ಹಾವೇರಿ ಜಿಲ್ಲೆಯ ಮಾಂಡಳಿಕ ಅರಸು ಮನೆತನಗಳು- ವೈ. ಮದ್ದಾನಸ್ವಾಮಿ.

ಮೊದಲು ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹಾವೇರಿ ಜಿಲ್ಲೆ ದಿನಾಂಕ 24-08-1997 ರಂದು ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪಗೊಂಡಿತು. ಸದ್ಯ ಹಾವೇರಿ ಜಿಲ್ಲೆಯು ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾಂವಿ, ಹಾನಗಲ್ಲು, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಹಾವೇರಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡ ವಿಶಾಲ ಜಿಲ್ಲೆಯಾಗಿದೆ. ಇದು 4823 ಚದರ ಕಿ. ಮೀ. ವಿಸ್ಥೀರ್ಣವನ್ನು ಹೊಂದಿದ್ದು, ಮಲೆನಾಡು, ಅರೆಮಲೆನಾಡು, ಮತ್ತು ಬಯಲುಸೀಮೆಗಳಿಂದ ಕೂಡಿದೆ. 

ಹಾವೇರಿ ಜಿಲ್ಲೆಯು ಧಾರವಾಡ, ಗದಗ, ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ ಮತ್ತು ವಿಜಯನಗರ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಹಾವೇರಿ ಜಿಲ್ಲಾ ಪ್ರದೇಶವು ಕಾಲಕಾಲಕ್ಕೆ ಕರ್ನಾಟಕವನ್ನಾಳಿದ ಅನೇಕ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿತೆಂದು ಅಲ್ಲಿಯ ಶಾಸನಗಳು ಮತ್ತು ಸಾಹಿತ್ಯ ಗ್ರಂಥಗಳು ದೃಢಪಡಿಸುತ್ತವೆ. ಹಾಗೆಯೇ ಈ ಅರಸು ಮನೆತನಗಳ ಅಧೀನದಲ್ಲಿ ಕೆಲವಾರು ಮಾಂಡಳಿಕರು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಆಳ್ವಿಕೆ ಮಾಡಿದ ಕುರುಹುಗಳಾಗಿ ವಿಫುಲ ಆಕರಗಳು ದೊರೆಯುತ್ತವೆ. ಪ್ರಮುಖವಾಗಿ ಹಾವೇರಿ ಜಿಲ್ಲೆಯಲ್ಲಿ ದೊರೆಯುವ ಶಾಸನಗಳನ್ನು ಅವಲೋಕಿಸಿ, ಪೂರಕ ಸಾಹಿತ್ಯ ಕೃತಿಗಳನ್ನು ಬಳಸಿಕೊಂಡು ಪ್ರಸ್ತುತ ಸಂಶೋಧನಾ ಲೇಖನವನ್ನು ಸಿದ್ಧಪಡಿಸಲಾಗಿದೆ.

1. ಬಾಸವೂರಿನ ಸೇನವಾರರು
ಇವರು ಎಂಟನೆಯ ಶತಮಾನದಿಂದ ಹನ್ನೊಂದನೆಯ ಶತಮಾನದ ಪೂರ್ವದವರೆಗೆ ಆಳ್ವಿಕೆ ಮಾಡಿದರೆಂದು ಶಾಸನಾಧಾರಗಳು ತಿಳಿಸುತ್ತವೆ. ಇವರು ತಮ್ಮನ್ನು ಹೇಮಕೂಟ ಪುರಾಧಿನಾಥರೂ, ಕೂಡಲೂರು ಪುರಮೇಶ್ವರರು, ಮೃಗೇಂದ್ರ ಲಾಂಛನರು, ಪಣಿಧ್ವಜ ವಿರಾಜಮಾನರು, ಖಚರ ತ್ರಿಣೇತ್ರರೆಂದು ಕರೆದುಕೊಂಡಿದ್ದಾರೆ. ಸೇನವಾರ ಅರಸರು ಬೇರೆ ಬೇರೆ ಆಡಳಿತ ವಿಭಾಗಗಳಲ್ಲಿ ಆಳ್ವಿಕೆ ಮಾಡುತ್ತಿದ್ದ ಬಗ್ಗೆ ತಿಳಿದುಬಂದರೂ ಬಾಸವೂರ-140ನ್ನು ಆಳ್ವಿಕೆ ಮಾಡಿದ ಮೊದಲ ನಾಳ್ಗಾವುಂಡನ ಉಲ್ಲೇಖ ಬರುವುದು ದೇವಗಿರಿ ಶಾಸನದಲ್ಲಿ. ಈ ಶಾಸನವು ಸೇನಮಲ್ಲರ ಕಣ್ಣಮನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಈತನ ನಂತರ ಮಲ್ಲಪ, ನೆಲ್ಲಿಗ ಮತ್ತು ವಜ್ಜಯ್ಯ ಆಳಿದರು. ಕನ್ನೇಶ್ವರ ಶಾಸನವು “ಶ್ರೀಮತ್ಸೇನ ಮಲ್ಲರ ವಜ್ಜಯ್ಯಂ ಬಾಸವೂನ್ರೂಲ್ವತ್ತು"  ಎಂದು ಉಲ್ಲೇಖಿಸುತ್ತದೆ. ಬಾಸವೂರು-140 ಆಳಿದ ಸೇನವಾರರ ಇನ್ನೊಬ್ಬ ಆರಸನೆಂದರೆ ಕಣ್ವ(ಕಣ್ನಮ). ಬಿದರಗಡ್ಡಿ ಶಾಸನವೊಂದು

 “ಬಾಸವೂರ ನೂರು ನಾಲ್ವತ್ತು ಸಕಲಕ್ಕೆಯ್ದೆ ಸೇನಮಲ್ಲರ ಗೋತ್ರೋದ್ಭಾನೆಯ... ಮನ್ನೆಯ ಕೇಸರಿ ಮನ್ನೆಯನೆನಿಪ್ಪಿನಂ ಕಣ್ವನೃಪಂ” ಎಂದು ಉಲ್ಲೇಖಿಸುತ್ತದೆ.

ಕಬ್ಬೂರ ಶಾಸನವು ಕಣ್ವನು ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನ ಅಧೀನನಾಗಿ(“ಸೇನಮಲ್ಲರ ಕಣ್ನಮಂ ಬಾಸವೂರ ನೂ¾ನಾಲ್ವತ್ತರ್ಕಂ ನಾಳ್ರ್ಗಾವುಣ್ಡ”) ಆಳುತ್ತಿದ್ದ ಬಗ್ಗೆ ತಿಳಿಸುತ್ತದೆ. ಕ್ರಿ.ಶ.1028ರ ಕುಳೇನೂರು ಶಾಸನ “ಬನವಾಸಿ ದೇಶಕ್ಕೆ ಅಗ್ಗಳಂ ಎನಿಸಿದ ಬಾಸವೂರು ನೂರು ನಲ್ವತ್ತಕ್ರ್ಕಂ ವಿನಯನ ವಿಳಾಸಂ ಕಣ್ನಮನ ಇಂಬಿನೊಳ್‍ನ್ನಾಳ್ಗಾಮುಣ್ಡಗೆಯುತ್ತಿರೆ” ಎಂದು ಕಣ್ನಮನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಸೇನವಾರರು ಹನ್ನೊಂದನೆಯ ಶತಮಾನದ ಉತ್ತರಾರ್ಧದಲ್ಲಿ ಬಾಸವೂರ ಮೇಲೆ ಹಿಡಿತವನ್ನು ಕಳೆದುಕೊಂಡಂತೆ ತೋರುತ್ತದೆ. ಈ ವಂಶದ ಮುಂದಿನ ದೊರೆಗಳಾದ ಜೀವಿತವಾರ ಜಿಮೂತ ವಾಹನ ಮತ್ತು ಮಾರಸಿಂಘರು ಶಿವಮೊಗ್ಗ ಜಿಲ್ಲೆಯ ಪ್ರದೇಶದಲ್ಲಿ ಆಳ್ಳಿಕೆ ಮಾಡುತ್ತಿದ್ದ ಬಗ್ಗೆ ತಿಳಿದುಬರುತ್ತದೆ. ಆನಂತರ ಈ ಭಾಗದ ಮೇಲೆ ಖಚರರು ತಮ್ಮ ಆಳ್ಳಿಕೆಯನ್ನು ಸ್ಥಾಪಿಸಿದರು.

2. ಚಲ್ಲಕೇತನರು
ಕ್ರಿ.ಶ.830 ರಿಂದ 945ರ ವರೆಗೆ ಸುಮಾರು 115 ವರ್ಷಗಳಕಾಲ ರಾಷ್ಟ್ರಕೂಟರ ಮಹಾಮಂಡಳೇಶ್ವರರಾಗಿ ಬನವಾಸಿ-12000ವನ್ನು ಒಳಗೊಂಡಂತೆ ಇತರ ಭಾಗಗಳಮೇಲೆ ಚಲ್ಲಕೇತನ ಮನೆತನದ ಆಳ್ವಿಕೆಯಿತ್ತು. ಐತಿಹಾಸಿಕ ಬಂಕಾಪುರ ಇವರ ರಾಜಧಾನಿಯಾಗಿತ್ತು. ‘ಗುಣಭದ್ರಾಚಾರ್ಯನ ಉತ್ತರಪುರಾಣ’, ‘ನಾಗವರ್ಮನ ಕಾವ್ಯಾವಲೋಕನ’, ‘ಶ್ರೀವಿಜಯನ ಕವಿರಾಜಮಾರ್ಗ’ ಮುಂತಾದ ಸಮಕಾಲೀನ ಕೃತಿಗಳು ಹಾಗೂ ಹಾವೇರಿ ಜಿಲ್ಲೆಯ ಶಾಸನಗಳು ಚಲ್ಲಕೇತನ ಮನೆತನದ ಮೇಲೆ ಬೆಳಕು ಚೆಲ್ಲುತ್ತವೆ. ಈ ಮನೆತನದ ಪ್ರಖ್ಯಾತ ಅರಸ ಬಂಕೇಯನು ಅಮೋಘವರ್ಷನ ಮಾಂಡಳಿಕನಾಗಿ ಬನವಾಸಿ-12000ವನ್ನು ಆಳುತ್ತಿದ್ದನೆಂದು ಹೇಳಲಾಗುತ್ತದೆ. ಬಂಕೇಯನು ಬಂಕಾಪುರವನ್ನು ಕೇಂದ್ರವಾಗಿಸಿಕೊಂಡು ಸುಮಾರು 30 ಸಾವಿರ ಗ್ರಾಮಗಳನ್ನೊಳಗೊಂಡ ಪ್ರಾಂತವನ್ನು ಆಳುತ್ತಿದ್ದನೆಂದು ಕ್ರಿ.ಶ.874ರ ನಿಡಗುಂದಿ ಶಾಸನ, ಕ್ರಿ.ಶ.859ರ ಅರಿಷಿಣಗುಪ್ಪಿ ಶಾಸನ ಮತ್ತು ಚಿಲ್ಲೂರು ಶಾಸನಗಳು ಉಲ್ಲೇಖಿಸುತ್ತವೆ. ಬಂಕೇಯನ ಕಾಲಾಧಿಯಲ್ಲಿ ಅವನ ಮಗನಾದ ಕುಂದಟ್ಟೆಯು ನಿಡಗುಂನ್ದ-12ನ್ನು ಆಳುತ್ತಿದ್ದನು. ಮಂತಗಿ ಶಾಸನ ಈತನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಕ್ರಿ.ಶ.945ರ ಕ್ಯಾಸನೂರು ಶಾಸವೊಂದು ಚಲ್ಲಕೇತನವಂಶದ ಮಾಂಡಳಿಕನೊಬ್ಬ ಬನವಾಸಿಯನ್ನಾಳುತ್ತಿದ್ದನೆಂದು ಉಲ್ಲೇಖಿಸುತ್ತದೆ. ‘ಗುಣಭದ್ರಾಚಾರ್ಯನ ಉತ್ತರಪುರಾಣ’ದಲ್ಲಿ ಬಂಕೇಯನನ್ನು ‘ಚಲ್ಲಿಕೇತನ’ ಎಂದು, ಕುಂದಟ್ಟಿಯನ್ನು ‘ಚಲ್ಲದ್ವಜ’ ಎಂದು ಹೊಗಳಲಾಗಿದೆ.    

ಬಂಕೇಯನ ಎರಡನೆಯ ಮಗನಾದ ಲೋಕಾದಿತ್ಯನು ಇಮ್ಮಡಿ ಕೃಷ್ಣನ ಕಾಲದಲ್ಲಿ ಬನವಾಸಿ-12000, ಪಲಸಿಗೆ-12000, ಮಾನ್ಯಖೇಟ-6000, ತರ್ದವಾಡಿ-1000, ಕೊಳನೂರು-30, ಲೋಕಾಪುರ-12, ತೊರಗಲೆ-60 ಪ್ರಾಂತಗಳನ್ನು ಮಾಂಡಳಿಕನಾಗಿ ಆಳುತ್ತಿದ್ದನು. ಶಿಗ್ಗಾಂವಿ ತಾಲೂಕಿನ ಕ್ರಿ.ಶ.896ರ ಗುಡ್ಡದಚೆನ್ನಾಪುರ ಶಾಸನ ಮತ್ತು ಶಬನೂರು ಶಾಸನಗಳು ಲೋಕದಿತ್ಯನ ಆಳ್ವಿಕೆಯನ್ನು ಉಲ್ಲೇಖಿಸುತ್ತವೆ. ಈತನ ಆಳ್ವಿಕೆಯನ್ನು ಉಲ್ಲೇಖಿಸುವ ಶಾಸನಗಳು ಕುಣಿಮೆಳ್ಳಳ್ಳಿ, ಹಲಸೂರು, ಮಂತಗಿ, ಸಿಡೆನೂರು, ಅಣಜಿ, ಶಿರಗಂಬಿ, ಹೊನ್ನತ್ತಿ, ಮಾಸಣಗಿ ಮತ್ತು ಬ್ಯಾಡಗಿಗಳಲ್ಲಿ ದೊರೆಕಿವೆ. ಲೋಕಾಧಿತ್ಯನ ಸಹೋದರನಾದ ಮಮ್ಮೆಚರಗನು ಕುನ್ದವೂರ-30ರಲ್ಲಿ ಅಳ್ವಿಕೆ ಮಾಡುತ್ತಿನೆಂದು ತಿಳಿದುಬರುತ್ತದೆ. 

3. ಸಗರ(ಮಣಲೆ) ಮನೆತನ
ಸಗರ ಅರಸರು ಹತ್ತನೆಯ ಶತಮಾನದ ನಂತರ ರಾಷ್ಟ್ರಕೂಟ ಮತ್ತು ಕಲ್ಯಾಣದ ಚಾಲುಕ್ಯ ಮನೆತನಗಳ ಮಾಂಡಳಿಕರಾಗಿ ಪುಲಿಗೇರಿ-300ನ್ನು ಆಳುತ್ತಿದ್ದರು. ಗಾಡಿಗ ಎಂಬುವವನು ಈ ಮನೆತನದ ಮೊದಲ ಅರಸ. ಈತನು ರಾಷ್ಟ್ರಕೂಟರ ಅಧೀನದಲ್ಲಿ ಪುಲಿಗೇರಿ-300ರನ್ನು ಆಳುತ್ತಿದ್ದನು. ಕ್ರಿ.ಶ.866ರ ಶಿಗ್ಗಾಂವ ಶಾಸನ ಕುಪ್ಪೆಯರಸನು ರಾಷ್ಟ್ರಕೂಟರ ಮಹಾಮಂಡಳೇಶ್ವರನಾಗಿ ಪುಲಿಗೇರಿ-300ನ್ನು ಆಳುವಾಗ, ಮಣಲೆಯರ ಗಾಡಿಗನು ಪುಲಿಗೇರಿಯಲ್ಲಿ ನಾಳ್ಗಾವುಂಡಗೈಯುತ್ತಿದ್ದನೆಂದು ಉಲ್ಲೇಖಿಸುತ್ತದೆ. ಗಾಡಿಗನ ನಂತರ ಇರಿವಬೆಡಂಗ ಮಾರಸಿಂಗದೇವ ಮತ್ತು ಒಂದನೆಯ ಜಯಕೇಶಿ ಆಳಿದರು.

ಕ್ರಿ.ಶ.1038ರ ಮತ್ತು ಹನ್ನೊಂದನೆಯ ಶತಮಾನದ ಹುಲುಗೂರಿನ ಎರಡು ಶಾಸನಗಳು ಕಲ್ಯಾಣ ಚಾಲುಕ್ಯರ ಮಹಾಮಂಡಳೇಶ್ವರನಾಗಿ ವಾವಣರಸ ಪುಲಿಗೇರಿ-300 ಮತ್ತು ಬೆಳ್ವೊಲ-300ಗಳನ್ನು ಆಳುವಾಗ, ಆತನ ಅಧೀನದಲ್ಲಿ ಸಗರ ಮನೆತನದ ಇರಿವಬೆಡಂಗ ಮಾರಸಿಂಗ ಮತ್ತು ಒಂದನೆಯ ಜಯಕೇಶಿ ಪುಲಿಗೇರಿ-300ರರ ನಾಳ್ಗಾವುಂಡಗೈಯುತ್ತಿದ್ದರೆಂದು ಉಲ್ಲೇಖಿಸಿವೆ. ಶಿಗ್ಗಾಂವ ಮತ್ತು ಹುಲುಗೂರು ಶಾಸನಗಳು ಸಗರ ಮನೆತನದ ಇಮ್ಮಡಿ ಜಯಕೇಶಿ ಹಾಗೂ ಆತನ ಮಗ ಇಂದ್ರಕೇಶಿ ಮತ್ತು ಮುಮ್ಮಡಿ ಜಯಕೇಶಿ ಎಂಬ ಅರಸರು ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಮಾಂಡಳಿಕರಾಗಿ ಆಳುತ್ತಿದ್ದ ವಿಚಾರವನ್ನು ತಿಳಿಸುತ್ತವೆ. 

4. ಹಾನಗಲ್ಲು ಕದಂಬರು
ಬಾದಾಮಿ ಚಾಲುಕ್ಯರು ಕದಂಬರನ್ನು ಸೋಲಿಸಿ ಬನವಾಸಿಯನ್ನು ವಶಪಡಿಸಿಕೊಂಡ ನಂತರ ಕದಂಬ ಮನೆತನವು ಅನೇಕ ಶಾಖೆಗಳಾಗಿ ಒಡೆದು, ಗೋವಾ ಮತ್ತು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಳ್ವಿಕೆ ಮಾಡಿದ್ದು ಕಂಡುಬರುತ್ತದೆ. ಆ ಶಾಖೆಗಳಲ್ಲಿ ಪ್ರಮುಖವಾದವುಗಳೆಂದರೆ ಗೋವಾ ಕದಂಬರು, ಹಾನಗಲ್ ಕದಂಬರು, ನೂರುಂಬಾಡದ ಕದಂಬರು, ನಾಗರಖಂಡ ಕದಂಬರು, ಬಯಲುನಾಡು ಕದಂಬರು, ಚಂದಾವರ ಕದಂಬರು ಮತ್ತು ಕರಡಿಕಲ್ ಕದಂಬರು. ಹಾನಗಲ್ ಕದಂಬರು ಆಯಾ ಕಾಲಕ್ಕೆ ಸಾರ್ವಭೌಮರಾಗಿ ಆಳಿದ ಅರಸು ಮನೆತನಗಳ ಸಾಮಂತರಾಗಿ ಹಾನಗಲ್-500 ಕಂಪಣವನ್ನು ಆಳ್ವಿಕೆ ಮಾಡಿದ್ದಾರೆ. ಹಾನಗಲ್ಲನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ ಇವರು ಹತ್ತನೆಯ ಶತಮಾನದ ಉತ್ತರಾರ್ಧದಿಂದ, ಹದಿಮೂರನೆಯ ಶತಮಾನದ ಉತ್ತರಾರ್ಧದವರೆಗೆ ಆಳ್ವಿಕೆ ಮಾಡಿದ್ದಾರೆ. ಬನವಾಸಿ ಕದಂಬರ ಉತ್ತರಾಧಿಕಾರಿಗಳೆಂದು ಹೇಳಿಕೊಂಡ, ಇವರು ರಾಷ್ಟ್ರಕೂಟರ ಕಾಲದಲ್ಲಿಯೇ ಬನವಾಸಿ-12000 ಮತ್ತು ಪಾನುಂಗಲ್-500ರನ್ನು ಆಳುತ್ತಿದ್ದರು. ಈ ಶಾಖೆಯ ಚಟ್ಟಯ್ಯದೇವನು ಕ್ರಿ.ಶ.869ರಲ್ಲಿ ರಾಷ್ಟ್ರಕೂಟರ ಮಾಂಡಳಿಕನಾಗಿ ಆಳುತ್ತಿದ್ದ ವಿಷಯವನ್ನು ಸೋಮನಹಳ್ಳಿ (ಕಾರವಾರ ಜಿಲ್ಲೆ) ಶಾಸನ ತಿಳಿಸುತ್ತದೆ. ಮುಂದೆ ಚಟ್ಟಯ್ಯನ ಮಗನಾದ ಜಯಸಿಂಹನ ಮೊಮ್ಮಗ ಕೀರ್ತಿವರ್ಮನು ಬನವಾಸಿ, ಹಾನಗಲ್‍ಗಳನ್ನು ಕ್ರಿ.ಶ.1068 ರಿಂದ 1071ರ ವರೆಗೆ ಆಳಿದ. ಈ ಕೀರ್ತಿವರ್ಮನೊಂದಿಗೆ ಈತನ ಸಹೋದರನಾದ ಎರಡನೆಯ ಚಟ್ಟಯ್ಯ ಜಂಟಿಯಾಗಿ ಆಳುತ್ತಿದ್ದನೆಂದು ತಿಳಿದುಬರುತ್ತದೆ. ಚಾಲುಕ್ಯ ಇಮ್ಮಡಿ ಸೋಮೇಶ್ವರ ಮತ್ತು ಆರನೆಯ ವಿಕ್ರಮಾದಿತ್ಯರ ಉತ್ತರಾಧಿಕಾರತ್ವದ ಕಲಹದಲ್ಲಿ ಈ ಕೀರ್ತಿವರ್ಮ, ಚಟ್ಟಯ್ಯ ಮತ್ತು ಇನ್ನೊಬ್ಬ ಸಹೋದರ ತೈಲ ಎಂಬುವವರು ಭಾಗವಹಿಸಿದ್ದಂತೆ ತೋರುತ್ತದೆ.

ಮುಂದೆ ಆರನೆಯ ವಿಕ್ರಮಾದಿತ್ಯನು ಹಾನಗಲ್ಲು ಕದಂಬರ ಜಯಸಿಂಹನ ಇನ್ನೊಬ್ಬ ಮಗನಾದ ಶಾಂತಿವರ್ಮನಿಗೆ ಪಾನುಂಗಲ್-500ರ ಅಧಿಕಾರವನ್ನು ಒಪ್ಪಿಸಿದ. ಇವನೊಂದಿಗೆ ಈತನ ಎರಡನೆಯ ಮಗ ಇಮ್ಮಡಿ ತೈಲನು ಸಹ ಆಡಳಿತದಲ್ಲಿ ಭಾಗಿಯಾಗಿದ್ದನು. ಮುಂದೆ ಶಾಂತಿವರ್ಮನು ಬಂಕಾಪುರದಲ್ಲಿ ಆಳ್ವಿಕೆ ಪ್ರಾರಂಭಿಸಿದ್ದರಿಂದ ಇಮ್ಮಡಿ ತೈಲನು ಬನವಾಸಿ ಮತ್ತು ಹಾನಗಲ್ಲುಗಳಲ್ಲಿ ಆಳಲಾರಂಭಿಸಿದ. ಒಂದನೆಯ ತೈಲನ ಶಾಸನವೊಂದು ಮಂತಗಿಯಲ್ಲಿ ದೊರಕಿದ್ದು, ಆತನು ಬನವಾಸಿ-12000ವನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಈತನ ಕಾಲದ ಶಾಸನಗಳು ಅರಳೇಶ್ವರ, ಬಾಳಂಬೀಡ ಮತ್ತು ಸಾವಿಕೇರಿಗಳಲ್ಲಿ ಕಂಡುಬಂದಿವೆ. ಹಾನಗಲ್ಲು ಕದಂಬರ ಶಾಂತಿವರ್ಮನಿಗೆ ಸಂಬಂಧಿಸಿದ ಶಾಸನವೊಂದು ಅರಳೇಶ್ವರದಲ್ಲಿ ಕಂಡುಬಂದಿದ್ದು, ಈತನ ಅಧೀನದಲ್ಲಿ ರಾಮಸಿಂಗಿಪಂಡಿತ ಎಡವೊಳಲ್-70 ಆಳುತ್ತಿದ್ದನೆಂದು ಉಲ್ಲೇಖಿಸುತ್ತದೆ. ಕ್ರಿ.ಶ.1120ರ ಹಾನಗಲ್ಲು ಶಾಸನವೊಂದು ಇಮ್ಮಡಿ ತೈಲನು ಮಹಾಮಂಡಳೇಶ್ವರನಾಗಿ ಆಳುತ್ತಿದ್ದನೆಂದು ಉಲ್ಲೇಖಿಸುತ್ತದೆ. ಇಮ್ಮಡಿ ತೈಲನಿಗೆ ಸಂಬಂಧಿಸಿದ ಶಾಸನಗಳು ಗೆಜ್ಜೆಹಳ್ಳಿ, ನರೇಗಲ್, ಮಂತಗಿ, ಅರಳೇಶ್ವರ, ಹಾನಗಲ್, ಹಾವಣಗಿ, ಮಲ್ಲಿಗಾರ ಗ್ರಾಮಗಳಲ್ಲಿ ಕಂಡುಬರುತ್ತವೆ. ಈತನ ಕಾಲದ ಹಾವೇರಿ ಶಾಸನವೊಂದು ಮೂರನೆಯ ಸೋಮೇಶ್ವರನ ಸಾಮಂತನಾಗಿ ಇಮ್ಮಡಿ ತೈಲನು ಬನವಾಸಿ-12000, ಸಾಂತಳಿಗೆ-1000 ಮತ್ತು ಪಾನುಂಗಲ್-500ಗಳನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಕ್ರಿ.ಶ.1128ರ ಮುದೇನೂರು ಶಾಸನವು ಈತನನ್ನು ಮಹಾಮಂಡಳೇಶ್ವರ ಎಂದು ಉಲ್ಲೇಖಿಸಿದೆ. ಕ್ರಿ.ಶ.1131ರ ಹಾವೇರಿಯ ಮತ್ತೊಂದು ಶಾಸನ ಮಹಾಮಂಡಳೇಶ್ವರ ಮಯೂರವರ್ಮದೇವನು ಬನವಾಸಿ-12000, ಹಾನಗಲ್-500, ಹಲಸಿಗೆ-12000 ಮತ್ತು ಸಾಂತಳಿಗೆ-1000ಗಳನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಮೇಲಿನ ಶಾಸನದ ಅಂಶವನ್ನು ಗಮನಿಸಲಾಗಿ ಇಮ್ಮಡಿ ತೈಲನ ನಂತರ ಆತನ ಮಗನಾದ ಮಯೂರವರ್ಮನು ಪಟ್ಟಕ್ಕೆ ಬಂದನೆಂದು ಹೇಳಬಹುದು. ಮಯೂರವರ್ಮ ಕೇವಲ ಎರಡು ವರ್ಷ ಮಾತ್ರ ಆಳಿದನೆಂದು ತೋರುತ್ತದೆ. ಏಕೆಂದರೆ ಕ್ರಿ.ಶ.1134ರ ಹಾವೇರಿ ಶಾಸನವೊಂದು ಈತನ ಸಹೋದರನಾದ ಮಲ್ಲಿಕಾರ್ಜುನನು ಸತ್ತಳಿಗೆ-1000 ಮತ್ತು ಪಾನುಂಗಲ್-500 ಆಳುತ್ತಿದ್ದನೆಂದು ತಿಳಿಸುತ್ತದೆ. ಈತನಿಗೆ ಸಂಬಂಧಿಸಿದ ಶಾಸನಗಳು ಅರಳೇಶ್ವರ ಮತ್ತು ಕೊಂಡೋಜಿಗಳಲ್ಲಿ ಕಂಡುಬರುತ್ತವೆ.     

