ಚಿತ್ರದುರ್ಗದ ಪಾಳೇಗಾರರಿಗೂ ಹಾಗೂ ಹಾವೇರಿ ಜಿಲ್ಲೆಗಿರುವ ಸಂಬಂಧವೇನು.????

ಚಿತ್ರದುರ್ಗದ ಪಾಳೇಗಾರರಿಗೂ ಹಾಗೂ ಹಾವೇರಿ ಜಿಲ್ಲೆಗಿರುವ ಸಂಬಂಧವೇನು.????
ಉತ್ತರ ದೇಶದ ಜಡಕಲ್ಲ ದುರ್ಗದ ದಿಲ್ಲಿಯ ತಳವಾರಿಕೆ ಮಾಡುತ್ತಿದ್ದ ವಾಲ್ಮೀಕಿ ಗೊತ್ರದ ಕಾಮಗೇತಿ ವಂಶದವರು ಚಿತ್ರದುರ್ಗದ ಪಾಳೇಗಾರರಾಗಿ ಪಾಳೇಪಟ್ಟನ್ನು ಸ್ಥಾಪಿಸಿದರು. ಇವರ ಮನೆದೇವರು ಅಹೋಬಲ ನರಸಿಂಹ.

ಈ ಪಾಳೇಗಾರರಲ್ಲಿ ಕಸ್ತೂರಿರಂಗಪ್ಪ ನಾಯಕ, ಒಬಣ್ಣ ನಾಯಕ, ಬರಮಣ್ಣ ನಾಯಕ ಹಾಗೂ ಕಡೆಯ ವೀರಮದಕರಿ ನಾಯಕರು ಹೆಚ್ಚು ಪ್ರಬಲರಾಗಿದ್ದರು.

ಚಿತ್ರಕಲ್ಲು ದುರ್ಗದ(ಈಗಿನ ಚಿತ್ರದುರ್ಗ) ಪಾಳೇಗಾರರು ಈಗಿನ ಹಾವೇರಿ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನೂ ಹೊಂದಿದ್ದರು ಎನ್ನಲು ಈ ಕೆಳಗಿನ ಉದಾಹರಣೆಗಳೇ ಸಾಕ್ಷಿ.

ಕ್ರಿ.ಶ.1652 ರಲ್ಲಿ ಕಸ್ತೂರಿರಂಗಪ್ಪ ನಾಯಕನ ಮಗ ಸರ್ಜೆರಾಯನಿಗೆ "ಬೆನ್ನೂರ"(ಈಗಿನ ರಾಣೇಬೆನ್ನೂರ) ತಳವಾರನ ಮಗಳು ಒಬವ್ವನನ್ನು ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡಲಾಯಿತು.

ಕಸ್ತೂರಿ ರಂಗಪ್ಪ ನಾಯಕನ ಸೈನ್ಯದಲ್ಲಿ ವಿಶೇಷವಾದ ಸ್ಥಾನಮಾನ ಪಡೆದವರಲ್ಲಿ ಬೆನ್ನೂರಿನ(ಈಗಿನ ರಾಣೇಬೆನ್ನೂರ) ಚಿಕ್ಕಯ್ಯ ಹಾಗೂ ಸಿದ್ದಯ್ಯ. ಇವರು ಬಿಲ್ಲವಿದ್ಯೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿದವರಾಗಿದ್ದು, ಯುದ್ದದಲ್ಲಿ ಹೆಣದ ರಾಶಿಯನ್ನು ಹಾಕುತ್ತಿದ್ದರು

ಕ್ರಿ.ಶ.1674 ರಲ್ಲಿ ಷಂಷೇರ್ ಖಾನ ಹರಿಹರವನ್ನು ಮುತ್ತಿರಲು ಚಿತ್ರದುರ್ಗದ ಒಬಣ್ಣ ನಾಯಕ ಬಾರಿಗುಡ್ಡದಲ್ಲಿ (ಈಗಿನ ಬಾತಿಗುಡ್ಡ) ಬೀಡುಬಿಟ್ಟು ಎತ್ತಿನ ಕೊಂಬುಗಳಿಗೂ ಹಾಗೂ ಗೀಡದ ಟೊಂಗೆಗಳಿಗೂ ಬೆಂಕಿಯನ್ನು ಹೊತ್ತಿಸಿ ಹೆಚ್ಚಿನ ಸೈನ್ಯ ನನ್ನ ಬಳಿಯಿದೆಯೆಂದು ಬಿಂಬಿಸಿ ತುಂಗಭದ್ರ ನದಿಯನ್ನು ದಾಟಿ "ಕೊಡಿಯಾಲುಗೆ" ಬರುತ್ತಾನೆ (ಈಗಿನ ರಾಣೇಬೆನ್ನೂರ ತಾಲೂಕಿನ ಕೊಡಿಯಾಲ ಹೊಸಪೇಟೆ) ಅಲ್ಲಿದ್ದ ಷಂಷೇರ್ ಖಾನ ಸೈನಿಕರನ್ನು ಹೊರದಬ್ಬಿ ಹರಿಹರವನ್ನು ಷೇರಖಾನನಿಗೆ ಕೊಡುತ್ತಾನೆ. 

