ಪ್ರಾಚೀನ_ಮಹೇಂದ್ರಪುರ_ಮೈದೂರು_ಎಂದಾಯಿತೇ??
ಮೈದೂರು ಗ್ರಾಮ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಿಂದ ಉತ್ತರಕ್ಕೆ 16 ಕಿ.ಮೀ ದೂರದಲ್ಲಿದೆ. ಪಕ್ಕದ ಗುಡಗೂರ ಗ್ರಾಮದಲ್ಲಿ ದೊರೆತ ಶಾಸನಗಳ ಆಧಾರದ ಮೇಲೆ ಹೇಳುವುದಾದರೆ ಬಹುಶಃ ಈ ಗ್ರಾಮ ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನತೆಯನ್ನು ಹೊಂದಿದೆ. ಅಂದರೆ ಸುಮಾರು 1200 ವರ್ಷಗಳ ಹಿಂದೆ ಇಲ್ಲಿ ಜನವಸತಿ ಪ್ರಾರಂಭವಾಯಿತು. ಈ ಗ್ರಾಮ ಗುತ್ತಲದ ಗುತ್ತರಸರ (1182) ಆಡಳಿತಕ್ಕೂ ಸಹ ಒಳಪಟ್ಟಿತ್ತು ಎನ್ನಲು ಇಲ್ಲಿಯ ಶಾಸನ ಸಹಕಾರಿಯಾಗಿದೆ.
ಈ ಐತಿಹಾಸಿಕ ಗ್ರಾಮದ ಹೆಸರನ್ನು ಸ್ಥಳೀಯವಾಗಿ ದೊರೆತ ಶಾಸನದಲ್ಲಿ ಉಲ್ಲೇಖಿಸಿಲ್ಲ. ಆದರೆ ಗ್ರಾಮದ ಹಿರಿಯವರು ಇದನ್ನು "ಮಹೇಂದ್ರಪುರ" ( ಮಹೇಂದ್ರ -ದೇವತೆಗಳ ಒಡೆಯ) ಎಂದು ನಮ್ಮ ಹಿರಿಯರು ಕರೆಯುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಬೇವಿನಹಳ್ಳಿ , ಗಂಗಾಪುರ, ಯತ್ತಿನಹಳ್ಳಿ, ಗುಡುಗೂರು ಹಾಗೂ ಚೆನ್ನಾಪುರ ಎಂಬ ಗ್ರಾಮಗಳು ಈ ಗ್ರಾಮದ ನೆರೆಹೊರೆಯ ಗ್ರಾಮಗಳಾಗಿವೆ. ಪಕ್ಕದ ಚೆನ್ನಾಪುರ ತಾಂಡದಲ್ಲಿ ಆತೀ ವಿರಳವಾದ ಟಿಪ್ಪೂವಿನ ಕನ್ನಡ ಶಾಸನವಿದೆ.
ನದಿಯ ಹರಿಯುವಿಕೆ ಈ ಗ್ರಾಮದಲ್ಲಿ ಇರದಿದ್ದರೂ ಪಾಕೃತಿಕವಾಗಿ ಹರಿದ "ಕೂಡಹಳ್ಳ" ಇಲ್ಲಿಯ ಜನರನ್ನು ಶ್ರೀಮಂತವಾಗಿಸಿದೆ. ಸುಮಾರು 2000 ಜನಸಂಖ್ಯೆಯನ್ನು ಹೊಂದಿದ ಈ ಗ್ರಾಮದಲ್ಲಿ ರೆಡ್ಡಿ ಸಮೂದಾಯದವರು, ಲಿಂಗಾಯತ ಸಮಾಜದವರು, ಕುರಬ ಸಮಾಜದವರು, ಹರಿಜನ ಸಮಾಜದವರು, ವಾಲ್ಮೀಕಿ ಸಮೂದಾಯದವರು, ಗಂಗಾಮತಸ್ಥ ಸಮಾಜದವರು ಹಾಗೂ ಯಾದವ ಸಮೂದಾಯದವರು ಸಹೋದರರಂತೆ ಜೀವನ ನೆಡೆಸುತ್ತಿರವುದು ಧರ್ಮ ಸಹಿಷ್ಣುತೆಗೆ ಉದಾಹರಣೆಯಾಗಿದೆ.
