ಹಾವೇರಿ ಜಿಲ್ಲೆಯನ್ನಾಳಿದ ರಾಜ ಮನೆತನಗಳು
ಹಾವೇರಿ ಜಿಲ್ಲೆಯನ್ನಾಳಿದ ರಾಜ ಮನೆತನಗಳು
ರಾಜ ಪ್ರಭುತ್ವಕಾಲದಲ್ಲಿ ರಾಜರೆ ಶ್ರೇಷ್ಠರು, ದೈವಿಪುರುಷರು ಹಾಗೂ ಅವರೆ ಸರ್ವಸ್ವವೆನ್ನುವ ಸಮಯದಲ್ಲಿ ಹಾವೇರಿ ಜಿಲ್ಲೆಯ ಅನೇಕ ಭಾಗಗಳನ್ನು ಅಂದಿನ ವಿವಿಧ ರಾಜಮನೆತನಗಳು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡಿದ್ದವು. ಅಂತಹವುಗಳಲ್ಲಿ ಪ್ರಮುಖ ಮನೆತನಗಳೆಂದರೆ ಶಾತವಾಹನರು,ಬನವಾಸಿ ಕದಂಬರು, ಬಾದಾಮಿಯ ಚಾಳುಕ್ಯರು,ಮಳಖೇಡದ ರಾಷ್ಟ್ರಕೂಟರು, ಕಲ್ಯಾಣದಚಾಳುಕ್ಯರು, ಕಲಚೂರಿಗಳು, ಹಾನುಗಲ್‍ಕದಂಬರು, ಗುತ್ತಲದಗುತ್ತರು, ನೂರುಂಬಾಡದಕದಂಬರು, ಬಂಕಾಪುರ ಕದಂಬರು, ಬೆಳಗುತ್ತಿಯಸಿಂಧರು, ಯಲಬುರ್ಗಿಯಸಿಂದರು, ದೇವಗಿರಿಯಸೇಉಣರು, ಹೊಯ್ಸಳರು, ವಿಜಯನಗರಸಾಮ್ರಾಜ್ಯ, ಬಹುಮನಿಅರಸರು, ವಿಜಾಪುರಆದಿಲ್‍ಷಾಹಿಗಳು, ಮುಘಲರು, ಸವಣೂರನವಾಬರು, ಟಿಪೂಸುಲ್ತಾನ, ದೊಂಡಿಯಾವಾಘ, ಮರಾಠರು ಇವರೆಲ್ಲರು ತಮ್ಮದೆ ಆದ ಸಾಹಸ ಮತ್ತು ಶೌರ್ಯದಿಂದ ಹಾವೇರಿ ಜಿಲ್ಲೆಯ ಮೇಲೆ ಆಳ್ವಿಕೆಯನ್ನು ನಡೆಸಿದ್ದು, ಅವರು ತಮ್ಮದೆ ಆದ ಸಂಸ್ಕೃತಿ ಮತ್ತು ಧಾರ್ಮಿಕತೆಯ ಛಾಪನ್ನು ನಮ್ಮ ಮೇಲೆ ಮೂಡಿಸಿದ್ದಾರೆ.
ಇವರು ತಮ್ಮ ಆಳ್ವಿಕೆಯಲ್ಲಿ ಅನೇಕ ತಟಾಕ (ಕೆರೆ) ಗಳನ್ನು, ದೇವಾಲಯಗಳನ್ನು, ಅರಮನೆಗಳನ್ನು, ಕೋಟೆಯನ್ನು ಹಾಗೂ ಗ್ರಾಮಗಳನ್ನು ನಿರ್ಮಿಸಿ ಪ್ರಜೆಗಳ ಕಲ್ಯಾಣವನ್ನು, ದೈವಭಕ್ತಿಯನ್ನು ಬೆಳೆಸುವುದರ ಜೊತೆಗೆ ಸಾಮ್ರಾಜ್ಯದ ವಿಸ್ತರಣೆಯನ್ನೂ ಸಹ ಮಾಡುತ್ತಿದ್ದರು.
1. ಶಾತವಾಹನರು
ಮೊರಿಯರ ಅಂಗಡಿಗಳು ಎಂದು ಕರೆಯಲ್ಪಡುವ ಶಿಲಾಸಮಾಧಿಗಳ ಆಧಾರದ ಮೇಲೆ ಈ ಜಿಲ್ಲೆಯಲ್ಲಿ ಇವರು ಆಳ್ವಿಕೆಯನ್ನು ನಡೆಸಿದ್ದಾರೆ ಎನ್ನಬಹುದು.
ಇವರ ಪ್ರಥಮ ದೊರೆ “ಶ್ರೀಮುಖನ” ಕಾಲವು ಕ್ರಿ.ಪೂ 30 ಇವನ ಉತ್ತರಾಧಿಕಾರಿಗಳು ಕಣ್ಣ ಮತ್ತು ಶಾತಕರ್ಣಿ (ಕ್ರಿ.ಪೂ 03 ರಿಂದ ಕ್ರಿ.ಶ 15) ಮುಂದೆ “ಶಕರ”ದಾಳಿಯಿಂದ ಇವರ ರಾಜ್ಯ ದುರ್ಬಲವಾಯಿತಾದರೂ, ಕ್ರಿ.ಶ 106 ರಿಂದ 130 ರ ವರೆಗೆ ಆಳ್ವಿಕೆ ನಡೆಸಿದ “ಗೌತಮಿ ಪುತ್ರ”ನು ಈ ವಂಶದ ಘನತೆಯನ್ನು ಎತ್ತಿಹಿಡಿದನು.
ಇವನ ನಂತರ ಪುಲುಮಾವಿ, ಶಿವಶ್ರೀ,ಶಿವಸ್ಕಂದ,ಯಜ್ಞಶ್ರೀ ಮತ್ತು ಕುಂತಲ ಕಾಲ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು. ಇವರ ಆಳ್ವಿಕೆ ಸುಮಾರು ಕ್ರಿ.ಶ 232 ಕ್ಕೆ ಅಂತ್ಯವಾಯಿತು.
ಇವರ ಕಾಲದಲ್ಲಿ ವ್ಯಾಪಾರಕ್ಕೆ ಬಹಳಷ್ಟು ಮಹತ್ವ ಬಂದಿತಲ್ಲದೆ ಅನೇಕ ನಗರಗಳು ಆಸ್ತಿತ್ವಕ್ಕೆ ಬಂದವು. ಹಾವೇರಿ ಜಿಲ್ಲೆಯಲ್ಲಿಯ ಸಂಗೂರು, ಹೊಸರಿತ್ತಿ, ಕಳ್ಳಿಹಾಳ್, ತಡಸ, ಶಿಡೆನೂರು, ಆನೂರು, ಕದರಮಂಡಲಗಿ, ಮೋಟೆಬೆನ್ನೂರು ಹೊನ್ನತ್ತಿ, ಕುದ್ರಿಹಾಳ, ಮುದೇನೂರು, ಕೂನಬೇವು, ಇಟಗಿ, ನಿಟ್ಟೂರು ಮತ್ತು ಯಳವಟ್ಟಿಯಲ್ಲಿ ಇವರ ಕಾಲದ ಅವಶೇಷಗಳು ಕಂಡುಬಂದಿದ್ದು ಅವರ ಪ್ರಭಾವ ಈ ನಗರಗಳ ಮೇಲೆ ಇತ್ತೆಂದು ತೋರಿಸುತ್ತದೆ.
ಇವರ ಕಾಲದಲ್ಲಿ ಭಾರತ ಮತ್ತು ರೋಮ್‍ಗಳ ನಡುವೆ ನಡೆದ ವ್ಯಾಪಾರದಲ್ಲಿ ಈ ಜಿಲ್ಲೆಯು ಪಾಲನ್ನು ಹೊಂದಿದೆ ಎನ್ನಲು ಅಕ್ಕಿಆಲೂರ (ಹಾನಗಲ್ ತಾ:)ಲ್ಲಿ ದೊರೆತ ರೊವiನ್‍ರ ನಾಣ್ಯಗಳೆ ಸಾಕ್ಷಿಯಾಗಿವೆ. ಇವರ ರಾಜ್ಯವು ಕೈಮಗ್ಗದ ಉದ್ಯಮಕ್ಕೆ ಪ್ರಸಿದ್ದಿಯಾಗಿತ್ತು.
2. ಬನವಾಸಿ ಕದಂಬರು
ಶಾತವಾಹನರ ನಂತರ ಈ ಜಿಲ್ಲೆಯು ಕಾಂಚಿಯ ಪಲ್ಲವರ ವಶವಾದಂತೆ ತೋರುತ್ತದೆ. ಮಯೂರ ಶರ್ಮ(ವರ್ಮ)ಶಿವಮೊಗ್ಗ ಜಿಲ್ಲೆಯ ತಾಳಗುಂದ ಅಗ್ರಹಾರದ ಬ್ರಾಹ್ಮಣ. ಈತನು ಪಲ್ಲವ ರಾಜಧಾನಿ ಕಾಂಚಿಯ ಘಟಿಕಾ ಸ್ತಾನಕ್ಕೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಿರಲು ಅವಮಾನಿತನಾಗಿ ತನ್ನ ಆತ್ಮ ಸ್ಥೈರ್ಯದಿಂದ ಪ್ರಥಮ ಕನ್ನಡ ಮೂಲದ”ಕದಂಬ”ರಾಜವಂಶವನ್ನು ಸ್ಥಾಪಿಸಿದನು.
ಇವನ ನಂತರ ಕಙ್ಗವರ್ಮ, ಭಗೀರಥ, ರಘು, ಕಾಕಸ್ಥ ಶಾಂತಿವರ್ಮ, ಕೃಷ್ಣವರ್ಮ, ಮೃಗೇಶವರ್ಮ ಮತ್ತು ವಿಷ್ಣುವರ್ಮ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು. ಇವರಲ್ಲಿ ಕಾಕಸ್ಥವರ್ಮನು ತನ್ನ ಹೆಣ್ಣು ಮಕ್ಕಳನ್ನು ಗುಪ್ತವಾಕಾಟಕ, ಭಟಾರಿ, ಗಂಗ ವಂಶಗಳಿಗೆ ಮದುವೆಯನ್ನು ಮಾಡಿಕೊಟ್ಟು ಅವರೊಂದಿಗೆ ಒಳ್ಳೆಯ ಬಾಂದವ್ಯವನ್ನು ಹೊಂದಿದ್ದನು.
ಈ ರಾಜವಂಶದ ವಿಷ್ಣುವರ್ಧನ ಪ್ರಥಮವಾಗಿ “ಕರ್ನಾಟಕ” ಎಂಬ ಹೆಸರನ್ನು ಶಾಸನದಲ್ಲಿ ಸೂಚಿಸಿದನು. ಇವರ ಕಾಲದಲ್ಲಿ ಹಾವೇರಿಯ ದೇವಗಿರಿಯನ್ನು “ತ್ರಿಪರ್ವತ” ಎಂದು ಸೂಚಿಸಿದ್ದು ಅಲ್ಲಿ ಸಿಕ್ಕ ತಾಮ್ರಪಟಗಳು ಇದನ್ನು ಪುಷ್ಠೀಕರಿಸುತ್ತವೆ ಹಾಗೂ ಬ್ಯಾಡಗಿ ತಾಲೂಕಿನ ಮುತ್ತೂರನಲ್ಲಿಯೂ ಇವರ ಕಾಲದ ತಾಮ್ರ ಪಟಗಳು ದೊರೆತಿವೆ.
3. ಬಾದಾಮಿಯ ಚಾಳುಕ್ಯರು
ಚಾಳುಕ್ಯರು ತಾವು ಅಯೋಧ್ಯೆಯ ಮೂಲದವರೆಂದು ಹೇಳಿಕೊಂಡಿದ್ದಾರೆ. ಇವರ ಶಾಸನಗಳಲ್ಲಿ ಬರುವ ಚಾಲುಕ್ಯ, ಚಲ್ಕಿ, ಸಲ್ಕಿ, ಎಂಬ ಹೆಸರುಗಳಿಂದ ಇವರು ಸಲಿಕೆಗೆ ಸಂಬಂಧವುಳ್ಳ ಕೃಷಿ ಮೂಲದವರೆಂದು ಡಾ. ನಂದೀಮಠರು ಅಭಿಪ್ರಾಯ ಪಟ್ಟಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ ಪುಲಕೇಶಿ(ಪುಲ-ಹೋಲ ಮತ್ತು ಕೇಶಿ-ಅಗ್ರ) ಎಂಬ ಹೆಸರು ಇದನ್ನು ಸಮರ್ಥಿಸುತ್ತದೆ.
