ದೀಪಾವಳಿಯ ಸಡಗರದ ಒಂದು ನೋಟ ವನಸಂಚಾರಿ(ಬಂಜಾರ)ಗಳ ತಾಂಡಾದಲ್ಲಿ....lll

ದೀಪಾವಳಿಯ ಸಡಗರದ ಒಂದು ನೋಟ ವನಸಂಚಾರಿ(ಬಂಜಾರ)ಗಳ ತಾಂಡಾದಲ್ಲಿ....lll

ದೀಪಾವಳಿ ಹಬ್ಬಯಂದಡೆ ಎಲ್ಲಿ ನೋಡಿದಲ್ಲಿ ದೀಪಗಳ ಅಲಂಕಾರ, ಯೋಗ್ಯತೆಗನುಸಾರವಾಗಿ ಸಿಡಿಸುವ ಪಟಾಕ್ಷಿಯ ಕಿವಿ ಕೊರೆಯುವ ಶಬ್ದ, ಹೊಸಬಟ್ಟೆಯನ್ನುತೊಟ್ಟುಅತ್ತಿಂದಿತ್ತ ಗಲಿಬಿಲಿಯಲ್ಲಿ ಓಡಾಡುತ್ತಿರುವ ಚಿಣ್ಣರು, ಹಸಿರು ತೋರಣಗಳಿಂದ ಕಂಗೊಳಿಸುತ್ತಿರುವ ಮನೆಗಳನ್ನು ನೋಡಿದಾಗ ಹರುಷ ಉಕ್ಕೇರುತ್ತದೆ.ಅದುವೇಎಲ್ಲರನ್ನೂ ಕೂಡಿಸುವ ಹಬ್ಬ ದೀಪದ ಹಬ್ಬ.

ದೀಪಾವಳಿಯ ಹಿನ್ನಲೆಯನ್ನು ಗಮನಿಸಿದಾಗ ಇದೊಂದು ಇತಿಹಾಸ ಪೂರ್ವದಲ್ಲಿ ನಡೆದ ವೈಜ್ಞಾನಿಕ ಅನ್ವೇಷಣದಿಂದ ಹುಟ್ಟಿದ ಹಬ್ಬವೆನಿಸುತ್ತದೆ. ಇತಿಹಾಸ ಪೂರ್ವಕಾಲದ ಜನರು ಪ್ರಾಕೃತಿಕ ಜೀವನದಿಂದ ಸಂಸ್ಕೃತದ ಕಡೆಗೆ ಹಾಗೂ ಗುಹೆಯಿಂದ ಗುಡಿಸಿಲಿನೆಡೆಗೆ ಹಾಕಿದ ಮೊದಲ ಹೆಜ್ಜೆಯ ಪ್ರತೀಕವೇ ದೀಪಾವಳಿ.

ಪ್ರಕೃತಿಯಲ್ಲಿ ಕಾಡ್ಗಿಚ್ಚಿನಿಂದ ಉಂಟಾದ ಬೆಂಕಿಯನ್ನು ನೋಡಿ ಕೃತಕವಾಗಿ ಗುಡ್ಡದ ತುದಿಯಲ್ಲಿ ಆದಿ ಮಾನವರು ಬೆಂಕಿಯನ್ನು ಹುಟ್ಟಿಸಿ ಸಂಭ್ರಮಿಸಿದ ದಿನ ಅದಾಗಿತ್ತು.ಅದರ ಪ್ರತಿಕವೆಂಬಂತೆ ಕ್ರಮೇಣವಾಗಿ ಆಕಳು ಹಾಗೂ ಎಮ್ಮಿಯ ಸಗಣಿಯ ಕುಳ್ಳುಗಳನ್ನು ಸುಡಲಾರಂಭಿಸಿ(ಬೂದಿಹಾಳ, ಬೂದಿಗುಡ್ಡ ಗ್ರಾಮಗಳು ಇದನ್ನು ಸೂಚಿವಂತಹವು).ತದನಂತರ ಈ ಘಟನೆಗೆ ಪೌರಾಣಿಕ ತಳಪಾಯವನ್ನು ಹಾಕಿ ಶ್ರೀರಾಮ ಹಾಗೂ ಶ್ರೀಕೃಷ್ಣನನ್ನು ದೈವೀಪುರುಷರನ್ನಾಗಿಸಿ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು.

