ಬ್ಯಾಡಗಿಯಲ್ಲಿ ಶ್ರೀ ಸಿಧ್ದಾರೂಡ ಮಹಾಸ್ವಾಮಿಗಳ ದೇಹದ ಅಂಗ-ಲಿಂಗರೂಪದಲ್ಲಿ ಇನ್ನೂ ಜೀವಂತ..llllll
ಬ್ಯಾಡಗಿಯಲ್ಲಿ ಶ್ರೀ ಸಿಧ್ದಾರೂಡ ಮಹಾಸ್ವಾಮಿಗಳ ದೇಹದ ಅಂಗ-ಲಿಂಗರೂಪದಲ್ಲಿ ಇನ್ನೂ ಜೀವಂತ..llllll
ಮೆಣಸಿನಕಾಯಿ ವ್ಯಾಪಾರಕ್ಕೆ ದೇಶದಲ್ಲಿಯೇ ಎರಡನೇ ಅತೀ ದೊಡ್ಡ ವ್ಯಾಪಾರ ಕೆಂದ್ರವಾದ ಹಾವೇರಿ ಜಿಲ್ಲೆಯ ಬ್ಯಾಡಗಿಯು ಪ್ರಮುಖ ವಾಣಿಜ್ಯ ಕೆಂದ್ರವಾಗಿದೆ. ಪ್ರಾಚೀನ ಶಾಸನಗಳಲ್ಲಿ “ಬೇಡಗೇಯ್” “ಬೇಡಗೆ” ಎಂದೆಲ್ಲಾ ಉಲ್ಲೇಖಗೊಂಡಿದ್ದು ಬಹುಶಃ ಬೇಡರ ವಾಸಸ್ಥಳವಾಗಿದ್ದ “ಬೇಡರಗಿರಿ” ಎಂದಿದ್ದು ಕ್ರಮೇಣವಾಗಿ ಬ್ಯಾಡಗಿ ಎಂದು ರೂಪಾಂತರಗೊಂಡಿರಬಹುದು.
ಈ ಪ್ರದೇಶದಲ್ಲಿ ವೀರಭದ್ರದೇವಾಲಯ, ಕಲ್ಮೇಶ್ವರ ದೇವಾಲಯ, ಬಸವಣ್ಣ, ಗ್ರಾಮದೇವತೆ, ಹನುಮಂತ, ದುರ್ಗಾದೇವಾಲಯ, ಜಾಮೀಯಾ ಮಸೀದಿ ಹಾಗೂ ಮದೀನಾ ಮಸೀದಿಗಳನ್ನು ಇಲ್ಲಿ ನೋಡಬಹುದು. ಇದರ ಜೊತೆಯಲ್ಲಿಯೇ ವಿಶೇಷವಾದಂತಹ ಶ್ರೀ ಸಿದ್ದಾರೂಡ ಮಹಾಸ್ವಾಮಿಗಳ ದಂತ(ಹಲ್ಲು) ಲಿಂಗರೂಪ ಹೊಂದಿರುವುದನ್ನು ವಿಶೇಷವಾಗಿ ನೋಡಬಹುದು.
ಶ್ರೀ ಸಿದ್ದಾರೂಡ ಮಹಾಸ್ವಾಮಿಗಳು ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಚಳಕಾಪೂರದಲ್ಲಿ ಶಾಲಿವಾಹನ ಶಕೆ 1858 ದುರ್ಮುಖಿ ನಾಮ ಸಂವತ್ಸರ, ಚೈತ್ರ ಶುದ್ದ ನವಮಿ ದಿವಸದಂದು (26-3-1836), ತಂದೆ ಶ್ರೀ ಗುರುಶಾಂತಪ್ಪಾ, ತಾಯಿ ದೇವಮಲ್ಲಮ್ಮಳ ಮಗನಾಗಿ ಲೋಕಕಲ್ಯಾಣ ಮಾಡಲು ಬಂದಂತಹ ಚೈತನ್ಯ ಸ್ವರೂಪಿಗಳಾಗಿ ಜನ್ಮ ತಾಳಿದರು.ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಆರು ವರ್ಷದ ಬಾಲಕನಿರುವಾಗ ಶ್ರೀ ಪರಮಪೂಜ್ಯ ಗಜದಂಡ ಮಹಾಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿ ಆಧ್ಯಾತ್ಮ ಚಿಂತಕರಾಗಿ ಲೋಕ ಸಂಚಾರವನ್ನು ಕೈಗೊಂಡು ನೇಪಾಳ,ಸೀಲಾನ ಹಾಗೂ ಟಿಬೇಟ್ ಪರ್ಯಟನೆಯನ್ನು ಕೈಗೊಂಡು ಆಧ್ಯಾತ್ಮದ ಅನೇಕ ವಿಚಾರಗಳನ್ನು ತಿಳಿದುಕೊಂಡರು.