ಮೈದೂರ ಗ್ರಾಮದಲ್ಲಿ ಜನರು ನಾಲ್ಕು ಭಾಗಗಳಲ್ಲಿ ವಾಸವಾಗಿದ್ದರೆ. ಅವುಗಳೆಂದರೆ ಕೋಟೆ, ಹೊರಕೆರೆ, ಮೇಲಿನಕೆರೆ ಹಾಗೂ ಪ್ಲಾಟ್.
ರಾಣೇಬೆನ್ನೂರು ಶಿಕ್ಷಣ ಸಂಸ್ಥೆಯ (ಆರ್.ಟಿ.ಇ.ಎಸ್ ಶಿಕ್ಷಣ ಸಂಸ್ಥೆಯ) ಹುಟ್ಟಿಗೆ ಕಾರಣಿಭೂತರಾದ ದಿ.ವಿ.ಕೆ ಸಾಹುಕಾರರವರ , ಸಂತ ಶ್ರೀ ಕನಕದಾಸರು ರಚಿಸಿ ಕದಿರಮಂಡಲಗಿಯ ಶ್ರೀ ಕಾಂತೇಶ್ವರ ದೇವರಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ "ಮೋಹಮತರಂಗಿಣಿ" ಗ್ರಂಥದ ತಾಳೆಗರಿಯ ಪ್ರತಿಯನ್ನು 1832 ರಲ್ಲಿ ಎತ್ತಿ ಬರೆದ ದಾಸಪ್ಪ ಸಾಹುಕಾರ ( ಭೀಮಣ್ಣ ಬಾವಿಮನಿಯವರ ಮುತ್ತಜ್ಜನವರು) ರಾಜಕೀಯ ಮುತ್ಸದ್ದಿ ದಿ.ಗೋಣೆಪ್ಪಜ್ಜ ಸಾಹುಕಾರ, ದಿ.ಗೋವಿಂದಪ್ಪಜ್ಜ ಸಾಹುಕಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಚಿಫ್ ಇಂಜಿನಿಯರ್ ಶ್ರೀಪಾದ ಸಾಹುಕಾರ, ಓಂ ಶಿಕ್ಷಣ ಸಮೂಹದ ಡಾ।। ಮನೋಜ ಸಾಹುಕಾರ, ಡಾ।। ಎಸ್. ಎಸ್ ಸಾಹುಕಾರ, ಗುಪ್ತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಾಸು ಸಾಹುಕಾರ ಹಾಗು ಸಾಹಿತಿ ಪುಟ್ಟು ಕುಲಕರ್ಣಿಯವರ ಊರು ಇದೇ ಆಗಿದೆ. ಸಹಕಾರ ಭೀಷ್ಮ(ಹುಲಕೋಟಿ ಹುಲಿ) ದಿ. ಕೆ. ಹೆಚ್ ಪಾಟೀಲರು, ರಾಣೇಬೆನ್ನೂರು ನಗರಸಭೆಯ ಸದಸ್ಯರಾಗಿ ಮುಂದೆ 1958 ರ ಚುಣಾವಣೆಯಲ್ಲಿ ಮುಂಬಯಿ ಕರ್ನಾಟಕ ವಿಭಾಗದ ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳ ಮತದಾರ ಕ್ಷೇತ್ರದಿಂದ ನವ ಮೈಸೂರು ರಾಜ್ಯದ ಮೇಲ್ಮನೆಯ ಸದಸ್ಯರಾಗಿ (M.L.C) ಆಯ್ಕೆಯಾದ ದಿ. ಎಲ್. ಹೆಚ್. ಹಿರೇಗೌಡರರವರು ಹಾಗೂ ಪಕ್ಕದ ಗುಡಗೂರ ಗ್ರಾಮದವರಾದ ಮಾಜಿ ಸಚಿವರಾದ ಶ್ರೀ ಕೆ. ಬಿ ಕೋಳಿವಾಡರು ಈ ಗ್ರಾಮದ ಬೀಗರು.