ಮಲ್ಲಿಕಾರ್ಜುನನ ನಂತರ ಆತನ ಸಹೋದರನಾದ ಮೂರನೆಯ ತೈಲನು, ತದನಂತರ ಈತನ ಮಕ್ಕಳಾದ ಮಾವುಲಿತೈಲ, ಎರಡನೆಯ ಕೀರ್ತಿವರ್ಮ ಮತ್ತು ಕಾಮದೇವ ಎಂಬುವವರು ಅನುಕ್ರಮವಾಗಿ ಆಳಿದರು. ಎರಡನೆಯ ಕೀರ್ತಿವರ್ಮನ ಕಾಲದ ಮೂರು ವೀರಗಲ್ಲುಗಳು ಬಾಳೆಹಳ್ಳಿಯಲ್ಲಿ ದೊರಕಿದ್ದು, ಹೊಯ್ಸಳ ಸೋಮನು ಬಾಳೆಹಳ್ಳಿಯನ್ನು ಮುತ್ತಿದಾಗ ಯುದ್ಧದಲ್ಲಿ ಕಮ್ಮಾರ ಭೋಕೋಜನು ಹೋರಾಡಿ ಮಡಿದ ಬಗ್ಗೆ ತಿಳಿಸುತ್ತದೆ. ಇಲ್ಲಿಯ ಇನ್ನೊಂದು ವೀರಗಲ್ಲು ಸಾವಿಕೇರಿ ಮಹಾಪ್ರಭು ಬೆಳಗಾವುಂಡನ ಆದೇಶದಂತೆ ಹೋರಾಡಿ ಮಡಿದ ಸೋಮನಾಥನಿಗೆ ಭೂದಾನ ನೀಡಿದ ವಿಷಯವನ್ನು ತಿಳಿಸುತ್ತದೆ. ಕೀರ್ತಿವರ್ಮನ ಸಹೋದರನಾದ ಕಾಮದೇವನ ಕಾಲದ ಹಾನಗಲ್ಲಿನ ವೀರಗಲ್ಲೊಂದು ಹೊಯ್ಸಳ ಬಲ್ಲಾಳದೇವನು ಹಾನಗಲ್ಲನ್ನು ಮುತ್ತಿದಾಗ ಸಾಹಣಿಯೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಬಗ್ಗೆ ಉಲ್ಲೇಖಿಸುತ್ತದೆ. ಈತನಿಗೆ ಸಂಬಂಧಿಸಿದ ಕ್ರಿ.ಶ.1217ರ ತಾಮ್ರ ಶಾಸನವೊಂದು ಚೌಡದಾನಪುರದಲ್ಲಿ ದೊರೆತಿದ್ದು, ಅದರಲ್ಲಿ ಹಾನಗಲ್ ಕದಂಬ ಮನೆತನದ ಮೂಲವನ್ನು ತಿಳಿಸುತ್ತಾ, ಕಾಮದೇವನನ್ನು ಮಹಾಮಂಡಳೇಶ್ವರ ಎಂದು ಉಲ್ಲೇಖಿಸಲಾಗಿದೆ. ಈತನ ಇನ್ನೊಂದು ವೀರಗಲ್ಲು ಬೈಚವಳ್ಳಿಯಲ್ಲಿ ದೊರೆಕಿದೆ. ಕಾಮದೇವನ ನಂತರ ಅವನ ಮಗ ಮಲ್ಲಿದೇವನು ಕ್ರಿ.ಶ.1217 ರಿಂದ 1252ರ ವರೆಗೆ ಆಳಿದನು. ಈತನ ಕಾಲದ ಕ್ರಿ.ಶ.1231ರ ವೀರಗಲ್ಲೊಂದು ಸಂಸಗಿಯಲ್ಲಿ ದೊರೆಕಿದ್ದು, ವೀರಮಲ್ಲದೇವರಸ ಮತ್ತು ತ್ರಿಭುವನಮಲ್ಲರ ನಡುವೆ ನೆಡೆದ ಯುದ್ಧದಲ್ಲಿ ಮಾಚ ಎಂಬುವವನು ವೀರಮರಣ ಹೊಂದಿದ್ದನ್ನು ಉಲ್ಲೇಖಿಸುತ್ತದೆ. ಹಾವಣಗಿ ವೀರಗಲ್ಲೊಂದು ಗೋಗ್ರಹಣ ಸಂದರ್ಬದಲ್ಲಿ ಅಂಚೆಯ ಸೋವೆಯನಾಯಕನು ವೀರಮರಣ ಹೊಂದಿದನೆಂದು ತಿಳಿಸುತ್ತದೆ. ಇವನ ಕಾಲದ ಶಾಸನಗಳು ಅಕ್ಕಿವಳ್ಳಿ, ನಿಡಸಂಗಿ, ಮಲ್ಲಿಗಾರ, ಹಾನಗಲ್ಲು ಮತ್ತು ಹಿರೇಕಣಗಿಗಳಲ್ಲಿ ದೊರೆಕಿವೆ. ವೀರಮಲ್ಲದೇವನಲ್ಲದೆ ಸೋವಿದೇವನೆಂಬ ಹಾನಗಲ್ಲು ಕದಂಬರ ದೊರೆಯೊಬ್ಬನು ಆಳಿದ ಬಗ್ಗೆ ಡಾ.ಎಂ.ಎಂ ಕಲಬುರ್ಗಿಯವರು ತಮ್ಮ ದಾರವಾಡ ಜಿಲ್ಲಾ ಶಾಸನ ಸೂಚಿಯಲ್ಲಿ ತಿಳಿಸಿದ್ದು, ಆತನಿಗೆ ಸಂಬಂಧಿಸಿದ ಹಾನಗಲ್ಲು ವೀರಗಲ್ಲಿನ ಕಾಲ ಕ್ರಿ.ಶ.1179 ಎಂದು, ಮತ್ತೊಂದು ಅಕ್ಕಿಆಲೂರು ವೀರಗಲ್ಲಿನ ಕಾಲ ಕ್ರಿ.ಶ.1358 ಎಂದು ನಮೂದಿಸಿದ್ದಾರೆ. ಕಾಲಮಾನ ದೃಷ್ಟಿಯಿಂದ ಇದು ಆಪ್ರಸ್ತುತವೆಂದು ತೋರುತ್ತದೆ.

5. ಬಂದಳಿಕೆ(ನಾಗರಖಂಡ) ಕದಂಬರು
ನಾಗರಖಂಡ(ಬಂದಳಿಕೆ) ಕದಂಬರ ಮೂಲಪುರುಷನೆಂದು ಬಮ್ಮರಸನನ್ನು ಕರೆಯಲಾಗುತ್ತದೆ. ಈತನು ಕ್ರಿ.ಶ.1029 ರಿಂದ 1078 ವರೆಗೆ ಆಳಿದನು. ಇವನ ನಂತರ ಈತನ ಮಗನಾದ ಬೊಪ್ಪರಸನು ಆಳಿದನು. ಕ್ರಿ.ಶ.1114ರ ಸಾತೇನಹಳ್ಳಿ ಶಾಸನ ಗೋವಿಂದರಸ ಬನವಾಸಿ ಆಳುವಾಗ ಬೊಪ್ಪರಸನು ಬಂದಳಿಕೆಯಲ್ಲಿ ನಾಳ್ಗಾವುಂಡನಾಗಿದ್ದ ಎಂದು ಉಲ್ಲೇಖಿಸುತ್ತದೆ. ಬೊಪ್ಪರಸ ಮತ್ತು ಸಿರಿಯಾದೇವಿಯರ ಮಗನಾದ ಸೋಯಿದೇವನು ಕ್ರಿ.ಶ.1139 ರಿಂದ 1177ರ ವರೆಗೆ ಆಳಿದನು. ಕ್ರಿ.ಶ.1144ರ ಹಂಸಭಾವಿ ಶಾಸನವೊಂದು ಈತನನ್ನು “ಶ್ರೀಮನ್ಮಹಾಮಂಡಳೇಶ್ವರ ಬಾಂಧವಪುರ ಪರಮೇಶ್ವರ” ಎಂದು ಹೊಗಳಿದೆ. ಇಲ್ಲಿಯ ಕ್ರಿ.ಶ.1157ರ ಇನ್ನೊಂದು ಶಾಸನ ಇವನನ್ನು ‘ಮಂಡಳೇಶ್ವರ ಸೋವರಸ’ ಎಂದು ಉಲ್ಲೇಖಿಸುತ್ತದೆ. ಈತ ಈ ವಂಶದ ಪ್ರಖ್ಯಾತ ದೊರೆಯಾಗಿದ್ದು, ಇವನ ಉತ್ತರಾಧಿಕಾರಿಯಾಗಿ ಆತನ ಪುತ್ರ ಬೊಪ್ಪದೇವನು ಕ್ರಿ.ಶ.1176ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ ಮಾಳಲದೇವಿ ಎಂಬ ರಾಣಿಯಿದ್ದು, ಇವರಿಬ್ಬರಿಗೆ ಜನಿಸಿದವನೇ ಬ್ರಹ್ಮಭೂಪಾಲ. ಕ್ರಿ.ಶ.1202ರಲ್ಲಿ ಈತನ ಆಳ್ವಿಕೆ ಪ್ರಾರಂಭವಾಯಿತೆಂದು ಗೊಡಚಿಕೊಂಡದ ಶಾಸನವೊಂದು ತಿಳಿಸುತ್ತದೆ. ಕ್ರಿ.ಶ.1203ರ ಸಾತೇನಹಳ್ಳಿ ಶಾಸನ ಇವನ ದಂಡನಾಯಕನಾದ ಮಲ್ಲಣನು ಕೊಲ್ಲಿ ಗೊಡ್ಡೆಯಲ್ಲಿ ಯುದ್ಧಮಾಡಿದ ವಿಷಯವನ್ನು ತಿಳಿಸುತ್ತದೆ. ಎಮ್ಮಿಗನೂರು(ಕ್ರಿ.ಶ.1218) ಶಾಸವೊಂದು ಹೊಯ್ಸಳ ವೀರಬಲ್ಲಾಳನು ಬೆಳಗುವತ್ತಿಯನ್ನು ಮುತ್ತಿದಾಗ ಬೊಮ್ಮಿದೇವ ಅವನನ್ನು ಹಿಮ್ಮೆಟ್ಟಿಸಿದನು. ಈ ಯುದ್ಧದಲ್ಲಿ ಬಂದಳಿಕೆ ಮಲ್ಲೆಯನಾಯಕನು ವೀರರಣವನ್ನು ಹೊಂದಿದ ಬಗ್ಗೆ ವಿವರಣೆಯಿದೆ.     
 