ಜಾತಿ ರಹಿತರಾದಂತಹ ಮಹಾಸ್ವಾಮಿಗಳು ಮುಕ್ತಿಯ ಮಾರ್ಗವೆಂಬಂತೆ ಆದ್ಯಾತ್ಮ ತತ್ವಗಳನ್ನು ಬಿತ್ತರಿಸಲು ಶಂಕರಾಚಾರ್ಯರು ಉಪದೇಶಿಸಿದ ಅದ್ವ್ಯತ ಸಿದ್ದಾಂತವನ್ನು ಪರಿಪಾಲಿಸಿದರು. ಶಂಕರಾಚಾರ್ಯರು ತಿಳಿಸಿದಂತೆ ಶಿವ, ವಿಷ್ಣು, ಶಕ್ತಿ, ಕಾತಿಕೇಯ, ಗಣಪತಿ ಅಥವಾ ಸೂರ್ಯ ಯಾರನ್ನಾದರು ಆರಾಧಿಸಬಹುದೆಂದು ಉಪದೇಶಿಸಿದ್ದರಿಂದ ಅವಧೂತರಾಗಿ ಹೊರಹೋಮ್ಮಿದರೆನ್ನಬಹುದು.
ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ಗುರುಗಳಾದಂತಹ ಪರಮಪೂಜ್ಯ ಶ್ರೀ ಗಜದಂಡ ಶಿವಯೋಗಿಗಳು ಇವರಿಗೆ “ಸಿಧ್ದಾರೂಡಭಾರತಿ” ಎಂಬ ನಾಮಕರಣವನ್ನು ಮಾಡಿ ಶಿವಪಂಚಾಕ್ಷರಿ ಪಠಣೆ ಮಾಡಲು ಸೂಚಿಸಿ, ಇವರಿಗೆ ಅವಧೂತ ಆಶ್ರಮ ಧೀಕ್ಷೆಯನ್ನು ನೀಡಿದರು. ಇವರುಗಳು ನಿಜಗುಣಶರಣರ ಆಧ್ಯಾತ್ಮ ತತ್ವಗಳನ್ನು, ಭಗವಧ್ಗೀತೆ, ಉಪನೀಷತ್, ಪಂಚದಾಸಿ ಹಾಗೂ ಬ್ರಹ್ಮಸೂತ್ರಗಳನ್ನು ಪರಿಪೂರ್ಣ ಅದ್ಯಯನವನ್ನು ನಡೆಸಿ ಆಧ್ಯಾತ್ಮ ಜ್ಞಾನದಲ್ಲಿ ಹೆಮ್ಮರಾವಾಗಿ ಬೆಳೆದರು. ಅದರ ಜೊತೆ-ಜೊತೆಯಲ್ಲಿಯೇ ಅರಿಷಢ್ಡವರ್ಗಗಳನ್ನು ತ್ಯಜಿಸಿದ್ದರಿಂದ ಶಕ್ತಿಯು ಅವರೊಳಗೆ ಕೇಂದ್ರಿಕೃತವಾಗಿ ಆರೋಢರಾದರೆನ್ನಬಹುದು.