ಆಧುನಿಕತೆಯ ಭರಾಟೆಯಲ್ಲಿ ಪೂರ್ವಜರ ವಿಧಿ-ವಿಧಾನಗಳು ಸ್ವಲ್ಪ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡಿವೆಯಾದರು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬುಡಕಟ್ಟುಜನಾಂಗದಲ್ಲಿ ಈ ವಿಧಾನಗಳು ಯಥಾವತ್ತಾಗಿವೆ ಎಂಬುದು ಸಮಾಧಾನಕರ ವಿಷಯವಾಗಿದೆ.

ಬುಡಕಟ್ಟು ಜನಾಂಗದಲ್ಲಿ ಬರುವಂತಹ ಲಂಬಾಣಿ ಅಥವಾ ಬಂಜಾರ ಜನಾಂಗದವರು ಗೌರಿಹಬ್ಬ, ಹೋಳಿಹಬ್ಬ, ದಸರಾ ಹಬ್ಬದೊಂದಿಗೆ ದೀಪಾವಳಿಯನ್ನು ಸಹ ನಮ್ಮಜಿಲ್ಲೆಯಲ್ಲಿ ವಿಶೇಷವಾಗಿ ಆಚರಿಸುತ್ತಾರೆ ಎಂಬುದಕ್ಕೆ ಅನೇಕ ತಾಂಡಾಗಳು ಮೂಖ ಸಾಕ್ಷಿಯಾಗಿವೆ.

ಊರುಗಳಿಂದ ಬಹು ದೂರ ಕಾಡುಗಳಲ್ಲಿ ತಾಂಡಾಗಳನ್ನು ಮಾಡಿಕೊಂಡು ವಾಸಿಸಿದ ಆ ಜನರು ರೋಗ ಬಂದಾಗ ನರಳಿದರು. ಸಾವಿಗೆ ಅತ್ತರು. ಹುಟ್ಟಿಗೆ ನಕ್ಕು- ನಲಿದರು. ಪ್ರಾಣಿ ಪಕ್ಷಿಗಳೊಡನೆ ಪದಕಟ್ಟಿ ಹಾಡಿದರು.ಕುಣಿದರು. ಹಸಿರನ್ನು ಆರಾಧಿಸಿದರು. ರಾಸುಗಳನ್ನು ಪೂಜಿಸಿದರು, ಬಲಿ ಕೊಟ್ಟರು-ಬಲಿಯಾದರು.ದೇವರನ್ನು ಸೃಷ್ಟಿಸಿಕೊಂಡರು.ಅನುಭವದ-ಅನುಭಾವದ ಪ್ರಸಂಗಗಳನ್ನು ಗಾದೆ-ನುಡಿಗಟ್ಟುಗಳನ್ನಾಗಿ ಮಾಡಿಕೊಂಡು ಆಧುನಿಕತೆಯ  ಈ ದಿನಮಾನಗಳಲ್ಲಿಯೂ ತಮ್ಮ ಪೂರ್ವಜರ ಹಬ್ಬ-ಹರಿದಿನಗಳನ್ನು ಆಚರಿಸುತ್ತಾ ತಾಂಡಾಗಳಲ್ಲಿಯೇ ಇನ್ನೂ ಸಹ ವಾಸಿಸುತ್ತಿದ್ದಾರೆಂಬುದಕ್ಕೆ ಕಾರಣ ಪೂರ್ವಜರು ಪಾದ ಸ್ಪರ್ಶಿಸಿದ ಪುಣ್ಯಭೂಮಿ ಇದಾಗಿದೆ ಎಂದು ತಿಳಿದುಕೊಂಡಿದ್ದಾರೆ.

ಜಗತ್ತಿನ 56 ದೇಶಗಳಲ್ಲಿ ಲಂಬಾಣಿ ಜನಾಂಗದವರಿದ್ದು ಅವರನ್ನು ವಿದೇಶಗಳಲ್ಲಿ ಜಿಪ್ಸಿ, ಸಿಂಧಿ ಹಾಗೂ ರೋಮನ್‍ರೆಂದು ಕರೆಯುತ್ತಾರೆ. 2001ರ ಜನಗಣತಿಯ ಪ್ರಕಾರ ನಮ್ಮಕರ್ನಾಟಕದಲ್ಲಿ ನಾಲ್ಕು ಸಾವಿರ ತಾಂಡಾಗಳಿದ್ದು ಅವರನ್ನು ಇಲ್ಲಿ ಬಂಜಾರ, ಲಂಬಾಣಿ, ಲಮಾಣಿ, ವಂಜಾರ, ಬ್ರಿಂಜಾರ, ಲಂಬಾಡಾ, ವಂಜಾರಿ, ಸುಗಾಲಿ ಹಾಗೂ ಸುಕಾಲಿ ಎಂಬ ಹೆಸರಿನಿಂದಕರೆಯಲ್ಪಡುತ್ತಾರೆ.

ಇಂಡೊ-ಆರ್ಯ ಭಾಷೆಯನ್ನಾಡುವ (ಮರಾಠಿ, ಹಿಂದಿ, ಸಂಸ್ಕೃತ ಮಿಶ್ರಿತ ಭಾಷೆ)ಈ ಜನರು ವ್ಯಾಪಾರವನ್ನರಿಸುತ್ತಬಂದುರಾಜಸ್ಥಾನದ ಮರಳುಗಾಡಿನಲ್ಲಿ ತಂಡೋಪತಂಡವಾಗಿ ವಾಸಿಸಲಾರಂಭಿಸಿದರು.ಮುಸ್ಲಿಂರ ಆಳ್ವಿಕೆಯು ದಕ್ಷಿಣ ಭಾರತದಲ್ಲಿ ಪಸರಿಸಿದಾಗ ಈ ಭಾಗದಲ್ಲಿ ಬಂದು ನೆಲೆಸಿದರು. ಪಕ್ಷಬೇಧ ಮರೆತುಯುದ್ಧ ನಿರತರಿಗೆಆಹಾರ ಧಾನ್ಯಗಳನ್ನು ಕಾಡು(ವನ)ಗಳಲ್ಲಿ ಸಂಚರಿಸುತ್ತಾ ವನಸಂಚಾರಿಗಳಾಗಿ ಮುಂದೆ ವನಾಚಾರಿಗಳಾಗಿ, ಬಂಜಾರರಾದರು.ಲವಣವನ್ನು ಮಾರುತ್ತಾ ಲಮಣರು ಮುಂದೆ ಲಮಾಣಿಯರಾದರು.

