ಶಿಶುನಾಳ ಷರೀಫ್ ಸಾಹೇಬರ ಪುರಾಣ ಅಮೇರಿಕಾದ ಎಲ್ಲಾ ಗ್ರಂಥಾಲಯಗಳಲ್ಲಿರಲಿ: ಅಮೇರಿಕದ ಪ್ರೊಫೆಸರ್ ವಿಲಿಯಂ.ಸಿ.ಎಂ ಕಾರಮ್ಯಾಕ್ ....................!

                                                 

ಕರ್ನಾಟಕದಲ್ಲಿಯೇ ಶರೀಫ ಸಾಹೇಬರಿಂದ ಪ್ರಸಿದ್ದಿಯನ್ನು ಪಡೆದ ಗ್ರಾಮವೆಂದರೆ ಶಿಗ್ಗಾಂವಿಯಿಂದ 15 ಕಿ.ಮೀ ದೂರದಲ್ಲಿರುವ ಶಿಶುನಾಳ.

 "ಶಿಶುನಾಳಧೀಶ" ಈ ಗ್ರಾಮದ ಅಧೀದೇವತೆಯಾಗಿದೆ. ವಿಶಾಲವಾದ ದೇವಸ್ಥಾನದ ಮಧ್ಯದಲ್ಲಿ ಸ್ತಂಭದ ಮೇಲಿರುವ ನಂದಿಯೇ (ಬಯಲು ಬಸವಣ್ಣ) ಶಿಶುನಾಳಧೀಶ. ಇದರ ಸ್ತಂಭದ ಮೇಲೆ 12-13 ನೇ ಶತಮಾನದ ಶಾಸನದಲ್ಲಿ ಇಲ್ಲಿಯ ಭೋಗನಾಥ ಹಾಗೂ ಮಲ್ಲಿನಾಥದೇವರಿಗೆ ಬಿಟ್ಟ ಭೂದಾನದ ಬಗ್ಗೆ ತಿಳಿಸುತ್ತದೆ. ಇಲ್ಲಿಯೇ ಸಮೀಪದಲ್ಲಿ ಹುಲಗೂರ ಹಾಗೂ ವೀರಭದ್ರೇಶ್ವರ ದೇವರಿಂದ ಪ್ರಸಿದ್ಧಿಯನ್ನು ಪಡೆದ ಕಾರಡಗಿ ಗ್ರಾಮಗಳನ್ನು ನೋಡಬಹುದು. ಹುಲಗೂರನ್ನು ಶಾಸನಗಳಲ್ಲಿ "ಪುಲ್ಲಂಗೂರು" ಎಂದು ಕರೆಯಲಾಗಿದೆ. ಇಲ್ಲಿಯ " ಪುಲಂಗೂರಬ್ಬೆ" ಗ್ರಾಮದೇವತೆಯಿಂದಾಗಿ ಈ ಹೆಸರು ಈ ಗ್ರಾಮಕ್ಕೆ ಬಂದಿದೆ ಎನ್ನಲು ಕ್ರಿ.ಶ 970 ರ ರಾಷ್ಟ್ರಕೂಟರ ಶಾಸನ ಸಹಕಾರಿಯಾಗುತ್ತದೆ. 

ಒಟ್ಟು 13 ಶಾಸನಗಳು ಇಲ್ಲಿಯವರೆಗೂ ಈ ಗ್ರಾಮದಲ್ಲಿ ದೊರೆತಿವೆ. ಸಂತರಾದ "ಹಜರತ್ ಷಾಹ್‌ ಖಾದರಿರವರು" ಕ್ರಿ.ಶ 1800 ರಲ್ಲಿ ಸವಣೂರಿನ ನವಾಬನಾದ ಖೈರಖಾನನ ರಾಜ್ಯದಲ್ಲಿ ( ಸವಣೂರಿನಲ್ಲಿ)ವಾಸವಾಗಿದ್ದರು. ಆದರೆ ನವಾಬ ಮಾಡಿದ ತಪ್ಪನ್ನು ಕ್ಷೇಮಿಸದೆ ಅವನಿಗೆ ಶಾಪವನಿತ್ತು ಇದೇ ಐತಿಹಾಸಿಕ ಸ್ಥಳವಾದ ಹುಲಗೂರಿಗೆ ಬಂದು ವಾಸಿಸಲಾರಂಭಿಸಿದರು. ಇಲ್ಲಿಯೇ ಅವರು ಕೊನೆಯ ದಿನಗಳನ್ನು ಕಳೆದರು. ಅವರ ಹಾಗೂ ಅವರ ಸಂಭಂದಿಕರ ಸಮಾಧಿಗಳನ್ನು ನಾವು ಇಂದಿಗೂ ಇಲ್ಲಿ ನೋಡಬಹುದು. ಗುರುಗಳಾದ ಹಜರತಷಹಾರ ಜಾತ್ರೆಯು ಮಾಘ ಪೂಣಿ೯ಮೆಯಲ್ಲಾಗುತ್ತದೆ. ಸವಣೂರಿನ ನವಾಬನಾಗಿದ್ದ ನವಾಬ ಅಬ್ದುಲ್ ದಲೀಲ್ ಖಾನ ಗುರುಗಳ ಮಹಾಭಕ್ತನಾಗಿದ್ದನು. ವಾರಗಟ್ಟಲೆ ನಡೆಯುವ ಹಜರತ್ ಷಹಾರ ಜಾತ್ರೆಯಲ್ಲಿ ತಪ್ಪದೆ ಹಾಜರಾಗುತ್ತಿದ್ದನು ಹೀಗಾಗಿ  ಧಾರವಾಡ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿತ್ತು. 

ಈ ಸಂತನ ದರ್ಗಾಕ್ಕೆ ಬ್ರಿಟಿಷ್ ಸರಕಾರದಲ್ಲಿ 500 ರೂಪಾಯಿಗಳ ಭೂಮಿ ನಡೆಯುತ್ತಿತ್ತು ಹಾಗೂ ವಾಷಿ೯ಕ 150 ರೂಪಾಯಿ ನಗದು ದೊರೆಯತ್ತಿತ್ತು. ಇಂತಹ ಮಹಾನ ಸಂತನಿಗೆ ಇಮಾಮ್ ಸಾಹೇಬ ಮತ್ತು ಹಜ್ಜೂಮಾ ದಂಪತಿಗಳು ನಡೆದುಕೊಳ್ಳುತ್ತಿದ್ದರು. ಅವರಿಗೆ ಮಕ್ಕಳಿಲ್ಲ ಎಂಬು ಕೊರಗಿತ್ತು. ಈ ದಂಪತಿಗಳಿಗೆ ಸಂತರ ಆಶಿವಾ೯ದದಿಂದ  07/ಮಾಚ೯/1819 ರ ಅಮವಾಸ್ಯೆಯೊಂದು ಮುದ್ದಾದ ಗಂಡು ಮಗುವೊಂದು  ಜನಿಸಿತು. ಅದುವೇ ಮಹಮದ್ ಶರೀಫ (ಶಿಶಿನಾಳ ಶರೀಫ ಸಾಹೇಬ).ಈ ಚೈತನ್ಯಶಾಲಿಯಾದ ಮಗುವಿನ ಜನನವನ್ನು ಶಿಶುನಾಳ ಸಮೀಪದ ಕಳಸದಲ್ಲಿ ಹಿರಿಯ ಜೀವಿಯೊಂದು ಕಾಯುತ್ತಿತ್ತು. ಕಳಸವು ಕುಂದಗೊಳ ತಾಲೂಕಿನ ಒಂದು ಚಿಕ್ಕಗ್ರಾಮ. ಇದನ್ನು ಶಾಸನಗಳಲ್ಲಿ " "ಕಾಡಿಯುರು" ಎಂದು ಉಲ್ಲೇಖಿಸಲಾಗಿದೆ. ಇದೊಂದು ಮಹಾಜನರಿರುವ ಅಗ್ರಹಾರಗಿತ್ತು. ಇಲ್ಲಿಯ ಬ್ರಾಹ್ಮಣ ಗುರುಗಳಾದ ಗುರುಗೋವಿಂದ ಭಟ್ಟರು ತನ್ನ ಪರಮಾಪ್ತ ಶಿಷ್ಯನನ್ನಾಗಿ ಮಾಡಿಕೊಂಡಿದ್ದು ಮುಸಲ್ಮಾನ ಜಾತಿಯ ಹುಡುಗನಾದ ಇದೇ ಶರೀಫರನ್ನು. ಇದು ಜಾತಿ-ಧಮ೯ವನ್ನು ಮೀರಿದ ಗುರು-ಶಿಷ್ಯರ ಸಂಬಂಧವೆನ್ನಬಹುದು. 