ಮೈದೂರಿನಲ್ಲಿ ‘ದೊಡ್ಡಾಟ’ ಮತ್ತು ‘ಗೊಂಬೆ ಆಟ’ ದ ಪರಂಪರೆ ಇತ್ತು. ಹಿರಿಯರಾದ ರಾಮಪ್ಪಜ್ಜ ಗೊಂಬೆ ಕುಣಿಸುವದರಲ್ಲಿ ಹೆಸರುವಾಸಿ. ಗೊಂಬೆ ಕುಣಿತಕ್ಕೆ ಪ್ರಸಿದ್ಧವಾಗಿರುವ ಅಂತರವಳ್ಳಿಗೂ ಇಲ್ಲಿ ಬೀಗತನವಿದೆ. ಅಂತರವಳ್ಳಿಯ ಒಂದು ಮನೆತನವೂ ಇದೆ. ಹುಲಿಯನ್ನು ಕೊಂದದ್ದಕ್ಕಾಗಿ ಬ್ರಿಟೀಶ ಆಡಳಿತವಿದ್ದಾಗ ಅವರಿಗೆ ಬಂದೂಕು ಬಹುಮಾನ ದೊರೆತಿದೆ.
ಇಲ್ಲಿರುವ ಸಾಹುಕಾರರನ್ನು ಪೂರ್ವದಲ್ಲಿ ಸಣ್ಣಮನಿ ಹಾಗು ದೊಡ್ಡಮನಿ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಇವುರುಗಳು ಅಂದು ಬ್ರಿಟಿಷರೊಂದಿಗೆ ಹತ್ತಿ ವ್ಯಾಪಾರವನ್ನು ಮಾಡುತ್ತಿದ್ದು ಶ್ರೀಮಂತರಾಗಿದ್ದರು. ಸವಣೂರ ನವಾಬನ ಕಷ್ಟ ಕಾಲದಲ್ಲಿ ಅವನಿಗೆ ಹಣಕಾಸು ಸಹಾಯ ಮಾಡಿದ್ದರಿಂದ ಇವರನ್ನು " ಸಾಹುಕಾರ" ಎಂದು ಕರೆಯಲ್ಪಟ್ಟರು ಎಂಬ ಪ್ರತೀತಿ ಇಲ್ಲಿ ಇನ್ನೂ ಜೀವಂತವಾಗಿದೆ.
ಇಲ್ಲಿ ಮೂರು ಗದ್ದುಗೆಗಳನ್ನೂಳ್ಳ ಹಿರೇಮಠ ಕುರಿತಾದ ಅಧ್ಯಯನದ ಅವಶ್ಯಕತೆಯಿದೆ ಎಂದೆನಿಸುತ್ತದೆ. ಆಂಜನೇಯ, ಕೆಂಚಮ್ಮದೇವಿ ದೇವಸ್ಥಾನ, ಕಾಳಮ್ಮ, ದುರ್ಗಮ್ಮ, ಕಲ್ಲೇಶ್ವರ (ಕಲ್ಮೇಶ್ವರ) ಹಾಗೂ ಕೋಟೆ ಚೌಡಮ್ಮದೇವಿ ಇವುಗಳು ಗ್ರಾಮದ ಪ್ರಮುಖ ದೇವಸ್ಥಾನಗಳು. ಇವುಗಳಲ್ಲಿ ಪ್ರಾಚೀನವಾದ ದೇವಸ್ಥಾನವೆಂದರೆ ಕಲ್ಮೇಶ್ವರ.
ಕಲ್ಮೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶಾಸನ, ಪಾಳುಬಿದ್ದ ಕೋಟೆ, ಕುಡಹಳ್ಳ ಹಾಗೂ ಕೋಣನ ತೆಲೆಯ ಕಲ್ಲು ಈ ಗ್ರಾಮದ ಪ್ರಾಚೀನ ಇತಿಹಾಸವನ್ನು ಬಿಂಬಿಸುತ್ತವೆ.
ಕಲ್ಮೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶಾಸನವು ಗುತ್ತಲದ ಗುತ್ತರಸರ ಕಾಲದ್ದು (1182). "ಹೊಂಕುಂದದ" ಸೇನಬೋವನ ಮಗ ದೇವಣ್ಣ ಈ ಶಾಸನದ ವಿಷಯವನ್ನು ಬರೆದಿದ್ದಾನೆ. ಶಿವಕುಮಾರ ಶಾಸನವನ್ನು ಖಂಡರಿಸಿದ್ದಾನೆ. ಈ ಶಾಸನವು ಸುಮಾರು 950 ವರ್ಷಗಳ ಹಿಂದಿನ ಗ್ರಾಮದ ಕುತೂಹಲಕಾರಿ ಚಿತ್ರಣದ ವಿವರನ್ನು ನೀಡುತ್ತದೆ.
ಈಗಿನ ಕಲ್ಮೇಶ್ವರ ದೇವಸ್ಥಾನವನ್ನು ಶಾಸನದಲ್ಲಿ " ಶ್ರೀ ಮೂಲಸ್ಥಾನ ಕಲಿದೇವ" ಎಂದು ಕರೆಯಲಾಗಿದೆ. ಈ ದೇವಾಲಯದ ಅಂಗಭೋಗ, ರಂಗಭೋಗ, ನಿತ್ಯಪೂಜೆ, ನೈವೇದ್ಯ, ನಂದಾದೀವಿಗೆ "ವೀರ ವಿಕ್ರಮಾದಿತ್ಯ , ಸುಸಂಗ ದಂಡನಾಯಕ, ಕಾಮಗಾವುಂಡ, ಗುಡಿಗೇರಿಯ ಅರವತ್ತೊಕ್ಕಲು ಸಂಘದವರು ಹಾಗೂ ಸಮಸ್ತ ಪರಿವಾರದವರು "ಚಂದ್ರಮೌಳಿ ಪಂಡಿತರ" ಪಾದಪೂಜೆಗೈದು ಗುರವಾರದ ಶುಭ ಗಳಿಗೆಯೆಂದು ಗ್ರಾಮದ ಪೂರ್ವ ದಿಕ್ಕಿನಲ್ಲಿಯ ಭೂಮಿಯನ್ನು ದಾನವಾಗಿ ನೀಡಿದರು.
ಈ ಶಾಸನದಲ್ಲಿ " ಚಾವಿಶೆಟ್ಟಿ " ಕಟ್ಟಿಸಿದ ಕೆರೆಗೂ ಸಹ ಸಮೀಪದ ಕುಡಕುಂದಿಯ ಹಳ್ಳದ ( ಇದನ್ನು ಈಗ ಕುಡಹಳ್ಳ ಎಂದು ಕರೆಯುತ್ತಾರೆ. ಎರಡು ಹಳ್ಳಗಳು ಸಂಗಮಿಸದ ಪವಿತ್ರ ಸ್ಥಳ ಇದಾಗಿದೆ) ಬಳಿ ಭೂಮಿಯನ್ನು ದಾನವಾಗಿ ನೀಡಿದನ್ನು ಸೂಚಿಸುತ್ತದೆ. ಆದರೆ "ಚಾವಿಶೆಟ್ಟಿ"ಕೆರೆ ಈಗ ಇಲ್ಲದಾಗಿದೆ.
ಶಾಸನ "ವಿಲೆಯನೆ ಕೋಟಿ" ಹಾಗೂ "ಹಂಸಿಕೋಟಿಯ" ಹೆಸರನ್ನು ಸಹ ಹೇಳುತ್ತದೆಯಾದರೂ ಈ ಕೋಟೆಗಳು ಬಹುಶಃ ವಿಜಯನಗರದ ನಂತರದ ಕಾಲದಲ್ಲಿ ಜೀರ್ಣೋದ್ಧಾರಗೊಂಡಿರಬಹುದು. ಕೋಟೆಯ ಅಸ್ತಿತ್ವ ಭಾಗವಾಗಿ ಈಗ ಕಾವುಲ ಗೋಪುರವನ್ನು ಮಾತ್ರ ನೋಡಬಹುದಾಗಿದೆ. ಯುದ್ದದಲ್ಲಿ ಬಳಸಲಾಗುತ್ತಿದ್ದ ಗುಂಡುಕಲ್ಲುಗಳು ಯುದ್ದದ ಭೀಕರತೆಯನ್ನು ಬಿಂಬಿಸುತ್ತದೆ. ಕೋಟೆಯ ಗೋಡೆ ಸುಮಾರ ಐದು ಫೂಟ್ ದಪ್ಪದ್ದಾಗಿದೆ. ಕೊಟೆಯ ಸುತ್ತವಿರುವ ಅಗಳಕ್ಕೆ ಅಂದು ನೀರನ್ನು ಬಹುಶಃ "ಚಾವಿಶೆಟ್ಟಿಯ"ಕೆರೆಯಿಂದ ಸರಬರಾಜು ಮಾಡಲಾಗುತ್ತಿದ್ದಿರಬಹುದು. ಗ್ರಾಮದ ಅಗಸಿಬಾಗಿಲಿನಲ್ಲಿ ಕರಿಕಲ್ಲೊಂದನ್ನು ನೋಡಬಹುದು ಊರಿಗ ಬಂದ ಹೊಸಬರು ಅಥವಾ ಕೋಟೆಯಿಂದ ಹೊರಗೆ ಹೋಗುವ ಜನ ಆ ಶಕ್ತಿಯುತವಾದ ಕಲ್ಲಿಗೆ ಈಗಲೂ ಸಹ ನಮಸ್ಕರಿಸುವುದು ರೂಡಿಯಲ್ಲಿದೆ.
ಕಲ್ಮೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಕೋಣನ ತೆಲೆಯ ಕಲ್ಲು ಪ್ರಾಣಿ ಬಲಿದಾನವನ್ನು ಬಿಂಬಿಸುವಂತಿದೆ. ಇದು ಪೂರ್ವ ದಿಕ್ಕಿನಲ್ಲಿದ್ದು, ಊರಿಗೆ ಪ್ರವೇಶಿಸುವ ದುಷ್ಟ ಶಕ್ತಿಗಳನ್ನು ನಾಶಪಡಿಸುತ್ತದೆ ಎಂಬ ನಂಬಿಕೆ ಅಂದಿನ ಜನರದ್ದಾಗಿತ್ತು ಎಂಬುದನ್ನು ಸೂಚಿಸುತ್ತದೆ.
ಆಂಜನೇಯ ದೇವಸ್ಥಾನ ಹಾಗೂ ದುರ್ಗಮ್ಮ ದೇವಸ್ಥಾನ ಸಮಕಾಲಿನವು. ಹಿರೇಕೆರೂರು ಜಾತ್ರೆಯ ದಿನವೇ ಇಲ್ಲಿಯೂ ದೇವಿಯ ಜಾತ್ರೆಯಾಗುತ್ತದೆ.
ಈ ಗ್ರಾಮದಲ್ಲಿ ಶ್ರೀಮತಿ ರುಕ್ಮಿಣಿ ಸಾಹುಕಾರರವರು ಬುಡಕಟ್ಟು ವಿದ್ಯಾರ್ಥಿಗಳಿಗೆ ನಿರ್ಮಿಸುತ್ತಿರುವ ವಸತಿಯುಕ್ತ ಶಾಲಾ ಕಟ್ಟಡ ಬಹು ಆಕರ್ಷಣೀಯವಾಗಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 200 ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದು ಶಿಕ್ಷಣವನ್ನು ನೀಡಲಾಗುತ್ತಿದೆ. ರಾಣೇಬೆನ್ನೂರು ತಾಲೂಕಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳನ್ನು, ಅನೇಕ ಡಾಕ್ಟರಗಳನ್ನು, ಇಂಜಿನಿಯರ್ , ಕೃಷಿ ಪದವಿದರರನ್ನು ಹಾಗೂ ರಾಜಕೀಯ ಮುತ್ಸದ್ಧಿಗಳನ್ನು ನೀಡಿದ ಹೆಮ್ಮೆ ಈ ಗ್ರಾಮಕ್ಕಿದೆ.
#ಪ್ರಮೋದ_ಎಸ್_ನಲವಾಗಲ
9686168202
ಶ್ರೀ ಪ್ರೇಮಕುಮಾರ ಬಿದಿರಕಟ್ಟಿ ಇವರಿಗೆ ವಿಶೇಷ ಧನ್ಯವಾದಗಳು.

Comments
Post a Comment