ಇದಕ್ಕೆ ಆಧಾರವೆಂಬಂತೆ ಬಾದಾಮಿಯ ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿನ ಜನರ ಕೃಷಿಯ ಮೇಲಿನ ಪ್ರೀತಿ ಮತ್ತು ಅವರು ಉಪಯೋಗಿಸುವ ಸಲಕರಣೆಯ ಬಗೆಗಿನ ಕಾಳಜಿ ಇದನ್ನು ಪುಷ್ಟೀಕರಿಸುತ್ತದೆ. ಇವರ ಸಾಮ್ರಾಜ್ಯವು ನರ್ಮದಾ ನದಿ ತೀರದಿಂದ ದಕ್ಷಿಣದ ಕಾವೇರಿ ನದಿಯವರೆಗೂ ವಿಸ್ತಾರವಾಗಿತ್ತು. ವಿಶಾಲವಾದ ಸಾಮ್ರಾಜ್ಯದಲ್ಲಿ ಶೈವ, ವೈಷ್ಣವ, ಬೌದ್ದ, ಮತ್ತು ಜೈನ ಧರ್ಮಗಳಿಗೆ ಆಶ್ರಯ-ಪ್ರೋತ್ಸಾಹ ನೀಡಿ ಜಗತ್ ಪ್ರಸಿದ್ಧ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಜಯಸಿಂಹ ಎಂಬಾತನು ಈ ಮನೆತನದ ಮೂಲ ಪುರುಷ ಮತ್ತು ಈತನು ಪ್ರಾರಂಭದಲ್ಲಿ ಕದಂಬರ ಮಾಂಡಲೀಕನಾಗಿದ್ದನು.
ಇವನ ನಂತರ ಒಂದನೆಯ ಪುಲಕೇಶಿ, ಒಂದನೇಯ ಕೀರ್ತಿವರ್ಮ, ಮಂಗಳೇಶ, ಇಮ್ಮಡಿ ಪುಲಕೇಶಿ, ವಿಷ್ಣುವರ್ಧನ, ಧರಾಶ್ರಯ, ಜಯಸಿಂಹ, ಬುದ್ದವರಸ, ಆದಿತ್ಯವರ್ಮ, ಚಂದ್ರಾದಿತ್ಯ, ಒಂದನೆಯ ವಿಕ್ರಮಾದಿತ್ಯ, ಜಯಸಿಂಹ ವಿನಯಾದಿತ್ಯ, ವಿಜಯಾದಿತ್ಯ, ಅರಿಕೇಸರಿ, ಎರಡನೇ ವಿಕ್ರಮಾದಿತ್ಯ, ಎರಡನೆ ಕೀರ್ತಿ ವರ್ಮ ಮತ್ತು ಭೀಮ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು. ಇವರಲ್ಲಿ ಒಂದನೆಯ ಪುಲಕೇಶಿಯು ಬದಾಮಿಯಲ್ಲಿ ಕೋಟೆಯನ್ನು ನಿರ್ಮಾಣ ಮಾಡಿ, ಅಶ್ವಮೇದ ಯಾಗ ಕೈಗೊಂಡ ಏಕೈಕ ಚಾಳುಕ್ಯ ದೊರೆ. ಇವರ ಕಾಲದಲ್ಲಿ ಹಾನುಗಲ್ ತಾಲೂಕಿನ ಗುಡಗುಡಿಯಲ್ಲಿ ಕೆರೆಯ ನಿರ್ಮಾಣವಾಯಿತು. ಇಮ್ಮಡಿ ಕೀರ್ತಿ ವರ್ಮನು ಆಡೂರು ಗ್ರಾಮದಲ್ಲಿ ಜಿನಭವನವೊಂದಕ್ಕೆ ದಾನ ಮಾಡಿದನು. ಇವರ ಲಾಂಛನ “ವರಾಹ” ಆಗಿತ್ತು.
4. ಮಳಖೇಡದ ರಾಷ್ಟ್ರಕೂಟರು
ಇವರು ಬದಾಮಿ ಚಾಳುಕ್ಯರನ್ನು ಸೋಲಿಸಿ ಪಟ್ಟಕ್ಕೆ ಬಂದವರು. ಮೂಲತಃ ತಾವು ಲಟ್ಟಲೂರವರು ಎಂದು (ಲಟ್ಟಲೂರಪುರವರಾಧೀಶ್ವರ) ರಾಷ್ಟ್ರಕೂಟರು ಕರೆದುಕೊಂಡಿರುವರು. ಫ್ಲೀüಟ್‍ರ್‍ವರು ಬೀದರನ ಸಮೀಪದಲ್ಲಿರುವ ಔರಾದ(ಕರ್ನಾಟಕದ ಅಂಚಿನಲ್ಲಿರುವ ಪ್ರದೇಶ) ಹತ್ತಿರ ಮಹಾರಾಷ್ಟ್ರದಲ್ಲಿರುವ ಲಾತೂರ ಎಂದು ಗುರುತಿಸಿದ್ದಾರೆ. ಈ ರಾಜಮನೆತನವನ್ನು ದಂತಿದುರ್ಗ, ಒಂದನೆಯ ಕೃಷ್ಣ, ಎರಡನೆ ಗೋವಿಂದ, ಧ್ರುವ, ಮೂರನೆಯ ಗೋವಿಂದ, ಒಂದನೆಯ ಅಮೋಘವರ್ಷ, ಎರಡನೆಯ ಕೃಷ್ಣ, ನಾಲ್ಕನೆಯ ಅಮೋಘವರ್ಷ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು.
ಇವರ ಅನೇಕ ಶಾಸನಗಳು ಕಚವಿ, ಗುಂಡಗಟ್ಟಿ (ಹಿರೇಕೆರೂರ), ಬರಡೂರು (ಶಿಗ್ಗಾಂವಿ) ರಾಣೆಬೆನ್ನೂರು, ಶಿಗ್ಗಾಂವಿ, ಹೊನ್ನತ್ತಿ, ಹೂಲಿಹಳ್ಳಿ, (ಹುಲಿಗಳು ಹೆಚ್ಚಾಗಿರುವ ಪ್ರದೇಶವಾಗಿತ್ತು), ಇಟಗಿ, ಹತ್ತಿಮತ್ತೂರು, ಅರಳಿಕಟ್ಟಿ (ಹಿರೇಕೆರೂರ), ದೇವಿಹೊಸುರು ಮತ್ತು ಘಾಳಿಪೂಜಿಯಲ್ಲಿ (ಬ್ಯಾಡಗಿ) ದೊರೆತಿವೆ.
ಅಮೋಘವರ್ಷ ದೀರ್ಘಕಾಲ ರಾಜ್ಯವನ್ನಾಳಿದನು ಮತ್ತು ಇವನ ಆಸ್ಥಾನದಲ್ಲಿ ಖ್ಯಾತವಿದ್ವಾಂಸರೂ, ಜೈನ ಸನ್ಯಾಸಿಗಳೂ ಆಗಿದ್ದ ವೀರಸೇನ, ಜಿನಸೇನ, ಗುಣಭದ್ರ ಹಾಗೂ ವೈಯಾಕರಿಣಿ ಹಾಗೂ ಶಾಕಟಾಯನ ಇವನ ಆಸ್ಥಾನದಲ್ಲಿದ್ದರು. ಗಣಿತಶಾಸ್ತ್ರಜ್ಞ ಮಹಾವೀರ್ಯಾಚಾರ್ಯ, ಕವಿರಾಜಮಾರ್ಗಕಾರ, ಶ್ರೀ ವಿಜಯ ಇವರ ಆಸ್ಥಾನಿಕರು. ಇವನ ಗಣ್ಯಸೇನಾನಿ ಬಂಕೆಯರಸ “ಬಂಕಾಪುರ” ಊರಿನ ನಿರ್ಮಾಣಕ್ಕೆ ಕಾರಣನಾದನು. ಕೃಷ್ಣನ ನಂತರ ಪಟ್ಟವೇರಿದ ಅವನ ಮೊಮ್ಮಗ ಮೂರನೇಯ ಇಂದ್ರನು “ಕನೊಜ” ವನ್ನು (ಉತ್ತರ ಪ್ರದೇಶ) ಗೆದ್ದು ಕರ್ನಾಟಕದ ಇತಿಹಾಸದಲ್ಲಿಯೆ ದಾಖಲೆಯನ್ನು ನಿರ್ಮಿಸಿದನು. ಇವರ ಆಳ್ವಿಕೆಯಲ್ಲಿ. ಅಸುಂಡಿ, ಬಂಕಾಪುರ, ಘಾಳಿಪೂಜೆಯಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದವು. ಇವರಗಳು ತಮ್ಮ ಕಾಲದಲ್ಲಿ ಸಹಸ್ರ ಗೋವುಗಳನ್ನು ದಾನ ಮಾಡಿ ಪಶು ಸಂಗೋಪನೆಗೆ ಪ್ರೊತ್ಸಾಹವಿತ್ತದ್ದನ್ನು ಹಳೆರಿತ್ತಿಯಲ್ಲಿರುವ ಗೋಸಾಸ (ಮೇಟಿ) ಕಲ್ಲುಗಳಿಂದ ತಿಳಿಯಬಹುದು.
5. ಕಲ್ಯಾಣದ ಚಾಲುಕ್ಯರು
ಕಲ್ಯಾಣದ ಚಾಲುಕ್ಯರಲ್ಲಿ ಪ್ರಸಿದ್ದಿಯನ್ನು ಪಡೆದಂತವನು ಎರಡನೆಯ ತೈಲಪನು. ಇವನು ಸಾಹಸಮಯಿಯಾಗಿದ್ದು, ರಾಷ್ಟ್ರಕೂಟರನ್ನು ಸೊಲಿಸಿ ನಂತರ ಎಲ್ಲಾ ಮಾಂಡಲಿಕರನ್ನು ಸೋಲಿಸಿ ಗುಜರಾತಿನವರೆಗೂ ದಂಡಯಾತ್ರೆ ನಡೆಸಿದನು. ಈತನ ನಂತರ ಉತ್ತಾರಾಧಿಕಾರಿಯಾಗಿದ್ದ “ಸತ್ತಿಗ ಅಥವಾ ಸತ್ಯಾಶ್ರಯನು” ಕವಿ “ರನ್ನ” ನಿಗೆ ಆಶ್ರಯವಿತ್ತನು. ಈತನ ನಂತರ ಐದನೇಯ ವಿಕ್ರಮಾದಿತ್ಯ, ಜಯಸಿಂಹ, ಒಂದನೇಯ ಸೋಮೇಶ್ವರ, ಎರಡನೆ ಸೋಮೇಶ್ವರ, ಆರನೇಯ ವಿಕ್ರಾಮಾದಿತ್ಯ, ಮೂರನೆಯ ಸೋಮೇಶ್ವರ, ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು.
ಇವರಲ್ಲಿ ಆರನೇಯ ವಿಕ್ರಮಾದಿತ್ಯನು ಕರ್ನಾಟಕದ ಹೇಮ್ಮೆಯ ಚಕ್ರವರ್ತಿ ಮತ್ತು ಇವನ ಆಸ್ಥಾನದಲ್ಲಿದ್ದ “ವಿಜ್ಞಾನೇಶ್ವರ”ಹಿಂದೂ ಕಾನೂನಿಗೆ ಆಧಾರಭೂತ ಕೃತಿಯಾದ “ಮಿತಾಕ್ಷರ” ವನ್ನು ರಚಿಸಿದನು. ಇವರ ಕಾಲದಲ್ಲಿ ಗುಂಡೇನಹಳ್ಳಿ (ಬ್ಯಾಡಗಿ) ಯಲ್ಲಿ ಅಂಗಿಯಬ್ಬೆ ಎಂಬಾಕೆ ಮಲ್ಲಿಕಾರ್ಜುನ ದೇವಾಲಯ ಕಟ್ಟಿಸಿದಳು (1034 ರಲ್ಲಿ). ಚಿಲ್ಲೂರಬಡ್ನಿಯ (ಶಿಗ್ಗಾಂವಿ ತಾ:) ಊರೊಡೆಯ “ನಾಯಮ್ಮನು” ಊರಲ್ಲಿ ರಾಮೇಶ್ವರ ಮಂದಿರ ಕಟ್ಟಿದನು(1062),ಬೆಣ್ಣೆವೂರಲ್ಲಿ(ಮೊಟೆಬೆನ್ನೂರು)ಲಚ್ಚಿಮಯ್ಯ ಕಟ್ಟಿಸಿದ ಬಸದಿಗೆ ಮಹಾ ಮಂಡಲೇಶ್ವರ “ಲಕ್ಷ್ಮರಸನು” ಭೂದಾನ ಮಾಡಿದನು,ಬಾಳಂಬೀಡು(ಹಿರೇಕೆರೂರು) ವಿಷಪರಿಹಾರೇಶ್ವರ ದೇವರಿಗೆ ದಾನ ಬಿಟ್ಟರು.
ಇಮ್ಮಡಿ ಸೋಮೇಶ್ವರನ ಕಾಲದಲ್ಲಿ “ಜಕ್ಕಗಾವುಂಡ” ಮುಂತಾದ ಅಧಿಕಾರಿಗಳು ಗ್ರಾಮೇಶ್ವರ ದೇವರಿಗೆ ದಾನ ನಿಡಿದರು, ವಿಕ್ರಮಾದಿತ್ಯನು ತುಂಗಭದ್ರ ತೀರದಲ್ಲಿ ಬೀಡು ಬಿಟ್ಟಿರಲು ಮುದೆನೂರು ಶಂಕರನಾರಾಯಣ ದೇವರಿಗೆ ದಾನ ವಿತ್ತನು. ಜಟಾಚೋಳ ಎಂಬವನು ಕ್ರಿ.ಶ 1120ರಲ್ಲಿ ಚೌಡಯ್ಯದಾನಾಪುರದ ಪ್ರಸಿದ್ದ ಮಕ್ತೇಶ್ವರ ಮಂದಿರವನ್ನು ಕಟ್ಟಿಸಿದನು. “ಕಾಳಿಸೆಟ್ಟಿ” ಯು ಕಾಗಿನೆಲೆಯಲ್ಲಿ ಕಾಳೇಶ್ವರ ದೇವಾಲಯ ನಿರ್ಮಿಸಿದನು. ಕ್ರಿ.ಶ 1132ರಲ್ಲಿ ಮೂರನೇಯ ಸೊಮೇಶ್ವರನು ಹಾವೇರಿಯಲ್ಲಿರುವ ಕದಂಬ ಮಲ್ಲಿಕಾರ್ಜುನ ಕೆರೆಯ ದತ್ತಿಯನ್ನು ನವೀಕರಿಸಿದನು ಮತ್ತು ಕ್ರಿ.ಶ 1184 ರಲ್ಲಿ ನಾಲ್ಕನೇಯ ಸೊಮೇಶ್ವರ ಅರಳೇಶ್ವರದಲ್ಲಿ (ತಾ| ಹಾನಗಲ್) ಕದಂಬೇಶ್ವರ ದೇವಾಲಯವನ್ನು ವಿಸ್ತರಿಸಿದನು.
6. ಕಲಚೂರಿಗಳು
ಇವರು ಕಲ್ಯಾಣ ಚಾಲುಕ್ಯರ ಮಾಂಡಲಿಕರೂ, ಬೀಗರು ಆಗಿದ್ದರು. ಕ್ರಿ.ಶ 1162 ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಉಚಿತ , ಬಿಜ್ಜಳ 1, ಕರ್ಣ ಮತ್ತು ಜೋಗಮ ಎಂಬವರು ಕ್ರಮೇಣವಾಗಿ ಆಡಳಿತವನ್ನು ನಡೆಸಿದರು. ಸಾವಳದೇವಿಯ (ಆರನೇಯ ವಿಕ್ರಮಾದಿತ್ಯನ ಮಗಳು) ಮಗನಾದ ಎರಡನೇಯ ಬಿಜ್ಜಳನು ಕ್ರಿ.ಶ 1157 ರಲ್ಲಿ ಸ್ವಾತಂತ್ರ್ಯ ಘೋಷಿಸಿದನು.
ಈತನ ಭಂಡಾರಿಗರಾಗಿದ್ದವರು ಖ್ಯಾತ ಧಾರ್ಮಿಕ ಪ್ರವರ್ತಕ ಮತ್ತು ಸಾಮಾಜಿಕ ಕ್ರಾಂತಿಕಾರ ಬಸವಣ್ಣನವರು. ಜೈನರ ವಿರುದ್ಧ ವಾದ ನಡೆಸಿ ಗೆದ್ದ ವೀರಶೈವ ಏಕಾಂತದ ರಾಮಯ್ಯನಿಗೆ ಬಿಜ್ಜಳನು ಜಯ ಪತ್ರವನ್ನು ಕೊಟ್ಟನು (ಅಬಲೂರಿನಲ್ಲಿ). ಬಿಜ್ಜಳನ ತಂತ್ರಪಾಲ “ಬಲ್ಲರಸ’’ ಗೆಜ್ಜೆಹಳ್ಳಿಯ (ಹಾನುಗಲ್) ತೈಲೇಶ್ವರ ದೇವರಿಗೆ ದಾನ ನೀಡಿದ. “ಕಲಿದೇವ ಸೆಟ್ಟಿಯು” ಬಿಜ್ಜಳನ ಕಾಲದಲ್ಲಿ “ಮಂತಗಿ”ಯಲ್ಲಿ (ಹಾನಗಲ್) ಬಸದಿಯನ್ನು ಸ್ಥಾಪಿಸಿ 24 ತೀರ್ಥಂಕರರನ್ನು ಪ್ರತಿಷ್ಠಾಪಿಸಿದನು.
ಕ್ರಿ.ಶ 1168 ರಲ್ಲಿ ಎಮ್ಮಿಗನೂರಿನಲ್ಲಿ “ಕಾಮಗಾವುಂಡ” ರಾಮೇಶ್ವರ ದೇವಾಲಯ ನಿರ್ಮಾಣ ಮಾಡಿದ. ಕ್ರಿ.ಶ. 1181 ರಲ್ಲಿ ಜೋಯಿದೇವರಸನು ಹರಳಹಳ್ಳಿ (ಹಾವೇರಿ) ದೇವಾಲಯಕ್ಕೆ ದಾನ ಮಾಡಿದನು. ಕ್ರಿ.ಶ 1182 ರಲ್ಲಿ “ಅಹಮಲ್ಲನ ವಿರುದ್ಧ ರಟ್ಟಿಹಳ್ಳಿಯಲ್ಲಿ ಯುದ್ಧ ನಡೆಯುತ್ತದೆ. ನಮ್ಮ ಜಿಲ್ಲೆಯಲ್ಲಿ ಚಾಳುಕ್ಯರ ಕಾಲದ ಮುಖ್ಯ ಪ್ರಾಂತಗಳೆಂದರೆ ಪಾನುಂಗಲ್ -500 (ಹಾನುಗಲ್), ರಟ್ಟಪಳ್ಳಿ-70 (ರಟ್ಟಿಹಳ್ಳಿ), ಇಟ್ಟಿಗೆ-30 (ಇಟಗಿ), ಬೆಲುಹುಗೆ-70 (ಬೆಳವಿಗಿ) ಹಾಗೂ ಹೊನ್ನವತ್ತಿ-12 (ಹೊನ್ನತ್ತಿ).
7. ಹಾನುಗಲ್ ಕದಂಬರು
ರಾಷ್ಟ್ರಕೂಟರ ಕಾಲದಲ್ಲಿ ಬನವಾಸಿಯಿಂದ ಆಳುತ್ತಿದ್ದ ಇವರು ಮುಂದೆ ಬನವಾಸಿ-12000 ಪ್ರಾಂತ್ಯಕ್ಕೆ ಇವರ ಮೇಲೆ ಅಧಿಕಾರ ಚಲಾಯಿಸಲು “ಬಳ್ಳೆಗಾವಿ”ಯಿಂದ ಪ್ರತ್ಯಕ ಮಂಡಳೇಶ್ವರನನ್ನು ನೇಮಿಸಿದಾಗ, ಇವರು ಹಾನಗಲ್(ಪಾನುಂಗಲ್-500) ಮೇಲೆ ಹೆಚ್ಚು ಅಧಿಕಾರ ಹೊಂದಿದರು.ಇವರು ಬನವಾಸಿ ಕದಂಬರ ಉತ್ತರಾಧಿಕಾರಿಗಳು ತಾವೆಂದು ಕರೆದುಕೊಂಡರು.
ಇವರು ಹೊಯ್ಸಳ ವಿಷ್ಣುವರ್ಧನನ ದಾಳಿಯನ್ನು ಬಹಳಷ್ಟು ಎದುರಿಸಬೇಕಾಯಿತು. ಅರಳೇಶ್ವರದಲ್ಲಿ ಇವರ ಅಧಿನಾಧಿಕಾರಿ ಎಡವೊಳಲ್-70ರ “ರಾಮಸಿಂಗಿಪಂಡಿತ” ಅಲ್ಲಿನ ಕದಂಬೇಶ್ವರ ದೇವಾಲಯವನ್ನು ವಿಸ್ತರಿಸಿದನು.ಕ್ರಿ.ಶ 1103ರಲ್ಲಿ ಗೆಜ್ಜೆಹಳ್ಳಿ ಶಿವಾಲಯಕ್ಕೆ ಬೊಪ್ಪಗಾವುಂಡನು ದಾನನೀಡಿದನು. ಮಹಾಪ್ರಭು “ಕಪ್ಪಿಮಯ್ಯ” ಎಂಬ ಅಧಿಕಾರಿ ನರೇಗಲ್‍ನಲ್ಲಿ (ಹಾನುಗಲ್ ತಾ:) ಈಶ್ವರ ದೇವಾಲಯ ನಿರ್ಮಿಸಿದನು. ಸುರಳೇಶ್ವರದಲ್ಲಿ ಈತನೆ ಚಿಕ್ಕೇಶ್ವರ ದೇವಾಲಯ ಕಟ್ಟಿಸಿದನು. ಈತನ ಮಹಾಪ್ರಧಾನ “ಮಸಣನು”ಕ್ರಿ.ಶ 1121ರಲ್ಲಿ ಹಾನಗಲ್‍ನಲ್ಲಿ ತೈಲೇಶ್ವರ ದೇವಾಲಯವನ್ನು(ತೆಲ್ಲಿಗಾರರ ಆರಾದ್ಯ ಈಶ್ವರ) ಕಟ್ಟಿಸಿದನು ಅದೇ ಈಗಿನ ತಾರಕೇಶ್ವರ ದೇವಾಲಯ. ಇವರ ಕಾಲದಲ್ಲಿ “ನರೇಗಲ್”ನಲ್ಲಿ ದಾಸಿಮಯ್ಯ ಎಂಬಾತ ಸೂರ್ಯ ದೇವಾಲಯವನ್ನು ನಿರ್ಮಿಸಿದನು.
8. ಗುತ್ತಲದ ಗುತ್ತರು
ಕಲ್ಯಾಣ ಚಾಲುಕ್ಯರ ಮಾಂಡಳೀಕರಾಗಿ ಕೆಲಕಾಲ ಸ್ವತಂತ್ರವಾಗಿ ಮುಂದೆ ದೇವಗಿರಿಯ ಸೇಉಣರ ಮಾಂಡಲೀಕರಾಗಿ 12 ನೇ ಶತಮಾನದ ಆದಿಭಾಗದಿಂದ 13 ನೇಯ ಶತಮಾನ ಕೊನೆಯವರೆಗೆ ಹಾವೇರಿ ತಾಲೂಕಿನ ಗುತ್ತವೊಳಲ್ (ಗುತ್ತಲ)ದಿಂದ ಆಳಿದ ರಾಜವಂಶ “ಗುತ್ತರು”. ಇವರು ತಮ್ಮನ್ನು ಮಗಧದ ಉತ್ತರಾಧಿಕಾರಿಗಳೆಂದು ಮತ್ತು ಇವರ ಮೂಲ ಪುರುಷ ಮಾಗುತ್ತ (ಮಹಾಗುಪ್ತ) ಮತ್ತು ಗುತ್ತ ಎಂದು ಶಾಸನಗಳಲ್ಲಿ ತಿಳಿಸಿದ್ದಾರೆ.
ಇವರಲ್ಲಿ ಪ್ರಮುಖರು ಮಲ್ಲಿದೇವ, ಜೋಯಿದೇವ, ಎರಡನೇಯ ವಿಕ್ರಮಾದಿತ್ಯ, ಮೂರನೇಯ ವಿಕ್ರಮಾದಿತ್ಯನು ಹಾಗೂ ಕ್ರಮೇಣವಾಗಿ ಆಳ್ವಕೆಯನ್ನು ಮಾಡಿದರು. ಎರಡನೇಯ ವಿಕ್ರಮಾದಿತ್ಯನ ಸೋದರಿ “ಲಾಳಿಂiÀiದೇವಿಯ” ನೂರುಂಬಾಡದ ಕದಂಬ ಕೇತರಸನನ್ನು ವರಿಸಿದ್ದಳು. ಮೂರನೇಯ ವಿಕ್ರಮ ಗುತ್ತನ ರಾಜಧಾನಿಯಲ್ಲಿ “ಸಾಳವ ತಿಕ್ಕಮನೆಂಬ” ಸೇವುಣ ಸೇನಾನಿ ತಂಗಿದ್ದನು. ಎರಡನೇಯ ವಿಕ್ರಮಾದಿತ್ಯನು ಗುತ್ತಲದಲ್ಲಿ ತನ್ನ ತಾಯಿಯ ನೆನಪಿಗೆ ಕ್ರಿ.ಶ 1190 ರಲ್ಲಿ ಪದ್ಮೇಶ್ವರ ದೇವಾಲಯ ಕಟ್ಟಿಸಿದನು. ಜೋಯಿದೇವನು (ಜೋಯಿದೇವರಸ) ವಿಕ್ರಮಪುರ (ಹರಳಹಳ್ಳಿ) ಗ್ರಾಮವನ್ನು ಹಾವೇರಿ ತಾಲೂಕಿನಲ್ಲಿ ನಿರ್ಮಿಸಿ ತನ್ನ ವಂಶದವರ ಸ್ಮಾರಕವಾದ ವಿಕ್ರಮೇಶ್ವರ ಮತ್ತು ಗುತ್ತೇಶ್ವರ (ಶಿವಾಲಯಗಳು) ದೇವಾಲಯಗಳಿಗೆ ದಾನ ನೀಡಿದ. ವಿಕ್ರಮಾದಿತ್ಯನ ಸೇನಾನಿ “ದಾಸರಾಜನು” ಹರಳಹಳ್ಳಿ ದಾಸೇಶ್ವರ ದೇವಾಲಯ ಕಟ್ಟಿಸಿದನು. ಜೋಯಿದೇವನ ಮಗ ವಿಕ್ರಮಾದಿತ್ಯ ಮತ್ತು ಅವನ ಸತಿ ಪದುಮಲದೇವಿ ಹಿರೇಬಿದರಿಯ (ರಾಣಿಬೆನ್ನೂರ) ಶಿವಾಲಯಕ್ಕೆ ದಾನ ನೀಡಿದಳು. ಮುಂದೆ ಈ ವಂಶ ದೆಹಲಿಯ ಸುಲ್ತಾನರಿಂದ ನಾಶವಾಯಿತು.
9. ನೂರುಂಬಾಡದ ಕದಂಬರು
ಕದಂಬ ಎಂದೇ ಕರೆಯಿಸಿಕೊಂಡಿರುವ ಇವರು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ತಲೆಯೆತ್ತಿ ರಟ್ಟಪಳ್ಳಿ -70 (ರಟ್ಟಹಳ್ಳಿ) ಹಾಗೂ ಇಟ್ಟಿಗೆ-30 ಹೀಗೆ 100 ಗ್ರಾಮಗಳನ್ನು ಒಳಗೊಂಡ ಪ್ರದೇಶವನ್ನು ರಟ್ಟಿಹಳ್ಳಿ ಕೇಂದ್ರದಿಂದ ಆಳುತ್ತಿದ್ದರು.
ತಾವು ಶಾಖಾಚರೇಂದ್ರ(ಹನುಮಂತ) ಧ್ವಜರೆಂದೂ, ಕದಂಬೇಶ್ವರನ ಪಾದಪದ್ಮಾರಾದರಕರೆಂದೂ ಕರೆದುಕೊಂಡಿದ್ದು, ಕದಂಬೇಶ್ವರ ಮಂದಿರವು ರಟ್ಟಿಹಳ್ಳಿಯಲ್ಲಿಯ ದೇವಾಲಯವಾಗಿದೆ. ಈ ಮನೆತನದ ಎರಡನೇಯ ಬೀರದೇವನ ಸತಿ ಬಾಚಲೆ ಗುತ್ತರಸ ಮಲ್ಲಿದೇವನ ಸೋದರಿ. ಇವರ ಆಳ್ವಿಕೆಯಲ್ಲಿ ಹೊನ್ನಬೊಮ್ಮಿಸೆಟ್ಟಿ ಎಂಬವನು ರಟ್ಟಿಹಳ್ಳಿ ಕದಂಬೇಶ್ವರ ದೇವಾಲಯದಲ್ಲಿ ಮಲ್ಲೇಶ್ವರ ಮತ್ತು ರಾಜೇಶ್ವರ ಲಿಂಗಗಳನ್ನು ಪ್ರತಿಷ್ಠಾಪಿಸಿ ಅವುಗಳ ಪೂಜಾದಿಗಾಗಿ “ಕಾಡವೂರು” (ಕಡೂರು) ಎಂಬ ಗ್ರಾಮವನ್ನು ಕಾಳಾಮುಖ ಪಂಥದ ರಾಜಗುರು ಮೂರುಜಾವಿದೇವರಿಗೆ ಒಪ್ಪಿಸಿದನು. ಈ ವಂಶವು ಹೊಯ್ಸಳ ಅಥವಾ ಸೇಉಣರ ಆಕ್ರಮಣದಿಂದ ನಾಮಶೇಷರಾಗಿರಬಹುದು.
10. ಬಂಕಾಪುರದ ಕದಂಬರು
ಇವರು ಕಲ್ಯಾಣ ಚಾಳುಕ್ಯರ ಮಾಂಡಲಿಕರಾಗಿದ್ದರು. “ಹರಿಕಂತದೇವ” ಹಾಗೂ ಮಯೂರ ಶರ್ಮ ಕ್ರಮವಾಗಿ ಆಡಳಿತವನ್ನು ನಡೆಸಿದರು. ಮಯೂರ ಶರ್ಮನು, ಚಕ್ರವರ್ತಿ ಎರಡನೇಯ ಜಯಸಿಂಹನ ಸೋದರಿ “ಅಕ್ಕಾದೇವಿಯನ್ನು” ವರಿಸಿದ್ದ.
11. ಬೆಳಗುತ್ತಿಯ ಸಿಂದರು
ಇವರು ಹೊನ್ನಾಳಿ ತಾಲೂಕು ಬೆಳಗುತ್ತಿಯ (ಬೆಳಗುರ್ತಿ) ಸಿಂದರು.
ಹಿರೇಕೆರೂರು ಹಾಗೂ ಶಿಗ್ಗಾಂವಿ ತಾಲೂಕಿನ ಕುಂದೂರುನಿಂದ ಆಳ್ವಿಕೆಯನ್ನು ನಡೆಸುತ್ತಿದ್ದರು. ಕೆಲವು ಕಾಲ “ಹಳ್ಳೂರು” (ತಾ|| ಹಿರೇಕೆರೂರು) ಇವರ ರಾಜಧಾನಿಯಾಗಿತ್ತು. ಪಿರಿಯ ಚಟ್ಟರಸ, ಅಯ್ಯಣ ಜೋಗರಸ ಮತ್ತು ಎರಡನೇಯ ಚಟ್ಟರಸ ಇವರು ಆರಂಭದ ಅರಸರಾಗಿ, ಕಲ್ಯಾಣದ ಚಾಳುಕ್ಯರ ಮಾಂಡಲಿಕರಾಗಿದ್ದರು. ಇವರ ಆಡಳಿತಕ್ಕೆ ಹಾವೇರಿ ಜಿಲ್ಲೆಯ ತಿಳುವಳ್ಳಿ, ಅಣಜಿ, ಮೇದೂರ (ತಾ|| ಹಿರೇಕೆರೂರು), ಮಾಸೂರು22, ಕುಂದೂರು (ಶಿಗ್ಗಾಂವಿ) ಒಳಪಟ್ಟಿತ್ತು.
ಇವರಗಳ ನಂತರ ಬಂದಂತಹ ಎರಡನೇಯ ಈಶ್ವರದೇವನು ಕೊಡಮಗ್ಗಿಯ ಈಶ್ವರ ದೇವಾಲಯಕ್ಕೆ ಹಾಗೂ ನಿಡನೇಗಿಲ ಮಲ್ಲಿಕಾರ್ಜುನ (ಕಲ್ಲೇಶ್ವರ) ದೇವಾಲಯಕ್ಕೆ ದಾನ ನೀಡಿದನು. ಇವರು ಸೇಉಣರ ವಿರುದ್ಧ ಕ್ರಿ.ಶ 1219 ರಲ್ಲಿ ಅಬ್ಬಲೂರಿನಲ್ಲಿ, ಕ್ರಿ.ಶ 1223 ರಲ್ಲಿ ಚಿಕ್ಕೇರೂರಲ್ಲಿ ಯುದ್ದಗಳನ್ನು ಮಾಡಿದರು.
12. ದೇವಗಿರಿಯ ಸೇಉಣರು
ಕಾವೇರಿಯಿಂದ ನರ್ಮದೇವರೆಗಿನ ಕರ್ನಾಟಕ ಒಡೆದು ಚೂರು ಚೂರಾಗಿ ವಿಭಜಿಸಲ್ಪಟ್ಟಿತು. ಈ ಪ್ರದೇಶವು ದೇವಗಿರಿಯ ಸೇಉಣ, ಓರಂಗಲ್‍ನ ಕಾಕೀತಿಯರು ಮತ್ತು ದ್ವಾರಸಮುದ್ರದ ಹೊಯ್ಸಳರಲ್ಲಿ ಹಂಚಿಹೋಯಿತು.
ಸೇಉಣರು ಈ ಜಿಲ್ಲೆಯನ್ನು 12 ರಿಂದ 13 ನೇಯ ಶತಮಾನದ ಕೊನೆಯವರೆಗೂ ಆಳ್ವಿಕೆ ನಡೆಸಿದರು. ಇವರ ಆಳ್ವಿಕೆಯನ್ನು ಹೊಯ್ಸಳರು ಆಗಾಗ ಪ್ರಶ್ನಿಸುತ್ತಿದ್ದರು. ತುಂಗಭದ್ರೆಯು ಉಭಯ ರಾಜ್ಯಗಳಿಗೆ ಗಡಿಯಾಗಿ ಈ ಎರಡು ರಾಜ್ಯಗಳನ್ನು ಬೆರ್ಪಡಿಸಿತ್ತು. ಸವಣೂರು ಎಂಬ ಪ್ರದೇಶದ ಹೆಸರು ಇವರ ಆಳ್ವಿಕೆಯಿಂದ ಬಂದಿರಬಹುದು ಎಂದು ಉಹಿಸಬಹುದು.
ಈ ವಂಶದಲ್ಲಿ ಎರಡನೇಯ ಅಮರಮಲ್ಲುಗಿ, ಐದನೇಯ ಭಿಲ್ಲಮನು, ಕಾಲಿಯ ಬಲ್ಲಾಳ, ಎರಡನೇಯ ಸಿಂಘಣರು ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು. ಇವರ ಅಧಿಕಾರಿ ಬೀಚಸೆಟ್ಟಿಯು ಸೂರೆಮಾಡಿದ್ದು, ಹರಳಹಳ್ಳಿಯಲ್ಲಿ ಈತನು ಒಂದು ಶಿವಾಲಯವನ್ನು ಕಟ್ಟಿಸಿದನು.
ಕ್ರಿ.ಶ 1214 ರಲ್ಲಿ ನಾಡಪ್ರಭು ಭೂಮ್ಮಿಸೆಟ್ಟಿಯು ಸಾತೇನಹಳ್ಳಿಯಲ್ಲಿ (ಹಿರೇಕೆರೂರ) ಶಂಕರನಾರಾಯಣ ದೇವಾಲಯವನ್ನು ಕಟ್ಟಿಸಿದನು. “ಸಿಂಘಣನು” (ಕ್ರಿ.ಶ 1229-31) ಹಾವೇರಿಯ ಸಿದ್ದನಾಥ ದೇವಾಲಯಕ್ಕೆ ಮೂರು ದಾನಗಳನ್ನು ನೀಡಿದನು.
ಪಾಂಡ್ಯದೇವನೆಂಬಾತನ ವಿರುದ್ಧ ಹೋರಾಡಿ ಮಡಿದು ವೀರಗಲ್ಲುಗಳು ಕಳ್ಳಿಹಾಳದಲ್ಲಿ (ತಾ|| ಹಾವೇರಿ) ಕಾಣಬಹುದು. ಸಿಂಘಣನ ಪುತ್ರ ಜೈತುಗಿಮತ್ತಿ ಇವನ ಪುತ್ರ ಕೃಷ್ಣ (ಕನ್ನರ) ನೆರೇಗಲ್‍ನ ಕಲಿದೇವರಿಗೆ ದಾನ ನೀಡಿದ ಹಾಗೂ ಈತನ ಅಧಿಕಾರಿ ಹಾವೇರಿಯ ಅಗ್ರಹಾರದ ದತ್ತಿಯನ್ನು ನವೀಕರಿಸಿದನು.
ಇವರ ಕಾಲದಲ್ಲಿ ಯುದ್ದದಲ್ಲಿ ಮಡಿದ ವೀರರಿಗೆ ಮಾಡಿದ ವೀರರ ಸ್ಮಾರಕ ಶಾಸನಗಳನ್ನು ಬೆನಕನಕೊಂಡ (ವೇಳೆವಾಳಿ ಚೌಡಯ್ಯ ನಾಯಕ ಮತ್ತು ಅವನ ಹೆಂಡತಿ) ಮತ್ತು ಮೆಣಸಿನಹಾಳದಲ್ಲಿ (ಕಲಿಗ ಮತ್ತು ಸಿರಿಗ) ಕಾಣಬಹುದು. ಇವರ ವಂಶವು ದೇಹಲಿಯ ಸುಲ್ತಾನರಿಂದ ನಶಿಸಿತು.
13. ಹೊಯ್ಸಳರು
ದ್ವಾರಸಮುದ್ರದ (ಹಳೇಬಿಡು) ಹೊಯ್ಸಳರು ಚಾಳುಕ್ಯರ (ಕಲ್ಯಾಣ) ಮಾಂಡಲಿಕರಾಗಿದ್ದು. ಇವರಲ್ಲಿ ಎರೆಯಂಗ, ವಿಷ್ಣುವರ್ಧನ ಹಾಗೂ ಎರಡನೇಯ ಬಲ್ಲಾಳ ಪ್ರಮುಖರು, ವಿಷ್ಣುವರ್ಧನನು ನಮ್ಮ ಜಿಲ್ಲೆಯ ಮೂಲಕವೇ ಕಾಳಗವನ್ನು ಮಾಡುತ್ತಾ ಬನವಾಸಿಯ ರಾಜಧಾನಿಯಾದಂತಹ ಬಳ್ಳಿಗಾವಿಯಲ್ಲಿ ನಡೆದ ಅನಿರೀಕ್ಷಿತ ಭೇಟಿಯಿಂದಾಗಿ ಸುಂದರಿ ಶಾಂತಲೆಯನ್ನು ವರಿಸಿದನು(ಈ ಘಟನೆಯೆ ಮುಂದೆ ಬಸವಣ್ಣನವರಿಗೆ ಅಂತರಜಾತಿವಿವಾಹಕ್ಕೆ ಪ್ರೇರಣೆಯಾಗಿರಬಹುದು ಕಾರಣ ಶಿವಶರಣರು ಹಾಗೂ ಬಸವಣ್ಣನವರು ಅಬ್ವಲೂರಿನ ಎಕಾಂತೆರಾಮಯ್ಯನಿಗೆ ವಿಜಯ ಪತ್ರ ಕೊಡಲು ಬಂದಾಗ ಈ ಘಟನೆ ಬಗ್ಗೆ ತಿಳಿದುಕೊಂಡಿರಬಹುದು) ಮತ್ತು ಅಲ್ಲಿಂದಲೇ ಬಂದ ಶಿಲ್ಪಿಗಳಾದ ದಾಸೋಜ ಮತ್ತು ಚಾವಣರಿಂದ ಬೇಲೂರಿನ ಖ್ಯಾತ ದೇವಾಲಯ ಕಟ್ಟಿಸಿದನು.
ಇವನಿಗೆ ಸ್ವತಂತ್ರನಾಗುವ ಅಭಿಲಾಷೆಯಾಗಿ ಚಾಳುಕ್ಯರ ಮಾಂಡಳಿಕರಾಗಿದ್ದ ಹೊಸಗುಂದದ ಸಾಂತರರನ್ನು ನೊಳಂಬಾಡಿಯ ನೊಳಂಬರನ್ನು ಮತ್ತು ಹಾನಗಲ್ ಕೋಟೆಯನ್ನು ಗೆದ್ದನು.
ವಿಷ್ಣುವರ್ಧನನು ಚಾಳುಕ್ಯರ ಸೇನಾನಿ ಬೊಪ್ಪಣ್ಣನನ್ನು ಹಳ್ಳೂರಲ್ಲಿ (ಹಿರೇಕೆರೂರ ತಾ||) ಸೋಲಿಸಿದನು. ಸಾತೇನಹಳ್ಳಿ ಆಗಿನ ಕಾಲದಲ್ಲಿ (ಹಿರೇಕೆರೂರ ತಾ||) ದೊಡ್ಡ ವ್ಯಾಪಾರಿ ಕೇಂದ್ರವಾಗಿತ್ತು. “ಬೊಮ್ಮ” ಎಂಬ ಹೊಯ್ಸಳ ಅಧಿಕಾರಿ ಇಲ್ಲಿ ಹರಿಹರೇಶ್ವರ ದೇವಾಲಯವನ್ನು ಕಟ್ಟಿಸಿದನು (1204).
ವಿಷ್ಣುವರ್ಧನನಿಗೆ ಶಾಂತಿಯುತ ಆಡಳಿತ ನಡೆಸಲು ಸಾಧ್ಯವಾಗಿರಲಿಕ್ಕಿಲ್ಲ. ಕಾರಣ ಆತನ ಉದ್ವೇಗ ಮತ್ತು ಸತತ ಅನ್ಯರಾಜರ ಆಕ್ರಮಣದಿಂದ ಆತ ಒತ್ತಡಕ್ಕೆ ಒಳಗಾಗಿ ಕ್ರಿ.ಶ 1141 ರಲ್ಲಿ ಆತನು ಬಂಕಾಪುರದಲ್ಲಿ ತೀರಿಕೊಂಡನು. ಇವರ ಆಡಳಿತದ ಶಾಸನಗಳು ಜಿಲ್ಲೆಯಲ್ಲಿ ವಿರಳ ಕಾರಣ ಅವರು ಜಿಲ್ಲೆಗೆ ಹೆಚ್ಚಿನ ಕೊಡುಗೆಯನ್ನು ನೀಡದಿರಬಹುದು.
14. ವಿಜಯನಗರದ ಸಾಮ್ರಾಜ್ಯ
ಸಂಗಮನ ಮಕ್ಕಳಾದ ಹರಿಹರ - ಬುಕ್ಕರು ವಿದ್ಯಾರಣ್ಯರ ಆಶೀರ್ವಾದದಿಂದ ಒಳ್ಳೆಯ ಮುಹೂರ್ತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಉಳಿಸಲು ಕ್ರಿ.ಶ 1336 ರಲ್ಲಿ ವಿಯಜನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
ಇವರಿಗೆ ಹೊಯ್ಸಳರ ಸಹಾಯ ಶೃಂಗೇರಿ ಮಠದ ಮುಖಾಂತರ ದೊರಕಿರಬಹುದು, ಹೀಗಾಗಿ ಅವರು ಮಠದ ಬಗ್ಗೆ ವಿಶೇಷ ಭಕ್ತಿಯನ್ನು ತೋರಿರಬಹುದು. ಹೊಯ್ಸಳರಿಗೂ ಮತ್ತು ವಿಜಯನಗರ ಅರಸರಿಗೆ ಮುಂದೆ ವೈವಾಹಿಕ ಸಂಬಂಧಗಳು ಜರುಗಿದವು (ಹರಿಹರನ ಮಗಳು ಮತ್ತು ಹೊಯ್ಸಳ ಮೂರನೇಯ ಬಲ್ಲಾಳನ ಸೋದರಳಿಯ ಬಲ್ಲಪ್ಪ).
ಕಂಪಿಲರಾಯ ಮತ್ತು ಇವನ ಮಗ ಕುಮಾರರಾಮ ದೆಹಲಿ ಸುಲ್ತಾನರೊಡನೆ ಹೋರಾಡಿ ಮಡಿದಾಗ ಹೊಯ್ಸಳರ ಅಧಿಕಾರವನ್ನು ಇವರು ಒಪ್ಪಲೇಬೇಕಾಯಿತು. ಇವರು ಸಾರ್ವಜನಿಕರ ಒಗ್ಗಟ್ಟನ್ನು ಮತ್ತು ಸಹಾನೂಭೂತಿಯನ್ನು ಗಿಟ್ಟಿಸಲು ಕುಮಾರರಾಮನ ಪ್ರತಿಮೆಯನ್ನು ಅನೇಕ ಹತ್ತಿರ ಹಾಗೂ ಹಾವೇರಿ ಜಿಲ್ಲೆಯ ಸಂಗೂರು ಮತ್ತು ವಿರಾಪುರ (ಹಿರೇಕೆರೂರು) ನಲ್ಲಿಯು ಸ್ಥಾಪಿಸಿದರು.
ಹರಿಹರನ ಕಾಲದಲ್ಲಿ ಹಿರೇಹಳ್ಳಿ (ಬ್ಯಾಡಗಿ), ಮುತ್ತಳ್ಳಿ (ಶಿಗ್ಗಾಂವಿ) ಮತ್ತು ಚಿಕ್ಕಣಜಿಯಲ್ಲಿ (ಬ್ಯಾಡಗಿ) ಸೈನಿಕರು ಯುದ್ದದಲ್ಲಿ ಮಡಿದಿರುವ ಶಾಸನಗಳು ಲಭ್ಯವಾಗಿವೆ. ಎರಡನೇಯ ಹರಿಹರ, ವಿರೂಪಾಕ್ಷ, ಎರಡನೇಯ ಬುಕ್ಕ ಹಾಗೂ ದೇವರಾಯ ಕ್ರಮೇಣವಾಗಿ ಉತ್ತರಾಧಿಕಾರಿಗಳಾಗಿ ಆಳ್ವಿಕೆ ನಡೆಸಿದರು ಮುಂದೆ ಸಾಳುವ ಮತ್ತು ತುಳು ವಂಶದವರು ಈ ರಾಜ್ಯವನ್ನಾಳಿದರು.
ಕೃಷ್ಣದೇವರಾಯನು ಕ್ರಿ.ಶ 1510ಕ್ಕೆ ಪಟ್ಟಕ್ಕೇರಿದನು ಮತ್ತು ಇವನು ಪೋರ್ಚಗಿಸರೊಡನೆ ಒಳ್ಳೆಯ ಸಂಭಂದವನ್ನು ಹೊಂದಿದ್ದನು. ಭಟ್ಕಳ, ಕುಮಟಾ, ಗೋವೆ ಮುಖಾಂತರ ನಡೆಯುವ ವ್ಯಾಪಾರಕ್ಕೆ ಹಾವೇರಿ ಜಿಲ್ಲೆಯೇ ಮಾರ್ಗವಾಗಿತ್ತು (ಬಂಕಾಪುರ ಮಾರ್ಗ). ಇತನ ಕಾಲದಲ್ಲಿ ಮದುವೆ ಹಾಗೂ ಗಡ್ಡದ ಕೆಲಸಗಳಿಗೆ ತೆರಿಗೆ ವಿನಾಯತಿ ನೀಡಿದನು ಎಂದು ಹಿರೇಕೆರೂರು ಶಾಸನ ತಿಳಿಸಿದೆ. ಇವರ ಅಧಿಕಾರಿ “ಬೋಳೆ ಮಲ್ಲರಸ” ಕಳಗೊಂಡ (ಬ್ಯಾಡಗಿ) ಗ್ರಾಮವನ್ನು ಗುಡ್ಡದ ತಿರುವಲ (ತಿರುಮಲ) ದೇವಾಲಯಕ್ಕೆ ದಾನ ನೀಡಿದನು. ಕೃಷ್ಣದೇವರಾಯನ ಕಾಲದಲ್ಲಿಯ ಕಂದಾಯ ನಿರ್ಣಯವನ್ನು ಬ್ರಿಟೀಷರು “ರಾಯರೇಖೆ” ಎಂದೇ ಗುರುತಿಸಿದ್ದಾರೆ.
ಕೃಷ್ಣದೇವರಾಯನ ನಂತರ ಅಳಿಯ ರಾಮರಾಯನ ಹಿಡಿತದಲ್ಲಿ ಆಡಳಿತ ಮುಂದುವರಿಯುತ್ತದೆ. ಆದರೆ ಇವನು ವೀರನಿದ್ದರೂ ಸಹ ವಯಸ್ಸಾಗಿರುವ ಕಾರಣದಿಂದ ಅಥವಾ ಸರ್ವಧವರ್iದವರಿಗೂ ಪ್ರೀತಿ ಪಾತ್ರರಾಗಿರದ ಕಾರಣ ಕ್ರಿ.ಶ 1565 ರಲ್ಲಿ ರಕ್ಕಸಗಿ ಮತ್ತು ತಂಗಡಗಿ ಗ್ರಾಮಗಳ ಮದ್ಯದಲ್ಲಿಯ ರಣರಂಗದಲ್ಲಿ ಐದು ಷಾಹಿರಾಜಗಳ ರಾಜರೊಡನೆ (ವಿಜಾಪುರ, ಗೋಲ್ಕಂಡ, ಬೀದರ್, ಅಹಮದ್‍ನಗರ ಮತ್ತು ಬಿರಾರ್) ಯುದ್ದ ಮಾಡಿ ಅವರ ಕೈಯಿಂದ ಮೃತನಾಗುತ್ತಾನೆ.
15. ಬಹುಮನಿ ಅರಸರು
ಗುಲ್ಬರ್ಗದಲ್ಲಿ ಕ್ರಿ.ಶ 1347ರಲ್ಲಿ ಸ್ಥಾಪನೆಯಾದ ಈ ಅರಸರಿಗೂ ಮತ್ತು ವಿಜಯ ನಗರದ ಅರಸರಿಗೂ ಸತತ ಯುದ್ದಗಳು ನಡೆದವು.ಕ್ರಿ.ಶ 1406ರಲ್ಲಿ sಸುಲ್ತಾನ ಫಿರೋಜ್ ಬಂಕಾಪುರವನ್ನು ವಿಜಯನಗರದ ಅರಸರರಿಂದ ಗೆದ್ದನು ಹೀಗೆ ಬಂಕಾಪುರಕ್ಕೆ ಮಾತ್ರ ಸೀಮಿತವಾದ ಇವರ ಹಿಡಿತ ಕೆಲವೇ ವರ್ಷದಲ್ಲಿ ಕೈತಪ್ಪಿ ಇವರು ದೂರದ ಬೀದರಿಗೆ ತಮ್ಮ ರಾಜಧಾನಿಯನ್ನು ವರ್ಗಾಯಿಸಿಕೊಂಡರು.
16. ಬಿಜಾಪುರದ ಆದಿಲ್‍ಷಾಹಿಗಳು
ಬಿಜಾಪುರದ ಆದಿಲ್‍ಷಾಹಿ ಸಾಮ್ರಾಜ್ಯದ ವಂಶಸ್ಥಾಪಕ ಯೂಸಫ್ ಆದಿಲ್‍ಖಾನ್ ಈತ ಯುರೋಪ ಖಂಡದ ಟರ್ಕಿಯ ರಾಜಧಾನಿಯಾದ ಕಾನ್‍ಸ್ಟಾಂಟಿನೋಪಲ್‍ದ ಸುಲ್ತಾನನಾದ ಅಘಮುರಾದನ ಕಿರಿಯ ಮಗ. ಆ ರಾಜ್ಯದ ಸಂಪ್ರದಾಯದಂತೆ ಇವನು ಸಿಂಹಾಸನ ಬದಲು ಮರಣಕ್ಕೆ ಗುರಿಯಾಗಬೇಕಾಯಿತು. ಈತನ ತಾಯಿ ಇವನ ಮೇಲೆ ಅಪಾರ ಪ್ರೀತಿ ಹೊಂದಿದ್ದರರಿಂದ ವ್ಯಾಪಾರಿಗಳ ಸಂಗಡ ಈತನನ್ನು ಭಾರತಕ್ಕೆ ಕಳುಹಿಸಿದಳು. ಗುಲಾಮರ ಆಶ್ರಯದಲ್ಲಿದ್ದ ಈತ ಕ್ರಿ.ಶ1460ರಲ್ಲಿ ಮಹಮದ್ ಗವಾನನ ಪ್ರೀತಿಗೆ ಪಾತ್ರರಾಗಿ ಮತ್ತು ಮುಂದೆ ತನ್ನ ಸಾಹಸ ಮತ್ತು ಶೌರ್ಯಗಳಿಂದ ಸುಲ್ತಾನನ ಅಂಗರಕ್ಷಕನಾದನು.
ಇವನಿಗೆ “ಆದಿಲ್‍ಖಾನ್”ಎಂಬ ಬಿರುದನ್ನು ನೀಡಿ ಗೌರವಿಸಿದನು. ಮುಂದೆ ಕ್ರಿ.ಶ 1489ರಲ್ಲಿ ಮಹಮದ್‍ಗವಾನನ ನಿಧನ ನಂತರ ಬಹಿರಂಗವಾಗಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡನು, ಹೀಗೆ ಸ್ಥಾಪನೆಗೊಂಡ ಆದಿಲ್‍ಷಾಹಿಗಳ ಸ್ರಾಮ್ರಾಜ್ಯ ದಖ್ಖನ್ನಿನಲ್ಲಿ ಪ್ರಭಲ ಮುಸ್ಲಿಂ ಸ್ರಾಮ್ರಾಜ್ಯವಾಗಿ ಸುಮಾರು 200 ವರ್ಷ ಆಳ್ವಿಕೆಯನ್ನು ನೆಡೆಸಿತು. ಇವನ ನಂತರ ಇಸ್ಮಾಯಿಲ್ ಆದಿಲ್‍ಖಾನ, ಮಲ್ಲು ಆದಿಲ್‍ಖಾನ, ಒಂದನೆ ಇಬ್ರಾಹಿಂ ಆದಿಲ್‍ಷಹ, ಒಂದನೇಯ ಅಲಿಆದಿಲ್‍ಷಾಹ (ಈತನ ಕಾಲದಲ್ಲಿಯೆ ಕ್ರಿ.ಶ 1573 ರಲ್ಲಿ ಬಂಕಾಪುರದ ಕೋಟೆ ನಿರ್ಮಾಣವಾಯಿತು) ಎರಡನೇ ಇಬ್ರಾಹಿಂ ಆದಿಲ್‍ಷಾಹ (ಕಟ್ಟಡಗಳ ನಿರ್ಮಾಪಕ) ಮಹಮದ್ ಆದಿಲ್‍ಷಾಹ, ಎರಡನೇ ಅಲಿ ಆದಿಲ್‍ಷಾಹ ಮತ್ತು ಸಿಕಂದರ ಅದಿಲ್‍ಷಾಹ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು.
ಅಲಿಆದಿಲ್‍ಶಹನು “ಮುಸ್ತಾಪಖಾನನಿಗೆ ವಕಿಲುಸಲ್ತನತ್” ಪದವಿ ನೀಡಿ ಗೌರವಿಸಿದನು ಮುಂದೆ ಇವನು ಬಂಕಾಪುರದಲ್ಲಿ ವಿಜಯನಗರದ ಅಧಿಕಾರಿ ವೆಲ್ಲಪ್ಪನನ್ನು ಸೋಲಿಸಿದನು. ಬಂಕಾಪುರವು ವಿಜಾಪುರದವರಿಗೆ ಒಂದು ಪ್ರಮುಖ ಸ್ಥಳವಾಯಿತು. ಈ ಪ್ರದೇಶದಲ್ಲಿ ಅಲಿಆದಿಲ್‍ಷಹ ಮೂರು ವರ್ಷವಿದ್ದು, ಅನೇಕ ಮಸಿದಿಗಳನ್ನು ಕಟ್ಟಿಸಿದನು ಮತ್ತು ಇಲ್ಲಿಂದ ಅಪಾರವಾದ ಸಂಪತ್ತನು ಲೂಟಿ ಮಾಡಿದನು. ಇವರ ಆಸ್ಥಾನದ ಮಾಂಡಲೀಕರು ಹೆಚ್ಚಾಗಿ ಜೈನರು ಮತ್ತು ಲಿಂಗಾಯತ ದೇಸಾಯಿಗಳು (ಹಂದಿಗನೂರು ದೇಸಾಯಿ ಹಾಗೂ ಅಗಡಿ ದೇಸಾಯಿ ಹಾವೇರಿ ತಾ||). ಸವಣೂರಿನ “ ಖಾನ ಎ ಅಜಂ” ಎಂಬ ಅಧಿಕಾರಿ “ನೀಲಿಗಿ” ಯಲ್ಲಿ ಬಾವಿಯನ್ನು ನಿರ್ಮಿಸಿದನು. ಕ್ರಿ.ಶ 1635 ರಲ್ಲಿ ಮಹಮದ್‍ಷಹ”ನ ಅಧಿಕಾರಿ ಮಹಮದ್‍ಖಾನ ಮಾಸೂರಿನಲ್ಲಿ (ಮದಗÀದಗುಡ್ಡದ ಮೇಲೆ) ಕೋಟೆಯನ್ನು ಕಟ್ಟಿದನು.
ಕ್ರಿ.ಶ 1673 ರಲ್ಲಿ ಬಿಜಾಪುರದ ಕೊನೆಯ ಅರಸು ಸಿಕಂದರ್ “ಅಬ್ದುಲ್‍ಕರಿಂಖಾನ” ಎಂಬ ಪಠಾಣ ಸೇನಾನಿಗೆ ಬಂಕಾಪುರದ 16 ಮಹಲುಗಳು ಜಾಗೀರನ್ನು ಕೊಟ್ಟ. ಒಂದನೇಯ ಅಲಿ ಆದಿಲ್‍ಷಾಹಿ ಕಾಲದಲ್ಲಿ ನಡೆದ ಯುದ್ದದ ಇತಿಹಾಸ ಮತ್ತು ತದನಂತರ ಆದ ಭೀಕರತೆಯನ್ನು ಮರೆಯುವ ಹಾಗಿಲ್ಲ ಕಾರಣ ಒಡೆದ ಮನೆತನಗಳಾದಂತಹ ಬಿಜಾಪುರ, ಬೀದರ, ಬಿರಾರ ಗೊಲ್ಕಂಡ ಮತ್ತು ಬಹುಮನಿ ಸುಲ್ತಾನರು ತಮ್ಮಲಿಯೇ ಕುಟುಂಬ ಸಂಬಂಧಗಳನ್ನು ಬೆಳೆಸಿ ಒಂದಾಗಿ ಕ್ರಿ.ಶ 1565 ರಲ್ಲಿ ವಿಜಯನಗರದ ಅರಸ “ರಾಮರಾಯ” ನನ್ನು ಸೋಲಿಸಿ ಶಿರಚ್ಛೇದನ ಮಾಡಿದರು. ಇವರ ನಂತರ ಮೊಘಲರು ತಮ್ಮ ಆಡಳಿತವನ್ನು ನಡೆಸಿದರು. ಇವರ ಹಾಗೂ ಮರಾಠರ ಮದ್ಯ ಆಗಾಗ ಯುದ್ಧಗಳು ಸಂಭವಿಸುತ್ತಿದ್ದವು. ಇವರು ಹೆಚ್ಚಾಗಿ ಹಾವೇರಿ ಜಿಲ್ಲೆಯಲ್ಲಿ ಸವಣೂರು, ಕಾರಡಗಿ (ಶಿಗ್ಗಾಂವಿ), ಬಂಕಾಪುರ, ರಟ್ಟಿಹಳ್ಳಿ (ರತನ್‍ಪಲ್ಲಿ), ಹಾನಗಲ್, ಮಾಸೂರು (ಮುಕ್ಸರನ್) ಗಳನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡಿದ್ದರು.
17. ಸವಣೂರ ನವಾಬರು.
ಸವಣೂರು ನವಾಬರ ಇತಿಹಾಸ ತಿಳಿಯಲು ಕ್ರಿ.ಶ 1841 ರಲ್ಲಿ ಪ್ರಕಟವಾದ “ದಿಲೇರ್‍ಜಂಗ” ಎಂಬ ಪರ್ಷಿಯನ ಕೃತಿ ಮುಖ್ಯ ಆಧಾರವಾಗಿದೆ. ಬಿಜಾಪುರದ ಸಿಕಂದರ್ ಆದಿಲ್‍ಷಹ” ನ ಕಾಲದಲ್ಲಿ ಸೇನಾನಿಯಾದಂತಹ “ಅಬ್ದುಲ್ ಕರೀಂಖಾನ” ಮರಾಠರ ವಿರುದ್ಧ ನಡೆಸಿದ ಯಶಸ್ವಿ ಹೋರಾಟಗಳಿಗಾಗಿ 22 ಮಹಲ್‍ಗಳನ್ನೊಳಗೊಂಡ ಜಾಗೀರನ್ನು ಕೊಟ್ಟು ಬಂಕಾಪುರಕ್ಕೆ ಕಳುಹಿಸಿದನು. ಮುಂದೆ ಮುಘಲರು ವಿಜಾಪುರವನ್ನು ಗೆದ್ದು ಈತನ ಮಗ “ಅಬ್ದುಲ್‍ರವೂಫ್” ಖಾನನಿಗೆ ಸುಬೇದಾರಕಿಯನ್ನು ಕೊಟ್ಟು “ದಿಲೇರ್ ಖಾನ್‍ಬಹಾದೂರ ಜಂಗ್” ಎಂಬ ಬಿರುದನ್ನು ಕೊಟ್ಟರು. ಈತನೇ ಸವಣೂರು ರಾಜ್ಯದ ಸಂಸ್ಥಾಪಕ, ಬಂಕಾಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆಯನ್ನು ನಡೆಸಿದನು. ಔರಂಗಜೇಬನು “ಅಬ್ದುಲ್‍ರವೂಫಖಾನನಿಗೆ” ನೀಡೀದ 22 ಮಹಲ್‍ಗಳನ್ನೋಳಗೊಂಡ ಕರ್ನಾಟಕ ಸಭಾದಲ್ಲಿ (ಪ್ರಾಂತ್ಯ) ಹಾವೇರಿ ಜಿಲ್ಲೆಯ ಕಾರಡಗಿ, ಹಾನುಗಲ್, ಬಂಕಾಪುರ, ತಿಳುವಳ್ಳಿ, ಆಡೂರು, ರಾಣೇಬೆನ್ನೂರು, ಕೋಡ, ಕಾಗಿನೆಲೆ, ಶಿಗ್ಗಾಂವಿ, ಮಾಸೂರು, ತಡಸ, ಹಾವೇರಿ ಹಂಸಭಾವಿ ಮತ್ತು ಕಿಲ್ಲೆ ಐರಣಿ ಒಳಗೊಂಡಿದ್ದವು.
ಈತನು ಬಂಕಾಪುರದಿಂದ ಸವಣೂರಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿದನು. ಈ ಹಿಂದೆ ಅಂದರೆ 11 ಮತ್ತು 12 ನೇಯ ಶತಮಾನದಲ್ಲಿಯೇ ಈ ಗ್ರಾಮಕ್ಕೆ ಸವಣೂರು ಹೆಸರು ಇರುವುದರಿಂದ ಇದರ ಹೆಸರು “ ಸೇಉಣರ” (ದೇವಗಿರಿಯ ಯಾದವರ) ಆಳ್ವಿಕೆಯಿಂದ ಬಂದಿರಬಹುದು. ಅಬ್ದುಲ್‍ರವೂಫಖಾನನು ಸವಣೂರಿನ ನೀಲಿನಕ್ಷೆಯನ್ನು ತಯಾರಿಸಿ ಮೊದಲು ದಲೇಲಪುರ (ಲಷ್ಕರಬಜಾರ), ಎರಡನೇಯದಾಗಿ ಜುಮ್ಮೇರಾತ ಪೇಟ, ಮೂರನೇಯದಾಗಿ ಮಂಗಲಪೇಟ, ನಾಲ್ಕನೇಯದಾಗಿ ರಹಮತ್‍ಪುರ (ಜುಮ್ಮಾಬಜಾರ). ಐದನೇಯದಾಗಿ ಬಾಜಿಕಟ್ಟಾ (ತರಕಾರಿ ಪೇಟೆ) ಕ್ರಮೇಣವಾಗಿ “ಶಹಾಬಜಾರ” (ಹಳೇ ಪೇಟೆ), ಕೋರೀಪೇಟೆ ಮತ್ತು ಚಾರ್‍ಷುಂಬಾ ಬಜಾರ ಎಂದು ಎಂಟು ಪೇಟೆಗಳನ್ನು ನಿರ್ಮಿಸಿದನು. ಹಾಗೆಯೇ ಕೋಟೆಗೆ ಆಯಾಯ ದಿಕ್ಕುಗಳಿಗೆ ಊರುಗಳಿಗೆ ಅಭಿಮುಖವಾಗಿ, ಲಕ್ಷ್ಮೇಶ್ವರ ದರವಾಜ, ಫತೇ ದರವಾಜ,ಹಾವೇರಿ ದರವಾಜ, ಹುರಳಿಕೊಪ್ಪ ದರವಾಜ ಮತ್ತು ಮೋತಿತಲಾಬ ದರವಾಜ ಎಂಬ ಅಗಸಿಗಳನ್ನು ನಿರ್ಮಿಸಿದನು.ಸವಣೂರಿನಿಂದ ಆರು ಮೈಲು ದೂರದಲ್ಲಿ ಅರಮನೆಯನ್ನು ನಿರ್ಮಿಸಿದನು.
“ಹಜರತ್ ಶಹಾ ದಿವಾನ” ಅನ್ನುವವನು ಒಬ್ಬ ಸಂತನಿಗೆ ಭೂಮಿ ದಾನವನ್ನು ಮಾಡಿದನು, ಮುಂದೆ ಈತ ಇದರಲ್ಲಿಯೇ ಗುಮ್ಮಟ, ಮಸೀದಿ ಮತ್ತು ಮುಸಾಫಿರಖಾನವನ್ನು ಕಟ್ಟಿಸಿದನು (ಪ್ರವಾಸಿ ಮಂದಿರ). ಇವನ ನಂತರ ಅಬ್ದುಲ್ ಗಾಫರ ಖಾನ ನವಾಬ ಅಬ್ದುಲ್ ಮಜೀದಖಾನ, ಅಬ್ದುಲ್ ಹಕೀಮಖಾನ, ಅಬ್ದುಲ್ ಖೈರಖಾನ ನವಾಬ, ಫಯಾಜಖಾನ, ಅಬ್ದುಲ್ ಮುನವರಖಾನ ನವಾಬ, ದಿಲೇರಖಾನ, ದಿಲೇರಜಂಗ ಬಹದ್ದೂರ, ಎರಡನೇ ಅಬ್ದುಲ್ ಖೈರಖಾನ, ಛೋಟಾ ದಿಲೇರಖಾನ, ಅಬ್ದುಲ್ ತಬ್ರೇಜಖಾನ, ಅಬ್ದುಲ್ ಮಜೀದಖಾನ ಕ್ರಮೇಣವಾಗಿ ಆಳ್ವೀಕೆಯನ್ನು ನಡೆಸಿದರು.
ಅಬ್ದುಲ್ ಮಜೀದಖಾನನು ರಾಜ್ಯದ ಪ್ರತಿಷ್ಠಿತರು, ಶ್ರೀಮಂತರು ಮತ್ತು ವ್ಯಪಾರಿಗಳು ಇರಲು ಹೊಸನಗರವನ್ನು ಹಳೆಹುಬ್ಬಳ್ಳಿ ಪಕ್ಕದಲ್ಲಿಯೇ “ಮಜೀದಪುರ” ವನ್ನು ನಿರ್ಮಿಸಿದನು. ಇವನ ಕಾಲದಲ್ಲಿಯೇ ಸವಣೂರಿನಲ್ಲಿ 64000 ರೂಪಾಯಿಗಳನ್ನು ಖರ್ಚುಮಾಡಿ “ಮೊತಿತಲಾಬ”ನ್ನು ನಿರ್ಮಿಸಿದನು. ಮುಂದೆ ಹಕೀಮಖಾನನೊಡನೆ ಹೈದರಾಲಿಯು ವೈವಾಹಿಕ ಸಂಬಂಧವನ್ನು ಬೆಳೆಸಿದನು. ಇವನ ರಾಜ್ಯದ ದಿವಾನರಾಗಿದ್ದ ಖಂಡೇರಾವ ಸಂಗೋನ ಮುಂದೆ ಹೈದರಾಲಿ ರಾಜ್ಯಕ್ಕೆ ವಕೀಲನೆಂದು ಹೋದನು. ಅಬ್ದುಲ್ ಕರಿಂಖಾನ ಕಾಲದಲ್ಲಿ “ಸಂತ ಬೈರುಲ್ಲಾ ಭಾಷಾನಿಗೆ” ಅವನು ಮರಣಾನಂತರ ಸವಣೂರಿನ ಲಷ್ಕರ ಬಜಾರದಲ್ಲಿ ಗೋರಿ ನಿರ್ಮಾಣಗೊಂಡಿತು. ಇವರು ಅನೇಕ ದೇವಸ್ಥಾನಗಳಿಗೆ ದಾನವನ್ನು ಮಾಡಿದರು, ಮಠಗಳನ್ನು ನಿರ್ಮಿಸಿದರು.
18. ಹೈದರಾಲಿ ಮತ್ತು ಟಿಪೂ ಸುಲ್ತಾನ
ಮೈಸೂರು ಮಹಾರಾಜರಾದ ಚಿಕ್ಕದೇವರಾಜ ಒಡೆಯರು ತೀರಿಕೊಂಡ ಮೇಲೆ (ಕ್ರಿ.ಶ 1704) ದುರ್ಬಲ ಅರಸರು ಪಟ್ಟವೇರಿ, ದಳವಾಯಿಗಳನ್ನು ಬೆಂಬಲಿಸಿದರು. ಇವರು ಆರ್ಕಾಟ್ ಉತ್ತರಾಧಿಕಾರ ಯುದ್ಧದಲ್ಲಿ ತೊಡಗಿ ಮೈಸೂರು ಸಂಸ್ಥಾನಕ್ಕೆ ಅಪಾರ ನಷ್ಟವನ್ನುಂಟು ಮಾಡಿದರು. ಸೈನಿಕರಿಗೆ ಸಂಬಳ ಕೊಡಲಾಗದೆ, ಅವರು ಅರಮನೆಯೆದರು ಧರಣಿ ಹೂಡಲು ಸಮರ್ಥ ಸೇನಾನಿ ಹೈದರ್ ಅಲಿ ಪರಿಸ್ಥಿತಿಯನ್ನು ನಿಭಾಯಿಸಿದನು.
ಚೌತಾಯಿ ವಸೂಲಿಗೆ ಬಂದ ಮರಾಠರನ್ನು ಸೋಲಿಸಿದನು. ಮುಂದೆ ಮರಾಠರೊಡನೆ ಈತ ದ್ವೇಷವನ್ನು ಕಟ್ಟಿಕೊಂಡನು. ಚಿತ್ರದುರ್ಗದ ಮದಕರಿ ನಾಯಕನು ಹೈದರಲಿಯ ಜೊತೆಗೂಡಿ ರಾಣೆಬೆನ್ನೂರನ್ನು ಮುತ್ತಿ ಅಲ್ಲಿಂದ ಪೇಶ್ವೆಯವರನ್ನು ಅಟ್ಟಿಸಿದನು. ಹೈದರಲಿ ಮತ್ತು ಫಜಲ್ ಉಲ್ಲಾ “(“ಶಿರಾ” ದ ನವಾಬನ ಮಗ) ಜೊತೆಗೂಡಿ ಪೇಶ್ವೆಯರೊಡನೆ ರಟ್ಟಿಹಳ್ಳಿ-ಆನವಟ್ಟಿಯಲ್ಲಿ ಯುದ್ದವನ್ನು ಮಾಡಿ ಪರಾಜಯಗೊಂಡನು.
ಹೈದರ್ ಅಲಿಯು ಬಂಕಾಪುರ ಮತ್ತು ಸವಣೂರುಗಳನ್ನು (ಜೂನ್ 1776) ಗೆದ್ದನು. ಮುಂದೆ ಇದೇ ಸವಣೂರು ನವಾಬರೊಡನೆ ವೈವಾಹಿಕ ಸಂಬಂಧವನ್ನು ಬೆಳೆಸಿ ಎಲ್ಲಾ ಅಫಘನ್ ನಾಯಕರನ್ನು ತನ್ನ ಕಡೆ ಆಕರ್ಷಿಸಲು ಪ್ರಯತ್ನಿಸಿದನು.
ಆದರೆ ಮುಂದೆ ಟಿಪ್ಪುಸುಲ್ತಾನನ ಕಾಲಕ್ಕೆ ಸಂಬಂಧ ಹಳಸಿಹೊಯಿತು. ಹೈದರನ ಮಗ ಟಿಪೂ ಒಬ್ಬ ಚಾಣಾಕ್ಷ ಅರಸ ಈತ ತನ್ನ ತಂದೆಯ ನಿಧನದ ನಂತರ ಮುಂದಿನ ಕಾರ್ಯಗಳನ್ನು ನಿರ್ವಹಿಸಲು ತನ್ನ ತಂದೆಯ ಸ್ಥಾನದಲ್ಲಿ ನಿಂತು ದಾರಿಯನ್ನು ತೋರಿಸಲು ಸವಣೂರ ನವಾಬ ಹಕಿಂಖಾನನಿಗೆ ಹೇಳಿ ಕಳುಹಿಸಿದರೂ ಬರಲಿಲ್ಲ ಎಂದು ಮತ್ತು ಈ ನವಾಬನು ಮರಾಠರ ಜೊತೆ ಸಂಬಂಧವನ್ನು ಹೊಂದಿದ್ದಾರೆ ಎಂದು ತಿಳಿದು ಸವಣೂರಿನ ಮೇಲೆ ಯುದ್ಧ ಮಾಡಿ ಕೋಟೆಯ ಗೋಡೆಯನ್ನು ದ್ವಂಸಗೊಳಿಸಿದನು.
ಟಿಪ್ಪೂವು ತನ್ನ ಅರಮನೆಯ ಮುದೆ ಹುಲಿಯನ್ನು ಸಾಕುತ್ತಿದ್ದು, ತಾನು ಪ್ರಯಾಣಿಸಲು ಕಾರನ್ನು ಹೊಂದಿದ್ದು ವಿಶೇಷ. ಟಿಪೂವಿನ ಪರಮ ವಿರೋಧಿಗಳೆಂದರೆ ಮರಾಠರು, ಬ್ರಿಟೀಷರು ಮತ್ತು ಹೈದ್ರಾಬಾದ ನಿಜಾಮರು.
ಕ್ರಿ.ಶ 1786 ರಲ್ಲಿ ಸವಣೂರಿನ ಕಡೆ ನಿಜಾಮನ ಸೇನೆಯ ಜೊತೆ ಬಂದ ಹರಿಪಂತನನ್ನು ಸೋಲಿಸಿ ಟಿಪೂ ಸವಣೂರನ್ನು ಗೆದ್ದು ಬಂಕಾಪುರಕ್ಕೆ ತೆರಳಿ ಮೊಹರಂನ್ನು ಆಚರಿಸಿದನು. ಟಿಪ್ಪೂವಿನ ಕನ್ನಡ ಶಾಸನವನ್ನು ರಾಣೇಬೆನ್ನೂರಿನ ಚೆನ್ನಪುರದಲ್ಲಿ ನೋಡಬಹುದು. ಶಿಗ್ಗಾಂವ ತಾಲೂಕಿನ ಬಾಡದ ಸಮೀಪದಲ್ಲಿರುವ ಸದಾಶಿವಪೇಟದಲ್ಲಿರುವ ಗದ್ದಿಗೇಶ್ವರ ಮಠಕ್ಕೆ ಟಿಪ್ಪೂ ಅಡ್ಡ ಪಲ್ಲಕ್ಕಿ ನೀಡಿದ್ದನು. ಅವನು ಹಳ್ಳೂರಿನ ಶ್ರೀ ರಂಗನಾಥ ದೇವಸ್ಥಾನವನ್ನು ಸಂಪೂರ್ಣವಾಗಿ ದ್ವಂಸಗೊಳಿಸಿದನು. ಮುಂದೆ ದೇವಸ್ಥಾನವನ್ನು ಹಾವನೂರಿನ ಹನುಮಂತಗೌಡ ದೇಸಾಯಿಯವರು ಜೀರ್ಣೋದ್ಧಾರಗೊಳಿಸಿದರು. ಟಿಪ್ಪು ಸುಲ್ತಾನ ಹಾವನೂರ್ ದೇಸಾಯಿ ಹಾಗೂ ಚೌಡದಾನಪುರದ ಒಡೆಯರನ್ನು ಕೊಲ್ಲಿಸಿದ್ದನು.
19. ಧೋಂಡಿಯಾ ವಾಘ
ಈತನು ಚನ್ನಗಿರಿಯ (ಶಿವಮೊಗ್ಗ) ಪವಾರ್ ಮನೆತನಕ್ಕೆ ಸೇರಿದವನು. ಟಿಪೂವಿನ ಸೈನ್ಯದಲ್ಲಿದ್ದು ಮುಂದೆ ಕ್ರಿ.ಶ 1790 ರಲ್ಲಿ ಇವನ ಸೈನ್ಯವನ್ನು ತೊರೆದು ಮುಂದೆ ಪುಂಡರನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಸುಲಿಗೆಯನ್ನು ಆರಂಭಿಸಿದನು.
ಇವನು ಕೂಡ ಕುದುರೆದಳ ಮತ್ತು ಕಾಲದಳವನ್ನು ಹೊಂದಿದ್ದನು. ಬ್ರೀಟಿಷರಿಗೆ ಹಲವು ವರ್ಷಗಳ ಕಾಲ ಸಿಂಹಸ್ವಪ್ನವಾಗಿ ಕಾಡಿದನು. ಈತನು ಹಾವನೂರ ಮತ್ತು ಸವಣೂರಿನಲ್ಲಿ ಸುಲಿಗೆಯನ್ನು ಮಾಡಿದನು. ಇದನ್ನು ಅರಿತ ಬ್ರಿಟಿಷರು ಈತನನ್ನು ಹಾಗೆ ಬಿಟ್ಟರೆ ಮರಾಠರೊಡನೆ ಗಡಿ ಗುರುತಿಸುವುದು ಕಷ್ಟವಾಗುತ್ತದೆ ಎಂದು ತಿಳಿದು ಇವನ ಕಾರ್ಯಾಚರಣೆಗೆ ಕ|| ಅರ್ಥರ್ ವೆಲ್ಲಸ್ಲಿಯನ್ನು ನೇಮಿಸಲು, ಧೋಂಡಿಯು ಶ್ರೀರಂಗಪಟ್ಟಣದಿಂದ ಹರಿಹರಕ್ಕೆ ಬಂದು ಮುಂದೆ ಐರಣಿ ಕೋಟೆಯನ್ನು ಗೆದ್ದನು, ಈತನನ್ನು ಬೆನ್ನಟ್ಟಿದ ವೆಲ್ಲಸ್ಲಿಯು ಕ್ರಿ.ಶ 1800 ರಲ್ಲಿ ಕೊಣಗಲ್‍ನಲ್ಲಿ ಕೊಂದನು.
20. ಮರಾಠರು: ಪೇಶ್ವೆಯರ ಆಳ್ವಿಕೆ
ಶಿವಾಜಿಯು ಮರಾಠ ಸತ್ತೆಯ ಸಂಸ್ಥಾಪಕ. ಇವನ ನಂತರ ಸಂಬಾಜಿ (ಶಿವಾಜಿಯ ಮಗ) ಮೊದಲನೇಯ ಬಾಜೀರಾವ, ಮಾದವರಾವ,ನಾರಾಯಣರಾಯ, ಬಾಳಾಜಿರಾಯ, ಎರಡನೆಬಾಜೀರಾವ ಕ್ರಮೇಣವಾಗಿ ಆಳ್ವಿಕೆಯನ್ನು ನಡೆಸಿದರು. ಇವರ ಆಡಳಿತದಲ್ಲಿ ಮೋಟೆಬೆನ್ನೂರು, ಸವಣೂರು, ಹಾವೇರಿ ಮತ್ತು ರಾಣಿಬೆನ್ನೂರಗಳು ಮುಖ್ಯ ವ್ಯಾಪಾರಿ ಕೇಂದ್ರಗಳಾಗಿದ್ದವು. ಧೀರ ಮತ್ತು ಪರಾಕ್ರಮಿಯಾದಂತಹ ನಾನಾಸಾಹೇಬ ಭಾಜೀರಾಯನ ಕಾಲದಲ್ಲಿ ಸವಣೂರ ನವಾಬರನ್ನು ಪೇಶ್ವೆಯ ತಮ್ಮ ಚಿಮಾಜಿ ಅಪ್ಪಾ ಸೋಲಿಸಿ ಪೇಶ್ವೆಯ ಮಾಂಡಲಿಕನನ್ನಾಗಿ ಮಾಡಿಕೊಂಡನು.
ಸವಣೂರ ನವಾಬರಿಂದ ರಾಣೆಬೆನ್ನೂರು ಹಾಗೂ ಕೋಡಗಳನ್ನು ಕಿತ್ತುಕೊಂಡು ಅವರಿಗೆ ಹಾನಗಲ್ ಮತ್ತು ಬಂಕಾಪುರ ಮಹಲ್‍ಗಳನ್ನು ಬಿಟ್ಟುಕೊಟ್ಟನು. ಕ್ರಿ.ಶ 1795 ರಲ್ಲಿ ಮರಾಠರ ಕಾಲದಲ್ಲಿ ಪೇಟೆಯನ್ನು (ಪೇಟ್) ನಿರ್ಮಿಸಿದರು. ಅಗಡಿಯಲ್ಲಿ ಮರಾಠರ ನಂತರ ಬ್ರೀಟಿಷರ ಕಾಲದಲ್ಲಿದ್ದ ಅದೇ ದೇಸಾಯಿಯವರು ಮುಂದುವರೆದರು.
Comments
Post a Comment