ಗುರು ಗೋವಿಂದ ಭಟ್ಟರಲ್ಲಿ ಶರೀಫ ಶಿವಯೋಗಿಗಳು ಅಧ್ಯಾತ್ಮಿಕ ನೆಲೆಯನ್ನು ಕಂಡರು. ಜೀವನದಲ್ಲಿ ಯಾವುದು ಶಾಸ್ವತವಲ್ಲಾ ಎಂದು ಅರಿತ ಜೀವಿಗಳಾಗಿ ಸಮಾಜದ ಅಂಕು-ಡೊಂಕುಗಳನ್ನು ತಮ್ಮದೆ ರೀತಿಯಲ್ಲಿ ತತ್ತ್ವ ಪದಗಳನ್ನು ಕಟ್ಟುತ್ತಾ-ಹಾಡುತ್ತಾ ಸಂಚಾರಿಗಳಾಗಿ, ಭಕ್ತಿ ಮಾಗ೯ದಿಂದ ಮುಕ್ತಿ ಕಾಣಬಹುದು ಎಂದು ತಿಳಿಸುತ್ತಾ ನಡೆದರು. "ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ", "ತರವಲ್ಲ ತಗಿ ನಿನ್ನ ತಂಬೂರಿ" ಎಂಬ ಅನೇಕ ತತ್ತ್ವಪದಗಳನ್ನು ಅವರು ಹಾಡಿದರು. ಅವುಗಳನ್ನು ಕೇಳಿ ಮಂತ್ರ ಮುಗ್ದರಾದ ಜನರು ಕೋರಿ ಕಾಗದದ ಮೇಲೆ ಹಾಗೂ ಹಾಳೆಯ ಮೇಲೆ ಬರೆದಿಟ್ಟುಕೊಂಡು ಹಾಡಿ ಕುಣಿದರು. ಜೀವನದಲ್ಲಿ ಅಹಿಂಸೆ, ಜಾತ್ಯಾತೀತತೆ ಹಾಗೂ ಸಕಲ ಜೀವಿಗಳಿಗೂ ಲೇಸು ಬಯಸಿ, ನಿಸ್ವಾಥಿ೯ಗಳಾಗಿ ಈ ಲೌಕಿಕ  ಬದಕನ್ನು ಷರೀಫ್ ಸಾಹೇಬರು  ಬಿಟ್ಟು ನೆಡೆದಾಗ, ಅವರ ಶವಸಂಸ್ಕಾರವನ್ನು ಮಾಡುವಾಗ ಸ್ವಲ್ಪ ತಡವಾಯಿತಾದರು ಅದನ್ನು  ಹಂದಿಗನೂರ ದೇಸಾಯಿಗಳಾದ ಬುಳ್ಳಪ್ಪ ದೇಸಾಯಿಯವರು ನಿಭಾಯಿಸಿದರು. ತಂದೆ ತಾಯಿಯ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟವರು, ತಾವೆ ನೆಟ್ಟ ಗಿಡಗಳ ಕೆಳಗೆ ಹೆತ್ತವರ ಜೊತೆಯಲ್ಲಿ ಸುಖನಿದ್ರೆಯಲ್ಲಿ ಮಲಗಿ ಬಂದಂಥ ಭಕ್ತರಿಗೆ ಬೇಡಿದಂತಹ  ವರವನ್ನು ಕೊಡುವ ಕಲ್ಪವೃಕ್ಷವಾಗಿದ್ದಾರೆ.  ವಿಪಯಾ೯ಸವೆಂದರೆ ಅಂತಹ ವ್ಯಕ್ತಿಯ ಅನೇಕ ತತ್ವಪದಗಳು ಹಾಳಾದವು. ಆದರೆ ಕೆಲವುಗಳನ್ನು ಮಾತ್ರ ಸಂಗ್ರಹಿಸುವಲ್ಲಿ ಡಾ. ಮಲ್ಲಿಕಾಜ೯ನ ಸಿಂದಗಿ, ವಿ.