ಬ್ರಹ್ಮಭೂಪಾಲನ ನಂತರ ಆತನ ಮಗ ಬೋಕನಬೊಪ್ಪನು ಕೆಲಕಾಲ ಆಳಿದನೆಂದು ತೊರುತ್ತದೆ. ಬೋಕನಬೊಪ್ಪನ ನಂತರ ಇಮ್ಮಡಿ ಸೋಯಿದೇವರಸನು ಪಟ್ಟಕ್ಕೆ ಬಂದ. ಕ್ರಿ.ಶ.1247ರ ಮಡಲೂರು ಶಾಸನ ಈತನ ಆಳ್ವಿಕೆಯನ್ನು ತಿಳಿಸುತ್ತದೆ. ಈ ಶಾಸನ ಇವನ ರಾಣಿ ಮಾಚಲದೇವಿ ಮತ್ತು ಇವರ ಮಗ ಕುಮಾರ ಬೊಮ್ಮಿದೇವರಸನನ್ನು ಉಲ್ಲೇಖಿಸುತ್ತದೆ. ಮುಂದೆ ಕುಮಾರ ಬೊಮ್ಮಿದೇವರಸನು ದೀರ್ಘ ಕಾಲದವರೆಗೆ ನಾಗರಖಂಡವನ್ನಾಳಿದನು. ಕ್ರಿ.ಶ.1239ರ ಹಂಸಭಾವಿ ಶಾಸನ ಬೊಮ್ಮಿದೇವರಸನು ಮುಳುಗುಂದ ಠಾಣೆಯನ್ನು ಮುತ್ತಿಗೆಹಾಕಿದಾಗ ಸೋವಯನಾಯಕನು ಯುದ್ಧದಲ್ಲಿ ಮಡಿದ ವಿಷಯ ತಿಳಿಸುತ್ತದೆ. ಕ್ರಿ.ಶ.1247ರ ಮಡಲೂರು ಶಾಸನ ಈತನನ್ನೂ “ಶ್ರೀ ಮನ್ಮಹಾಮಂಡಳೇಶ್ವರ” ಎಂದು ಉಲ್ಲೇಖಿಸಿದೆ. “ಕುಮಾರ ಬೊಮ್ಮಿದೇವರಸ” ಎಂಬ ಈತನ ಪೂರ್ಣ ಹೆಸರನ್ನು ಹೊಂದಿರುವ ಶಾಸವೊಂದು ಮೇದೂರಿನಲ್ಲಿ ದೊರೆಕಿದೆ. ಬೊಮ್ಮಿದೇವರಸನು ನಾಗರಖಂಡವನ್ನು ಆಳುತ್ತಿದ್ದ ಸಂದರ್ಭದಲ್ಲಿ ಕೋಣವತ್ತಿಯನ್ನು ಸಾಮಂತ ಬೊಮ್ಮಿಸೆಟ್ಟಿ ಆಳುತ್ತಿದ್ದನೆಂದು ಕ್ರಿ.ಶ.1241ರ ಸಾತೇನಹಳ್ಳಿ ಶಾಸನ ಉಲ್ಲೇಖಿಸುತ್ತದೆ. ಈತನ ನಂತರ ಮುಮ್ಮಡಿ ಸೋಯಿದೇವನು ಆಳಿದನು. ಕ್ರಿ.ಶ.1282ರ ಕಾಗಿನೆಲ್ಲಿ ಹಾಗೂ ಹಿರೇಕೆರೂರು ಶಾಸನಗಳು ಈತನು ನಾಗರಖಂಡವನ್ನು ಆಳುತ್ತಿದ್ದನೆಂದು ತಿಳಿಸುತ್ತವೆ. ಬಯಿಚರಸ ಎಂಬುವವನು ನಾಗರಖಂಡದ ಕದಂಬ ವಂಶದ ಕೊನೆಯ ದೊರೆ. ಈತನ ಆಳ್ವಿಕೆ ಕ್ರಿ.ಶ.1442ರಲ್ಲಿ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ. ಈ ಮಧ್ಯೆ 140 ವರ್ಷಗಳಕಾಲ ನಾಗರಖಂಡದ ರಾಜಕೀಯ ಇತಿಹಾಸ ಅಸ್ಪಷ್ಟವಾಗಿದೆ.

ಇವರಲ್ಲದೆ ನಾಗರಖಂಡದಲ್ಲಿ ಕೆಲವು ಸಾಮಂತ ಮನೆತನಗಳು ಆಳಿದ ಬಗ್ಗೆ ತಿಳಿದುಬರುತ್ತದೆ. ನಾಗರಖಂಡ-70ರಲ್ಲಿ ಕೋಣವತ್ತಿಯ ಸಾಮಂತರು, ಕೋಣವತ್ತಿ ಮತ್ತು ಸಾತೇನಹಳ್ಳಿಗೆ ಸಾಮಂತರಾಗಿ ಆಳುತ್ತಿದ್ದರು. ಸಾತೇನಹಳ್ಳಿಯ ಎರಡು ಶಾಸನಗಳು ಇವರ ವಂಶಾವಳಿಯನ್ನು ತಿಳಿಸುತ್ತವೆ. ನಾಗರಖಂಡ-70ರ ಇನ್ನೊಂದು ಮಾಂಡಳಿಕ ಮನೆತನವೆಂದರೆ ತು(ಗು)ಯ್ಯಲಬೇಗೂರು ಸಾಮಂತರು. ಇಂದಿನ ಹಂಸಭಾವಿಯನ್ನು ತುಯ್ಯಲಬೇಗೂರು ಎಂದು ಕರೆಯಲಾಗುತ್ತಿತ್ತು. ಕ್ರಿ.ಶ.1144ರ ಹಂಸಭಾವಿ ಶಾಸನ ಇವರ ವಂಶಾವಳಿಯನ್ನು ಹೊಂದಿದೆ. ಇವರಲ್ಲದೆ ಅಬ್ಬಲೂರು ಸಾಮಂತರು ಈ ಭಾಗದಲ್ಲಿ ಆಳಿದ್ದು, ಕ್ರಿ.ಶ.1104ರ ಅಬಲೂರು ಶಾಸನ ಅವರ ವಂಶದವೃಕ್ಷವನ್ನು ತಿಳಿಸುತ್ತದೆ.

6. ಸತ್ತಳಿಗೆಯ ಚಿಕ್ಕಂಬ ಮನೆತನ
     ಸತ್ತಳಿಗೆ-70ರ ನಾಳ್ಗಾವುಂಡರೇ ಈ ಚಿಕ್ಕಂಬ ಮನೆತನದವರು. ಬೆನಕನಕೊಂಡ ಶಾಸನೋಕ್ತ(1033) ಉತ್ತವಯ್ಯ ಈ ಮನೆತನದ ಮೊದಲ ಅರಸ. ಈತನ ನಂತರ ಸತ್ತಳಿಗೆ ನಾಳ್ಗಾವುಂಡನಾಗಿ ಮಹಾಸಾಮಂತ ಗೋಯಿಮ್ಮರಸ ಆಳಿದನೆಂದು ತಿಳಿಯುತ್ತದೆ. ಈ ಮನೆತನದ ಕೊನೆಯ ಮುಖ್ಯಸ್ಥನೆಂದರೆ ಮಹಾಸಾಮಂತ ಬೊಮ್ಮರಸ. ಈತ ಸತ್ತಳಿಕೆಯನ್ನು ಕ್ರಿ.ಶ.1127ರಲ್ಲಿ ನಾಳ್ಗಾವುಂಡನಾಗಿ ಆಳುತ್ತಿದ್ದನೆಂದು ಅಸುಂಡಿ ಶಾಸನ ತಿಳಿಸುತ್ತದೆ. 

7. ಬಂಕಾಪುರದ ಕದಂಬರು
ಹಾನಗಲ್ಲು ಕದಂಬ ಮನೆತದ ಒಂದು ಶಾಖೆ ಬಂಕಾಪುರದಲ್ಲಿ ಆಳ್ವಿಕೆ ಮಾಡುತ್ತಿತ್ತು. ಇವರು ಕಲ್ಯಾಣದ ಚಾಲುಕ್ಯರ ಮಾಂಡಳಿಕರಾಗಿದ್ದರು. ಮಯೂರವರ್ಮ ಈ ಮನೆತನದ ಪ್ರಮುಖ ಅರಸ. ಈತನಿಗೆ ಅಕ್ಕಾದೇವಿ ಎಂಬ ಪಟ್ಟದರಸಿ ಇದ್ದಳು. ಇವನ ನಂತರ ಈತನ ಮಗನಾದ ಹರಿಕೇಸರಿದೇವ ಆಳಿದನು. ಈ ಮನೆತನದ ಇನ್ನಿಬ್ಬರು ಅರಸರೆಂದರೆ ತೋಯಿಮದೇವ ಮತ್ತು ಹರಿಕಾಂತದೇವ. ಬಂಕಾಪುರ ಕದಂಬರು ಮತ್ತು ಹಾನಗಲ್ಲು ಕದಂಬರ ಲಾಂಛನ, ವಾದ್ಯ, ದ್ವಜ, ಕುಲದೇವತೆ ಒಂದೇ ಆಗಿರುವುದನ್ನು ಗಮನಿಸಿದರೆ ಹಾನಗಲ್ಲು ಕದಂಬರ ಸಂಬಂಧಿಗಳೇ ಇಲ್ಲಿ ಆಳ್ವಿಕೆ ಮಾಡಿರಬಹುದೆಂದೆನಿಸುತ್ತದೆ. ಕ್ರಿ.ಶ.1037ರ ಹೊಟ್ಟೂರು ಶಾಸನವು ಮಯೂರವರ್ಮನು ಕಲ್ಯಾಣ ಚಾಲುಕ್ಯರ ಇಮ್ಮಡಿ ಜಯಸಿಂಹನ ಸಾಮಂತನಾಗಿದ್ದನೆಂದು ತಿಳಿಸುತ್ತದೆ. ಹರಿಕೇಸರಿದೇವನು ಚಾಲುಕ್ಯ ಒಂದನೆಯ ಸೋಮೇಶ್ವರನ ಮಾಂಡಳಿಕನಾಗಿ ಆಳುತ್ತಿದ್ದನೆಂದು ಕ್ರಿ.ಶ.1055ರ ಬಂಕಾಪುರ ಶಾಸನ ಉಲ್ಲೇಖಿಸುತ್ತದೆ. ಚಾಲುಕ್ಯ ಒಂದನೆಯ ಸೋಮೇಶ್ವರನ ಸಾಮಂತನಾಗಿ ತೋಯಿಮದೇವನು ಆಳ್ವಿಕೆ ಮಾಡುತ್ತಿದ್ದ ವಿಷಯವನ್ನು ಕ್ರಿ.ಶ.1062ರ ಬಂಕಾಪುರ ಮತ್ತು ಕ್ರಿ.ಶ.1064ರ ಹೊಟ್ಟೂರು ಶಾಸನಗಳು ಉಲ್ಲೇಖಿಸುತ್ತವೆ. 

8.ಬಾಸವೂರಿನ ಖಚರರು
ಹನ್ನೊಂದನೆಯ ಶತಮಾನದಲ್ಲಿ ಪ್ರಾಭಲ್ಯಕ್ಕೆ ಬಂದ ಖಚರ ಅಥವಾ ಖೇಚರ ಸಾಮಂತ ಅರಸರು ಬಾಸವೂರು-140ರ ನಾಳ್ಗಾವುಂಡರಾಗಿ ಆಳ್ವಿಕೆ ಮಾಡುತ್ತಿದ್ದರು. ಅವರು ತಮ್ಮನ್ನು ಜೀಮೂತವಾಹನಾನ್ವಯ ಪ್ರಸೂತ ಬನ್ದುಜನರ ವಿರಾಜಹಂಸ ಖಚರವಂಶೋತ್ತಮ ಪದ್ಮಾವತಿವರಲಬ್ದಪ್ರಸಾರೆಂದು ಶಾಸನಗಳಲ್ಲಿ ಹೇಳಿಕೊಂಡಿದ್ದಾರೆ. ಬಾಸವೂರು-140ನ್ನು ಆಳಿದ ಖಚರ ಮನೆತನದ ಪ್ರಥಮ ಅರಸನೆಂದರೆ ಕಲಿಯಮ್ಮರಸ. ಕಳ್ಳಿಹಾಳ, ಮಲ್ಲೂರು ಮತ್ತು ಕೋಳೂರು ಶಾಸನಗಳು ಈತನು ಬಾಸವೂರು ಕಂಪಣವನ್ನು ಆಳುತ್ತಿದ್ದನೆಂದು ಉಲ್ಲೇಖಿಸುತ್ತವೆ.  ಈತನ ನಂತರ ಮಲ್ಲರಸ(1055-59) ಆಳಿದನು. ಕಲಕೇರಿ ಶಾಸವೊಂದು ‘ಬಾಸವೂರು ನೂರನಲ್ವತ್ತಕ್ರ್ಕಂ ಮಲ್ಲರಸಂ ನಾಡ್ಗಾಮುಣ್ಡುಗೆಯೆ’ ಎಂದು ಉಲ್ಲೇಖಿಸುತ್ತದೆ. ಮಲ್ಲರಸನ ತರುವಾಯ ರಾಜಾದಿತ್ಯರಸ ಅಧಿಕಾರ ವಹಿಸಿಕೊಂಡನು. ಮಲ್ಲೂರು ಶಾಸನವೊಂದು ಮನ್ನೇಯ ರಾಜಾದಿತ್ಯರಸ(1059-65) ಬಸವೂರು-140ರ ನಾಳ್ಗಾವುಂಡನಾಗಿದ್ದನ್ನು ಉಲ್ಲೇಖಿಸುತ್ತದೆ. ದೇವಗಿರಿ ಶಾಸನವು ಈತನನ್ನು ಮಹಾಸಾಮಂತ ಎಂದು ಉಲ್ಲೇಖಿಸುತ್ತದೆ. ದೇವಿಹೊಸೂರು ಶಾಸನವು ಸಹ ಈತನ ಆಳ್ವಿಕೆಯನ್ನು ತಿಳಿಸುತ್ತದೆ.
     ಖಚರ ದೊರೆಗಳಲ್ಲಿ ಪ್ರಖ್ಯಾತನಾದ ಎರಡನೆಯ ಕಲಿಯಮ್ಮರಸನು ಮುಂದೆ ಪಟ್ಟವೇರಿದನು. ಕ್ರಿ.ಶ.1090ರ ಬಂಕಾಪುರ ಶಾಸನವು “ಶ್ರೀಮನ್ಮಹಾಮಂಡಳೇಶ್ವರ ಕಲಿಯಮರಸ ರ್ಪಾನುಂಗಲ್ಲಯ್ನೂರಮಂ ಸುಖಸಂಕತಾವಿನೊದದಿಂ ನಾಳ್ದರಸುಗೈಯುತ್ತಮಿರೆ” ಎಂದು ಉಲ್ಲೇಖಿಸಿರುವುದರಿಂದ ಈತನು ಬಾಸವೂರು-140 ರೊಂದಿಗೆ ಪಾನುಂಗಲ್-500ನ್ನು ಸಹ ಆಳುತಿದ್ದುದಾಗಿ ತಿಳಿದುಬರುತ್ತದೆ. ಈತನ ಆಳ್ವಿಕೆಯನ್ನು ಉಲ್ಲೇಖಿಸುವ ಶಾಸನಗಳು ದೇವಗಿರಿ, ಹೊಮ್ಮರಡಿ, ಕಲಕೇರಿ, ಕೋಳೂರು, ಕಾಗಿನೆಲೆಗಳಲ್ಲಿ ಸಿಕ್ಕಿವೆ. ಈತನ ನಂತರ ಇವನ ಮಗ ಹೆರ್ಮಾಡಿಯರಸ ಆಳಿದನೆಂದು ತಿಳಿಸುವ ಶಾಸನವೊಂದು ದೇವಗಿರಿಯಲ್ಲಿ ಕಂಡುಬರುತ್ತದೆ. ಇವನ ತರುವಾಯ ಮುಮ್ಮಡಿ ಕಲಿಯಮ್ಮರಸನು ಬಾಸವೂರ-140ನ್ನು ಮನ್ನೇಯನಾಗಿ ಆಳಿದ ಬಗ್ಗೆ ಹಿರೇಹಳ್ಳಿ ಶಾಸನ ತಿಳಿಸುತ್ತದೆ. ಇವನ ಉತ್ತರಾಧಿಕಾರಿಯಾಗಿ ಮಾಚಿದೇವರಸನು ಆಳ್ವಿಕೆ ಮಾಡಿದನು. ಕ್ರಿ.ಶ.1160ರ ದೇವಗಿರಿ ಶಾಸನ ಮಹಾಮಂಡಳೇಶ್ವರ ಮಾಚಿದೇವರಸನು ಬಿಜ್ಜಳನ ಸಾಮಂತನಾಗಿ ಆಳಿದ ಉಲ್ಲೇಖವನ್ನು ಹೊಂದಿದೆ. ಇವನ ನಂತರ ನಾಲ್ಕನೆಯ ಕಲಿಯಮ್ಮರಸನು ಆಳಿದನು. ಕ್ರಿ.ಶ.1167ರ ಸಂಗೂರ ಶಾಸನವು “ಶ್ರೀಮತ್ ಕಲಿಯಮ್ಮರಸರು ಬಾಸವೂರು ನೂರನಾಲ್ವತ್ತರ ಮನ್ನೇಯದರಸುಗೆಯುತ್ತಮಿರೆ” ಎಂದು ತಿಳಿಸುತ್ತದೆ. ಮುಂದೆ ಯಾದವ ಸಿಂಘಣನವರೆಗೆ ಇವರ ಆಳ್ವಿಕೆಯ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಯಾದವ ಸಿಂಘಣನ ಮಾಂಡಳಿಕನಾಗಿ ಖಚರರ ಮಲ್ಲಿದೇವರಸನು ಬಾಸವೂರು-140ನ್ನು ಮಹಾಮಂಡಳೇಶ್ವನಾಗಿ ಆಳುತ್ತಿದ್ದ ವಿಷಯ ಕೋಳೂರು ಶಾಸನದಲ್ಲಿದೆ. ಹೀಗೆ ಖಚರ ಮನೆತನವು ಬಾಸವೂರು ಕಂಪಣವನ್ನು ಹನ್ನೊಂದನೆಯ ಶತಮಾನದಿಂದ ಹದಿಮೂರನೆಯ ಶತಮಾನದ ಅಂತ್ಯದವರೆಗೂ ಆಳಿದ ಮಾಹಿತಿ ದೊರೆಯುತ್ತದೆ.

9.ನೂರುಂಬಾಡದ ಕದಂಬರು
     ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದಲ್ಲಿ ಕದಂಬ ಮನೆತನದಿಂದ ಆಳಲ್ಪಡುತ್ತಿದ್ದ ನೂರುಂಬಾಡವು ರಟ್ಟಿಹಳ್ಳಿ-70 ಮತ್ತು ಇಟ್ಟಿಗೆ-30 ಎಂಬ ಉಪ ವಿಭಾಗಗಳಿಂದ ಕೂಡಿದ ಒಂದು ಕಂಪಣವಾಗಿತ್ತು. ರಟ್ಟಿಹಳ್ಳಿ ಇದರ ರಾಜಧಾನಿಯಗಿತ್ತು. ನೂರುಂಬಾಡದ ಪ್ರಾಚೀನತೆಯನ್ನು ತಿಳಿಯುವುದಾದರೆ ರಾಷ್ಟಕೂಟರ ಮೂರನೆಯ ಇಂದ್ರನ ಕಾಲದ ಇಟ್ಟಿಗೆ ಶಾಸನ ದೋರ ಎಂಬುವವನು ಬನವಾಸಿನಾಡನ್ನು ಆಳುತ್ತಿರುವಾಗ ಅಯ್ಚಣ್ನನು ಕುಡುವಣ್ನಗಣ್ಡಮೆಪ್ಪತ್ತುಮಿಟ್ಟಿಗೆ ಮೂವತ್ತರ್ಕೆ ನಾಳ್ಗಾವುಂಡನಾಗಿದ್ದನ್ನು ತಿಳಿಸುತ್ತದೆ. ಇಟ್ಟಿಗೆಯ ಇನ್ನೊಂದು ಶಾಸನ ನೂರುಂಬಾಡದ ಉಲ್ಲೇಖವನ್ನು ಹೊಂದಿದೆ. ಹಿರೇಮಾಗನೂರು ಶಾಸನವೊಂದು ಬಂಕೇಯನು ಬನವಾಸಿನಾಡನ್ನಾಳುತ್ತಿರುವಾಗ ಅಯ್ಚಣ್ನ ಕುಡವಣ್ನಗಣ್ಡ ಮೆಪ್ಪತ್ತು ಇಟ್ಟಿಗೆ ಮೂವತ್ತರ್ಕೆ ನಾಳ್ಗಾವುಂಡನಾಗಿ ಆಳುತ್ತಿದ್ದನೆಂದು ಉಲ್ಲೇಖಿಸುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಕುಡುವಣ್ನಗಣ್ಡ ಎಂಬ ಹೆಸರಿನಿಂದ ಪ್ರಸಿದ್ದವಾಗಿದ್ದ ಈ ವಿಭಾಗವು ಮುಂದೆ ರಟ್ಟಿಪಳ್ಳಿಯೆಂಬ ಹೆಸರನ್ನು ಪಡೆದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನೂರುಂಬಾಡ ಎಂಬ ಪ್ರಥಮ ಉಲ್ಲೇಖವು ಎರಡನೆಯ ಜಯಸಿಂಹನ ಕಣಿವಿಸಿದ್ಗೇರಿ ಶಾಸನದಲ್ಲಿ ಕಂಡುಬರುತ್ತದೆ. ಕ್ರಿ.ಶ.1048ರ ಹೊಳೆಆನ್ವೇರಿ ಶಾಸನವು ಒಂದನೆಯ ಬೀರದೇವನು ರಟ್ಟಿಪಳ್ಳಿ-70 ಮತ್ತು ಇಟ್ಟಿಗೆ-30 ಎಂಬ ಆಡಳಿತ ಘಟಕಗಳನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಕ್ರಿ.ಶ.1226ರ ಅಂತರವಳ್ಳಿ ಶಾಸನ “ನೂರುಂಬಾಡ ಸತ್ತಳಿಗೆನಾಡ” ಎಂದು ಉಲ್ಲೇಖಿಸುತ್ತದೆ. ಇಲ್ಲಿಯ ಕ್ರಿ.ಶ.1234ರ ಇನ್ನೂಂದು ಶಾಸನ “ನೂರುಂಬಾಡದ ಅಂತರವಳ್ಳಿಯ ಸ್ಥಳದ” ಎಂಬ ಉಲ್ಲೇಖವನ್ನು ಹೊಂದಿದೆ. 

