ ಸ್ವರಾಜ್ಯದ ಕಾರ್ಯಾಲಯಗಳ ಮೇಲೆ ರಾಷ್ಟ್ರಧ್ವಜವನ್ನು ಏರಿಸಬೇಕೆಂದು ರಾಷ್ಟ್ರಮಟ್ಟದಲ್ಲಿಯ ನಾಯಕರು ನಿರ್ಣಯಿಸಿದರು.
ಭಾರತ ದೇಶದಲ್ಲಿ ಈ ವಿಷಯವಾಗಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಧ್ವಜಾರೋಹಣ ಮಾಡಲಾಯಿತು. ಕರ್ನಾಟಕ ಹಾಗೂ ಹಳೆಯ ಅಖಂಡ ಧಾರವಾಡ ಜಿಲ್ಲೆಯಲ್ಲಿ ಈ ವಿಷಯವಾಗಿ ಸ್ವಾತಂತ್ರ ಹೋರಾಟಗಾರರು ಗಟ್ಟಿತನವನ್ನು ಪ್ರದರ್ಶಿಸಬೇಕೆಂಬ ಪ್ರಯತ್ನದಲ್ಲಿದ್ದರು.
ಆದರೆ ಹಾವೇರಿ ಜನ ಒಂದು ಹೆಜ್ಜೆ ಮುಂದೆ ಎಂಬಂತೆ ಮುನ್ಸಿಪಾಲ್ಟಿಯ ಕಚೇರಿ ಮೇಲೆ ಧ್ವಜಾರೋಹಣವನ್ನು ಮಾಡಬೇಕೆಂಬ ನಿರ್ಣಯವನ್ನು ಅದಾಗಲೇ ಕೈಗೊಂಡಿದ್ದರು.
ದಿನಾಂಕ 03/05/1930 ರ ಸಾಯಂಕಾಲ ಪಟ್ಟಣದ ನಾಗರಿಕರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಡಂಗುರ ಸಾರಿದರು.
ವಿಷಯ ತಿಳಿಯುತ್ತಿದ್ದಂತೆಯೆ ರವಿವಾರ (04/05/1930) ಮುಂಜಾನೆ 7.00 ಗಂಟೆಗೆ ಮುನಿಸಿಪಾಲಿಟಿಯ ಮುಂದೆ ಸಾವಿರಾರು ಜನರು ಸೇರಿದರು. ಮುನಿಸಿಪಾಲಿಟಿಯ ಕಟ್ಟಡವು ಹಸಿರು ತೋರಣಗಳಿಂದ ಶೃಂಗರಿಸಲ್ಪಟ್ಟಿತ್ತು. ಮುನಿಸಿಪಾಲಿಟಿಯ ನೌಕರರೆಲ್ಲರೂ ಖಾದಿಯನ್ನು ಧರಿಸಿ ಎದೆಯ ಮೇಲೆ ಮೂರು ಬಣ್ಣದ ರಾಷ್ಟ್ರ ನಿಶಾನೆಯ ಚಿಹ್ನೆಯನ್ನು ಹಚ್ಚಿಕೊಂಡಿದ್ದರು.
ವಾಲಂಟಿಯರುಗಳು ಖಾದಿಯನ್ನು ಧರಿಸಿ ರಾಷ್ಟ್ರ ಧ್ವಜ ಏರಿಸುವ ಪದ್ದತಿಯನ್ನು ತಿಳಿಸಲು ಆಗಮಿಸಿದ್ದರು. ಸ್ಪೂಲ್ ಕಮಿಟಿಯ ಚೇರ್ಮನ್ನರಾದ ಹೊಸಮನಿ ಸಿದ್ದಪ್ಪನವರು ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ಉತ್ಸವ ಹೊರಡಿಸಿದರು. ಊರಲ್ಲಿ ಹೆಣ್ಣುಮಕ್ಕಳು ಆರತಿಯನ್ನು ಎತ್ತಿ ರಾಷ್ಟ್ರಧ್ವಜಕ್ಕೆ ಬೆಳಗುತ್ತಿದ್ದರಲ್ಲದೆ ಪ್ರತಿಯೊಬ್ಬರೂ ಕಾಯಿ, ಕರ್ಪೂರ ಹಾಗೂ ಪುಷ್ಪಗಳನ್ನು ಅರ್ಪಿಸುತ್ತಿದ್ದರು.
ಉತ್ಸವವು ಪಟ್ಟಣವನ್ನು ತಿರುಗಾಡಿ 9.00 ಗಂಟೆಗೆ ಮುನಸಿಪಾಲಟಿ ಬಯಲಿಗೆ ಬಂದಿತು. ಸಿದ್ಧಗೊಳಿಸಿದ್ದ ಕಂಬದ ಕೆಳಗೆ ಎಲ್ಲರೂ ನಿಂತುಕೊಂಡರು. ವಾಲಂಟಿಯರ್ ರಾಷ್ಟ್ರಧ್ವಜವನ್ನು ಏರಿಸುವ ಕಾರ್ಯ ಮಾಡಬೇಕೆಂದು ಮುನ್ಸಿಪಾಲ್ಟಿ ಸದಸ್ಯರಾದ ಹೊಂಬಣ್ಣ ಹೊಂಬಣ್ಣನವರ ಪ್ರಾರ್ಥಿಸಿಕೊಂಡರು. ಮಹದೇವರಾವ ನಾಡಗೇರ ಇದಕ್ಕೆ ಅನುಮೋದನೆಯನ್ನು ನೀಡಿದರು.
ಪರಮಣ್ಣ ಹೊಸಮನಿಯವರು ರಾಷ್ಟ್ರಧ್ವಜವನ್ನು ಪೂಜೆಗೈದರು. ಧ್ವಜಾರೋಹಣಯಾಗುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಲಾರಂಭಿಸಿತು. ರಾಷ್ಟ್ರಗೀತೆಯ ನಂತರ ಚನ್ನಬಸಪ್ಪ ಹಾಲಪ್ಪನವರ ಜನರಿಗೂ ಮುನ್ಸಿಪಾಲಿಟಿಯ ಸರ್ವ ಸದಸ್ಯರಿಗೂ ಹಾಗೂ ಅಧ್ಯಕ್ಷರಿಗೂ ವಂದಿಸಿದರು.
ರಾಷ್ಟ್ರಕಾರ್ಯದಲ್ಲಿ ಹಾವೇರಿಯು ಕರ್ನಾಟಕದಲ್ಲಿಯೇ ಅಗ್ರಗಣ್ಯ ವಾಯಿತೆಂದು ಜನರು ಮಾತನಾಡಲಾರಂಭಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಮೊಟ್ಟಮೊದಲು ರಾಷ್ಟ್ರಧ್ವಜವನ್ನು ಹಾರಿಸಿದ ಕೀರ್ತಿ ಹಾವೇರಿಗೆ ಸಲ್ಲುತ್ತದೆ ಎಂಬುದು ನಮಗೆ ಹೆಮ್ಮೆಯ ವಿಷಯ.
#ಪ್ರಮೋದ_ನಲವಾಗಲ
9686168202
Comments
Post a Comment