ಕೆ ಗೋಕಾಕ, ಪಂಡಿತ ಸದಾಶಿವ ಶಾಸ್ತ್ರಿಗಳು ಹಾಗೂ ಪ್ರೊ. ಎಸ್. ಎಸ್. ಮಾಳವಾಡರು ಶ್ರಮ ವಹಿಸಿದರು. ಎನ್ನಲು ಅವರುಗಳು ಬರೆದ ಪತ್ರಗಳು  ಅತ್ತಿಗೇರೆಯ ಶಂಕರಗೌಡ ಪಾಟೀಲರ ಮನೆಯಲ್ಲಿಇನ್ನೂ ಜೀವಂತವಾಗಿವೆ.ಇವರುಗಳ ಹಾಗೂ ಹರಿ ಖೋಡೆಯವರ ಶ್ರಮದಿಂದ ಕತ್ತಲಲ್ಲಿದ್ದ ಷರೀಫ ಸಾಹೇಬರು ಹಾಗೂ ಅವರ ತತ್ತ್ವಪದಗಳು ಜಗತ್ತಿಗೆ  ಚಿರಪರಿಚಿತವಾದವು. ಸುಮಾರು 1954 ರಲ್ಲಿ ಚೀಕಾಗೊ (Chicago) ವಿಶ್ವವಿದ್ಯಾಲಯದ ಪ್ರೊಫೆಸರ್ ವಿಲಿಯಂ.ಸಿ.ಎಂ ಕಾರಮ್ಯಾಕ್, ಪಂಡಿತ ಸದಾಶಿವ ಶಾಸ್ತ್ರಿಗಳ ಬರೆದ "ಶರೀಫ ಸಾಹೇಬರ ಪುರಾಣವನ್ನು" ಕೇಳಿ ಇದನ್ನು ಇಂಗ್ಲೀಷನಲ್ಲಿ ತಜು೯ಮೆ ಮಾಡಿ ಅಮೇರಿಕಾದ ಪ್ರತಿಯೊಂದು ಗ್ರಂಥಲಾಯದಲ್ಲಿಡಲು ಸೂಕ್ತವೆಂದು ಶಿಫಾರಸ್ಸು ಮಾಡಿದ ಪತ್ರವನ್ನು ಈಗಲೂ ಸಮೀಪದ ಅತ್ತಿಗೇರೆಯಲ್ಲಿ ನೋಡಬಹುದಾಗಿದೆ.200 ವಷ೯ಗಳನ್ನು ಪೂರೈಸಿದ ಕನಾ೯ಟಕದ ಕಬೀರ ಶರೀಫ ಶಿವಯೋಗಿಗಳು ಹಾಗೂ ಅವರ ತತ್ತ್ವಪದಗಳು ಅಮೇರಿಕಾದ ಗ್ರಂಥಾಲಯಗಳನ್ನು ಸೇರಲಿ ಹಾಗೂ ಅವರ ತತ್ವಾದಶ೯ಗಳನ್ನು ನಮ್ಮ ಯುವ ಪೀಳಿಗೆ ಜೀವನದಲ್ಲಿ ಪಾಲಿಸಲಿ ಎಂಬುದು ನನ್ನ ಆಶಯ.                                                                                             ಪ್ರಮೋದ ನಲವಾಗಲ (9686168202)

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು