ಆನೆ ಬಂತು ಆನೆ ಯಾವ ಊರ ಆನೆ? ವಿಜಾಪುರ ಆನೆ......!!!!
ಆನೆ ಬಂತು ಆನೆ ಯಾವ ಊರ ಆನೆ? ವಿಜಾಪುರ ಆನೆ......!!!!
ಆನೆ ಬಂತು ಆನೆ ಯಾವೂರು ಆನೆ?
ವಿಜಾಪುರ ಆನೆ
ಇಲ್ಲಿಯಾಕೆ ಬಂತು?
ಹಾದಿತಪ್ಪಿ ಬಂತು, ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು
ಅದ ದುಡ್ಡ ಕೊಟ್ಟು ಕೊಬ್ಬರಿ ತಂದು ಲಟಲಟ ಮುರಿದು ಊರಿಗೆಲ್ಲ ಹಂಚಿದೆ.
ಈ ಮೇಲಿನ ಜಾನಪದವನ್ನು ನಮ್ಮ ಹಿರಿಯರು ತಮ್ಮ ಮೊಮ್ಮಕ್ಕಳನ್ನು ಮೊಂಡೆಯ ಮೇಲೆ ಹಾಕಿಕೊಂಡು ಹೇಳುತ್ತಾ ನನ್ನ ವಿಜಾಪುರದ ಚಿನ್ನ, ಬಂಗಾರ ಎಂದು ಸಂತೈಸುವ ಸಂತೋಷದ ಸನ್ನಿವೇಶ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ವೆಸಾಮಾನ್ಯ
ಆದರೆ ಈ ಜಾನಪದವು ಆ ಕಾಲದಲ್ಲಿಯ ದುಃಖದ ಸನ್ನಿವೇಶವನ್ನು ಬಿಂಬಿಸುತ್ತದೆ ಎನ್ನುವುದೆ ವಿಶೇಷ.
ವಿಜಯನಗರವು ಕೃಷ್ಣದೇವರಾಯನ ಕಾಲದಲ್ಲಿ ಅತಿ ಸಮೃದ್ಧಿಯಾಗಿತ್ತು. ಇಲ್ಲಿ ಬಂಗಾರ, ಬೆಳ್ಳಿ ಹಾಗೂ ವಜ್ರಗಳನ್ನು ಸಂತೆಯಲ್ಲಿ ಮಾರುವ ಶ್ರೀಮಂತ ಮಾರುಕಟ್ಟೆಗಳಿದ್ದವು. ಬಡತನ ಅನ್ನುವುದು ಬಹಳ ವಿರಳವಾಗಿತ್ತು.
ಇಂತಹ ಸಾಮ್ರಾಜ್ಯವು ಕೃಷ್ಣದೇವರಾಯನ ಅಳಿಯನಾದಂತಹ ರಾಮರಾಯನ ಕಾಲದಲ್ಲಿ ನಶಿಸಿಹೊಯಿತು ಎನ್ನುವುದು ದುಃಖದ ವಿಷಯ.
ರಾಮರಾಯನು ಷಾಹಿ ರಾಜ್ಯಗಳ ಮದ್ಯ (ವಿಜಾಪುರದ ಆದಿಲ್-ಷಾ, ಗೋಲ್ಕಂಡದ ಕುತುಬ್-ಷಾ, ಬೀದರಿನ ಬರಿದ್-ಷಾ, ಅಹಮದನಗರಿನ ನಿಜಾಮ-ಷಾ ಮತ್ತು ಬೀರಾರಿನ ಷಾಹಿಗಳು) ವಿರಸವನ್ನು ತಂದಿಟ್ಟು ಅದರ ಲಾಭವನ್ನು ಪಡೆಯುತ್ತಿದ್ದನು. ಇದನ್ನು ಅರಿತ ಐದು ಷಾಹಿ ಕುಟುಂಬಗಳು ತಮ್ಮೊಳಗೆ ಶರೀರ ಸಂಬಂಧವನ್ನು ಬೆಳೆಸಿ 1564 ರಲ್ಲಿ ಎಲ್ಲರೂ ಒಂದಾದರು ಮತ್ತು ಗುಪ್ತವಾಗಿ ಸಭೆಯನ್ನು ನೆಡೆಸಿ ರಾಮರಾಯನ ವಿರುದ್ಧ ಯುದ್ಧಘೋಷೆಣೆ ಮಾಡಲು ಸಜ್ಜಾದರು.