ಹಾವನೂರ ಸಂಸ್ಥಾನದೊಡನೆ ಒಳ್ಳೆಯ ಸಂಭಂದವನ್ನು ಚಿತ್ರದುರ್ಗದ ಪಾಳೇಗಾರರು ಹೊಂದಿದ್ದರು.

ರಾಣೇಬೆನ್ನೂರ ತಾಲೂಕಿನ ನದಿಹರಳಹಳ್ಳಿ ಹಾಗೂ ಐರಣಿ ಗ್ರಾಮಗಳ ಮಧ್ಯಭಾಗದಲ್ಲಿಯ ಕಾಟಲಿಂಗೇಶ್ವರ ದೇವಸ್ಥಾನ ಅವರ ಕಾಲದ್ದಾಗಿದ್ದು ಅಲ್ಲಿ ನಡೆದುಕೊಳ್ಳುವರು ಸಹ "ಕಾಮಗೇತಿ ವಂಶಸ್ಥರಾಗಿರುವುದು" ವಿಶೇಷ.

ಕ್ರಿ.ಶ 1776 ರಲ್ಲಿ ಹೈದರಲಿಯಿಂದ ಬಂಕಾಪುರವನ್ನು ಗೆಲ್ಲುವುದು ಅಸಾಧ್ಯವೆಂದು ತಿಳಿದಾಗ ಅವನು ಇದೇ ಕಡೆ ವೀರಮದಕರಿ ನಾಯಕನ ಸಹಾಯದಿಂದ ಗೆಲ್ಲುತ್ತಾನೆ.

ಸವಣೂರ ನವಾಬನಾದ ಹಕೀಂ ಖಾನ ಕಡೆಯ ವೀರಮದಕರಿ ನಾಯಕನ ಯುದ್ದದಲ್ಲಿಯ ಆವೇಶವನ್ನು ನೋಡಿ ಭಯಪಡುತ್ತಿದ್ದ.

ರಾಣೇಬೆನ್ನೂರನ್ನು ವಶಪಡಿಸಿಕೊಂಡಿದ್ದ ಪೇಶ್ವೆಯವರನ್ನು ಆನವಟ್ಟಿಯವರಿಗೂ ಅಟ್ಟಿಸಿಕೊಂಡು ಹೋಗುವಲ್ಲಿ ಹೈದರಲಿಗೆ ಸಹಕರಿಸಿದವರಲ್ಲಿ ಪ್ರಮುಖರೆಂದರೆ ವೀರಮದಕರಿ ನಾಯಕ. ಕೊನೆಗೆ ವೀರಮದಕರಿ ನಾಯಕನ ಸಾಮ್ರಾಜ್ಯವನ್ನೇ ಮೊಸದಿಂದ ಹೈದರಲಿ ಕಬಳಿಸಿದ. 

ಚಿತ್ರದುರ್ಗದ ಪಾಳೇಗಾರರ ಕಾಲದಲ್ಲಿಯೇ ರಾಣೇಬೆನ್ನೂರ ಸಿದ್ದೇಶ್ವರ ದೇವಸ್ಥಾನದ ಶಿಖರ ನಿರ್ಮಾಣವಾಯಿತೆಂಬ ಪ್ರತೀತಿ ಇದೆ.

ಹೀಗೆ ಅವರು ತಮ್ಮ ಆಡಳಿತದ ಅವದಿಯಲ್ಲಿ ಜಿಲ್ಲೆಯೊಂದಿಗೆ ಸಂಬಂಧವನ್ನು ಹೊಂದಿದ್ದರು ಎನ್ನುವುದು ವಿಶೇಷ.
    
            ~~ ಪ್ರಮೋದ ನಲವಾಗಲ ~~
                      9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು