ಹಾವೇರಿ ಜಿಲ್ಲೆಯ ಭೌಗೋಳಿಕ ದರ್ಶನ.....!!!

ಹಾವೇರಿ ಜಿಲ್ಲೆಯ ಭೌಗೋಳಿಕ ದರ್ಶನ.....!!!
ನಾಲ್ಕನೂರು ಮಹಾಜನರಿರುವ ಅಗ್ರಹಾರ, “ಭೂಮಿಗೆ ಅದೊಂದು ಅಲಂಕಾರ”, “ಬ್ರಹ್ಮನ ನಿವಾಸ”, ವೇದಗಳ ನೆಲೆ ಹಾಗೂ ವಿದ್ಯಾಧಿದೇವತೆ ಸರಸ್ವತಿಯ ನೆಲೆಬೀಡು ಎಂದು ಶಾಸನ ಕವಿ ವರ್ಣಿಸಿದ ಹಾಗೂ ವಿಶ್ವ ಇತಿಹಾಸದಲ್ಲಿಯೇ ತನ್ನ ಹಳ್ಳೂರ ಗ್ರಾಮದಿಂದ ಪ್ರಸಿದ್ದಿಯನ್ನು ಪಡೆದ ಹಾವೇರಿ ಜಿಲ್ಲೆಯು ಉತ್ತರ ಕರ್ನಾಟಕದ ಹೆಬ್ಬಾಗಿಲು ಮತ್ತು ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಪ್ರದೇಶ. ಶಾಸನೋಕ್ತವಾಗಿ ಈ ಕ್ಷೇತ್ರವನ್ನು “ನಳಪುರಿ”ಎಂದು ಕರೆಯಲ್ಪಟ್ಟಿದ್ದು ಈ ಕ್ಷೇತ್ರಕ್ಕೂ ಮತ್ತು ನಳನಿಗು ಇರುವ ಸಂಬಂದವನ್ನು ಈ ಕೆಳಗಿನ ಪ್ರಕಾರ ಶಾಸನದಲ್ಲಿ ಉಲ್ಲೆಖಿಸಲಾಗಿದೆ.

ಹರಿವಹ ನೀರ್ಗೇಯಡಂಬರಲುರಗಂ ಕಂಡು ನಳನದಂ ಕಟ್ಟಸೆ ಹಾವೇರಿಯಂದು ಪರಮಾತ್ರ್ಥನಾಮ ಮಾದುದಾ ಕೃತಯುಗದೊಳ್”(ಹಾವೇರಿಯ ಕಲ್ಲು ಮಂಟಪದ ಶಾಸನದಲ್ಲಿ)

ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದುದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿಯು ಒಂದು ಕೆರೆಯನ್ನು ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯಂದು ನಾಮಾಂಕಿತವನ್ನು ಕೊಟ್ಟನು. ಹಾವೇರಿಯು ಈ ಹಿಂದೆ ಪುಲಿಗೆರೆ ಮುನ್ನುರು(300) ಅಂದರೆ ಈಗಿನ ಲಕ್ಷ್ಮೆಶ್ವರಕ್ಕೆ ಸೇರುತ್ತಿತ್ತು. 

ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವನ್ನು ಆಡಳಿತ್ಮಕವಾಗಿ 24-08-1997 ರಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಧಾರವಾಡ ಜಿಲ್ಲೆಯಿಂದ ವಿಭಜಿಸಿ ಪುನರ್ವಿಂಗಡಣೆ ಮಾಡಿ ಹಾವೇರಿ, ಹಾನಗಲ್, ಹಿರೇಕೆರೂರು, ರಟ್ಟಿಹಳ್ಳಿ, ರಾಣಿಬೇನ್ನೂರು, ಬ್ಯಾಡಗಿ, ಶಿಗ್ಗಾಂವ, ಮತ್ತು ಸವಣೂರು ತಾಲೂಕುಗಳನ್ನು ಇದಕ್ಕೆ ಸೇರಿಸಿ ಇದರ ಸೌಂದರ್ಯವನ್ನು ಹೆಚ್ಚಿಸಿದರು. 

ಈ ಜಿಲ್ಲೆಯ ಮೂರು ತಾಲೂಕುಗಳಲ್ಲಿ “ರಾಷ್ಟ್ರಿಯ ಹೆದ್ದಾರಿ ನಾಲ್ಕು” (ದೇಶದ ಎರಡನೆ ಅತಿದೊಡ್ಡ ಹೆದ್ದಾರಿ) ಹಾಯ್ದು ಹೋಗಿದ್ದು ಇದು ದೇಶದ ಎಲ್ಲಾ ರಾಜ್ಯಗಳೊಂದಿಗೆ ಸಂಪರ್ಕವನ್ನು ಕಲ್ಪಿಸುವದರೊಂದಿಗೆ ಜಿಲ್ಲೆಯ ಆರ್ಥಿಕ ವ್ಯೆವಸ್ಥೆಯನ್ನು ಉತ್ತಮಗೊಳಿಸಿದೆ. 

ಈ ಪ್ರದೇಶದಲ್ಲಿಯ ಪುಣ್ಯಕ್ಷೇತ್ರಗಳು ಮತ್ತು ಪುಣ್ಯಪುರುಷರ ನಡೆಯಿಂದ ಎರಡನೆ ಕಾಶಿಯೆಂದು ಪ್ರಚಲಿತದಲ್ಲಿದೆ. ಇಂತಹ ಮತ್ತೊಂದು ಹಾವೇರಿಯೆಂಬ ನಾಮಾಂಕಿತ ಪ್ರದೇಶ ಸಂಯುಕ್ತ ರಾಷ್ಟ್ರಗಳಲ್ಲಿರುವ, ಜಗತ್ತಿನಲ್ಲಿಯೇ ಶಾಂತಿಯುತ ಹಾಗೂ ಉತ್ತಮ ಶಿಕ್ಷಣ ಪದ್ದತಿಯನ್ನು ಹೊಂದಿದ ದೇಶವಾದಂತಹ ಫಿನ್‍ಲ್ಯಾಂಡನಲ್ಲಿರುವುದೆ ವಿಶೇಷ.
 ಹಾವೇರಿ ಜಿಲ್ಲೆಯು ಸಮುದ್ರ ಮಟ್ಟದಿಂದ 540ಮೀ ಎತ್ತರದಲ್ಲಿದ್ದು ಮತ್ತು ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿರುವುದರಿಂದ ಅಧಿಕ ಉಷ್ಣತೆಯನ್ನು ಒಳಗೊಂಡಿದ್ದು. ಇಲ್ಲಿ ಎಪ್ರಿಲ್ ತಿಂಗಳಲ್ಲಿ 380ಫೆ ಇರುತ್ತದೆ ಮತ್ತು ಡಿಸೆಂಬರ್‍ನಲ್ಲಿ ಅತಿ ಕಡಿಮೆ ಉಷ್ಣತೆ ಅಂದರೆ 170ಫೆ ಇರುತ್ತದೆ. ಡಿಸೆಂಬರ್ ಮತ್ತು ಮಾರ್ಚ ಅವದಿಯಲ್ಲಿ ಮುಗಿಲ ಮುಸುಕುವಿಕೆ ಕಡಿಮೆಯಾಗಿದ್ದು ಆಕಾಶ ಶುಭ್ರವಾಗಿರುತ್ತದೆ

ಎಪ್ರಿಲ್ ನಂತರ ಮುಗಿಲ ಮುಸುಕುವಿಕೆ ಹೆಚ್ಚಾಗುತ್ತದೆ.
ಹಾವೇರಿ ಜಿಲ್ಲೆಯ ಮೇಲ್ಮೈ ಲಕ್ಷಣದಲ್ಲಿ ಪೂರ್ವಭಾಗ ಸ್ವಲ್ಪ ಸಮತಟ್ಟಾಗಿ ಕಪ್ಪು ಮತ್ತು ಕೆಂಪು ಮಣ್ಣಿನಿಂದ ಕೂಡಿದೆ. ಪಶ್ಚಿಮ ಭಾಗದ ಹಾನುಗಲ್ ತಾಲೂಕು ಉಬ್ಬು-ತಗ್ಗುಗಳಿಂದ ಮತ್ತು ಗುಡ್ಡಗಳಿಂದ ಆವೃತಗೊಂಡಿದೆ, ಇವುಗಳಲ್ಲಿ ಪ್ರಮುಖ ಗುಡ್ಡಗಳೆಂದರೆ ಐರಣಿ ಗುಡ್ಡ, ಬ್ಯಾಡಗಿ ಪೂರ್ವದ ದೇವರಗುಡ್ಡ, ಆಡೂರಿನ ಪೂರ್ವ ಮತ್ತು ಪಶ್ಚಿಮ ಭಾಗ, ಹಿರೇಕೆರೂರಿನ ಕರಡಿಗುಡ್ಡ, ಬಂಕಾಪೂರದ ಕಿರಿಗುಡ್ಡಗಳು ಬಾಳಂಬೀಡದಿಂದ ಅಕ್ಕಿಆಲೂರು ವರೆಗಿನಗುಡ್ಡ ಹಾಗೂ ಹಾನಗಲ್ಲು ತಾಲೂಕಿನ ಪಶ್ಚಿಮ ಭಾಗ ಕುರುಚಲುಗುಡ್ಡಗಳಿಂದ ಕೂಡಿದೆ. ಹಾನುಗಲ್, ಹಿರೇಕೆರೂರು, ಶಿಗ್ಗಾಂವ, ತಾಲೂಕುಗಳು ಹೆಚ್ಚಾಗಿ ಕಪ್ಪು ಮತ್ತು ಕೆಂಪು ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಾಗಿವೆ. ಸವಣೂರಿನ ಪಶ್ಚಿಮ ಭಾಗ ಮತ್ತು ರಾಣಿಬೆನ್ನೂರು ಕಪ್ಪು ಜೆಡಿಯ ಮಣ್ಣು ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಆವೃತವಾಗಿದೆ.
ಹಾನುಗಲ್ ಮತ್ತು ಹಿರೇಕೆರೂರು ತಾಲೂಕಗಳು ಅರೆ ಮಲೆನಾಡು ಪ್ರದೇಶಗಳಾಗಿದ್ದು, ಅತಿ ಹೆಚ್ಚು ಮಳೆ ಬೀಳುವ ತಾಲೂಕುಗಳಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ. ಈ ಪ್ರದೇಶದಲ್ಲಿ ಮೇ ತಿಂಗಳಿನಿಂದ ಅಕ್ಟೊಬರ್‍ವರೆಗೆ ಮಳೆ ಬೀಳುವ ಸಮಯವಾದರೆ. ನವಂಬರ್ ತಿಂಗಳಿಂದ ಜನೇವರಿ ತಿಂಗಳವರೆಗೆ ಬಿಸಿಲು ಹೆಚ್ಚಾಗಿರುತ್ತದೆ.

ಜಿಲ್ಲೆಯ ಜನರ ಮುಖ್ಯ ಉದ್ಯೋಗ ವ್ಯವಸಾಯವಾಗಿದ್ದು ಇವರ ಮುಖ್ಯ ಬೆಳೆಗಳು ರಾಗಿ,ಜೋಳ(ಸಿಂದಗಿ ತಾಲೂಕಿನಲ್ಲಿ ಸಿಗುವ ಜೋಳ ರುಚಿಯಾಗಿರಲು ಕಾರಣ ಈ ಬೆಳೆಯು ಮಳೆಯನ್ನಾದರಸಿದ ಬೆಳೆಯಾಗಿರುತ್ತದೆ). ಹತ್ತಿ(ಬ್ರಿಟಿಷರು ಎರಡನೆ ಮಹಾಯುದ್ದದ ನಂತರ ಈ ಪ್ರದೇಶಗಳಿಗೆ ಹತ್ತಿಬೆಳೆಯಲು ಪ್ರಾಶ್ಯಶ್ತವನ್ನು ಕೊಟ್ಟರು). ಭತ್ತ, ಅಡಿಕೆ, ಬಾಳೆ, ಮೆಕ್ಕೆಜೋಳ, ವಿಳ್ಯದಎಲೆ (ಸವಣೂರು ನವಾಬರ ಕಾಲದಲ್ಲಿ ಪ್ರಸಿದ್ದಿಯನ್ನು ಪಡೆಯಿತು), ಸೂರ್ಯಕಾಂತಿ, ಶೆಂಗಾ, ಮೆಣಸಿನಕಾಯಿ ವಿವಿದ ತರಕಾರಿಗಳು ಮತ್ತು ಧಾನ್ಯಗಳಾಗಿವೆ. 

ಜಿಲ್ಲೆಯಲ್ಲಿಯ ಪ್ರಾಚೀನ ಬೆಳೆಗಳೆಂದರೆ ರಾಗಿ ಮತ್ತು ಭತ್ತ ಏಕೆಂದರೆ 1965ರಲ್ಲಿ ಪುರಾತತ್ವ ಇಲಾಖೆಯಿಂದ ನಾಗರಾಜ ರಾವ್ ಮತ್ತು ಸಂಗಡಿಗರು ನಡೆಸಿದ ಉತ್ಖನ್ನನದ ವೇಳೆ ಅವರಿಗೆ ಈ ದಾನ್ಯಗಳು ಹಿರೇಕೆರೂರು ತಾಲೂಕಿನ ಹಳ್ಳೂರ ಗ್ರಾಮದಲ್ಲಿಯ ಕೋಟೆಯ ಭಾಗದಲ್ಲಿ ದೊರೆತಿದ್ದು, ಇವುಗಳು ಕ್ರಿ. ಪೂ 1700 ಕಾಲಕ್ಕೆ ಸೇರಿದ್ದಾಗಿದೆ ಎಂದಿದ್ದಾರೆ.

ಕನಕದಾಸರು “ರಾಮ ಧಾನ್ಯಚರಿತೆಯಲ್ಲಿ” ಹಾಗೂ ಸರ್ವಜ್ಞರು ತಮ್ಮ ವಚನಗಳಲ್ಲಿ ಈ ಧಾನ್ಯಗಳನ್ನೆ ಬಳಸಿದ್ದರಿಂದ ಇದನ್ನು ಪುಷ್ಟಿಕರಿಸುತ್ತದೆ, ಇವುಗಳ ಮೂಲವನ್ನು ನೋಡಿದಾಗ ಇವುಗಳು ದಕ್ಷಿಣ ಆಫ್ರಿಕಾದ್ದು ಎಂದು ತಿಳಿದು ಬರುತ್ತದೆ. ಅಂದರೆ ಈ ಬೆಳೆಗಳನ್ನು ನಮ್ಮ ಪೂರ್ವಜರು ಅಲ್ಲಿಂದ ತಂದಿರಬಹುದು ಎಂದು ವಿಶ್ಲೇಸಿಸಬಹುದು.
ಈ ಜಿಲ್ಲೆಯಲ್ಲಿಯ ಕೆರೆಗಳ ಮತ್ತು ಬಾವಿಗಳ ನೀರಿನಿಂದಾಗಿ ವ್ಯವಸಾಯವು ಹೆಚ್ಚು ಅಭಿವೃದ್ದಿಗೊಂಡಿದೆ, ಅವುಗಳಲ್ಲಿ ಹಾವೇರಿ ಮತ್ತು ಹಿರೇಕೆರೂರು ಸ್ಥಳನಾಮಗಳೆರೆಡು ಕೆರೆಗೆ ಸಂಭಂದಿಸಿದ ಹೆಸರುಗಳಾಗಿದ್ದು, ಈ ಕೆರೆಗಳಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಹಾವೇರಿಯ ಹೆಗ್ಗೆರಿಯು 515 ಎಕರೆಗೆ, ಹಿರೇಕೆರೂರಿನ ದೊಡ್ಡ ಕೆರೆ 765 ಎಕರೆಗೆ, ಬಂಕಾಪುರ ಕೆರೆ 654 ಎಕರೆಗೆ, ಹಾನಗಲ್ ತಾಲೂಕಿನ ಹಳೆಕೋಟಿ ಬಳಿಯ ಆನೆಕೆರೆ 537 ಎಕರೆಗೆ, ನೆರೆಗಲ್ ಬಳಿಯ ಹಿರೇಕೆರೆ 602 ಎಕರೆಗೆ, ತಿಳುವಳ್ಳಿಯ ಹಿರೇಕೆರೆ 862 ಎಕರೆಗೆ, ಹಾಗೂ ಮದಗದ ಕೆರೆ(ಮಾಸುರ) ಕೃಷಿಗೆ ನೀರನ್ನು ಒದಗಿಸುತ್ತದೆ. 

ಇಲ್ಲಿ ಬಾವಿಗಳ ನೀರು ಭೂಮಿಯ ಫಲವತ್ತತೆಯನ್ನು ಇನ್ನೂ ಹೆಚ್ಚಿಸುತ್ತದೆ. ಪ್ರಾಚೀನ ಕಾಲದಲ್ಲಿ ಬಾವಿಯನ್ನು ಮತ್ತು ಕೆರೆಯನ್ನು ಸಾರ್ವಜನಿಕರಿಗಾಗಿ ತೆಗೆಸುವುದು ಕಲ್ಯಾಣದ ಕೆಲಸವೆಂದು ತಿಳಿದಿದ್ದರು (ಗಂಗಿಬಾವಿ ಮತ್ತು ಹಂಸಬಾವಿಯ ಗ್ರಾಮಗಳ ಹೆಸರೆ ತಿಳಿಸುವಂತೆ ಇಲ್ಲಿ ಭಾವಿಗಳು ಹೇರಳವಾಗಿವೆ).

ಈ ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ನದಿಗಳು
ನದಿಗಳು ಈ ಪರಿಸರವನ್ನು ಮತ್ತು ಇಲ್ಲಿ ವಾಸಿಸುವ ಜನರನ್ನು ಸಂಪತ್ಭರಿತರನ್ನಾಗಿ ಮಾಡಿವೆ ಅವುಗಳೆಂದರೆ. 

ತುಂಗಭದ್ರಾ - ಶಿವಮೊಗ್ಗ ಜಿಲ್ಲೆಯ ಕೂಡಲ ಎಂಬಲ್ಲಿ ತುಂಗ ಮತ್ತು ಭದ್ರಾ ಎಂಬ ಎರಡು ನದಿಗಳು ಸಂಗಮಗೊಂಡು ಜಿಲ್ಲೆಯನ್ನು ರಾಣೆಬೆನ್ನೂರಿನ ಹೊಳೆಆನ್ವೇರಿಯಲ್ಲಿ ಪ್ರವೇಶಿಸುತ್ತವೆ. ಈ ನದಿಯು ಜೀವನದಿಯಾಗಿದ್ದು ವರ್ಷವಿಡಿ ಹರಿಯುತ್ತದೆ ಆದರೆ ಬೇಸಗೆಯಲ್ಲಿ ಇದರ ಪ್ರಮಾಣ ಕಡಿಮೆ. ಈ ನದಿಯ ದಡದಲ್ಲಿ ಐರಣಿ(ಐರಾವತ ಕ್ಷೇತ್ರ), ಗಳಗನಾಥ ಮತ್ತು ಚೌಡಯ್ಯದಾನಪುರ ಎಂಬ ಪವಿತ್ರ ಪುಣ್ಯ ಕ್ಷೇತ್ರಗಳಿವೆ. ಈ ನದಿಗೆ ತನ್ನದೆ ಆದ ಪೌರಾಣಿಕ ಹಿನ್ನಲೆಯಿದ್ದು ಮಹಾಕಾವ್ಯ ರಾಮಾಯಣದಲ್ಲಿ ಇದನ್ನು “ಪಂಪಾ” ನದಿಯಂದು ಉಲ್ಲೇಖಿಸಲಾಗಿದೆ ಮತ್ತು ಅನೇಕ ಪೂರ್ವ ಇತಿಹಾಸದ ನೆಲೆಗಳನ್ನು ಇದರ ದಡದಲ್ಲಿಯೆ ಕಾಣಬಹುದು(ನದಿಹರಳಳ್ಳಿ, ಹಳ್ಳೂರು ಮತ್ತು ನಲವಾಗಲ).

ಕುಮದ್ವತಿ – ಈ ನದಿಯು ಶಿಕಾರಿಪುರ ತಾಲೂಕಿನ ಹುಮಚದ ಹತ್ತಿರ ಅಗಸ್ತ್ಯ ಪರ್ವತದಲ್ಲಿ(ಬಿಲ್ಲೇಶ್ವರ ಬೆಟ್ಟ) ಹುಟ್ಟಿ ಶಿಕಾರಿಪುರದ ಮುಖಾಂತರ ಉತ್ತರಕ್ಕೆ ಹರಿದು ಹಿರೇಕೆರೂರು ತಾಲೂಕನ್ನು ಪ್ರವೇಶಿಸಿ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ತುಂಗಭದ್ರವನ್ನು ಕೂಡುವುದರೊಂದಿಗೆ ಹೊಳೆಆನ್ವೇರಿ ಪವಿತ್ರ ಕ್ಷೇತ್ರವನ್ನಾಗಿಸಿದೆ. ಮಾಸೂರಿನ ಮದಗದ ಕೆಂಚಮ್ಮನ ಕೆರೆಗೆ ಈ ನದಿಯು ಜೀವನಾಡಿಯಾಗಿದ್ದು ಇದರ ಪ್ರಕೃತಿಯಲ್ಲಿ ದೊಡ್ಡದಾದ ಝರಿಯನ್ನು ಹುಟ್ಟಿಸಿ ಮಳೆಗಾಲದಲ್ಲಿ ತನ್ನ ಮನೋಹರ ಸೌಂದರ್ಯವನ್ನು ಪ್ರಕೃತಿ ಮಡಿಲಿನಲ್ಲಿ ಹರಿಬಿಡುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ವರದಾ ನದಿ - ಇದು ತುಂಗಭದ್ರಾ ನದಿಯ ಉಪನದಿಯಾಗಿದ್ದು ಸೊರಬ ತಾಲೂಕಿನ ವರದಳ್ಳಿ ಮೂಲಕ ಹರಿದು ಹಾನುಗಲ್ ತಾಲೂಕಿನ ಹೊಂಕಣದ(ಸುಂದರವಾದ ಮಠವು ಇದರ ದಡದಲ್ಲಿದೆ) ಬಳಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ನದಿಯು ಹಾನಗಲ್ಲ ತಾಲೂಕಿನಲ್ಲಿ ಈಶಾನ್ಯ ದಿಕ್ಕಿಗೆ ಹರಿದು ಮುಂದೆ ಹಾವೇರಿ ಮತ್ತು ಸವಣೂರು ತಾಲೂಕುಗಳ ಗಡಿ ರೇಖೆಯಾಗಿ ಹರಿದು ಮುಂದೆ ಗಳಗನಾಥ ಗ್ರಾಮದ ಹತ್ತಿರ ತುಂಗಭದ್ರವನ್ನು ಕೂಡಿಕೊಳ್ಳುತ್ತದೆ.

ಧರ್ಮಾ ನದಿ - ಈ ಉಪನದಿಯು ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಹಾನುಗಲ್ ತಾಲೂಕಿನ ಡೊಲ್ಲರಟ್ಟಿಯಲ್ಲಿ ಪ್ರವೇಶಿಸಿ ನಂತರ ಕೂಡಲದಲ್ಲಿ ವರದಾ ನದಿಯನ್ನು ಸೇರುತ್ತದೆ ಈ ನದಿಯ ನಾಮವು ಹಾನುಗಲ್‍ನ ಪೌರಾಣಿಕ ಹೆಸರಾದಂತಹ ವೀರಾಟನಗರವನ್ನು ಪುಷ್ಟಿಕರಿಸುತ್ತದೆ.

ಜಿಲ್ಲೆಯ ವಿಸ್ತಿರ್ಣ ಮತ್ತು ಜನಸಂಖ್ಯೆ.
ಹಾವೇರಿ ಜಿಲ್ಲೆಯು ಏಂಟು ತಾಲೂಕುಗಳನ್ನು (ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಹಾವೇರಿ, ಹಾನುಗಲ್, ಶಿಗ್ಗಾಂವ, ಸವಣೂರು, ಬ್ಯಾಡಗಿ) ಮತ್ತು 698 ಗ್ರಾಮಗಳನ್ನು ಒಳಗೊಂಡಿದೆ. 

ಒಟ್ಟು ಜಿಲ್ಲೆಯ ವಿಸ್ತೀರ್ಣ4842 ಚ.ಕಿಮೀ (sqm). ವಿಸ್ತೀರ್ಣ ಹೊಂದಿದೆ .

1) ರಾಣೆಬೆನ್ನೂರು 904.56 ಚ.ಕಿಮೀ (ಜನಸಂಖ್ಯೆ 3,04,990 - 2011 ರ ಜನಗಣತಿಯ ಆಧಾರದ ಮೇಲೆ)
2) ಹಿರೇಕೆರೂರು (ರಟ್ಟಿಹಳ್ಳಿಯನ್ನೊಳಗೊಂಡಂತೆ) 806.00 ಚ.ಕಿಮೀ( 2,12,458 ಜನಸಂಖ್ಯೆ ಹೊಂದಿದೆ)
3) ಹಾವೇರಿ 799.54 ಚ.ಕಿಮೀ (ಜನ ಸಂಖ್ಯೆ- 2,52,347)
4)ಹಾನುಗಲ್ 767.78ಚ.ಕಿಮೀ (ಜನಸಂಖ್ಯೆ-2,30,750)
5) ಶಿಗ್ಗಾಂವ 589.23 ಚ.ಕಿಮೀ (ಜನ ಸಂಖ್ಯೆ- 1,66,742)
6) ಸವಣೂರು 538.99 ಚ.ಕಿಮೀ (ಜನ ಸಂಖ್ಯೆ-1,43,885)
7) ಬ್ಯಾಡಗಿ 436.00 ಚ.ಕಿಮೀ (ಜನಸಂಖ್ಯೆ- 127,944)

ಜಿಲ್ಲೆಯ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ.
• ಜಿಲ್ಲೆಯಲ್ಲಿ ಒಟ್ಟು 208 ಗ್ರಾಮಪಂಚಾಯತಿಗಳಿವೆ.
• ರೇಲ್ವೆ ಮಾರ್ಗವು ನಮ್ಮ ಜಿಲ್ಲೆಯಲ್ಲಿ 99 ಕಿಮೀ ಹಾಯ್ದು ಹೋಗಿದೆ(2010-11 ರ ಪ್ರಕಾರ).
• 103 ಕಿಮೀಯಷ್ಟು ರಾಷ್ಟ್ರೀಯ ಹೆದ್ದಾರಿ-4 ಜಿಲ್ಲೆಯ ಮುಖಾಂತರ ಹಾಯ್ದು ಹೋಗಿದೆ.
• 587 ಕಿಮೀಯಷ್ಟು ರಾಜ್ಯ ಹೆದ್ದಾರಿ ಜಿಲ್ಲೆಯ ಮುಖಾಂತರ ಹಾಯ್ದು ಹೋಗಿದೆ.
• 2011 ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 8,19,295 ಗಂಡಸರು ಹಾಗೂ 7,77,211 ಹೆಂಗಸರ ಸಂಖ್ಯೆ ಇರುತ್ತದೆ.
• ಜಿಲ್ಲೆಯು 47,454 ಹೆಕ್ಟರ್ ಭೂಮಿಯಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ.
• 2010-11 ರ ಪ್ರಕಾರ ಜಿಲ್ಲೆಯಲ್ಲಿ 258 ಅಂಚೆ ಕಛೇರಿಗಳಿವೆ.
• 2010-11 ರ ಪ್ರಕಾರ 576 ಪ್ರಾಥಮಿಕ ಶಾಲೆಗಳಿವೆ.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!