ಹಾವೇರಿ ಜಿಲ್ಲೆಯ ದೇವಾಲಯಗಳು...।।।

ಚೌಡಯ್ಯದಾನಪುರದಲ್ಲಿಯ ಮುಕ್ತೇಶ್ವರ ದೇವಸ್ಥಾನ
ಸಿಡೇನೂರ ಗ್ರಾಮದಲ್ಲಿ ಉತ್ಖನನದಲ್ಲಿ ದೊರೆತ ದೇವಸ್ಥಾನ ಕುರುಹುಗಳು.
       (ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ )

ಹಾವೇರಿ ಜಿಲ್ಲೆಯಲ್ಲಿ ಶೇಕಡ ಎಪ್ಪತ್ತರಷ್ಟು ಗ್ರಾಮಗಳಲ್ಲಿ ಪ್ರಾಚೀನ ದೇವಾಲಯಗಳು ಕಂಡುಬರುತ್ತವೆ. ಇದರಲ್ಲಿ ಶೇಕಡ ತೊಂಬತ್ತರಷ್ಟು ದೇವಾಲಯಗಳು ಭಗ್ನ ಸ್ಥಿತಿಯಲ್ಲಿದೆ, ಈ ಭಗ್ನ ಸ್ಥಿತಿಯಲ್ಲಿರುವ ದೇವಾಲಯಗಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ, ಬೆರಳೆಣಿಕೆಯನ್ನು ದೇವಾಲಯಗಳು ಪುರಾತತ್ತ್ವ ಇಲಾಖೆಯ
ಸಂರಕ್ಷಣೆಯಲ್ಲಿದೆ. ಈ ದೇವಾಲಯಗಳು 
ಶಿಲ್ಪಾವಶೇಷಗಳಿಂದ ತುಂಬಿದೆ. ಹೆಚ್ಚಿನ
ಸಂಖ್ಯೆಯ ಪ್ರತಿಮೆಗಳು ಭಗ್ನಗೊಂಡಿದೆ. ಕಾಲಕಾಲಕ್ಕೆ ನಡೆದ ಜೀರ್ಣೋದ್ದಾರದ ಕೆಲಸಗಳಿಂದಾಗಿ ಕೆಲವು ದೇವಾಲಯಗಳ ಕಾಲ ಮತ್ತು ಶೈಲಿಯನ್ನು ಗುರುತಿಸುವಲ್ಲಿ ಗೊಂದಲ ಉಂಟಾಗುವುದು. ಕೆಲವು ಹಳೆಯ ದೇವಾಲಯಗಳನ್ನು ಸಂಪೂರ್ಣವಾಗಿ ಕೆಡವಿ,
ಹೊಸದಾಗಿ ನಿರ್ಮಿಸಿದ್ದಾರೆ ಹಾಗೂ ನಿರ್ಮಿಸುತ್ತಿದ್ದಾರೆ, ಮತ್ತೆ ಕೆಲವು ದೇವಾಲಯಗಳಲ್ಲಿ, ಮೂಲಶೈಲಿಯಲ್ಲೇ ವಾಸ್ತು ಭಾಗಗಳನ್ನು ಸಿದ್ಧಪಡಿಸಿ ಅಳವಡಿಸಿದ್ದಾರೆ, ಹೀಗೆ ಜೀರ್ಣೋದ್ಧಾರವು ಬೇರೆ, ಬೇರೆ ಸ್ವರೂಪಗಳಲ್ಲಿ ನಡೆದಿರುವುದು ಗಮನಾರ್ಹ, ಈ ಜೀರ್ಣೋದ್ಧಾರ ಕಾರ್ಯವು ಪ್ರಾಚೀನ ದೇವಾಲಯಗಳಿಗೆ ಸಂಬಂಧಿಸಿದಂತೆ, ಮಧ್ಯಕಾಲದಿಂದ ಇಂದಿನವರೆಗೂ ನಡೆಯುತ್ತಿದೆ. ಮಲೆನಾಡಿನ ಪ್ರದೇಶದಲ್ಲಿರುವ
ದೇವಾಲಯಗಳು, ಸಾಮಾನ್ಯವಾಗಿ ಕೆರೆ ಅಥವಾ ಹೊಂಡಗಳ ದಡದಲ್ಲಿವೆ. ಬಹುತೇಕ ದೇವಾಲಯಗಳು ಪ್ರತ್ಯೇಕ ಹೊಂಡಗಳನ್ನು ಹೊಂದಿದ್ದು, ಕೆಲವೆಡೆ ಈ ಹೊಂಡಗಳು ದೊಡ್ಡ ಕೆರೆಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತವೆ. ಹೀಗಾಗಿ ಕೆಲವು ದೇವಾಲಯಗಳು
ಗ್ರಾಮದಿಂದ ಸ್ವಲ್ಪ ದೂರದಲ್ಲಿರುತ್ತವೆ, ಆದರೆ ಬಯಲು ಪ್ರದೇಶದ ದೇವಾಲಯಗಳು ಸಾಮಾನ್ಯವಾಗಿ ಊರಿಗೆ ಹೊಂದಿಕೊಂಡಂತೆ ಅಥವಾ ಊರ ನಡುವೆ ಕಂಡುಬರುತ್ತವೆ. ಈ ದೇವಾಲಯಗಳ ಪಕ್ಕದಲ್ಲಿ ಕೆಲವೆಡೆ ಸಣ್ಣ ಕೆರೆಗಳಿದ್ದರೆ, ಮತ್ತೆ ಕೆಲವೆಡೆ ಕಟ್ಟಡ ನಿರ್ಮಿತ ಕೊಳಗಳಿವೆ. ಬಯಲು ಪ್ರದೇಶದ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ
ಜೀರ್ಣೋದ್ಧಾರಗೊಂಡು ಸುಮಾರು ಸುಸ್ಥಿತಿಯಲ್ಲಿದ್ದರೆ, ಮಲೆನಾಡು ಪ್ರದೇಶದ
ದೇವಾಲಯಗಳು ಕನಿಷ್ಟ ಸ್ಥಿತಿಯನ್ನು ತಲುಪಿವೆ.

1. ಬಾದಾಮಿ ಚಲುಕ್ಯರ ಕಾಲದ ದೇವಾಲಯಗಳು
ಜಿಲ್ಲೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಯಾವುದೇ ದೇವಾಲಯಗಳು ಉಳಿದು ಬಂದಿಲ್ಲ. ಆದರೆ ದೇವಾಲಯಗಳು ನಿರ್ಮಾಣಗೊಂಡ ಬಗೆಗೆ ಶಾಸನಾಧಾರಗಳುಂಟು.

ಶಿಗ್ಗಾವಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಪಂಚಪಾಂಡವರ ಗುಡಿಯ ಮುಂಭಾಗದಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಾಸನವಿದೆ. ಇದು ವಿಜಯಾದಿತ್ಯನ ಕಾಲದ್ದು, ಇದರಲ್ಲಿ
ಅರ್ಜುನೀಶ್ವರ ದೇವಾಲಯವನ್ನು ನಿರ್ಮಿಸಿದ ಉಲ್ಲೇಖವುಂಟು. ಈಗಿರುವ ದೇವಾಲಯ
ಆಧುನಿಕ ರಚನೆ. ಆದರೂ ದೇವಾಲಯದಲ್ಲಿರುವ ಲಿಂಗ ಮತ್ತಿತರ ಶಿಲಾವಶೇಷಗಳು ಶಾಸನೋಕ್ತ ದೇವಾಲಯಕ್ಕೆ ಸಂಬಂಧಪಟ್ಟಿವೆ. ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಇದೇ ಕಾಲದ ಬಿಡಿಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಗಳು ಅಲ್ಲಿದ್ದ
ದೇವಾಲಯದ ಬಗೆಗೆ ಸುಳಿವನ್ನು ನೀಡುತ್ತವೆ. ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಬಾದಾಮಿ ಚಾಲುಕ್ಯರ ಶಾಸನಗಳು ಕಂಡುಬರದಿದ್ದರೂ, ಕೆಲವೇ ಶಾಸನಗಳು ಪರೋಕ್ಷವಾಗಿ ದೇವಾಲಯಗಳಿದ ಬಗೆಗೆ ಸೂಚನೆ ನೀಡುತ್ತವೆ.

2. ರಾಷ್ಟ್ರಕೂಟರ ಕಾಲದ ದೇವಾಲಯಗಳು
ಇತರ ಪ್ರದೇಶಗಳಂತೆ. ಹಾವೇರಿ ಪ್ರದೇಶವೂ ಸಹ ರಾಷ್ಟ್ರಕೂಟರ ನೇರ ಆಳ್ವಿಕೆಗೆ ಒಳಪಟ್ಟಿತ್ತು. ಜಿಲ್ಲೆಯ ಎಲ್ಲೆಡೆ ವಿರಳವಾಗಿ ರಾಷ್ಟ್ರಕೂಟರ ಶಾಸನಗಳು ಮತ್ತು
ಶಿಲ್ಪಾವಶೇಷಗಳು ಕಂಡುಬರುತ್ತವೆ. ಆದರೆ ದೇವಾಲಯಗಳು ಕೆಲವು ಗ್ರಾಮಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಕಾಲದ ಕೆಲವು ದೇವಾಲಯಗಳು, ನಂತರದ ಶತಮಾನಗಳಲ್ಲಿ ವಿಸ್ಕೃತಗೊಂಡಿರುವುದನ್ನು ಕಾಣಬಹುದು. ಮತ್ತೆ ಕೆಲವು ದೇವಾಲಯಗಳು
ಜೀರ್ಣೋದ್ದಾರಗೊಂಡಿವೆ. ಸಾಮಾನ್ಯವಾಗಿ ಈ ಕಾಲದ ಕೆಲವು ದೇವಾಲಯಗಳು ಗರ್ಭಗೃಹ ಮತ್ತು ಅಂತರಾಳಗಳನ್ನು ಒಳಗೊಂಡಿದ್ದರೆ, ಉಳಿದ ದೇವಾಲಯಗಳು ಹೆಚ್ಚಿನದಾಗಿ ನವರಂಗವನ್ನು ಒಳಗೊಂಡಿವೆ. ಹಿರೇಕೆರೂರು ತಾಲೂಕಿನ
ಖಂಡೇಬಾಗೂರು(ರಾಮತೀರ್ಥ). ಮೇದೂರು, ಅರಳೀಕಟ್ಟಿ, ಭೈರವನಪಾದ ಮತ್ತು
ಸಿರಗುಂಬಿಗಳಲ್ಲಿ ಈ ಕಾಲದ ದೇವಾಲಯಗಳು ಕಂಡುಬರುತ್ತವೆ. ಶಿಗ್ಗಾವಿ ತಾಲೂಕಿನ
ಮೋಟಳ್ಳಿಯಲ್ಲಿ ಬಿದ್ದು ಹೋಗಿದ್ದ ರಾಷ್ಟ್ರಕೂಟರ ಕಾಲದ ಗರ್ಭಗೃಹವನ್ನು ಇತ್ತೀಚೆಗೆ
ನಿರ್ಮಿಸಲಾಗಿದೆ. ರಾಣೆಬೆನ್ನೂರು ತಾಲೂಕಿನ ಹಿರೇಮಾಗನೂರು ಗ್ರಾಮದ ಕಲ್ಲೇಶ್ವರ
ದೇವಾಲಯ ರಾಷ್ಟ್ರಕೂಟರ ಕಾಲದ್ದು. ಹಾಗೂ ಹಾವೇರಿ ತಾಲೂಕಿನ ಹೊಮ್ಮರಡಿ
ಗ್ರಾಮದಲ್ಲೂ ರಾಷ್ಟ್ರಕೂಟರ ಕಾಲದ ದೇವಾಲಯವುಂಟು. ಈ ಕಾಲದ ದೇವಾಲಯಗಳ
ಬಾಗಿಲುವಾಡಗಳು ಗಿಡ್ಡವಾಗಿದ್ದು, ಅರ್ಧಕಂಬಗಳ ಅಲಂಕರಣದಿಂದ ಕೂಡಿರುವುದನ್ನು ಕಾಣಬಹುದು. ನವರಂಗದ ಕಂಬಗಳು ಸಹ ಗಿಡ್ಡಗಿದ್ದು, ಚತುರಸ್ರಾಕಾರದಲ್ಲಿವೆ. ಕಂಬಗಳ ಮುಖಭಾಗದಲ್ಲಿ ತ್ರಿಕೋನಾಕೃತಿಯ ಉಬ್ಬು ರಚನೆಗಳಿವೆ. ಕೆಲವೆಡೆ ಕಂಬಗಳ ತಳದಲ್ಲಿ ಘಟನಾವಳಿಗಳ ಅಥವಾ ದೇವತೆಗಳ ಉಬ್ಬುಶಿಲ್ಪಗಳಿರುತ್ತವೆ. ಕಂಬದ ಮೇಲಿನ
ಬೋದಿಗೆಪೀಠ ದುಂಡಾಗಿದ್ದು, ವೃತ್ತಾಕಾರದಲ್ಲಿರುತ್ತದೆ. ಮೇದೂರಿನಲ್ಲಿ ರಾಷ್ಟ್ರಕೂಟರ ಎರಡು ದೇವಾಲಯಗಳಿದ್ದು, ಪಕ್ಕದಲ್ಲೇ ಕಲ್ಯಾಣ ಚಾಲುಕ್ಯರ ದೇವಾಲಯಗಳು ಕಂಡುಬರುತ್ತವೆ. ಈ ಎರಡು ದೇವಾಲಯಗಳಲ್ಲಿ, ಒಂದು ದೇವಾಲಯವು ಗರ್ಭಗೃಹ ಮತ್ತು ನವರಂಗಗಳನ್ನು ಒಳಗೊಂಡಿದೆ. ಇವರ ಕಾಲದಲ್ಲಿ ದೇವಾಲಯಗಳ ರಚನೆಗೆ ಗ್ರಾನೈಟ್, ಬೆಸಾಲ್ಟ್ ಇಟ್ಟಿಗೆ ಮತ್ತು ಸ್ಥಳೀಯವಾಗಿ ದೊರೆಯುವ ಕಲ್ಲುಗಳನ್ನು ಬಳಸಲಾಗಿದೆ. ರಾಷ್ಟ್ರಕೂಟರ ಕಾಲದ ಕೆಲವು ದೇವಾಲಯಗಳು ಅವನತಿ ಅಥವಾ
ಜೀರ್ಣೋದ್ದಾರ ಕ್ರಿಯೆಗೆ ಒಳಗಾಗಿರುವುದರಿಂದ ಅವುಗಳ ಸ್ವರೂಪವನ್ನು ಗ್ರಹಿಸುವುದು
ಸಾಧ್ಯವಾಗುವುದಿಲ್ಲ. ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳ ಮುಂದೆ ರಾಷ್ಟ್ರಕೂಟರ ಕಾಲದ ಶಾಸನಗಳು ಮತ್ತು ಗೋಸಾಸದ ಕಲ್ಲುಗಳು ಕಂಡುಬರುವುದು ಗಮನಾರ್ಹ, ಇವು ಕಲ್ಯಾಣ ಚಾಲುಕ್ಯರ ಕಾಲಕ್ಕೂ ಮೊದಲೇ ಆ ನೆಲೆಗಳಲ್ಲಿ
ರೂಢಿಯಲ್ಲಿದ್ದ ದೇವತಾರಾಧನೆಯ ಸೂಚನೆಗಳನ್ನು ಹೊರಗೆಡವುತ್ತವೆ.

 3. ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳು
ಜಿಲ್ಲೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ
ಕಾಣುತ್ತೇವೆ. ಬಹುತೇಕ ದೇವಾಲಯಗಳು ಭಗ್ನ ಸ್ಥಿತಿಯಲ್ಲಿವೆ. ಕೆಲವು ದೇವಾಲಯಗಳು
ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಅದರ ಶಿಲ್ಪಾವಶೇಷಗಳು ಬಯಲಿನಲ್ಲಿ ಕಂಡು
ಬರುತ್ತವೆ. ಮತ್ತೆ ಕೆಲವು ದೇವಾಲಯಗಳು ಈ ಮೊದಲೇ ತಿಳಿಸಿದಂತೆ ಕಾಲಕಾಲಕ್ಕೆ
ಜೀರ್ಣೋದ್ಧಾರಗೊಂಡಿವೆ. ಇನ್ನು ಕೆಲವು ದೇವಾಲಯಗಳಲ್ಲಿ ಮೂಲ ದೇವರನ್ನು ತೆಗೆದು
ಬೇರೆ ದೇವರುಗಳನ್ನು ಪ್ರತಿ ಷ್ಟಾಪಿಸಿಕೊಳ್ಳಲಾಗಿದೆ. ಇವರ ಕಾಲದ ದೇವಾಲಯಗಳನ್ನು
ಸಾಮಾನ್ಯವಾಗಿ ಬಸಾಲ್ಟ್ ಶಿಲೆಯನ್ನು ಬಳಸಿ ಕಟ್ಟಲಾಗಿದೆ. ದೇವಾಲಯಗಳು ಮಧ್ಯಮ
ಗಾತ್ರದವು. ಇವು ಸಾಮಾನ್ಯವಾಗಿ ಗರ್ಭಗೃಹ, ಅರ್ಧಮಂಟಪ ಅಥವಾ ಅಂತರಾಳ ಮತ್ತು
ನವರಂಗ ಭಾಗಗಳಿಂದ ಕೂಡಿರುತ್ತವೆ. ಆದರೆ ಪ್ರಮುಖ ಸ್ಥಳಗಳಲ್ಲಿ
ನಿರ್ಮಾಣಗೊಳ್ಳುತ್ತಿದ್ದ ದೇವಾಲಯಗಳು ಗರ್ಭಗೃಹ, ಅಂತರಾಳ, ನವರಂಗ,
ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿರುತ್ತಿದ್ದವು. ಈ ಸ್ಥಳಗಳು ರಾಜಧಾನಿ
ಪ್ರಾಂತೀಯ ರಾಜಧಾನಿ. ಉಪರಾಜಧಾನಿ ಮತ್ತು ಪ್ರಮುಖ ಪಟ್ಟಣಗಳಾಗಿ ರುತ್ತಿದ್ದವು.
ಇಂತಹ ಸ್ಥಳಗಳಲ್ಲಿನ ದೇವಾಲಯಗಳು ಭವ್ಯವಾಗಿಯೂ ಸುಂದರವಾಗಿಯೂ
ರೂಪುಗೊಳ್ಳುತ್ತಿದ್ದವು. ಉದಾಹರಣೆಗೆ ಬಂಕಾಪುರದ ನಗರೇಶ್ವರ ದೇವಾಲಯ.
ಹಾನಗಲ್ಲಿನ ತಾರಕೇಶ್ವರ ದೇವಾಲಯ. ಚೌಡದಾನಪುರದ ಮುಕೇಶ್ವರ ದೇವಾಲಯ.
ಹಾವೇರಿಯು ಸಿದ್ದೇಶ್ವರದೇವಾಲಯ ಮುಂತಾದವುಗಳನ್ನು ಹೆಸರಿಸಬಹುದು.
ದೇವಾಲಯಗಳಲ್ಲಿನ ದ್ವಾರಬಂಧದ ಲಲಾಟಬಿಂಬದಲ್ಲಿ ಸಾಮಾನ್ಯವಾಗಿ ಗಜಲಕ್ಷ್ಮಿ ಶಿಲ್ಪ
ಕಂಡುಬರುವುದು. ಕೆಲವೊಮ್ಮೆ ಅಂತರಾಳವು ದ್ವಾರರಹಿತವಾಗಿದ್ದು. ಅರ್ಧಮಂಟಪದಂತೆ
ಕಂಡುಬರುತ್ತದೆ. ಈ ಅರ್ಧಮಂಟಪವಿರುವಲ್ಲಿ ಕೆಲವೆಡೆ ತೋರಣ ಫಲಕವನ್ನು
ಅಳವಡಿಸಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಅಂತರಾಳ ದ್ವಾರದ ಇಕ್ಕೆಲಗಳಲ್ಲಿ ಗಾಳಿ
ಬೆಳಕಿಗಾಗಿ ಜಾಲಂಧ್ರಗಳನ್ನು ಅಳವಡಿಸಲಾಗುತ್ತಿತ್ತು. ಈ ಜಾಲಂಧ್ರಗಳು, ಚೌಕ ಅಥವಾ
ಲತಾಬಳ್ಳಿಯಾಕಾರದ ಅಲಂಕರಣವನ್ನು ಒಳಗೊಂಡಿವೆ. ಕೆಲವೆಡೆ ಹೆಚ್ಚಿನ ಗಾಳಿ ಬೆಳಕಿಗಾಗಿ
ಅಂತರಾಳಕ್ಕೆ ದ್ವಾರವನ್ನು ಅಳವಡಿಸದೇ ಜಾಲಂಧ್ರಗಳನ್ನು ಮಾತ್ರ ಅಳವಡಿಸಿರುವುದನ್ನು ಕಾಣಬಹುದು. ಮತ್ತೆ ಕೆಲವೆಡೆ ಇನ್ನೂ ಹೆಚ್ಚಿನ ಗಾಳಿ ಬೆಳಕಿಗಾಗಿ ಅಂತರಾಳಕ್ಕೆ ಯಾವುದೇ
ದ್ವಾರವನ್ನಾಗಲಿ, ಜಾಲಂಧ್ರಗಳನ್ನಾಗಲಿ ಅಳವಡಿಸುತ್ತಿರಲಿಲ್ಲ. ನಂತರ ನವರಂಗದ
ಮಧ್ಯದ ಕಂಬಗಳು ಮುಖ್ಯ ಆಕರ್ಷಣೆಯಾಗಿದ್ದವು. ಈ ಕಂಬಗಳು ಚತುರಸ್ರಾಕಾರದಲ್ಲೂ