ವಿಜಾಪುರದ ಆದಿಲ್-ಷಾಹಿಯು ರಾಮರಾಯನಿಗೆ ತಾನು ಈ ಯುದ್ಧದಲ್ಲಿ ತಟಸ್ಥವಾಗಿ ಉಳಿಯುವೆನೆಂದು ತಪ್ಪು ಸಂದೇಶವನ್ನು ರವಾನಿಸಿದನು, ಎಪ್ಪತ್ತರ ಇಳಿವಯಸ್ಸಿನ ರಾಮರಾಯನಿಗೆ ಈ ಮೋಸದಾಟ ತನ್ನ ಮಂಜಾದ ಕಣ್ಣುಗಳಿಗೆ ತಿಳಿಯದೆ ಕೆಚ್ಛಿದೆಯಿಂದ ಹೋರಾಡುವ ಧೈರ್ಯದಲ್ಲಿದ್ದನು. ಈ ಯುದ್ಧದಲ್ಲಿ ರಾಮರಾಯನು ಒಂದು ಲಕ್ಷದ ನಾಲವತ್ತು ಸಾವಿರ ಕಾಲ್ದಳದೊಂದಿಗೆ, 10 ಸಾವಿರ ಅಶ್ವದಳದೊಂದಿಗೆ ಮತ್ತು 100 ಗಜದಳದೊಂದಿಗೆ ಮಾರ್ಗದರ್ಶಕರ ಮುಂದಾಳತ್ವದಲ್ಲಿ ಮತ್ತು ತನ್ನ ಸೈನ್ಯದ ಹಿಂದೆ, ಅಡುಗೆಮಾಡುವರನ್ನು, ಬಡಿಗಿ ಕೆಲಸದವರನ್ನು ತೆಗೆದುಕೊಂಡು ಬಂದು ರಕ್ಕಸಗಿ ಮತ್ತು ತಂಗಡಗಿಯ ಕೃಷ್ಣಾನದಿಯ ದಂಡೆಯಲ್ಲಿ ಬಂದುನಿಂತನು(ಈ ಕದನಕ್ಕೆ ತಾಳಿಕೋಟಿ ಕದನ ಎಂದು ಕರೆದರು ಅದು ಇಲ್ಲಿ ನಡೆದಿರುವುದಿಲ್ಲಾ ಬದಲಿಗೆ ರಕ್ಕಸಗಿ ಮತ್ತು ತಂಗಡಗಿ ಎಂಬ ಗ್ರಾಮಗಳ ಮದ್ಯದಲ್ಲಿ ನಡೆದಿರುತ್ತದೆ).
ಆ ಸ್ಥಳಕ್ಕೆ ಒಂದು ಕೆಡೆಯಿಂದ ಆದಿಲ್‍ಷಾಹಿ ಬರುವಿಕೆಯನ್ನು ಕಂಡು ರಾಮರಾಯನು ಆಶ್ಚರ್ಯಚಕಿತನಾದನು ಮತ್ತು ಇನ್ನೊಂದು ಕಡೆಯಿಂದ ನಾಲ್ಕು ಷಾಹಿ ಕುಟುಂಬಗಳು ಒಟ್ಟಾಗಿ ಸೇರಿ ಯುದ್ಧಕ್ಕೆ ಬಂದದ್ದನ್ನು ಕಂಡು ರಕ್ತ ಕುದಿಯುತ್ತಾ ಆವೇಷ ಹೆಚ್ಚಾಯಿತು, ಆದರೆ ಅದು ಅವನ ವಯಸ್ಸಿಗೆ ಸಹಕರಿಸಲಿಲ್ಲ ಎನ್ನಬಹುದು.