ಕ್ರಿ.ಶ 1877 ರಲ್ಲಿ ಸಿದ್ದಾರೂಢ ಮಹಾಸ್ವಾಮಿಗಳು ತಮ್ಮ 41 ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಪಾದಾರ್ಪಣೆ ಮಾಡಿದರು.ಇವರುಗಳು ತಮ್ಮ ವಾಸಸ್ಥಾನಕ್ಕಾಗಿ ಆಯ್ಕೆ ಮಾಡಿಕೊಂಡ ಸ್ಥಳ ಈ ಹಿಂದೆ ಸ್ಮಶಾನವಾಗಿತ್ತು. ಇವರು ಮಹಾ ಶಕ್ತಿಯುಳ್ಳ ಅವಧೂತರು ಹಾಗೂ ನಿಜಗುಣ ಶರಣರು ಹೆಳಿದಂತೆ “ನುಡಿದಂತೆ ನಡೆ ಇದೆ ಜನ್ಮ ಕಡೆ” ಎಂಬಂತೆ ನಿಜವನ್ನೆ ನುಡಿಯುತ್ತಾ ಸರ್ವಜನಾಂಗದವರ ಆತ್ಮಕ್ಕೆ ಹೊಸ ಚೈತನ್ಯವನ್ನು ತುಂಬುತ್ತಾ ಅನೇಕ ಶಿಷ್ಯ ವರ್ಗಕ್ಕೆ ಆಕರ್ಷಿತರಾದರು.
ಶಿಷ್ಯವರ್ಗದಲ್ಲಿ ಇವರಿಗೆ ಆತ್ಮಿಯರಾದವರೆಂದರೆ ರಾಣೇಬೆನ್ನೂರ ತಾಲೂಕಿನ ಮುಕ್ತಾನಂದ (ಮುಪ್ಪಿನಾರ್ಯ) ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ಕಲಾವತಿದೇವಿ (ರುಕ್ಮಾಬಾಯಿ ಮಲ್ಲಾಪುರ) ಹಾಗೂ ಮುಸ್ಲಿಂ ಸಂತ ಕಬೀರದಾಸರು.
ಪ್ರತಿ ವರ್ಷ ಶ್ರಾವಣ ಮಾಸದಂದು ನಡೆಯುತ್ತಿದ್ದಂತಹ ಆಧ್ಯಾತ್ಮ ವಿಚಾರ ಚಿಂತನಾ ಸಭೆಯಲ್ಲಿ ಶ್ರೀ ಶಿಶುನಾಳ ಷರೀಫರು, ಶ್ರೀ ನವಲಗುಂದದ ನಾಗಲಿಂಗ ಸ್ವಾಮಿಗಳು, ಸಾವಳಗಿ ಸ್ವಾಮಿಗಳು, ಶ್ರೀ ಗರಗದ ಮಹಾಸ್ವಾಮಿಗಳು, ಶ್ರೀ ಕಬೀರದಾಸರು, ಶ್ರೀ ಶಿವಪುತ್ರ ಸ್ವಾಮಿಗಳು, ಶ್ರೀ ಉಣಕಲ್ಲ ಸಿದ್ದಪ್ಪಜ್ಜನವರು ಭಾಗವಹಿಸುತ್ತಿದ್ದಿದ್ದು ಇವರ ಜ್ಞಾನದ ಆಳಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಾಲಗಂಗಾಧರ ತಿಲಕ ಹಾಗೂ ಮಹಾತ್ಮಾ ಗಾಂಧೀಜಿಯವರು ದೇಶದ ಎಳಿಗೆಗಾಗಿ ಇವರ ಮಾರ್ಗದರ್ಶನ ಪಡೆದರೆಂದರೆ ಇವರಲ್ಲಿರುವ ಆ ಅಗೋಚರ ಶಕ್ತಿಯ ಬಗ್ಗೆ ನಾವುಗಳು ತಿಳಿಯಲೇ ಬೇಕಾಗುತ್ತದೆ. ಬಾಡೋದ ಮಹಾರಾಜ, ಸಾಯೊಜಿ ಗಾಯಕವಾಡ, ರಾಷ್ಟ್ರಪತಿ ಗ್ಯಾನಿ ಗೇಲಸಿಂಗ್, ಬಿ ಡಿ. ಜತ್ತಿ, ಸರ್ದಾರ ಬೂಟಾಸಿಂಗ್ ಹಾಗೂ ಶ್ರೀ ರಂಗನಾಥ ಮಿಶ್ರಾಜಿಯವರು ಶ್ರೀ ಸಿದ್ದಾರೂಢ ಸ್ವಾಮಿಗಳ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದರೆಂದರೆ ಮಹಾ ಸ್ವಾಮಿಗಳ ಆತ್ಮೋದ್ದಾರ ಹಾಗೂ ಸಮಾಜೋದ್ದಾರ ಕಾರ್ಯ ಅವರುಗಳನ್ನು ಇಲ್ಲಿಯವರೆಗೂ ಕರೆದು ತಂದಿತೆನ್ನಬಹುದು.