ಮತ್ತು ಕುಂಭಾಕಾರದಲ್ಲೂ ಇರುತ್ತಿದ್ದವು. ಚತುರಸ್ರಾಕಾರದ ಕಂಬಗಳ ಮಧ್ಯ ಭಾಗದಲ್ಲಿ
ನಿಮ್ಮ ಅಲಂಕರಣವಿದೆ. ಕುಂಭಾಕಾರದ ಕಂಬಗಳು ತಿರುಗಣೆಯಂತ್ರದ ರಚನೆಗಳಾಗಿದ್ದು,
ಬಳೆಗಳು ಮತ್ತು ಸೂಕ್ಷ್ಮ ಕೆತ್ತನೆಗಳ ಅಲಂಕಾರದಿಂದ ಕೂಡಿವೆ. ಚಾವಣಿಗಳಲ್ಲಿನ
ಭುವನೇಶ್ವರಿಯು ಹೆಚ್ಚಾಗಿ ಕುಮುದಗಳ ಅಲಂಕರಣವನ್ನು ಒಳಗೊಂಡಿರುತ್ತದೆ. ಕೆಲವೆಡೆ
ಅಷ್ಟದಿಕ್ಷಾಲಕರ ಉಬ್ಬು ರಚನೆಗಳಿರುತ್ತವೆ. ಇದು ಹೊಯ್ಸಳ ದೇವಾಲಯಗಳಲ್ಲಿ
ಸಾಮಾನ್ಯ. ಆದರೆ ಹಾವೇರಿಯ ಸಿದ್ದೇಶ್ವರ ದೇವಾಲಯದಲ್ಲಿ ಅಷ್ಟ ಮಾತೃಕೆಯರನ್ನು
ಬಿಡಿಸಲಾಗಿದೆ. ಇಂತಹ ಮತ್ತೊಂದು ಉದಾಹರಣೆಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್
ಫಾಲ್ಸ್‌ನ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಾಣಬಹುದು. ನವರಂಗವು
ಸಾಮಾನ್ಯವಾಗಿ ಪೂರ್ವ ಅಥವಾ ದಕ್ಷಿಣ, ಕೆಲವೊಮ್ಮೆ ಎರಡೂ ದಿಕ್ಕುಗಳಲ್ಲಿ ಪ್ರವೇಶ
ದ್ವಾರಗಳನ್ನು ಹೊಂದಿರುತ್ತದೆ. ಕೆಲವೆಡೆ ನವರಂಗವು ದಕ್ಷಿಣ ಮತ್ತು ಉತ್ತರ ದಿಕ್ಕುಗಳಲ್ಲಿ
ಗರ್ಭಗೃಹಗಳನ್ನು ಒಳಗೊಂಡು ತ್ರಿಕೂಟ ದೇವಾಲಯವಾಗಿರುತ್ತದೆ. ಮತ್ತೆ ಕೆಲವೆಡೆ
ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಹೆಚ್ಚುವರಿ ಗರ್ಭಗೃಹಗಳಿದ್ದು, ದಕ್ಷಿಣದಲ್ಲಿ
ಪ್ರವೇಶದ್ವಾರ ವಿರುತ್ತದೆ. ನವರಂಗದ ಮಧ್ಯದಲ್ಲಿ ಚೌಕಾಕಾರದ ಅಥವಾ ವೃತ್ತಾಕಾರದ
ವೇದಿಕೆಯಿರುತ್ತದೆ. ಒಳ ಭಿತ್ತಿಯಲ್ಲಿ ಬಿಡಿಶಿಲ್ಪಗಳನ್ನಿಡಲು ಗೂಡುಗಳನ್ನು ಎರಡರಿಂದ
ಹತ್ತರವರೆಗೆ ನಿರ್ಮಿಸಿರುವುದನ್ನು ಕಾಣಬಹುದು. ಕೆಲವು ದೇವಾಲಯಗಳಲ್ಲಿ. ನವರಂಗದ
ನಂತರ ನಕ್ಷತ್ರಾಕಾರ ದಲ್ಲಿರುವ ಸಭಾಮಂಟಪವನ್ನು ಕಾಣುತ್ತೇವೆ. ಉದಾಹರಣೆಗೆ
ಹಾನಗಲ್ಲಿನ ತಾರಕೇಶ್ವರ ಮತ್ತು ಬಂಕಾಪುರದ ನಗರೇಶ್ವರ ದೇವಾಲಯಗಳು.
ಸಭಾಮಂಟಪದ ಸುತ್ತಲೂ ಕಕ್ಷಾಸನವಿದ್ದು, ಮುಖಮಂಟಪದಲೂ
ಮುಂದುವರೆಯುವುದು. ಇನ್ನು ಹೊರ ಭಿತ್ತಿ ಅಧಿಷ್ಠಾನದ ಮೇಲಿದ್ದು, ಅರ್ಧಕಂಭ ಮತ್ತು
ದೇವಕೋಷ್ಠಗಳ ರಚನೆಯನ್ನು ಒಳಗೊಂಡಿರುತ್ತದೆ. ಮೇಲಿರುವ ಶಿಖರವು ದ್ವಿತಲ ಅಥವಾ
ತಲವನ್ನು ಒಳಗೊಂಡಿದ್ದು, ಸುಖನಾಸದಿಂದ ಕೂಡಿರುತ್ತದೆ. ಕೆಲವು ಸುಂದರ
ಶಿಖರಗಳನ್ನು ಚೌಡಯ್ಯದಾನಪುರ(ರಾಣೆಬೆನ್ನೂರು ತಾ.), ನೀರಲಗಿ(ಶಿಗ್ಗಾವಿ ತಾ.),
ಅಬ್ಬಲೂರು(ಹಿರೇಕೆರೂರು ತಾ.), ಹಾವೇರಿ, ಗಳಗನಾಥ ಮತ್ತು ಹರಳಹಳ್ಳಿ (ಹಾವೇರಿ
ತಾ.) ಮುಂತಾದ ಸ್ಥಳಗಳ ದೇವಾಲಯಗಳಲ್ಲಿ ಕಾಣಬಹುದು. ಕಲ್ಯಾಣ ಚಾಲುಕ್ಯರ
ಕಾಲದಲ್ಲಿ ದೇವಾಲಯಗಳು ವಿಸ್ತರಣೆಗೊಂಡು, ಮಹಾದ್ವಾರ ನಿರ್ಮಾಣಕ್ಕೆ
ಮುಂದಾದವು. ಬಾಡಾ (ಶಿಗ್ಗಾವಿ ತಾ.) ದಲ್ಲಿ ನೆಲಸಮಗೊಂಡಿರುವ ರಂಗನಾಥ
ದೇವಾಲಯದ ಮುಂದೆ ಬಿದ್ದು ಹೋಗಿರುವ ಮಹಾದ್ವಾರವನ್ನು ಕಾಣಬಹುದು. ಈ
ರೀತಿಯ ಉದಾಹರಣೆಗಳು ಅನೇಕ ಕಡೆ ದೊರೆಯುತ್ತವೆ. ಶಿಗ್ಗಾವಿ ತಾಲೂಕಿನ ಬನ್ನಿಕೊಪ್ಪದ ಭೀಮೇಶ್ವರ ಗುಡಿ ಹಾಗೂ ಪಕ್ಕದ ಬನ್ನೂರು
ಗ್ರಾಮದ ಕಲೈಶ್ವರ ಗುಡಿಗಳಲ್ಲಿ ಇಟ್ಟಿಗೆ ಭಿತ್ತಿಯನ್ನು ಕಾಣುತ್ತೇವೆ. ರಾಷ್ಟ್ರಕೂಟರ
ಕಾಲದಲ್ಲಿ ಭಿ ರಚನೆಗಾಗಿ ಇಟ್ಟಿಗೆ ಬಳಸಲಾಗಿದೆ. ಉದಾಹರಣೆಗೆ ರಾಣೆಬೊನ್ನೂರು
ತಾಲೂಕಿನ ಹಿರೇಮಾಗನೂರು ಗ್ರಾಮದ ಕಲ್ಲೇಶ್ವರ ದೇವಾಲಯ. ಕಲ್ಯಾಣ ಚಾಲುಕ್ಯರ
ಕಾಲದಲ್ಲಿ ದ್ವಿಕೂಟ, ತ್ರಿಕೂಟ, ಚತುಷ್ಮಟ ಮತ್ತು ಪಂಚಕೂಟ ದೇವಾಲಯಗಳು ಸಹ
ನಿರ್ಮಾಣಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ದ್ವಿಕೂಟ, ತ್ರಿಕೂಟ, ಮತ್ತು ಪಂಚಕೂಟ
ದೇವಾಲಯಗಳನ್ನು ಕಾಣುತ್ತೇವೆ. ಹಾನಗಲ್ಲು ತಾಲೂಕಿನ ಅರಳೇಶ್ವರ ಗ್ರಾಮದ
ಕದಂಬೇಶ್ವರ ದೇವಾಲಯವನ್ನು ಪಂಚಕೂಟವಾಗಿ ವಿಸ್ತರಿಸಿ ದಾನ ನೀಡಿದ ಉಲ್ಲೇಖ
ಅಲ್ಲಿನ ಶಾಸನದಲ್ಲಿದೆ. ಇವರ ಕಾಲದಲ್ಲಿ ಪುರುಷ ದೇವಾಲಯಗಳು
ನಿರ್ಮಾಣಗೊಂಡವು. ರಾಜರು, ಸಾಮಂತರು, ಶ್ರೀಮಂತರು. ಅಧಿಕಾರಿಗಳು,
ಮಹಾಜನರು, ವಿದ್ವಾಂಸರು, ವರ್ತಕರು ಮತ್ತು ಜನಸಾಮಾನ್ಯರು ದೇವಾಲಯ ಗಳನ್ನು
ನಿರ್ಮಿಸಿರುವುದಕ್ಕೆ ಶಾಸನಾಧಾರಗಳಿವೆ. ಇದು ಜನರಲ್ಲಿದ್ದ ಧಾರ್ಮಿಕ ಆಸಕ್ತಿಯನ್ನು
ಹಾಗೂ ಆರ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದು. ಕಲ್ಯಾಣ ಚಾಲುಕ್ಯರ ಕಾಲದ
ದೇವಾಲಯಗಳು ಚಾಲುಕ್ಯ ಮತ್ತು ಹೊಯ್ಸಳ ಶೈಲಿಗಳ ಕೊಂಡಿಯಂತಿವೆ ಎಂದು
ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ನಾಗರ ಮತ್ತು ದ್ರಾವಿಡ ಶೈಲಿಯ
ಸಮಾಗಮವಿರುವ ಕಲ್ಯಾಣ ಚಾಲುಕ್ಯರ ದೇವಾಲಯಗಳ ಶೈಲಿಯನ್ನು ವೇಸರ ಎಂದು
ಕರೆಯುತ್ತಾರೆ.
ಕಲ್ಯಾಣ ಚಾಲುಕ್ಯರ ಕಾಲದ ಶಿವ ದೇವಾಲಯಗಳಲ್ಲಿ ಬಿಡಿಶಿಲ್ಪಗಳು ಸಾಮಾನ್ಯವಾಗಿ
ಕಂಡುಬರುತ್ತವೆ. ಶಿಲ್ಪಗಳಲ್ಲಿ ಗಣೇಶ, ಉಮಾಮಹೇಶ್ವರ, ಕಾರ್ತಿಕೇಯ,
ಮಹಿಷಮರ್ದಿನಿ, ಸಪ್ತಮಾತೃಕೆಯರ ಫಲಕ, ವಿಷ್ಣು, ಸೂರ್ಯ, ಚಂದ್ರ, ಭೈರವ.
ವೀರಭದ್ರ ಸರಸ್ವತಿ, ನಂದಿ ಮುಂತಾದ ಶಿಲ್ಪಗಳನ್ನು ಹೆಸರಿಸಬಹುದು. ಶಿಲ್ಪಗಳು,
ಹೊಯ್ಸಳ ಶಿಲ್ಪಗಳನ್ನು ನವಿರಾಗಿ ಕಾಣದಿದ್ದರೂ ಅಲಂಕೃತ ಪ್ರಭಾವಳಿ, ಲತಾಬಳ್ಳಿಗಳ
ಸೂಕ್ಷ್ಮ ಅಲಂಕರಣ ಮತ್ತು ರಚನೆಯಲ್ಲಿ ಪ್ರಮಾಣ ಬದ್ಧತೆಯನ್ನು ಹೊಂದಿವೆ. ಬಹುಶಃ
ಸಂಖ್ಯೆಯಲ್ಲಿ ಹೆಚ್ಚಳವಾದದ್ದರಿಂದಲೋ ಅಥವಾ ಶಿಲ್ಪಗಳಿಗೆ ಬಳಸಿದ ಕಲ್ಲಿನ
ಗುಣದಿಂದಲೋ ಹೊಯ್ಸಳ ಶಿಲ್ಪಗಳನ್ನು ಮೀರಿಸಲಾ ಗಲಿಲ್ಲವೆನಿಸುವುದು. ಆದರೆ
ಹೊಯ್ಸಳರು. ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದು, ಹೊಯ್ಸಳ ಶೈಲಿಯು ಚಾಲುಕ್ಯ
ಶೈಲಿಯಿಂದ ಪ್ರಭಾವಿತಗೊಂಡಿರುವುದು ನಿರ್ವಿವಾದ ಸಂಗತಿ. ಹಾಗೂ ಚಾಲುಕ್ಯ
ಶೈಲಿಯನ್ನು ಕರಾರುವಕ್ಕಾಗಿ ಶ್ರೀಮಂತಗೊಳಿಸಿದ ಕೀರ್ತಿ ಹೊಯ್ಸಳರದು.

 4.  ಹೊಯ್ಸಳರ ಕಾಲದ ದೇವಾಲಯಗಳು

ಹೊಯ್ಸಳರು ವಾಸ್ತು ಮತ್ತು ಶಿಲ್ಪ ಕ್ಷೇತ್ರಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆ. ಆ
ಕ್ಷೇತ್ರದಲ್ಲಿ ತಮ್ಮದೇ ಆದ ಕೆಲವು ಲಕ್ಷಣಗಳನ್ನು ಸೃಷ್ಟಿಸಿದರು. ಫರ್ಗ್ಯುಸನ್ ಮತ್ತು ಎನ್ಸೆಂಟ್ ಸ್ಮಿತ್ ಮುಂತಾದ ಕಲಾ ಇತಿಹಾಸಕಾರರು. ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಶೈಲಿಗಳು ಒಂದೇ ಎಂದು ಅಭಿಪ್ರಾಯಪಡುತ್ತಾರೆ. ಹಿರೇಕೆರೂರು ತಾಲೂಕಿನ
ನಾಗವಂದದ ಸಿದ್ದೇಶ್ವರ ದೇವಾಲಯ. ರಟ್ಟೆಹಳ್ಳಿ ಯ ಕದಂಬೇಶ್ವರ ದೇವಾಲಯ.ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿಯ ದೇವಾಲಯಗಳು ಮುಂತಾದವು ಹೊಯ್ಸಳರ ರಚನೆಗಳಾದರೂ ಕಲ್ಯಾಣ ಚಾಲುಕ್ಯರ ದೇವಾಲಯಗಳ ಶೈಲಿಯಲ್ಲಿವೆ. ಕೆಲವೆಡೆ ಹೊಯ್ಸಳ ದೇವಾಲಯಗಳನ್ನು ಶಾಸನ ಅಥವಾ ಅಲ್ಲಿರುವ ಶಿಲ್ಪಗಳ ಅಲಂಕರಣಗಳನ ಇಧರಿಸಿ ಗುರುತಿಸುವುದು ಅನಿವಾರ್ಯ. ಹಳೆಯ ಮೈಸೂರು ಪ್ರದೇಶದಲ್ಲಿ ಹೊಯ್ಸಳ ದೇವಾಲಯಗಳು ಭಿನ್ನವಾದ ಶೈಲಿಯಲ್ಲಿ ರೂಪುಗೊಂಡವು. ವಿಶೇಷವಾಗಿ ನಕ್ಷತ್ರಾಕಾರದ
ಜಗತಿಯ ಮೇಲೆ ದೇವಾಲಯಗಳನ್ನು ನಿರ್ಮಿಸಿದರು. ಹೊರ ಭಿತ್ತಿಯನ್ನು ಸೂಕ್ಷ್ಮ ಕೆತ್ತನೆಯ ಶಿಲ್ಪಪಟ್ಟಿಕೆಗಳಿಂದ ಅಲಂಕರಣಗೊಳಿಸಲಾಯಿತು. ಈ ತೆರನಾದ ದೇವಾಲಯ ಹಾವೇರಿ ಜಿಲ್ಲೆಯಲ್ಲಿ ಕಂಡುಬರುವುದಿಲ್ಲ. ನಿರ್ಮಾಣಗೊಂಡ ದೇವಾಲಯಗಳೆಲ್ಲ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿವೆ. ಕಲ್ಯಾಣ ಚಾಲುಕ್ಯರ ನಂತರ ಈ ಪ್ರದೇಶಕ್ಕಾಗಿ
ಹೊಯ್ಸಳ ರಿಗೂ ಮತ್ತು ದೇವಗಿರಿ ಸೇವುಣರಿಗೂ ನಿರಂತರವಾಗಿ ಯುದ್ಧಗಳು ನಡೆದವು.
ಬಹುಶಃ ಈ ಒಂದು ಕಾರಣದಿಂದ ಈ ಭಾಗದಲ್ಲಿ ಹೊಯ್ಸಳ ಶೈಲಿಯ ಮಹತ್ವದ
ದೇವಾಯಗಳು ನಿರ್ಮಾಣ ವಾಗಲಿಲ್ಲವೆನ್ನಬಹುದು. ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಬಂಧ ಹೊಂದಿದ್ದರಿಂದ ಎರಡೂ ವಾಸ್ತು ಶೈಲಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಗುರುತಿಸಬಹುದು. ಉದಾಹರಣೆಗೆ
ಅಲಂಕೃತ ಬಾಗಿಲುವಾಡಗಳು. ತಿರುಗಣೆ ಯಂತ್ರದ ಕಂಬಗಳು ಮತ್ತು ಜಾಲಂಧ್ರಗಳು. ಈ ದೇವಾಲಯಗಳ ದ್ವಾರಬಂಧದ ಲಲಾಟಬಿಂಬದಲ್ಲಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಮಕರ ತೋಷಿಣದ ಅಲಂಕಾರವನ್ನು ಕಾಣಬಹುದು. ಕೆಲವೆಡೆ ಅಂತರಾಳದ ಪ್ರವೇಶ ಭಾಗದಲ್ಲಿ ಎರಡು ಬಿಡಿ ಕಂಬಗಳು ಮೇಲೆ ಮಕರತೋರಣ ಫಲಕವನ್ನು
ಅಳವಡಿಸಿರುತ್ತಾರೆ. ಇಂತಹ ಅಲಂಕಾರಗಳನ್ನು ಕಲ್ಯಾಣ ಚಾಲುಕ್ಯರ ದೇವಾಲಯಗಳಲ್ಲೂ
ಕಾಣುತ್ತೇವೆ. ನವರಂಗದ ಮಧ್ಯದಲ್ಲಿರುವ ಕಂಬಗಳನ್ನು ಕಡೆತ ಯಂತ್ರದಿಂದ
ಮಾಡಲಾಗಿದ್ದು, ಬಳೆಗಳ ಮತ್ತು ಸೂಕ್ಷ್ಮ ಕೆತ್ತನೆಯ ಅಲಂಕರಣದಿಂದ ಕೂಡಿವೆ. ಭುವನೇಶ್ವರಿಯು ಸಾಮಾನ್ಯವಾಗಿ ಗೋಳಾಕಾರದಲ್ಲಿದ್ದು , ಉಬ್ಬುಶಿಲ್ಪಗಳ ರಚನೆಯನ್ನು ಒಳಗೊಂಡಿರುತ್ತದೆ. ಹಾವೇರಿ ಜಿಲ್ಲೆಯಲ್ಲಿರುವ ಹೊಯ್ಸಳ ದೇವಾಲಯಗಳು ಚತುರಸ್ರಾಕಾರದ ತಲವಿನ್ಯಾಸ. ಅಲ್ಲಲ್ಲಿ ಒಳ ಮತ್ತು ಹೊರ ಚಾಚಿದಂತೆ ಕಂಡುಬರುತ್ತದೆ. ಹೊರ ಭಿತ್ತಿಯಲ್ಲಿ ಅರ್ಧಕಂಬಗಳ ಮತ್ತು ದೇವಕೋಷ್ಟಗಳ ಅಲಂಕರಣವನ್ನು
ಕಾಣುತ್ತೇವೆ. ಈ ದೇವಾಲಯಗಳು ಮೊದಲೆ ತಿಳಿಸಿದಂತೆ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿವೆ.

 5.ವಿಜಯನಗರ ಕಾಲದ ದೇವಾಲಯಗಳು

ಹಾವೇರಿ ಪ್ರದೇಶದಲ್ಲಿ ವಿಜಯನಗರ ಕಾಲದ ದೇವಾಲಯಗಳು ಅಪರೂಪ. ಆದರೆ
ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ದಾರಗೊಳಿಸಿರುವುದು ಅಥವಾ
ವಿಸ್ತರಿಸಿರುವುದು ಕಂಡು ಬರುತ್ತದೆ. ಹೊಂಬಳಿ(ಹಾನಗಲ್ಲು ತಾ.) ಗಣೇಶ ಶಿಲ್ಪವು.
ಎತ್ತರದಲ್ಲಿ ಮತ್ತು ಗಾತ್ರದಲ್ಲಿ ಹಂಪೆಯ ಬೃಹತ್ ಗಣೇಶ ಶಿಲ್ಪಗಳನ್ನು ಹೋಲುತ್ತದೆ.
ಇದು. ತೆರೆದ ಬಯಲಿನಲ್ಲಿ ಎತ್ತರದ ಶಿಲಾವೇದಿಕೆಯ ಮೇಲಿದ್ದು, ದೇವಾಲಯವಿದ್ದ ಬಗೆಗೆ
ಸ್ಪಷ್ಟ ಮಾಹಿತಿ ಇಲ್ಲ. ಆದರೆ ಅಲ್ಲಿ ಬಿದಿ ರುವ ವಾಸ್ತು ಅವಶೇಷಗಳನ್ನು ಗಮನಿಸಿದರೆ
ಕನಿಷ್ಟ ಮಂಟಪವಾದರೂ ಇತ್ತೆಂಬುದನ್ನು ಗ್ರಹಿಸಬಹುದು. ಇದೇ ಊರಿನ ರಾಮೇಶ್ವರ
ದೇವಾಲಯದ ಅಧಿಷ್ಠಾನ ಪ್ರಾಚೀನ ರಚನೆಯಾಗಿದ್ದು, ವಿಜಯನಗರ ಕಾಲದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ದೇವರನ್ನು ಪುನರ್ ಪ್ರತಿಷ್ಠಾಪನೆ ಮಾಡಿದ ಸಂಗತಿ ಇಲ್ಲಿನ ಶಾಸನದಲ್ಲಿದೆ. ಹಾವೇರಿ ತಾಲೂಕಿನ ಸಂಗೂರಿನ ಶಾಸನ (ಕ್ರಿ. ಶ.
೧೪೦೭)ವೊಂದು. ಒಂದನೇ ದೇವರಾಯನ ಕಾಲದ್ದು. ಇದರಲ್ಲಿ ಕುಮಾರ ರಾಮನಾಥನ ಪ್ರತಿಮೆಯನ್ನು ಪ್ರತಿಷ್ಟಾಪಿಸಿದ ಸಂಗತಿಯಿದ್ದು, ದೇವಾಲಯ ನಿರ್ಮಿಸಿದ ಸೂಚನೆಯಿದೆ. ಕೆಲವು ಆಂಜನೇಯ ಶಿಲ್ಪಗಳು ವಿಜಯನಗರ ಕಾಲಕ್ಕೆ ಸೇರಿದ್ದರೂ ಗರ್ಭಗೃಹ ಮತ್ತು ಮುಂದಿನ ಸಭಾಮಂಟಪಗಳು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡಿವೆ. ಈ ದೇವಾಲಯಗಳಲ್ಲಿ ವಿಜಯನಗರ ಶೈಲಿಯನ್ನು ಪ್ರತಿಬಿಂಬಿಸುವ ಯಾವುದೇ ವಾಸ್ತು ರಚನೆಗಳು ಕಂಡುಬರುವುದಿಲ್ಲ. ಇನ್ನು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಈಶ್ವರ, ಆಂಜನೇಯ, ವೀರಭದ್ರ ಮತ್ತು ಬಸವಣ್ಣನ ದೇವಾಲಯಗಳು ಒಂದೇ ತೆರನಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪ ವನ್ನು ಒಳಗೊಂಡಿವೆ. ಸುಮಾರು ೧೯ ಮತ್ತು ೨೦ನೇ ಶತಮಾನದಲ್ಲಿ ಮೇಲೆ ಹೇಳಿದ ಆಂಜನೇಯ, ಬಸವಣ್ಣ, ಈಶ್ವರ ಮತ್ತು ಗ್ರಾಮದೇವತೆಗಳ ದೇವಾಲಯಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ಜಾತಿ ವ್ಯವಸ್ಥೆ ಬಿಗಿಗೊಂಡಂತೆ ಪ್ರತ್ಯೇಕ ದೇವಾಲಯಗಳು ರಚನೆಗೊಂಡವು. ಪ್ರಸ್ತುತ
ಅಧ್ಯಯನದಲ್ಲಿ ವಿಜಯನಗರೋತ್ತರ ಕಾಲದ ಮಹತ್ವದ ದೇವಾಲಯಗಳನ್ನು ದಾಖಲಿಸಲಾಗಿದೆ. ಉದಾಹರಣೆಗೆ ಶಿಗ್ಗಾವಿ ತಾಲೂಕಿನ ಅತ್ತಿಗೇರಿಯಲ್ಲಿರುವ ಆಂಜನೇಯ ದೇವಾಲಯ. ಇದರ ನಿರ್ಮಾಣದಲ್ಲಿ ಭಾರಿ ಗಾತ್ರದ ಮರದ ಕಂಬ, ತೊಲೆ, ಜಂತಿ ಮತ್ತು ಹಲಗೆಗಳನ್ನು ಬಳಸಲಾಗಿದೆ. ಬಯಲುಸೀಮೆಯಲ್ಲಿ ಈ ರೀತಿಯ ಮರದ ದೇವಾಲಯ ತುಂಬಾ ಅಪರೂಪ. ಹಾಗಾಗಿ ರಚನೆಯ ದೃಷ್ಟಿಯಿಂದ ಇದು ಮಹತ್ವದ ದೇವಾಲಯ. ಮೇಲೆ ಹೇಳಿದ ರಾಜಮನೆತನಗಳಲ್ಲಿದೆ. ಕಲಚೂರಿಗಳು ಮತ್ತು ದೇವಗಿರಿ ಸೇವುಣರು ಈ ಭಾಗದಲ್ಲಿ ದೇವಾಲಯಗಳನ್ನು ನಿರ್ಮಿಸಿರುವುದಕ್ಕೆ ಪುರಾವೆಗಳಿವೆ. ಆದರೆ ಅವೆಲ್ಲವೂ
ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿರುವುದರಿಂದ ಹಾಗೂ ನಿರ್ಮಾಣ ಕುರಿತಂತೆ ಶಾಸನಾಧಾರಗಳಿಲ್ಲದಿರುವುದರಿಂದ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.ಆದರೆ, ಇವರು ದೇವಾಲಯ ಗಳಿಗೆ ನೀಡಿದ ದಾನದತ್ತಿಗಳನ್ನು ತಿಳಿಸುವ ಶಾಸನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಈ ಪ್ರೋತ್ಸಾಹ ಪೋಷಣೆಗಳಿಂದಾಗಿ ದೇವಾಲಯಗಳು ಇನ್ನೂ ಹಲವು ಕಾಲ ಬದುಕುವಂತಾದವು, ಸಾಮಂತ ಮನೆತನಗಳಾದ ಹಾನಗಲ್ಲಿನ ಕದಂಬರು.
ಗುರು ಮುಂತಾದವರು ಸಹ ದೇವಾಲಯಗಳನ್ನೂ ನಿರ್ಮಿಸಿದ್ದಾರೆ. ವಿಜಯನಗರ ಮತ್ತು ವಿಜಯನಗರೋತ್ತರ ಕಾಲದ ಮಾಂಡಲಿಕರು ಮತ್ತು ಪಾಳೆಯಗಾರರು ಸಹ ದೇವಾಲಯಗಳನ್ನು ನಿರ್ಮಿಸಿದ ಬಗ್ಗೆ ಶಾಸನಾಧಾರಗಳುಂಟು.
ಬಸದಿಗಳು ಜಿಲ್ಲೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಬಸದಿಗಳು ಕಂಡು ಬರುತ್ತವೆ. ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದಲ್ಲಿರುವ ಪಾರ್ಶ್ವನಾಥ ಬಸದಿಯನ್ನು ಗಂಗರ ಬೊಮ್ಮಿ ಸೆಟ್ಟಿಯು ನಿರ್ಮಿಸಿ, ದಾನ ಮಾಡಿದ ಉಲ್ಲೇಖ ಇಲ್ಲಿನ ಕ್ರಿ. ಶ. ೧೧೨೩ರ ಶಾಸನದಲ್ಲಿದೆ. ಹಾನಗಲ್ಲು ತಾಲೂಕಿನ ಕರಿಕುದುರಿ ಗ್ರಾಮದಲ್ಲಿದ್ದ ಪಾರ್ಶ್ವನಾಥ
ಬಸದಿಯು ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಪಾರ್ಶ್ವನಾಥ ಶಿಲ್ಪವು ಮೂಲಸ್ಥಳದಲ್ಲೇ
ಇದೆ. ಇದಕ್ಕೆ ಹೆಂಚಿನ ಮನೆಯನ್ನು ನಿರ್ಮಿಸಿದ್ದಾರೆ. ಇಲ್ಲಿನ ಶಾಸನವೊಂದು ಜಗದೇಕಮಲ್ಲನ ಕಾಲದ್ದು. ಮಹಾವಡ್ಡ ವ್ಯವಹಾರಿ ಕಲ್ಲಿ ಸೆಟ್ಟಿಯು ಕರೆಗುದುರೆಯಲ್ಲಿ ವಿಜಯಪಾರ್ಶ್ವ ಜಿನೇಂದ್ರ ಬಸದಿಯನ್ನು ಕಟ್ಟಿಸಿ, ದಾನ ಮಾಡಿದ ಉಲ್ಲೇಖವಿದೆ.
ಇದರಿಂದ ಪಾಶ್ವನಾಥ ಪ್ರತಿಮೆಯು ಕಲ್ಯಾಣ ಚಾಲುಕ್ಯರ ಕಾಲದ್ದೆಂದು ಸ್ಪಷ್ಟವಾಗುವುದು.
ಇದೇ ತಾಲೂಕಿನ ಯಳವಟ್ಟಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಚಂದ್ರನಾಥ ಬಸದಿ
ಇದೆ. ಇದು ಇತ್ತೀಚೆಗೆ ಜೀರ್ಣೋದ್ದಾರ ಗೊಂಡಿದೆ. ರಾಣೆಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿರುವ ಸೋಮೇಶ್ವರ ಗುಡಿ ಮೂಲತಃ ಬಸದಿ, ದ್ವಾರದ ಲಲಾಟಬಿಂಬದಲ್ಲಿ ಜಿನಬಿಂಬವನ್ನು ಕಾಣಬಹುದು. ಇಲ್ಲಿನ ಶಾಸನಗಳು ಕಲಚೂರಿ ಬಿಜ್ಜಳ
ಮತ್ತು ಸೋವಿದೇವನ ಕಾಲಕ್ಕೆ ಸೇರಿದ್ದು. ಜೈನಮುನಿ ಹಾಗೂ ಕಂತಿಯರ ಸತ್ರಕ್ಕೆ ಬಿಟ್ಟು
ಭೂದಾನವನ್ನು ಮತ್ತು ಗೊಟ್ಟಿಗಡಿ ಬಸದಿಗೆ ನೀಡಿದ ಸುಂಕದಾನವನ್ನು ತಿಳಿಸುತ್ತವೆ. ಇನ್ನು
ಕೆಲವು ಗ್ರಾಮಗಳಲ್ಲಿ ಜಿನಬಿಂಬವಿರುವ ಶಾಸನಗಳು ಮತ್ತು ಕಲ್ಲುಗಳು ಮಾತ್ರ ದೊರೆಯುತ್ತವೆ.

ಮಠಗಳು
ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ ಮತ್ತು ಹುಲಗೂರಿನಲ್ಲಿ ಹಳೆಯ ಮಠಗಳ ಕಟ್ಟಡಾವಶೇಷಗಳು ಕಂಡುಬರುತ್ತವೆ. ಹಿರೇಬೆಂಡಿಗೇರಿಯಲ್ಲಿರುವ ಕೋರಧಾನ್ಯ ಮಠಕ್ಕೆ
ಬಿಳಿಗೆಯ ಘಂಟೆ ಒಡೆಯನು ಭೂದಾನ ನೀಡಿದ ಉಲ್ಲೇಖ ಇಲ್ಲಿನ ಶಾಸನದಲ್ಲಿದೆ. ಇದರ
ಕಾಲ ಸುಮಾರು ೧೫ನೆಯ ಶತಮಾನ ಎನ್ನಲಾಗಿದೆ. ಹುಲಗೂರಿನ ಹೊರವಲಯದಲ್ಲಿರುವ ಕಲ್ಮಠವು ಸುಮಾರು ೧೬ನೆಯ ಶತಮಾನದ ರಚನೆ. ಇಲ್ಲಿ ಅಳವಡಿಸಿರುವ ಕಂಬಗಳು, ಹುಲಗೂರಿನಲ್ಲಿದ್ದ ಕಲ್ಯಾಣ ಚಾಲುಕ್ಯರ ಕಾಲದ ಗವರೇಶ್ವರ ದೇವಾಲಯಕ್ಕೆ ಸಂಬಂಧಿಸಿವೆ. ಕಂಬಗಳ ಮೇಲಿರುವ ಶಾಸನದಲ್ಲಿ ಗವರೇಶ್ವರ ದೇವಾಲಯದ
ಉಲ್ಲೇಖವುಂಟು.

ಮಸೀದಿಗಳು:
ಹಾವೇರಿ ಜಿಲ್ಲೆಯ ಕೋಳೂರು, ಸವಣೂರು, ಶಿಗ್ಗಾವಿ ತಾಲೂಕಿನ ಋರ್ಷಾಪುರ, ಬಾಡ, ಮುನವಳ್ಳಿ ಮತ್ತು ಹಾನಗಲ್ಲು ತಾಲೂಕಿನ ಅಲ್ಲಾಪುರದಲ್ಲಿ ಮಸೀದಿಗಳು
ಕಂಡುಬರುತ್ತವೆ. ಇವುಗಳೆಲ್ಲ ಸವಣೂರು ನವಾಬರ ಕಾಲದಲ್ಲಿ ನಿರ್ಮಾಣಗೊಂಡಿವೆ. ಗುಮ್ಮಟ ಮತ್ತು ಕಮಾನುಗಳ ಅಲಂಕರಣವಿರುವ ಮಸೀದಿಗಳು ಮುಂಭಾಗದಲ್ಲಿ ಜಾಲಂಧ್ರಗಳನ್ನು ಒಳಗೊಂಡಿವೆ. ಒಳಭಾಗದಲ್ಲಿ ಸುಂದರವಾದ ಮಿಹಿರಾಬ್‌ನ
ರಚನೆಯುಂಟು. ಹೊರಗೆ ಮೇಲ್ಬಾಗದಲ್ಲಿರುವ ಮಿನಾರ್‌ಗಳ ರಚನೆಯು ಮಸೀದಿಗಳ
ಸೌಂದರ್ಯವನ್ನು ಹೆಚ್ಚಿಸಿವೆ. ಬಾಡ ಮಸೀದಿಯ ಗುಮ್ಮಟವು ಬಿಜಾಪುರದ ಗುಮ್ಮಟಗಳ
ಶೈಲಿಯಲ್ಲಿದೆ. ತಳದಲ್ಲಿ ಕಮಲದಳಗಳ ಅಲಂಕರಣವಿದೆ. ಅಲ್ಲಾಪುರದ ಮಸೀದಿಯ
ಪ್ರವೇಶಮಂಟಪದಲ್ಲಿ ವಿಜಯನಗರ ಶೈಲಿಯ ಬೋದಿಗೆಗಳನ್ನು ಕಾಣುತ್ತೇವೆ. ಕೆಲವು
ಮಸೀದಿಗಳ ಮುಂಭಾಗದಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳು ಕಂಡುಬರುತ್ತವೆ.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!