ಬ್ರಿಟಿಷ್‍ರ ಆಗಮದಿಂದ ರೈಲುಗಳ ಬಳಕೆಯು ಹೆಚ್ಚಾಗಿ ಅವರುಗಳ ವ್ಯಾಪಾರ ಕುಂಟಿತವಾಗಿ, ಇತರೆ ಕಸಬುಗಳ ಮೇಲೆ ಅವಲಂಭಿತರಾದರು.ಯಾರೋ ಮಾಡಿದ ತಪ್ಪಿಗಾಗಿ ಎಲ್ಲಾ ಸಮುದಾಯದವರನ್ನು ಬ್ರಿಟಿಷರು ಇವರನ್ನು ‘ಕ್ರಿಮಿನಲ್‍ಟ್ರೈಬ್ಸ’ ಪಂಗಡಕ್ಕೆ ಸೇರಿಸಿ ಶೋಷಿಸಿದರು.ಬಾಲಾಜಿ, ತುಳಜಾದೇವಿ, ಬನಶಂಕರಿ, ಮಾರಮ್ಮ, ಹುಲಿಯಮ್ಮ, ಯಲ್ಲಮ್ಮ, ಸೇವಾಲಾಲರನ್ನು ಆರಾಧಿಸುವ ಈ ಜನಾಂಗದವರ ಮೂಲಪುರಷ “ಮೋಲಾ” ಎಂಬ ಐತಿಹ್ಯವಿದೆ. 
ದೀಪಾವಳಿಯ ಸಂಭ್ರಮಾಚರಣೆಯನ್ನು ಇವರು ತಮ್ಮ ಭಾಷೆಯಲ್ಲಿ ‘ದವಾಳಿ’ ಅಥವಾ ‘ಕಾಳಿಮಾಸ’(ಪುಣ್ಯಕಾಲ) ಎಂದುಕರೆಯುತ್ತಾರೆ. ಮೂರು ದಿವಸಗಳಲ್ಲಿ ಆಚರಿಸುವ ಈ ಹಬ್ಬ ತನ್ನದೇ ಆದಂತಹ ವಿಶೇಷತೆಯನ್ನು ಹೊಂದಿದೆ. ಬಂಜಾರ ಮಹಿಳೆಯರು ಕೆಂಪುವರ್ಣದ ಜೋಡಿ ಪದರಿನ ಹದಿನಾರು ಮಳದ ಫೇಟಿಯಾ(ಲಂಗ) ಅದರ ಮೇಲೆ ಕಾಂಚಳಿ(ಚೋಲಿ) ತಲೆಯ ಮೇಲೆ ಘೂಂಗಟ, ಅಲವಾಣ್(ಮುಸಕು) ಇವುಗಳಿಗೆಲ್ಲಾ ಕಿರುಗನ್ನಡಿ, ಗೊಂಡೆ, ಗೆಜ್ಜೆ, ನಾಣ್ಯ, ಕವಡೆ, ಬಣ್ಣ ಬಣ್ಣದ ದಾರಗಳಿಂದ ಕಸೂತಿಹಾಕಿ ಸಿಂಗರಿಸಿದ ಬಟ್ಟೆಗಳನ್ನು ತೊಟ್ಟು ಸೊಂಟಕ್ಕೆ ಸಡಕ್ ಎಂಬ ಕವಡೆ ಹಾರ, ಲಟ್‍ಕಣ್, ಗಣೋ, ಪುಲಿಯ ಧರಿಸಿ ಕೊರಳ ತುಂಬಾ ಮೋತಿಹಾರ, ಮೂಂಗ ಪಟಿಯಾ, ಹಾಂಸ್ಲಿ, ಬಣ್ಣಬಣ್ಣದ ಪಚ್ಚೆ ಹವಳದ ಮಣಿಹಾರಗಳು, ಮುಂಗೈಯಿಂದ ಮೊಣಕೈವರೆಗೂ ಬೆಳ್ಳನೆಯ ದಂತದ ಬಲಿಯಾ ಮೇಲಿನ ತೋಳಿನವರೆಗೂ ಚೂಡೋ ಜೊತೆಗೆ ಕಸೋಟ್ಯಾ, ಕವ್ಯಾ ಬಳೆಗಳನ್ನು ಹಾಗೂ ಉಂಗುರಗಳನ್ನು ಅರಣ್ಯದಲ್ಲಿ ಬಂದೆರಗಬಹುದಾಂತಹ ಪ್ರಾಣಿಗಳಿಂದ ಪಾರಾಗಲು ಬಳಸಬಹುದಾದಂತಹ ಆಯುಧಗಳಂತೆ ಧರಿಸುವರು.