10. ಗುತ್ತವೊಳಲಿನ ಗುತ್ತರು
     ‘ಗುತ್ತ’ ಎನ್ನುವ ಪದ ಸಂಸ್ಕøತದ ‘ಗುಪ್ತ’ ಎಂಬ ಪದದಿಂದ ಬಂದಿದೆ ಎಂಬುದು ಚರಿತ್ರಕಾರರ ಅಭಿಪ್ರಾಯವಾಗಿದೆ. ಹನ್ನೆರಡನೆಯ ಶತಮಾನದ ಆದಿಭಾಗದಿಂದ ಹದಿಮೂರನೆಯ ಶತಮಾನದ ಕೊನೆವರೆಗೆ ಆಳಿದ ಇವರು, ಕಲ್ಯಾಣದ ಚಾಲುಕ್ಯರ ಮಾಂಡಳಿಕರಾಗಿ, ಕೆಲಕಾಲ ಸ್ವತಂತ್ರರಾಗಿ, ಮತ್ತೆ ದೇವಗಿರಿ ಸೇವುಣರ ಮಾಂಡಳಿಕರಾಗಿ ಆಳ್ವಿಕೆ ಮಾಡಿದರು. ಹಾವೇರಿ ತಾಲೂಕಿನ ಗುತ್ತವೊಳಲ್ ಅಥವಾ ಗುತ್ತಲ ಇವರ ರಾಜದಾನಿಯಾಗಿತ್ತು. ಇವರು ತಮ್ಮನ್ನು ಮಗಧದ ಗುಪ್ತರ ಉತ್ತರಾಧಿಕಾರಿಗಳೆಂದು, ಉಜ್ಜಯಿನೀ ಪುರವರಾದೀಶ್ವರರೆಂದು, ಚಂದ್ರಗುಪ್ತಾನ್ವಯರೆಂದು ಕೆರೆದುಕೊಂಡಿದ್ದಾರೆ. ಈ ಮನೆತನದ ಮೂಲ ಪುರುಷ ಮಾಗುತ್ತ (ಮಹಾಗುಪ್ತ) ಮತ್ತು ಆತನ ಮಗ ಗುಪ್ತ ಎಂದು ಅವರ ಶಾಸನಗಳು ತಿಳಿಸುತ್ತವೆ. ಗುತ್ತನ ಮಗನಾದ ಮಲ್ಲಿದೇವನೇ ಈ ಮನೆತನದ ಶಾಸನೋಕ್ತ ದೊರೆ ಎಂದು ಹೇಳಬಹುದು. ಇವರನ್ನು ಗುಪ್ತ ವಂಶದ ಎರಡನೆಯ ಚಂದ್ರಗುಪ್ತನ ವಂಶಜರೆಂದೂ, ಇನ್ನೂ ಕೆಲವು ಸಂಶೋಧಕರು ಮೌರ್ಯರ ದೊರೆ ಚಂದ್ರಗುಪ್ತನ ವಂಶದವರೆಂದೂ ಶಾಸನಗಳನ್ನಾಧರಿಸಿ ವಿಶ್ಲೇಷಿಸಿದ್ದಾರೆ. ಈ ವಾದಗಳೆಲ್ಲಾ ನಿಜವಲ್ಲವೆಂದು ಇವರು ಕರ್ನಾಟಕದಲ್ಲಿಯೇ ಬೆಳಕಿಗೆ ಬಂದ ಒಂದು ಮಾಂಡಳಿಕ ಅರಸು ಮನೆತನವೆಂದು ಅಭಿಪ್ರಾಯಪಡಲಾಗಿದೆ. ಕ್ರಿ.ಶ.1120ರ ಚೌಡದಾನಪುರ ಶಾಸನವು ಈ ವಂಶದ ಮಲ್ಲಿದೇವನು ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಅಧಿಕಾರಿಯಾಗಿ ಗೋವಿಂದರಸನು ಬನವಾಸಿ-12000ವನ್ನು ಆಳುತ್ತಿದ್ದ ಕಾಲದಲ್ಲಿ ಅವನ ಅಧೀನದಲ್ಲಿ ಗುತ್ತವೊಳಲನ್ನು ಆಳುತಿದ್ದನೆಂದು ತಿಳಿಸುತ್ತದೆ. ಮಲ್ಲಿದೇವನ ಸಹೋದರ ಜೊಹಿದೇವನು ಇದೇ ಕಾಲದಲ್ಲಿ ಬೆಳಹುಗೆ-70, ಹೊನ್ನವತ್ತಿ-12 ಮತ್ತು ಬೆಣ್ಣೆವೂರ-12 ಕಂಪಣಗಳನ್ನು ಆಳತ್ತಿದ್ದನು. ಕ್ರಿ.ಶ.1124ರ ಹೊನ್ನತ್ತಿ ಶಾಸನವು ಈತನನ್ನು ಮಹಾಮಂಡಳೇಶ್ವರ ಎಂದು ಉಲ್ಲೇಖಿಸಿದೆ. ಈತನ ಕಾಲಾವಧಿಯ ಎರಡು ಶಾಸನಗಳು ಕೆಂಗೊಂಡ ಮತ್ತು ಹುಲಿಹಳ್ಳಿಗಳಲ್ಲಿ ದೊರೆಕಿವೆ.
     ಜೋಯಿದೇವನ ನಂತರ ಅವನ ಸಹೋದರ ಮಲ್ಲಿದೇವನ ಮಗ ಎರಡನೆಯ ವಿಕ್ರಮಾದಿತ್ಯನು ಪಟ್ಟವೇರಿದನು. ಈತನ ಕ್ರಿ.ಶ.1163ರ ಗುತ್ತಲ ಶಾಸನವು ಪಣ್ಣವತ್ತಿ-12, ಬೆಳಹುಗಿ-70, ಬೆಣ್ಣೆವೂರು-12 ಆಳುವ ವಿಕ್ರಮಾದಿತ್ಯದೇವರಸನು ಭೂದಾನ ಕೊಟ್ಟ ವಿಷಯವನ್ನು ತಿಳಿಸುತ್ತದೆ. ಕ್ರಿ.ಶ.1188ರ ಹರಳಹಳ್ಳಿ ಶಾಸನವೊಂದು “ವೀರವಿಕ್ರಮಾದಿತ್ಯ ಬನವಾಸಿನಾಡಂ ದುಷ್ಟನಿಗ್ರಹ ಶಿಷ್ಟಪ್ರತಿಪಾಳನದಿಂ ಪಾಳಿಸುತ್ತಂ ಗುತ್ತವೊಳಲ ನೆಲವೀಡಿನೊಳ್ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರೆ” ಎಂದು ಉಲ್ಲೇಖಿಸುತ್ತದೆ. ಇದೇ ಗ್ರಾಮದ ಕ್ರಿ.ಶ. 1214ರ ಇನ್ನೊಂದು ಶಾಸನ ವಿಕ್ರ್ರಮಾದಿತ್ಯರಸನು ತನ್ನ ಮಗಳಾದ ತುಳುವಲದೇವಿಯ ಸ್ಮರಣಾರ್ಥವಾಗಿ ತುಳುವಲೇಶ್ವರ ದೇವಾಲಯವನ್ನು ನಿರ್ಮಿಸಿ ಗ್ರಾಮದಾನ ಮಾಡಿದ ಬಗ್ಗೆ ತಿಳಿಸುತ್ತದೆ. ಕ್ರಿ.ಶ.1233ರ ಕನವಳ್ಳಿ ಶಾಸನವೊಂದು ಅರಸ(ವಿಕ್ರಮಾದಿತ್ಯ) ಹಾಗೂ ಚನ್ನಗಾವುಂಡರಿಂದ ಕಲಿನಾಥ ದೇವಾಲಯಕ್ಕೆ ಭೂದಾನ ನೀಡಿದ ಬಗ್ಗೆ ಉಲ್ಲೇಖಿಸುತ್ತದೆ. ಮೇಲಿನ ಶಾಸನಗಳು ವಿಕ್ರಮಾದಿತ್ಯನನ್ನು ಅರಸನೆಂದು ಉಲ್ಲೇಖಿಸಿರುವುದರಿಂದ ಇವನು ಸ್ವತಂತ್ರನಾಗಿ ಆಳುತ್ತಿದ್ದನೆಂದು ಅನಿಸದಿರದು. ಕ್ರಿ.ಶ.1233ರ ವರೆಗೆ ಆಳಿದ ಈತನ ಕಾಲದ ಶಾಸನಗಳು ಹಾವನೂರು, ಕಲ್ಲೇದೇವರು ಮತ್ತು ಚೌಡದಾನಪುರಗಳಲ್ಲಿ ಕಂಡುಬಂದಿವೆ.     
     ಇವನ ನಂತರ ಈತನ ಮಗನಾದ ಇಮ್ಮಡಿ ಜೋಯಿದೇವನು ಪಟ್ಟಕ್ಕೆ ಬಂದನು. ಇವನ ಕಾಲದ ಕ್ರಿ.ಶ. 1287ರ ಹೊನ್ನತ್ತಿ ಶಾಸನವು ಯಾದವ ಸಿಂಘಣನ ಸರ್ವಾಧಿಕಾರಿ ಬಿಚಸೆಟ್ಟಿಯ ಹೇಳಿಕೆಯಂತೆ ದತ್ತಿ ಬಿಟ್ಟ ವಿಷಯವನ್ನು ತಿಳಿಸುತ್ತದೆ. ಇವನಿಗೆ ಸಂಬಂಧಿಸಿದ ಇನ್ನೊಂದು ಶಾಸನ ಹೂಲಿಹಳ್ಳಿಯಲ್ಲಿ ದೊರಕಿದೆ. ಇಮ್ಮಡಿ ಜೋಯಿದೇವನ ನಂತರ ಮುಮ್ಮಡಿ ವಿಕ್ರಮಾದಿತ್ಯ, ಮೂರನೆಯ ಗುತ್ತದೇವ ಮತ್ತು ನಾಲ್ಕನೆಯ ವಿಕ್ರಮಾದಿತ್ಯರು ಕ್ರ್ರಮವಾಗಿ ಆಳಿದರು. ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಶಾಸನವೊಂದು ನಾಲ್ಕನೆಯ ವಿಕ್ರಮಾದಿತ್ಯನು ಸೇವುಣ ರಾಮಚಂದ್ರನ ಮಹಾಮಂಡಳೇಶ್ವರನಾಗಿ ಆಳ್ವಿಕೆ ಮಾಡುತ್ತಿದ್ದನೆಂದು ತಿಳಿಸುತ್ತದೆ. ಮುಂದೆ ಇವರ ಆಳ್ವಿಕೆಯ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಬಹುಶ: ಸೇವುಣ ರಾಜ್ಯವು ಮಹಮ್ಮದಿಯರ(ಖಿಲ್ಜಿ) ಕೈಗೆ ಸಿಕ್ಕು ಹಾಳಾದ ನಂತರ ಗುತ್ತರು ನಾಶವಾಗಿರಬಹುದೆಂದು ಹೇಳಬಹುದು. 
ಬೆಳಗುತ್ತಿಯ ಸಿಂಧರು
     ಹೊನ್ನಾಳಿ ತಾಲೂಕಿನ ಬೆಳಗುತ್ತಿ ಇವರ ಮೂಲ ಸ್ಥಳವಾಗಿದೆ. ಸಿಂಧರು ವಾಸ್ತವವಾಗಿ ನಾಗರಖಂಡ-70ನ್ನು ಒಳಗೊಂಡಂತೆ ಸೇಂದ್ರಕ ವಿಷಯದಲ್ಲಿ ಬಾದಾಮಿ ಚಾಲುಕ್ಯರ ಕಾಲದಿಂದ ಆಳುತ್ತಿದ್ದರು.  ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕು ಮತ್ತು ಶಿಗ್ಗಾಂವಿ ತಾಲೂಕಿನ ಕುಂದೂರು ಪರಿಸರದಿಂದ ಬೆಳಗುತ್ತಿ ಸಿಂಧರು ಆಳುತ್ತಿದ್ದರೆಂದು ತಿಳಿದುಬರುತ್ತದೆ. ಕೆಲಕಾಲ ಹಿರೇಕೆರೂರು ತಾಲೂಕಿನ ಹಳ್ಳೂರು ಇವರ ರಾಜಧಾನಿಯಾಗಿತ್ತು. ಈ ಮನೆತನದ ಪಿರಿಯಚಟ್ಟರಸ, ಅವನ ಮಗ ಅಯ್ಯಣ ಜೋಗರಸ ಮತ್ತು ಎರಡನೆಯ ಚಟ್ಟರಸರು ಆರಂಭದಲ್ಲಿ ಕಲ್ಯಾಣ ಚಾಲುಕ್ಯರ ಮಾಂಡಳಿಕರಾಗಿ ಆಳಿದರೆಂದು ಹಳ್ಳೂರು ಶಾಸನದಿಂದ ತಿಳಿದುಬರುತ್ತದೆ. ಈ ಶಾಸನವು ಬೆಳಗುತ್ತಿ ಸಿಂಧರ ವಂಶಾವಳಿಯನ್ನು ಹೊಂದಿದೆ. ಜೋಗರಸನ ಶಾಸಗಳು ಹಿರೇಕೆರೂರು ತಾಲೂಕಿನ ಅಣಜಿಗೇರಿ ಹಾಗೂ ಮೇದೂರುಗಳಲ್ಲಿ ದೊರೆತಿವೆ. ಈತನು ಮಾಸೂರು-12 ಮತ್ತು ಕುಂದೂರು-12ರ ಮೇಲೂ ಅಧಿಕಾರವನ್ನು ಹೊಂದಿದ್ದನೆಂದು ಅಲ್ಲಿಯ ಶಾಸನಗಳು ತಿಳಿಸುತ್ತವೆ. ಎರಡನೆಯ ಚಟ್ಟರಸನ ನಂತರ ಒಂದನೆಯ ಈಶ್ವರದೇವ, ಮಾಚರಸ ಮತ್ತು ಮಲ್ಲಿದೇವ ಆಳಿದರು.  ಮಾಚರಸನು ಮೂರನೆಯ ಸೋಮೇಶ್ವರನ ಮಾಂಡಳಿಕನಾಗಿ ಆಳುತ್ತಿದ್ದನೆಂದು ನಾಗವಂದ ಶಾಸನ ತಿಳಿಸುತ್ತದೆ. ಕ್ರಿ.ಶ.1187ರ ಹಿರೇಕಬ್ಬಾರ ಶಾಸನ ಮಲ್ಲಿದೇವನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಇವನ ನಂತರ ಸಾಹಸಿಯಾದ ಎರಡನೆಯ ಈಶ್ವರದೇವ ಆಳಿದ. ಈತನು ಹಳ್ಳೂರನ್ನು ರಾಜಧಾನಿಯಾಗಿ ಮಾಡಿಕೊಂಡು ಮಾಸೂರು-12, ಎಡವಟ್ಟೆ-70, ಕುಂದೂರು-70ಗಳನ್ನು ಆಳುತಿದ್ದನೆಂದು ತಿಳಿದುಬರುತ್ತದೆ. ಈತನ ಕಾಲದ ಶಾಸನಗಳು ಕೋಡಮಗ್ಗಿ ಮತ್ತು ನಿಡನೇಗಿಲಗಳಲ್ಲಿ ದೊರೆತಿವೆ. ಈತನ ಮಕ್ಕಳಾದ ಪಾಂಡ್ಯದೇವ ಮತ್ತು ಮಲ್ಲಿದೇವರು ಇವನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದರು. ಇಮ್ಮಡಿ ಮಲ್ಲಿದೇವನು ಹಳ್ಳೂರಿನಿಂದಲೇ ಆಳುತ್ತಿದ್ದನೆಂದು ತಿಳಿದುಬರುತ್ತದೆ. ಈತನ ಮಗ ಮುಮ್ಮಡಿ ಈಶ್ವರದೇವನು ಸೇವುಣರನ್ನು ಬೆಂಬಲಿಸಿ ಹೊಯ್ಸಳರೊಂದಿಗೆ ಹೋರಾಡಿದನು. ಮುಂದೆ ಸಿಂಧರ ರಾಜ್ಯ ಸೇವುಣರ ರಾಜ್ಯದಲ್ಲಿ ವಿಲೀನವಾಯಿತು.

# ವೈ. ಮದ್ದಾನಸ್ವಾಮಿ. ಸಹಾಯಕ ಪ್ರಾಧ್ಯಾಪಕರು
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ.
 Mob: 9620179987

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!