ಶ್ರೀ ಸಿದ್ದಾರೂಢ ಮಹಾಸ್ವಾಮಿಗಳಿಗೆ ಅತ್ಯಂತ ಆತ್ಮೀಯ ಭಕ್ತರುಗಳೆಂದರೆ ಕಲಘಟಗಿ ತಾಲೂಕಿನ ಮಿಶ್ರೀಕೋಟೆಯ ಶ್ರೀ ಕಾಳಪ್ಪ ಬಡಿಗೇರ ಹಾಗೂ ಅವರ ಮಗ ಶ್ರೀ ಬಸವಣೆಪ್ಪಾ ಬಡಿಗೇರ. ತಂದೆ ಮಕ್ಕಳಿಬ್ಬರೂ ಅಧ್ವೈತ ಸಿದ್ದಾಂತವನ್ನು ತಮ್ಮ ಜಿವನದಲ್ಲಿ ಅಳವಡಿಸಿಕೊಂಡು ಕಾಯಕ ಯೋಗಿಗಳಾಗಿ ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಿದ್ದರು.
ಕೈಲಾಸಮಂಟಪದಲ್ಲಿಯ ಪ್ರತಿಯೊಂದು ಮೂರ್ತಿಗಳ ರಚನೆಯನ್ನು, ಅಲ್ಲಿಯ ರಥವನ್ನು ಹಾಗೂ ಅನೇಕ ಶಿಲ್ಪಗಳ ಕೆತ್ತನೆಯನ್ನು ಮಾಡತ್ತಾ ಮಹಾಸ್ವಾಮಿಗಳಿಂದ ಯಾವುದೇ ಫಲಾಪೇಕ್ಷೆ ಪಡೆಯದೇ ಅವರುಗಳ ಆಶಿರ್ವಾದವಂದೇ ಬಯುಸುತ್ತಾ ಜಿವನ ಸಾಗಿಸುತ್ತಿದ್ದರು. ಉರಿಬಿಸಿಲಿನ ಆ ಮಧ್ಯಾಹ್ನನದ ವೇಳೆಯಲ್ಲಿ ಊರಿನ ಅನೇಕ ಪ್ರಮುಖರು ಹಾಗೂ ಆತ್ಮೀಯ ಭಕ್ತವೃಂದವು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ವಿಗ್ರಹವನ್ನು ಸಂಗಮರಿ ಕಲ್ಲಿನಲ್ಲಿ ಕೆತ್ತಲು ಕಾಯಕ ಯೋಗಿಗಳಾದಂತಹ ಕಾಳಪ್ಪ ಬಡಿಗೇರ ಹಾಗೂ ಬಸವಣ್ಣೆಪ್ಪಾ ಬಡಿಗೇರ ಅವರಿಗೆ ಸೂಚಿಸಿದರು. ತಕ್ಷಣವೇ ಇದು ನಮ್ಮ ಜೀವನದ ಅತ್ಯಂತ ಅಮೂಲ್ಯವಾದ ಕ್ಷಣವೆಂದು ತಿಳಿದ ಸಹೋದರರು ಕಾರ್ಯ ಪ್ರವೃತ್ತರಾದರು. ಮಹಾಸ್ವಾಮಿಗಳವರ ದೇಹದ ಮೇಲಿರುವ ಪ್ರತಿಯೊಂದು ಗೆರಯು ಹಾಗೂ ಉಬ್ಬು-ತಗ್ಗುಗಳನ್ನು ಈ ಕಾಯಕಯೋಗಿಗಳು ಬಲ್ಲವರಾಗಿದ್ದರು. ಮೂರ್ತಿಯನ್ನು ಅತ್ಯಂತ ಆಕರ್ಷಣೀಯವಾಗಿರುವಂತೆ ಪ್ರತಿದಿನ ಕಾರ್ಯ ಪ್ರವೃತ್ತರಾಗಿರುತ್ತಿದ್ದರು.