ದೀಪಾವಳಿಯ ಹಿಂದಿನ ದಿನ ಹುಡುಗಿಯರು ಸಗಣಿಯ ಬೆನಕ ಮಾಡಿ ಹಸಿರು ಗರಿಕೆ ವಿವಿಧ ಹೂಗಳಿಂದ ಅಲಂಕರಿಸಿ ಮನೆಯ ಬಾಗಿಲು, ದೇವರಕೋಣೆ, ದನದಕೊಟ್ಟಿಗೆ ಹೀಗೆ ಎಲ್ಲ ಕಡೆಗಳಲ್ಲಿಯೂ ಇಡುತ್ತಾಇದನ್ನು ‘ಗೊದ್ನೊ’ ಪೂಜಾಎನ್ನುತ್ತಾರೆ.ನಂತರ ಸಣ್ಣ-ಪುಟ್ಟ ಹುಡುಗಿಯರು ಸೇರಿಂದಂತೆ ಮದುವೆಯಾಗಲಿರುವತರುಣಿಯರು ಸಾಂಪ್ರದಾಯಿಕಉಡುಗೆ ತೊಡುಗೆಗಳನ್ನು ತೊಟ್ಟು ಮನೆಮನೆಗೂ ಹೋಗಿ ಬೆನಕನ ಮೇಲೆ ರಾಗಿತೆನೆಯಿಂದ ಹಾಲು ಚಿಮುಕಿಸುವ ಕಾರ್ಯಕ್ರಮವಿರುತ್ತದೆ.ಮದುವೆ ನಿಶ್ಚಿತಾರ್ಥ ಆಗಿರುವಕನ್ಯೆಯರು ಕಾಲಿಗೆ ಗೆಜ್ಜೆಕಟ್ಟಿಕೊಂಡು ನಡೆದಾಡುವ ಶಬ್ದವು ತರುಣರ ಕನಸನ್ನು ಎಳೆದಾಡುತ್ತದೆನ್ನಬಹುದು.

ದೀಪಾವಳಿಯ ದಿನ ರಾತ್ರಿಕತ್ತಲು ಆವರಿಸುತ್ತಿದ್ದಂತೆಯೇ ನೂರಾರು ಕನ್ಯೆಯರು ದೀಪಧಾರಿಣಿಯರಾಗಿ ಪ್ರತಿ ಮನೆಮನೆಗೂ ಹೋಗಿ ಮೇರಾ(ದೀಪಾವಳಿ ಶುಭಾಶಯ)ದ ಹಾಡನ್ನು ಸಾಮೂಹಿಕವಾಗಿ ಏಕಧ್ವನಿಯಲ್ಲಿ ಹಾಡುತ್ತಾ ಪ್ರೀತಿಯಿಂದ ಕಾಣಿಕೆಯನ್ನು ಪಡೆಯುತ್ತಾ ಗೆಜ್ಜೆಗಳ ನಾದಗಳೊಂದಿಗೆ ಕುಣಿಯುವದನ್ನು ನೋಡಿದಾಗ ಆಕಾಶದಲ್ಲಿರುವ ನಕ್ಷತ್ರಗಳು ತಾಂಡಾಗಳ ಮೇಲೆ ಧುಮುಕಿದಂತೆ ಭಾಸವಾಗುತ್ತದೆ.

ಬಲಿಪಾಢ್ಯದ ದಿವಸವೇ ಲಂಬಾಣಿಗರು ತಮ್ಮ ಪೂರ್ವಜರಿಗೆ ಪೂಜೆಯನ್ನು ಸಲ್ಲಿಸಿ ತಮ್ಮಯೋಗ್ಯತೆಗೆ ತಕ್ಕಂತೆ ಮಾಂಸಹಾರ ಅಥವಾ ಶಾಖಾಹಾರದೊಂದಿಗೆ ಅವರನ್ನು ಸಂತೃಪ್ತಿಪಡಿಸಿ ತಾವುಗಳು ಸಹ ಇತರ ಸಂಬಂಧಿಗಳೊಂದಿಗೆ ಆನಂದಿಸುತ್ತಾರೆ.ಆ ಕ್ಷಣಗಳನ್ನು ಹಾಗೂ ತಮ್ಮ ಸಂಬಂಧಿಕರನ್ನು ಎಂದೆಂದಿಗೂ ತಮ್ಮ ಮನಸ್ಸಿನಾಳದಲ್ಲಿ ನೆನೆಸುತ್ತಾ ಮುಂದಿನ ದಿನಗಳನ್ನು ಕಳೆಯುತ್ತಾ ಆ ಹಬ್ಬದ ಬರುವಿಕೆಯನ್ನು ಕಾಯುತ್ತಾ ಕುಳಿತಿರುತ್ತಾರೆ ಎಂಬುದು ಎಲ್ಲರನ್ನು ಆಕರ್ಷಿಸುವ ವಿಷಯವಾಗಿದೆ.
                
             # ಪ್ರಮೋದ ನಲವಾಗಲ #

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!