ಒಂದೆಡೆ ತಿರುಮಲದೇವರಾಯನು (ರಾಮರಾಯನ ಕಿರಿಯ ತಮ್ಮ) ಕುತುಬ್-ಷಾ ಮತ್ತು ನಿಜಾಮ್-ಷಾ ವಿರುದ್ದ ಯುದ್ಧಕ್ಕೆ ಮುಗಿಬಿದ್ದು ಅವರ ಸಾವಿರಾರು ಸೈನಿಕರನ್ನು ಸದೆಬಡಿದನು. ಆದರೆ ವಿಜಯನಗರ ಅರಸರಲ್ಲಿ ಇದ್ದಂತಹ ಕೆಲವು ರಾಜದ್ರೋಹಿ ಸೈನಿಕರು ತಿರುಗಿಬಿದ್ದಾಗ ತಿರುಮಲದೇವರಾಯನು ಮರಾಠರ ರಾಜಾ ಖೋರಪಡೆ ಮತ್ತು ಸಹೋದರ ವೆಂಕಟಾದ್ರಿ ಜೊತೆಗೂಡಿ ಖುತುಬ್‍ಷಾ, ಬರಿದ್‍ಷಾ ಮತ್ತು ನಿಜಾಮ್‍ಷಾನ ಸೈನ್ಯವನ್ನು ಎದರಿಸಿದರು. ಸುಲ್ತಾನರ ತೋಪುಗಳ ಮುಂದೆ ವಿಜಯನಗರದ ಸೈನಿಕರು ಛಿದ್ರವಾಗಿ ಹೋದರು. ಈ ಸಮಯವನ್ನು ನಿಜಾಮ್-ಷಾ ಉಪಯೋಗಿಸಿಕೊಂಡು 23 ಜನೇವರಿ 1565 ರಂದು ವೀರಾವೇಶದಲ್ಲಿದ್ದ ರಾಮರಾಯನ ರುಂಡವನ್ನು ದೇಹದಿಂದ ಬೇರ್ಪಡಿಸಿ ತನ್ನ ಖಡ್ಗಕ್ಕೆ ಸಿಕ್ಕಿಸಿಕೊಂಡು ರಣರಂಗದಲ್ಲಿ ಎತ್ತಿಹಿಡಿದು ಹುಚ್ಚನಂತೆ ಮೆರೆದಾಡಿದನು ಮತ್ತು ವೆಂಕಟಾದ್ರಿಯನ್ನು ರಣರಂಗದಲ್ಲಿಯೇ ಕೊಲ್ಲಲಾಯಿತು.
ಈ ಎಲ್ಲಾ ಸನ್ನಿವೇಷಗಳನ್ನು ತಿರುಮಲದೇವರಾಯ ಒದ್ದೆಯಾದ ಕಣ್ಣಿನಿಂದ ನೋಡುತ್ತಲೇ ಕೊನೆಯ ನಿರ್ಧಾರಕ್ಕೆ ಬಂದು ರಣರಂಗದಿಂದ ಕಾಲುಕಿತ್ತನು (ಪೆನಕೊಂಡಕ್ಕೆ ಹೋದನು). ರಾಮರಾಯನ ರುಂಡವನ್ನು ನಿಜಾಮ ಷಾಹಿ ಕುಟುಂಬದವರು ಯುದ್ಧದ ಸಂಕೇತವಾಗಿ ತಮ್ಮ ಅರಮನೆಗೆ ಒಯ್ದುರು. ಇನ್ನೂಳಿದ ಷಾ ಕುಟುಂಬಗಳು ರಾಮರಾಯನ ಕಲ್ಲಿನ ರುಂಡದ ಪ್ರತಿಮೆಯನ್ನು ಮಾಡಿ ತಮ್ಮ ಅರಮನೆಯಲ್ಲಿ ವಿಜಯದ ಸಂಕೇತವಾಗಿ ಇಟ್ಟುಕೊಂಡರು. ರಾಮರಾಯನ ಉಳಿದ ದೇಹವನ್ನು ತಂಗಡಗಿ ಗ್ರಾಮದವರು ಶವಸಂಸ್ಕಾರ ಮಾಡಿ ಅದಕ್ಕೆ ಒಂದು ವೀರಗಲ್ಲನ್ನು ನೆಟ್ಟರು ಎಂಬುದರ ಪ್ರತೀತಿಯಾಗಿ ಧನ್ನೂರು ಮತ್ತು ತಂಗಡಗಿ ಊರಿನ ಮಧ್ಯೆ ಅಥವಾ ನೀಲಾಂಬಿಕೆ ದೇವಿಯ ಗುಡಿಯ ಹಿಂಭಾಗದಲ್ಲಿ ಕೃಷ್ಣಾದಂಡೆಯ ಬಲಭಾಗದ ಹೊಲವೊಂದರಲ್ಲಿ ಮುಳ್ಳುಕಂಟೆಯ ಮಧ್ಯೆ ಸಾಕ್ಷಿಯಾಗಿ ನಿಂತಿದೆ.
ಐದು ಷಾಹಿ ಕುಟುಂಬದವರು ವಿಜಯ ಸಾಮ್ರಾಜ್ಯವನ್ನು ಮುತ್ತಿಗೆಹಾಕಿ (ಹಂಪಿ) ಸತತವಾಗಿ ಆರು ತಿಂಗಳು ಲೂಟಿ ಮಾಡಿ, ಅಲ್ಲಿನ ಸಂಸ್ಕøತಿಯನ್ನು ನಾಶಮಾಡಿದರು ಮತ್ತು ಪೂರ್ಣ ಹಂಪಿಯನ್ನು ಬೆಂಕಿಗೆ ಹಾವುತಿಯಾಗಿ ಕೊಟ್ಟರು. ಅಲ್ಲಿನ ಅನೇಕ ಕಟ್ಟಿಗೆಯ ಅರಮನೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು ಹಾಗೂ ಬೆಂಕಿಯ ಜ್ವಾಲೆಗೆ ಸುತ್ತಮುತ್ತಲಿನ ಕಲ್ಲು ಬಂಡೆಗಳು ಒಡೆದವು. ಷಾಹಿ ಕುಟುಂಬದ ಸೈನಿಕರು ವೇಶ್ಯೆಯರ, ಶ್ರೀಮಂತರ, ವ್ಯಾಪಾರಸ್ಥರ ಮತ್ತು ದೇವಾಲಯಗಳಲ್ಲಿ ಇರುವ ಸಂಪತ್ತನ್ನು ಲೂಟಿಮಾಡಿ ಆನೆಗಳ ಮುಖಾಂತರ ತಮ್ಮ ರಾಜ್ಯಕ್ಕೆ ಸಾಗಿಸಿದರು.
ಇಂತಹ ಸನ್ನಿವೇಷವನ್ನು ಜನಸಾಮಾನ್ಯರು ಕುತೂಹಲಕಾರಿಯಾಗಿ ಕಲ್ಲಿನ ಬಂಡೆಯ ಸಂದಿಯಲ್ಲಿ, ಮನೆಯ ಬಾಗಿಲಿನಲ್ಲಿ, ಗಿಡದ ಮೇಲಿನ ತುದಿಯಲ್ಲಿ ಕುಳಿತುಕೊಂಡು ಅಸಾಹಕರಾಗಿ ಅರಳಿದ ಕಣ್ಣಿನಿಂದ ನೋಡುತ್ತಿರಲು, ಷಾಹಿ ಸುಲ್ತಾನರ ಸೊಕ್ಕಿದ ಆನೆಗಳು ಸಂಪತ್ತನ್ನು ತುಂಬಿಕೊಂಡು ಹೋಗುತ್ತಿರುವಾಗ, ಬಂಗಾರದ ನಾಣ್ಯಗಳನ್ನು ಮತ್ತು ವಜ್ರಗಳನ್ನು ಕೆಡವುತ್ತಾ ಮುಂದೆ ಸಾಗುತ್ತಿದ್ದವು. ಅವುಗಳನ್ನು ಚಿಕ್ಕ ಮಕ್ಕಳು ಆರಿಸಿಕೊಂಡು ಬಂದು ಅಂಗಡಿಯವನಿಗೆ ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಅದರ ಪ್ರತೀತಿಯಾಗಿ ಈ ಜಾನಪದವು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರೀತಿಯ ಸಂಕೇತವಾಗಿ ಜನರ ಬಾಯಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ.
~~ಪ್ರಮೋದ ಸೋ. ನಲವಾಗಲ~~
9686168202
Comments
Post a Comment