ಆದರೆ ಅಲ್ಲಿ ಹರಿಡಿರುವ ಪ್ಲೇಗ್ ರೋಗವು ಇವರನ್ನು ಭಯಭೀತರನ್ನಾಗಿರಿಸಿತ್ತು .ದಿವ್ಯಶಕ್ತಿಯಿಂದ ಇದನ್ನು ತಿಳಿದ ಶ್ರೀ ಸಿದ್ದಾರೂಢಮಹಾಸ್ವಾಮಿಗಳು ಕಾಳಪ್ಪ ಬಡಿಗೇರ ಅವರ ಹತ್ತಿರ ಹೋಗಿ “ಕಾಳಪ್ಪ ನಿನ್ನ ಭಯಕ್ಕೆ ಮದ್ದನ್ನು ಕೊಡಿಸಲು ನನ್ನ ಹತ್ತಿರ ಇರುವ ಆಸ್ತಿ ಎಂದರೆ ಲಂಗೋಟಿ, ಮಣ್ಣಿನ ಗಡಿಗೆ ಹಾಗೂ ರಗಟೆ(ಕೌದಿ) ಮಾತ್ರ, ಹೀಗಾಗಿ ಈ ಮೂರ್ತಿಯನ್ನು ಪೂರ್ಣಗೊಳೀಸುವ ಸಂಪೂರ್ಣ ಭಾರ ನಿನ್ನದು, ಹಾಗೆಯೇ ನಿನ್ನನ್ನು ರಕ್ಷಿಸುವ ಹೊರೆ ನನ್ನದು ಎಂದು ತಿಳಿದು ಬಲಗೈಯಿಂದ ತಮ್ಮ ಒಂದು ಹಲ್ಲನ್ನು(ದಂತ) ಕಿತ್ತು ಆರ್ಶಿವಾದವೆಂಬಂತೆ ಕಾಳಪ್ಪನ ಕೈಯಲ್ಲಿ ನೀಡಿದರು. ಆಗ ಕಾಳಪ್ಪ ಆನಂದ ಭಾಷ್ಪವನ್ನು ಸುರಿಸುತ್ತಾ ಚ್ಯತನ್ಯಶಕ್ತಿಯ ಸ್ವರೂಪವಾದಂತಹ ನಿರ್ಮಲವಾದ ಹಲ್ಲ(ದಂತ)ನ್ನು ಕಣ್ಣಿಗೆ ಒತ್ತಿಮನೆಗೆ ನಡೆದರು. ಕಾಳಪ್ಪನವರು ಮುಂದೆ ಆ ಹಲ್ಲಿಗೆ ತಂತಿಯನ್ನು ಸುತ್ತಿಸಿ ಗುಂಡಗಡಿಗೆಯಲ್ಲಿ ಹಾಕಿಕೊಂಡು ದೇಹದ ಮೇಲೆ ಧರಿಸಿಕೊಳ್ಳಲಾರಂಭಿಸಿದರು ತದನಂತರ ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ವಿಗ್ರಹವು ಪೂರ್ಣಗೊಂಡಿತು.
