ಎಕಲಕ್ಷ್ಮಣಪುರ ಮುಂದೆ ಯಕ್ಲಾಸಪುರವಾಯಿತೇ????
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಯಕ್ಲಾಸಪುರದ ಗ್ರಾಮನಾಮ ಪೌರಾಣಿಕೆ ಹಿನ್ನಲೆಯುಳ್ಳದ್ದು ಎಂದು ಊಹಿಸಬಹುದು. ಅದಕ್ಕೆ ಅನೇಕ ಪುರಾವೆಗಳು ಇಲ್ಲಿ ಲಭ್ಯ.
ಯಕ್ಲಾಸಪುರ ಗ್ರಾಮದ ಸನಿಹದಲ್ಲಿರುವ ಆರೇಮಲ್ಲಾಪುರ ಗ್ರಾಮನಾಮವೂ ಸಹ ಪೌರಾಣಿಕ ಹಿನ್ನಲೆಯಳ್ಳದ್ದು. ಕಾರಣ ಅದು "ಮಲ್ಹಾರಿಯ"(ಮೈಲಾರ) ಹೆಸರಿನಿಂದ ಹುಟ್ಟಿದ್ದು. ಅಲ್ಲಿ ಮರಾಠ (ಆರೇರ) ಸಮೂದಾಯದವರು ವಾಸವಾಗಿದ್ದರಿಂದ ಆರೇಮಲ್ಲಾಪುರ ಎಂದು ಹೆಸರನ್ನು ಪಡೆದಿರಬಹುದು ಎಂದು ಊಹಿಸಬಹುದು.
ಹರಪನಹಳ್ಳಿ ಪಾಳೆಯಗಾರರೊಡನೆ ಚಿತ್ರದುರ್ಗದ ಪಾಳೆಯಗಾರರು ಯುದ್ದವನ್ನು ಸಾರಿದಾಗ ಚಿತ್ರದುರ್ಗದವರಿಗೆ ಸಹಾಯ ಮಾಡಲು ಹಾವನೂರು ದೇಸಾಯಿಯ ಹಾಗೂ ಕೆಳದಿ ಅರಸರ ದಂಡು ಯಕ್ಲಾಸಪುರದಲ್ಲಿಯೇ ಬೀಡಾರ ಹೂಡುತ್ತಿತ್ತು.
ಅಶ್ವಾರೋಹಿಗಳ (ರಾವುತರ) ದಂಡು ಈಗಿನ ಯಕ್ಲಾಸಪುರದಿಂದ ಸ್ವಲ್ಪ ದೂರದಲ್ಲಿರುತ್ತಿದ್ದರು. ಆ ಸ್ಥಳವೇ ಈಗ ರಾವುತನಕಟ್ಟಿ ಎಂಬ ಹೆಸರನ್ನು ಪಡೆದುಕೊಂಡಿದೆ.
ಪೇಶ್ವೆಯವರು ಸೇಂಧಿ ಗೀಡಗಳನ್ನು *ಈಳಿಗ*(ಇಡಿಗ) ಸಮೂದಾಯದವರಿಗೆ ಹರಾಜು ಕೊಟ್ಟಿದ್ದರು. ಅದನ್ನು ಬ್ರಿಟಿಷರು ಮುಂದುವರೆಸಿದರು. ಆ ಸಮೂದಾಯದ ಜನರನ್ನು ಈಗಲೂ ಗ್ರಾಮದಲ್ಲಿ ನೋಡಬಹುದು.
ಛತ್ರಪತಿ ಶಿವಾಜಿಯ ಕಾಲಘಟ್ಟಕ್ಕಿಂತ ಪೂರ್ವದಲ್ಲಿಯೇ ಇಲ್ಲಿ ಹಾಗೂ ಮಲ್ಲಾಪುರ ಗ್ರಾಮದಲ್ಲಿ ಮರಾಠ ಸಮೂದಾಯದ ಜನರು ವಾಸವಾಗಿದ್ದಾರೆ ಎಂದು ನಾವು ಹೇಳಬಹುದು.
ವಿಜಯನಗರದ ಕಾಲದಲ್ಲಿ ಇಲ್ಲಿಯ ಶೃಂಗೇರಿ ಮಠದ ಶಾಖಾ ಮಠವಾದ ಉದಗಟ್ಟಿಯ ಮಠದ ಯತಿಗಳೊಂದಿಗೆ ಈ ಊರು ಸಂಪರ್ಕ ಹೊಂದಿತ್ತು. ಅದು ಹಾವನೂರು ದೇಸಾಯಿಯವರ ಕಾಲದವರೆಗೆ ಮುಂದುವರೆದುಕೊಂಡು ಬಂದಿತು. ಉದಗಟ್ಟಿ ಮಠದ ಯತಿಗಳು ಹೊಲದ ಬಾಬತ್ತನ್ನು ಸಂಗ್ರಹಿಸಲು ಕುದುರೆಯೊಂದಿಗೆ ಬಂದು ಈಗಿನ ಆಲದಮರದ ಶ್ರೀ ಚೌಡೇಶ್ವರಿಯ ಕಲ್ಲು ಕಟ್ಟೆಯ ಮೇಲೆ ಆಸಿನರಾಗುತ್ತಿದ್ದರು. ಈಗ ಆ ಸ್ಥಳ ಪವಿತ್ರ ಸ್ಥಳವಾಗಿದೆ.
ಈ ಗ್ರಾಮದ ಹನುಮಂತ ದೇವರ ದೇವಾಲಯ ಪ್ರಾಚೀನವಾದದ್ದು. ಸುಮಾರು 400 ವರ್ಷಗಳ ಹಿಂದೆ ಈ ದೇವರು ಪ್ರತಿಷ್ಠಾನೆಗೊಂಡಿರಬಹುದು. ಗ್ರಾಮದಲ್ಲಿ ಅಳಿದೂಳಿದ ಕೋಟೆಯ ಭಾಗವನ್ನು ನಾವು ನೋಡಬಹುದು.
ಬ್ರಿಟಿಷರು ಪಶುಪಾಲಕರಿಗೆ ಹಾಗೂ ಸುತ್ತಲಿನ ರೈತರಿಗೆ ಸಹಾಯವಾಗಲೆಂದು ಬೃಹತ್ ಪ್ರಮಾಣದಲ್ಲಿ ಮೇಡ್ಲೇರಿ ಕೆರೆಯನ್ನು ನಿರ್ಮಾಣ ಮಾಡಿದರು. ಇಲ್ಲಿಯ ಅಡವಿಯಲ್ಲಿಯ(ಕಾಡು-ಅರಣ್ಯ) ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸಿಸಲು ಬ್ರಿಟಿಷರು ಕಾವಲುಗಾರರನ್ನು ನೇಮಿಸದರು. ಬಹುಶಃ ಆ ಕಾವಲುಗಾರರು ಯಕ್ಲಾಸಪುರ ಗ್ರಾಮದವರೇ ಆಗಿರಬಹುದು.
ರಾವುತನಕಟ್ಟಿ ಹಾಗೂ ಯಕ್ಲಾಸಪುರ ಗ್ರಾಮದ ಗಡಿಯಲ್ಲಿ " ಇಪ್ತಿ" ಹಳ್ಳವೊಂದಿತ್ತು ಎನ್ನುವ ಜನರು ಇನ್ನೂ ಜೀವಂತವಾಗಿದ್ದಾರೆ.
ದೇವದಾಸಿ ಪದ್ದತಿಯನ್ನು ವಿರೋಧಿಸಿ ಹೋರಾಟ ನೆಡೆಸಿದ ಹೋರಾಟಗಾರ ಹನುಮಂತಪ್ಪ ನಲವಾಗಲ ಇದೇ ಗ್ರಾಮದವರು. ಇವರು ಸ್ವಾತಂತ್ರ ಹೋರಾಟಗಾರರಾದ ಅಗಡಿಯ ದಿ. ಕರಿಯಪ್ಪ ಹುಚ್ಚಣ್ಣನವರ ಆತ್ಮೀಯ ಮಿತ್ರರು. ಸಾಮಾನ್ಯ ಕ್ಷೇತ್ರವಾದ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ 1978ರಲ್ಲಿ ಸ್ಪರ್ಧಿಸಿ ಬಹುಮತದಿಂದ ಜಯಶಾಲಿಗಳಾದ ದಿ.ಸೋಮಲಿಂಗಪ್ಪ ನಲವಾಗಲ ಹಾಗೂ ಹಾವೇರಿ ಜಿಲ್ಲಾ ಪಂಚಾಯಿತದ ಮಾಜಿ ಅಧ್ಯಕ್ಷರಾದ ಶ್ರೀ ಮಂಜುನಾಥ ಓಲೇಕಾರ ಇದೇ ಗ್ರಾಮದವರು.
ಇಷ್ಟೆಲ್ಲಾ ಐತಿಹಾಸಿಕ ಘಟನೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡ ಯಕ್ಲಾಸಪುರ ಗ್ರಾಮನಾಮದ ಹಿನ್ನಲೆ ಜಟಿಲತೆಯನ್ನು ಹೊಂದಿದೆ.
ಯಕ್ಲಾಸಪುರ ರಾಮಾಯಣ ಕಾಲದಲ್ಲಿ ದಂಡಕಾರಣ್ಯ ಪ್ರದೇಶದ ಭಾಗವಾಗಿತ್ತು. ಇಲ್ಲಿ ಬುಡಕಟ್ಟು ಜನರು ಹೆಚ್ಚು ವಾಸವಾಗಿದ್ದರು. ಈಗಲೂ ಆ ಸಮೂದಾಯದ ಜನರೇ ಹೆಚ್ಚು.
ನನ್ನ ಅಭಿಪ್ರಾಯದ ಪ್ರಕಾರ ಯಕ್ಲಾಸಪುರ ಗ್ರಾಮದ ಹೆಸರು ಹಿಂದೆ " *ಎಕಲಕ್ಷ್ಮಣಪುರ* " ಎಂದಿರಬಹುದು. ಕಾರಣ ಉತ್ತರ ಭಾರತದಲ್ಲೊಂದು ಯಕ್ಲಾಸಪುರವೆಂಬ ಗ್ರಾಮವಿದೆ ಅಲ್ಲಿ ದೊರೆತ ಶಾಸನಗಳಲ್ಲಿ ಅದನ್ನು ಎಕಲಕ್ಷ್ಮಣಪುರವೆಂದು ಕರೆದಿದ್ದಾರೆ.
ಭಾರತದಲ್ಲಿಯ ಪ್ರತಿಯೊಂದು ಗ್ರಾಮನಾಮಗಳನ್ನು ನಾವು ಗಮನಿಸಿದಾಗ ಒಂದು ಊರಿನ ಹೆಸರನ್ನು ನಾವು ಇನ್ನೊಂದಡೆ ನೋಡುವುದು ಸಹಜ. ಕಾರಣ ಅಂದು ಜನರು ಒಂದು ಊರನ್ನು ಬಿಟ್ಟು ಬಂದು ಇನ್ನೊಂದಡೆ ನೆಲೆಯೂರಿ ನಿಂತಾಗ, ಆ ಸ್ಥಳದ ಹೆಸರನ್ನು ಪೂರ್ವ ಸ್ಥಳದಿಂದಲೇ ಕರೆಯುವುದು ರೂಡಿಯಲ್ಲಿತ್ತು. ಹೀಗಾಗಿ ಒಂದು ಗ್ರಾಮನಾಮದ ಪ್ರದೇಶಗಳನ್ನು ಅನೇಕ ಕಡೆ ನೋಡಬಹುದು.
ಈಗಾಗಲೇ ತಿಳಿಸಿದ ಹಾಗೆ ಯಕ್ಲಾಸಪುರ ಗ್ರಾಮವು ರಾಮಾಯಣ ಕಾಲದಲ್ಲಿ ದಂಡಕಾರಣ್ಯ ಪ್ರದೇಶದ ಭಾಗವಾಗಿತ್ತು.
ಈ ನಿಟ್ಟಿನಲ್ಲಿ ನಾವು ಗ್ರಾಮದಲ್ಲಿಯ ಜನರ ಹೆಸರುಗಳನ್ನು ಗಮನಿಸಿದಾಗ ಸಾಮಾನ್ಯವಾಗಿ ರಾಮಾಯಣದಲ್ಲಿಯ ಪಾತ್ರದಾರಿಗಳದ್ದೆ ಬರುತ್ತವೆ. ಉದಾಹರಣೆಗೆ: ಹನುಮಂತ, ಪವನ ರಾಮಣ್ಣ, ಲಕ್ಷ್ಮಣ, ಲಕ್ಷ್ಮವ್ವ, ಸೀತವ್ವ..
ಈ ಎಲ್ಲಾ ವಿಷಯಗಳನ್ನು ಗಮನಿಸಿದಾಗ ಈ ಗ್ರಾಮದ ಹೆಸರು "ಎಕಲಕ್ಷ್ಮಣಪುರ"ವಾಗಿದ್ದು ಮುಂದೆ ಗ್ರಾಮೀಣ ಜನರಿಂದ ಅಪಬ್ರಂಶಗೊಂಡು ಯಕ್ಲಾಸಪುರವೆಂದಾಗಿರಬಹುದು ಎನ್ನುವುದು ನನ್ನ ಅಭಿಪ್ರಾಯ.
*ನಮ್ಮ ಊರು ನಮ್ಮ ಹೆಮ್ಮೆ*
ಪ್ರಮೋದ ನಲವಾಗಲ
9686168202
Comments
Post a Comment