ಸಿದ್ದಾರೂಢ ಮಹಾಸ್ವಾಮಿಗಳು 21/8/1929 ರಂದು ಪರಮಾತ್ಮನಲ್ಲಿ ವಿಲೀನರಾದರು. ಓಂ ನಮ: ಶಿವಾಯ ಒಕ್ಕಣಿಕೆಯಲ್ಲಿ ಇರುವ ಶಿವಯೋಗ ಸಮಾಧಿಯ ಹಿಂಭಾಗದಲ್ಲಿ ಬಡಿಗೇರ ಕುಟುಂಬದ ತಂದೆ ಮಕ್ಕಳಿಬ್ಬರು ನಮಸ್ಕರಿಸುತ್ತಿರುವಾಗ ಮಲ್ಲಿಗೆಯ ಸುವಾಸನೆ ಸೂಸುತ್ತಿದ್ದನ್ನು ಕಂಡು ಸಿದ್ದಾರೂಡ ಮಹಾಸ್ವಾಮಿಗಳು ಪ್ರತಿ ನಿತ್ಯವೂ ಸುವಾಸನೆಯನ್ನು ಬೀರುವ ಮಲ್ಲಿಗೆಯೆಂದೇ ತಿಳಿದಿದ್ದರು. ಶ್ರೀ ಕಾಳಪ್ಪ ಬಡಿಗೇರ ಅವರುಗಳು ಲಿಂಗೈಕ್ಯವಾದ ಮೇಲೆ ಅಖಂಡ ಬ್ರಹ್ಮಚಾರಿಗಳಾದಂತಹ ಶ್ರೀ ಬಸವಣ್ಣೆಪ್ಪಾ ಬಡಿಗೇರ ಇವರಿಗೆ ಗುಂಡಗಡಿಗೆ ಹಸ್ತಾಂತರಗೊಂಡಿತು. ಹಲವು ವರ್ಷಗಳ ನಂತರ ಬಸವಣ್ಣೆಪ್ಪ ಬಡಿಗೇರ ಇವರಿಂದ ಇವರುಗಳ ಮೊಮ್ಮಕ್ಕಳಾದ ಬ್ಯಾಡಗಿಯ ಶ್ರೀ ಉಮೇಶ ಬಡಿಗೇರ ಹಾಗೂ ಶ್ರೀಮತಿ ರಿಂದಮ್ಮಾ ಬಡಿಗೇರ ಇವರಿಗೆ ಹಸ್ತಾಂತರಗೊಂಡಿತು.
ತದನಂತರ ಕಾಳಿಕಾದೇವಿಯ ಪರಮಭಕ್ತರಾದ ದಿ. ಶ್ರೀ ಉಮೇಶ ಬಡಿಗೇರ (ಫೋಟೋ ಸ್ಟುಡಿಯೋ ಮಾಲಿಕರು) ಇವರ ಬಳಿ ಬಂದ ನಂತರ ಸಿಧ್ದಾರೂಡ ಮಹಾಗುರುಗಳ ಆಶಿರ್ವಾದದಿಂದ ಆದ್ಯಾತ್ಮದಲ್ಲಿ ಹೆಚ್ಚು ಜ್ಞಾನ ದೊರೆತ ಫಲವಾಗಿ ಇವರು ಇತರ ರಾಜ್ಯಗಳ ಜನರನ್ನು ತಮ್ಮ ಕಡೆಗೆ ಆಕರ್ಷಿಸಲ್ಪಡುತ್ತಿದ್ದರೆಂದರೆ ಶ್ರೀ ಸಿಧ್ಧಾರೂಡ ಮಹಾಸ್ವಾಮಿಗಳ ದೇಹದ ಆ ಅಂಗವು(ದಂತ) ಲಿಂಗರೂಪದಲ್ಲಿ ಇನ್ನೂ ಜಿವಂತವಾಗಿದೆ ಎಂಬುದನ್ನು ಸಾಬಿತುಪಡಿಸುತ್ತದೆ ಎಂದರ್ಥ ಹಾಗೂ ಇದೊಂದು ವಿಸ್ಮಯ.
Comments
Post a Comment