ಹಾವೇರಿ ಜಿಲ್ಲೆಯಲ್ಲಿಯ ಸ್ವಾತಂತ್ರ ಹೋರಾಟದ ಆ ದಿನಗಳ ಒಂದು ನೆನಪು....!!!

ಹಾವೇರಿ ಜಿಲ್ಲೆಯಲ್ಲಿಯ ಸ್ವಾತಂತ್ರ ಹೋರಾಟದ ಆ ದಿನಗಳ ಒಂದು ನೆನಪು....!!!
ಬ್ರಿಟೀಷರು ಭಾರತ ದೇಶಕ್ಕೆ ಬರಲು ಮೂಲಕಾರಣವೆನೆಂದರೆ ಇಲ್ಲಿ ಸಿಗುತ್ತಿದ್ದ ಹೇರಳವಾದ ಹಾಗೂ ಅಮೂಲ್ಯವಾದ ಸಂಪತ್ತು. ಈ ವಿಷಯವನ್ನು ಪ್ರಪ್ರಥಮವಾಗಿ ಖಚಿತಪಡಿಸಿದವನು “ಮಾರ್ಕೊಪೋಲೊ” ಅನ್ನುವ ವ್ಯಾಪಾರಿ ಮತ್ತು ಭೂಅನ್ವೇಷಕ. 

ಇವನು ಭಾರತವನ್ನು ಯುರೋಪದಿಂದ ಚೈನಾದ ಭೂಮಾರ್ಗದ ಮುಖಾಂತರ ಪ್ರವೇಶಿಸಿ ಇದರ ಮಾಹಿತಿಯನ್ನು ಜಗತ್ತಿಗೆ ಪ್ರಕಟಿಸಿದನು. ಆತನ ಈ ವರದಿ ಇತರ ದೇಶದವರನ್ನು ಭಾರತದ ಕಡೆಗೆ ಬರುವಂತೆ ಮಾಡಿತು.  

ಬ್ರಿಟೀಷರು ಭಾರತ ದೇಶದಲ್ಲಿ ಪ್ರಾಬಲ್ಯವನ್ನು ಹೊಂದಿ ತಳವೂರಲು ಮೂಲಕಾರಣ ಭಾರತೀಯರಲ್ಲಿ ಇದ್ದಂತಹ ಅಂಧ ವಿಶ್ವಾಸ ಮತ್ತು ಇವರ ಒಳ ಜಗಳಗಳು. ಇದರ ಪರಿಣಾಮವೆನ್ನುವಂತೆ ಇವರು ರಾಜರ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ವಿರಸವನ್ನು ತಂದೊಡ್ಡಿದ್ದರು. ಇಂತಹ ಒಡೆದಾಳುವ ನೀತಿಯನ್ನು ಭಾರತೀಯರಿಗೆ ತಿಳಿಸಿ ಎಲ್ಲರನ್ನು ಒಂದೂಗೂಡಿಸಿ ಬ್ರಿಟೀಷರ ವಿರುದ್ಧ ಹೋರಾಡುವ ಕಿಚ್ಚನ್ನು ಹಚ್ಚಿದವರು ಅನೇಕರು ಅದರಲ್ಲಿಯೇ ಮಹಾತ್ಮ ಗಾಂಧೀಜಿಯವರು ವಿಶೇಷವಾದಂತವರು.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಜಿಲ್ಲೆಯಿಂದಲೂ ಸಹ ಅನೇಕ ಹೋರಾಟಗಾರರು ಸತತವಾಗಿ ಪಾಲ್ಗೊಂಡರು, ಜೈಲು ಸೇರಿದರು ಮತ್ತು ದೇಶದ ಸಲುವಾಗಿ ಅಮೂಲ್ಯವಾದ ಪ್ರಾಣವನ್ನೇ ತೆತ್ತರು. ಇಂದಿಗೂ ಸಹ ಅವರ ನೆನಪುಗಳು ಅವಿಸ್ಮರಣೀಯ. 

ಮೈಲಾರ ಮಹಾದೇವಪ್ಪ, ಕನ್ನೇಶ್ವರ ರಾಮ,  ಸಂಗೂರ ಕರಿಯಪ್ಪ, ಸರದಾರ ವೀರನಗೌಡ ಪಾಟೀಲ, ಮೆಣಸಿನಹಾಳ ತಿಮ್ಮನಗೌಡರು, ಸಕ್ಕರಿ ಚಾಳಾಚಾರ್ಯರು, ಗುದ್ಲೆಪ್ಪ ಹಳ್ಳಿಕೇರಿ, ಪರಮಣ್ಣ ಹೊಸಮನಿ, ಸಿದ್ದಪ್ಪ ಹೊಸಮನಿ, ಮನ್ನಂಗಿ ಮತ್ತು ಜಾಬಿನ್‍ರವರು ಪ್ರಮುಖರು. ಭಾರತ ದೇಶಕ್ಕೆ ಬ್ರೀಟಿಷರು ವ್ಯಾಪಾರಕ್ಕೆಂದು ಜಾಹಾಂಗೀರನ ಕಾಲಕ್ಕೆ ಬಂದರು ಸಹ ಅವರನ್ನು ಔರಂಗಜೇಬನು ಹತೋಟಿಯಲ್ಲಿಟ್ಟಿದ್ದನು.

ಬ್ರಿಟೀಷರ ಆಗಮನದಿಂದ ಹಾವೇರಿ ಜಿಲ್ಲೆಯಲ್ಲಿಯ ಜನರ ವೃತ್ತಿಗಳು ಬದಲಾದವು, ರೈತರ ಬೆಳೆಗಳು ವಿದೇಶಿಯ ತಳಿಯಿಂದ ಕೂಡಿದವಾದವು, ಅನೇಕ ಜಮೀನದಾರರು ತಮ್ಮ ವ್ಯವಸಾಯ ಭೂಮಿಯನ್ನು ಕಳೆದುಕೊಂಡರು ಮತ್ತು ನಮ್ಮ ಸಂಸ್ಕೃತಿಯಲ್ಲಿಯು ಕೂಡ ಬದಲಾವಣೆಗಳಾದವು. ಕ್ರಿ.ಶ 1843-44 ರಲ್ಲಿಯ ಇನಾಂ ಕಮಿಶನ್‍ನಿಂದಾಗಿ ಬಹಳಷ್ಟು ಇನಾಂ ಭೂಮಿಯನ್ನು ದಾಖಲೆಗಳಿಲ್ಲ ಎಂದು ಕಸಿದು ಕೊಂಡರು. ಕ್ರಿ.ಶ 1863-64 ರಲ್ಲಿ ಅಮೇರಿಕದಲ್ಲಿ ನಡೆದ ಯಾದವಿ ಯುದ್ದದಿಂದಾಗಿ ಆ ದೇಶದಿಂದ ಬರುತ್ತಿರುವ ಹತ್ತಿಯು ನಿಂತಾಗ ಇಂಗ್ಲೆಂಡಿಗೆ ಬೇಕಾಗುವ ಹತ್ತಿಯನ್ನು ಭಾರತ ದೇಶದಿಂದ ಪಡೆಯಲಾರಂಭಿಸಿದರು. ಇದರಿಂದಾಗಿ “ಅರಳೆಯ ಉಬ್ಬರ ಅಥವಾ ಕಾಟನ್ ಬೂಮ್” ನಮ್ಮ ಜಿಲ್ಲೆಯಲ್ಲೂ ಪರಿಣಾಮವನ್ನು ಬೀರಿತು(ಸವಣೂರ ತಾಲೂಕಿನ ಹತ್ತಿಮತ್ತುರ ಗ್ರಾಮ ನಾಮ ಇದರಿಂದಾಗಿಯೆ ಬಂದಿತೆನ್ನಬಹುದು) ಅನೇಕ ರೈತರು ಹತ್ತಿಯನ್ನು ಬೆಳೆಯಲಾರಂಭಿಸಿದರು. ಇದರಿಂದಾಗಿ ಅವರು ಹೆಚ್ಚಿನ ಹಣವನ್ನು ಗಳಿಸಲಾರಂಭಿಸಿದರು. ಇದರಿಂದಾಗಿ “ಹತ್ತಿ ಬಿತ್ತಿ ರೈತ ಹಾಳಾದ” ಎಂಬ ಮಾತು ಜನಸಾಮಾನ್ಯರಲ್ಲಿ ಮೂಡಿತು. ಕಾರಣ ಕೈಯಲ್ಲಿ ಹಣದ ಓಡಾಟ ಮಿತಿಮೀರಿ ಹೆಚ್ಚಿತು ಶ್ರೀಮಂತ ರೈತರು ದುಶ್ಚಟಗಳಿಗೆ ಬಲಿಯಾದರು. ಜಗಳ, ಖಟ್ಲೆಗಳು ಹೆಚ್ಚಿ, ವಕೀಲ ವೃತ್ತಿಗೆ ಅನೇಕರು ನುಗ್ಗುವಂತಾಯಿತು, ಭೂಮಿಯ ಬೆಲೆ ಹೆಚ್ಚಿತು, ಅತಿಯಾದ ವರದಕ್ಷಿಣೆ ರೂಡಿಗೆ ಬಂತು. ಇದೇ ಕಾಲಕ್ಕೆ ಉಳಿತಾಯದ ಸ್ವಾಭಾವವೂ ಬೆಳೆದು ಬಂಡವಾಳದ ಸಂಸ್ಥೆಗಳು ಹುಟ್ಟಿಕೊಂಡವು.ಇದಲ್ಲದೇ ಹತ್ತಿ ಸಾಗಣಿಕೆಗೆ ಒಳ್ಳೆಯ ರಸ್ತೆಗಳಾದವು. ನೂಲುವ, ನೇಯುವ ಗಿರಣಿಗಳಾದವು. ರೈಲ್ವೆ ಮಾರ್ಗ ಮತ್ತು ವರ್ಕಶಾಪ ಉತ್ತಮವಾಯಿತು.

ಉತ್ತಮ ಸಾರಿಗೆ ವ್ಯವಸ್ಥೆಯಿಂದ ವಾಹನಗಳು ಬಂದವು ಹಾಗೂ ಹಿಂದಿನ ವ್ಯೆವಸ್ಥಿಯಾದ ಎತ್ತಿನ ಬಂಡಿಯಿಂದ ಸರಕುಗಳನ್ನು ಸಾಗಿಸುವುದು ನಿಂತು ಹೋಯಿತು. ಮುಂದೆ ಇದೆ ಎತ್ತಿನ ಬಂಡಿಯನ್ನು ಓಡಿಸುವರು ಕುಮಟಾ ಸಮುದ್ರದಿಂದ ಲವಣವನ್ನು ತಂದು ಮಾರಲು “ಲಮಾಣಿ” (ಲಂಬಾಣಿ)ಯರಾದರು. 1873ರ ಉಪ್ಪಿನ ಕಾನೂನಿಂದ ಕಲ್ಲುಪ್ಪು ತಯಾರಿಸುವ ನೂರಾರು ಉಪ್ಪಾರರು ಉದ್ಯೋಗ ಕಳೆದುಕೊಂಡರು. 1876 ರಿಂದ ದೀಪ ಉರಿಸಲು ಸೀಮೆ ಎಣ್ಣೆ ಬಂದಾಗ, ದೀಪ ಉರಿಸುವ ಉದ್ದೇಶಕ್ಕೆ ಬಳಸುವ ಎಣ್ಣೆಯ ಪ್ರಮಾಣ ಕಡಿಮೆಯಾಗಿ ಗಾಣಿಗರ ವೃತ್ತಿ ಕಡಿಮೆಯಾಯಿತು. ಬೆಲ್ಲದ ಗಾಣದ ಬದಲಿಗೆ ಸಕ್ಕರೆ ಕಾರ್ಖಾನೆಗಳು ಬಂದವು (ಕನಕದಾಸರು ತಮ್ಮ ಭಕ್ತಿಗೀತೆಯಲ್ಲಿ “ಸಕ್ಕರೆ ಸಿಹಿಯೊಳಗೊ ಅಥವಾ ಸಿಹಿಯು ಸಕ್ಕರೆಯೊಳಗೊ” ಎಂದು ಸಕ್ಕರೆ ಪದವನ್ನು ಉಪಯೋಗಿಸಿದ್ದರಿಂದ ಸಕ್ಕರೆಯ ಉತ್ಪಾದನೆ ಅಂದೆ ಇದ್ದಿತ್ತು ಆದರೆ ಬ್ರೀಟೀಷರ ಆಗಮನದ ನಂತರ ಹೆಚ್ಚು ಪ್ರಚಲಿತಕ್ಕೆ ಬಂದಿತು ಎಂದು ಹೇಳಬಹುದು) ದೇಶಿಯ ಖಾದಿ ಬಟ್ಟೆಗಳು ಬದಲಾಗಿ ಮಾರುಕಟ್ಟೆಗೆ ವಿದೇಶಿ ಬಟ್ಟೆಗಳು ಬರಲಾರಂಭಿಸಿದವು. 

ತಮ್ಮ ವ್ಯಾಪರಗೋಸ್ಕರ ಹಾವೇರಿ ಮತ್ತು ಸವಣೂರ ಮಧ್ಯದಲ್ಲಿ ಸೇತುವೆಯನ್ನು ನಿರ್ಮಿಸಲಾಯಿತು,ಹೀಗೆ ಬ್ರಿಟೀಷರು ಸರ್ವ ರೀತಿಯಲ್ಲಿಯೂ ದೇಶದ ಮೂಲೆ ಮೂಲೆಯಿಂದ ಕೊಳ್ಳೆಹೊಡೆಯಲು ಆರಂಭಿಸಿದಾಗ ಹಾವೇರಿ ಜಿಲ್ಲೆಯ ಜನರು ಜಾಗೃತಗೊಂಡರು. ಜಾಗೃತಿಯ ಫಲವೇ ಈ ಕೆಳಗಿನ ಪ್ರಮುಖ ಘಟನೆಗಳು.

• ದೇಶದಲ್ಲಿ ಚಳುವಳಿ ಹಬ್ಬಿದ್ದು 1895-96 ರ ವರ್ಷದಲ್ಲಿ. ಹಾವೇರಿ ಜಿಲ್ಲೆಯಲ್ಲಿ ಪ್ರಸಾರವಿದ್ದಂತಹ “ಜ್ಞಾನ ಪ್ರಕಾಶ” (1849), “ಹಿಂದೂ ಪ್ರಕಾಶ” (1852), “ಕರ್ನಾಟಕ ಪತ್ರ” (1881), ಲೋಕಮಾನ್ಯ ಟೀಳಕರ “ಕೇಸರಿ” (1881) ಪತ್ರಿಕೆಗಳು ವಿದ್ಯಾವಂತರಲ್ಲಿ ಜನಜಾಗೃತಿಗೆ ಕಾರಣವಾಗಿದ್ದವು, ಇವುಗಳಲ್ಲಿ ಕೇಸರಿ ಪತ್ರಿಕೆ ಹೆಚ್ಚು ಪ್ರಚಲಿತದಲ್ಲಿತ್ತು.
• ಶಿವಾಜಿ ಉತ್ಸವ, ಗಣೇಶ ಉತ್ಸವ, ಮತ್ತು ನಾಡಹಬ್ಬಗಳಲ್ಲಿ ಜನರನ್ನು ಮತ್ತು ಅವರ ಭಾವನೆಗಳನ್ನು ಒಂದುಗೂಡಿಸಲು ಆಟೋಟಗಳ ಸ್ಪರ್ಧೆ, ಸಾಮೂಹಿಕ ಗಾನ ಸ್ಪರ್ಧೆ, ನಾಟಕ,ಸಂಗೀತ ಮುಂತಾದವುಗಳು ಹಾವೇರಿಯ ತುಂಬಾ ಸಾಗಿದವು.
ಅಗಡಿಯ ಆನಂದವನ ಶೇಷಾಚಲ ಸದ್ಗುರು ಆಶ್ರಮದ ಪ್ರೇರಣೆಯಿಂದ “ಸದ್ಭೋದಚಂದ್ರಿಕೆ” ಮಾಸ ಪತ್ರಿಕೆಯನ್ನು ಗಳಗನಾಥರು ಪ್ರಾರಂಭಿಸಿದರು. ಇದರಲ್ಲಿಯ ಇತಿಹಾಸದ ಕಾದಂಬರಿಗಳು ತರುಣರಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದವು.
• ಟಿಳಕರು ಮತ್ತು ಅನಿಬೆಸಂಟರು ಬೇರೆ ಬೇರೆಯಾದಂತಹ ಹೋಂ ರೂಲ್ ಲೀಗ್‍ನ್ನು ಆರಂಭಿಸಿದರು. ಈ ವೇಳೆಯಲ್ಲಿ ಶಾಂತಕವಿಗಳು (ಸಕ್ಕರಿ ಬಾಳಚಾರ್ಯರು) ಹೋಂ ರೂಲಿನ ಪರವಾಗಿ ಜಿಲ್ಲೆಯಲ್ಲಿಯೂ ಮತ್ತು ಹೊರ ಜಿಲ್ಲೆಗಳಲ್ಲಿಯೂ ಹರಿಕಥೆಗಳನ್ನು ನಡೆಸಿದ್ದು ಉಲ್ಲೇಖನಿಯ.
• ಅಸಹಕಾರ ಚಳುವಳಿಯ ಅವಧಿಯಲ್ಲಿ ಹಾವೇರಿಯಲ್ಲಿ ಮುಕಂದಲಾ ಗುಪ್ತ ಮತ್ತು ಹಾನಗಲ್‍ನಲ್ಲಿ ಶಾಮಚಾರ್ಯ ಎಂಬುವರ ನೇತೃತ್ವದಲ್ಲಿ ರಾಷ್ಟ್ರೀಯ ಶಾಲೆ ಆರಂಭವಾಯಿತು. “ಮಲ್ಲಾರಿ ಭಟ್ ಕಾಗಿನೆಲೆಯಲ್ಲಿ” ಹೆಣ್ಣು ಮಕ್ಕಳಿಗೆ ಶಾಲೆ ತೆರೆದರು.
• ರಾಷ್ಟ್ರೀಯ ಜಾಗೃತಿ ಮೂಡಿಸಲು ತಾಲ್ಲೂಕಿನಾದ್ಯಂತ ಸಮಿತಿಗಳಾದವು ಹೀಗೆ ಹಾವೇರಿ ಮಟ್ಟದ ಸಮೀತಿಗೆ ಶಂಕ್ರಪ್ಪಾ ತಾಂಡೂರ ಅಧ್ಯಕ್ಷರಾದರು ಮತ್ತು ಗೋವಿಂದಾಚಾರ್ಯ ಅಗ್ನಿಹೋತ್ರಿ ಕಾರ್ಯದರ್ಶಿಗಳಾದರು(ಇಲ್ಲಿಯ ಖಾದಿಬಂಡಾರವನ್ನು ನೋಡಿಕೊಳ್ಳುತ್ತಿದ್ದರು). ಶಿಗ್ಗಾಂವಿಯಲ್ಲಿ ದಿಗಂಬರರಾವ್ ಹಳೆಪೇಟೆ, ಬಂಕಾಪುರದ ಗುಂಡೇರಾವ್ ಸವಣೂರು, ಹಾಗೂ ಹಾನಗಲ್‍ನಲ್ಲಿ ಮಲ್ಲಪ್ಪ ಅಕ್ಕಿ ಅಧ್ಯಕ್ಷರಾದರೆ ಅ.ನಾ ಕುಂದಪೂರ ಕಾರ್ಯದರ್ಶಿಯಾಗಿದ್ದರು.
ದೋಂಡಿಯಾ ವಾಘನು ಚನ್ನಗಿರಿಯ (ಶಿವಮೊಗ್ಗ) ಪವಾರ್ ಮನೆತನಕ್ಕೆ ಸೇರಿದವನು. ಟಿಪೂವಿನ ಸೈನ್ಯದಲ್ಲಿದ್ದು ಮುಂದೆ ಕ್ರಿ.ಶ 1790 ರಲ್ಲಿ ಇವನ ಸೈನ್ಯವನ್ನು ತೊರೆದು ಮುಂದೆ ಸಮಾನ ಮನಸ್ಕರರನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ದ ಸುಲಿಗೆಯನ್ನು ಆರಂಭಿಸಿದನು. ಇವನು ಕೂಡ ಕುದುರೆದಳ ಮತ್ತು ಕಾಲದಳವನ್ನು ಹೊಂದಿದ್ದನು. ಬ್ರಿಟಿಷರಿಗೆ ಹಲವು ವರ್ಷಗಳ ಕಾಲ ಸಿಂಹಸ್ವಪ್ನವಾಗಿ ಕಾಡಿದನು. ಈತನು ಹಾವನೂರ ಮತ್ತು ಸವಣೂರಿನಲ್ಲಿ ಸುಲಿಗೆಯನ್ನು ಮಾಡಿದನು. ಇದನ್ನು ಅರಿತ ಬ್ರಿಟಿಷರು ಈತನನ್ನು ಹಾಗೆ ಬಿಟ್ಟರೆ ಮರಾಠರೊಡನೆ ಗಡಿ ಗುರುತಿಸುವುದು ಕಷ್ಟವಾಗುತ್ತದೆ ಎಂದು ತಿಳಿದು ಇವನ ಕಾರ್ಯಾಚರಣೆಗೆ ಕ|| ಅರ್ಥರ್ ವೆಲ್ಲಸ್ಲಿಯನ್ನು ನೇಮಿಸಲು, ಧೋಂಡಿಯು ಶ್ರೀರಂಗಪಟ್ಟಣದಿಂದ ಹರಿಹರಕ್ಕೆ ಬಂದು ಮುಂದೆ ಐರಣಿ ಕೋಟೆಯನ್ನು ಗೆದ್ದನು, ಇತನ ಖಡ್ಗವನ್ನು ಕದಿರಮಂಡಲಗಿಯ ಕಾಂತೇಶ್ವರ ದೇವಸ್ಥಾನದಲ್ಲಿ ಈಗಲೂ ಸಹ ನೋಡಬಹುದು. ವೆಲ್ಲಸ್ಲಿಯು ಕ್ರಿ.ಶ 1800 ರಲ್ಲಿ ಇತನನ್ನು  ಬೆನ್ನಟ್ಟಿ ಕೊಣಗಲ್‍ನಲ್ಲಿ ಕೊಂದನು.
ಡಾ||ಹರ್ಡೇಕರ ಅವರಿಂದ ಸ್ಥಾಪನೆಗೊಂಡ ಹಿಂದೂಸ್ತಾನಿ ಸೇವಾದಳದ ಹಲವು ಶಾಖೆಗಳು ಮತ್ತು ಪರಿಷತ್ತುಗಳು ಪ್ರಾರಂಭಗೊಂಡವು. ಕ್ರಿ.ಶ 1924 ರಲ್ಲಿ ಹರ್ಡೇಕರ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಹಾವೇರಿಯಲ್ಲಿ ಡಾ||ಹರ್ಡೇಕರರು ಸೇವಾದಳದ ಶಿಬಿರವನ್ನು ನಡೆಸಿದರು. ಹಾವೇರಿಯಿಂದ ತರುಣರನ್ನು ದೇಶದ ಕಾರ್ಯಕ್ಕೆ ತಯಾರಿಮಾಡಲು ಹನುಮಾನ ವ್ಯಾಯಾಮ ಶಾಲೆ ಪ್ರಾರಂಭಿಸಿದರು.
• ಧಾರವಾಡ ಗೋಲಿಬಾರ್ ಪ್ರಕರಣದ ನಂತರ ಸರ್ಕಾರವು ಬ್ರಾಹ್ಮಣ-ಬ್ರಾಹ್ಮಣೇತರರಲ್ಲಿ ವೈಶಮ್ಯ ಹೆಚ್ಚಿಸಲು ಬ್ರಾಹ್ಮಣೇತರರಿಂದ ಸುಳ್ಳುಕಟ್ಟಲೆಗಳನ್ನು ಹಾಕಿಸಿ ಮತ್ತು ಸುಳ್ಳು ಸಾಕ್ಷಿಗಳನ್ನು ಒದಗಿಸಲು. ಇದನ್ನು ತಿಳಿದಂತಹ ಹಲವು ನಾಯಕರು ಇಂತಹ ಬಿರುಕನ್ನು ಸರಿಪಡಿಸಬೇಕೆಂದು ಅರಿತರು. ಹಾನಗಲ್ ಶಿವಕುಮಾರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ವೀರಶೈವಧರ್ಮದವರಿಗೆ ಒಗ್ಗಟ್ಟಾಗಲು ಸೂಚಿಸಿದರು. ಕ್ರಿ.ಶ.1916 ರಲ್ಲಿ ಬೆಳಗಾವಿಯಲ್ಲಿ ಕೆ.ಎಲ್.ಇ ಸೊಸೈಟಿ ಪ್ರಾರಂಭವಾಯಿತು.
• ಕರ್ಜಗಿಯ ಪರಮಣ್ಣ ಹೊಸಮನಿಯವರು ಕಾಂಗ್ರೇಸಿನ ಬಗ್ಗೆ ಮುನಿಸಿಗೊಂಡಂತಹ ಲಿಂಗಾಯತ ಗಣ್ಯರನ್ನು ಕಂಡು ಕಾಂಗ್ರೇಸ್ ಸೇರಲು ವಿನಂತಿಸುತ್ತಿದ್ದರು. ಕ್ರಿ.ಶ.1923 ರಲ್ಲಿ ಕರ್ಜಗಿಯಲ್ಲಿ ಒಂದು ಸ್ವಯಂ ಸೇವಾ ಸಂಘ ಮತ್ತು ವಾಚನಾಲಯ ಸ್ಥಾಪಿಸಿ ಸಮಾಜಸೇವೆ ಕೈಗೊಂಡರು. ಅಧ್ಯಾಪಕ ವೃತ್ತಿ ಬಹಿಷ್ಕರಿಸಿ ಊರಿಗೆ ಬಂದಂತಹ ಸಾಲಿರಾಮಚಂದ್ರರಾಯರು ಇವರ ಜೊತೆ ಸೇರಿಕೊಂಡರು. ಇವರೇ 1923 ರಲ್ಲಿ ಹಾವೇರಿ ಸ್ಟೇಷನ್ ಬಳಿ ಗಾಂಧೀತತ್ವದಂತೆ ನಡೆಯುವ ಹಾಗೂ ಕರ್ಜಗಿಯಲ್ಲಿ ಒಂದು ಸ್ವಯಂ ಸೇವಾ ಸಂಘ ಮತ್ತು ವಾಚನಾಲಯ ಸ್ಥಾಪಿಸಿ ಸಮಾಜಸೇವೆ ಕೈಗೊಂಡರು. 
• ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಸಭೆಗೆ ತಪ್ಪದೇ ಹೋಗಿ ಪ್ರಭಾವಿತರಾದ ಪಾಟೀಲ ಕಲ್ಲನಗೌಡ (ಕೆ.ಫ್.ಪಾಟೀಲ) ಇವರು ಮುಂದೆ ಮಹಿಳೆಯರಿಗೆ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ರಾಜರಾಜೇಶ್ವರಿ ಕಾಲೇಜನ್ನು ಸ್ಥಾಪಿಸಿದರು (ರಾಣೆಬೆನ್ನೂರ).
• ಹೀರೆಕೇರೂರು ತಾಲ್ಲೂಕಿನ ಕಚವಿಯವರಾದಂತಹ ವೀರನಗೌಡ ಪಾಟೀಲರು ಕರ್ನಾಟಕ ಲಿಂಗಾಯತ ಎಜುಕೇಷನ್ ಸೋಸೈಟಿಯ ಸ್ಥಾಪಕ ಸದಸ್ಯರಲ್ಲಿ ಅಥವಾ ಸಪ್ತಋಷಿಗಳಲ್ಲಿ ಇವರು ಒಬ್ಬರು. ಕಾಂಗ್ರೇಸ್ಸಿನ ಬಗ್ಗೆ ಅನೇಕರು ಸಹಾನುಭೂತಿಯನ್ನು ಹೊಂದದೆ ಇರುವ, ಬ್ರಿಟೀಷರ ತಾರತಮ್ಯ ನೀತಿಯನ್ನು ಅರಿತು ಬ್ರಾಹ್ಮಣೇತರ ಸಮ್ಮೇಳನದಲ್ಲಿ ಕಾಂಗ್ರೇಸ್ ಇರುವುದಾಗಿ ಘೋಷಿಸಿದರು. ಇದಕ್ಕಾಗಿಯೇ ಇವರು ಕರ್ನಾಟಕದ ಮಧ್ಯಸ್ಥಳ ವ್ಯಾಪಾರಿಕೇಂದ್ರ ಹುಬ್ಬಳ್ಳಿಗೆ ಬಂದು ನೆಲೆಸಿದರು. ಇವರು ಮುಂದೆ ಅನೇಕ ಸ್ವತಂತ್ರ ಹೋರಾಟದಲ್ಲಿ ಪತ್ನಿ ನಾಗಮ್ಮನ ಜೊತೆ ಭಾಗಿಯಾದರು ಮುಂದೆ ಮಹಿಳೆಯರಿಗೆ ಶಿಕ್ಷಣ ಕೊಡಲು ಹರಿಜನ ಬಾಲಿಕಾಶ್ರಮವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಇದನ್ನು ಸೇರಲು ಮೋಟೆಬೆನ್ನೂರು, ಬ್ಯಾಡಗಿ, ಹೊಸರಿತ್ತಿ, ಕಡೂರು ಮತ್ತು ಕರ್ಜಗಿಯಿಂದ ಅನೇಕ ದಲಿತ ಮಹಿಳೆಯರು ಹೋದರು ಇದೇ ಮುಂದೆ ಕಸ್ತೂರಬಾ ಬಾಲಿಕಾಶ್ರಮವಾಯಿತು (ಪಂಡಿತ ಜವಾಹರಲಾಲ ಉದ್ಘಾಟಿಸಿದರು). ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ ಇವರ ಕನಸ್ಸಿನ ಕೂಸು. ವೀರನಗೌಡ ಪಾಟೀಲರವರು ಸರ್ದಾರ ವಲ್ಲಬಾಯಿ ಪಟೇಲ್‍ರ ಕಾರ್ಯಕ್ಷೇತ್ರ ಬಾರಡೋಲಿಗೆ ಹೋಗಿಬಂದು ಪ್ರೇರಿತರಾಗಿ ಮುಂದೆ ಹಿರೇಕೆರೂರ ತಾಲ್ಲೂಕಿನಲ್ಲಿ ಕ್ರಿ.ಶ.1930-31 ರಲ್ಲಿ ಕರ ನಿರಾಕರಣೆ ಚಳುವಳಿ ಸಂಘಟಿಸಿ ಸರ್ದಾರ ಎನ್ನಿಸಿದರು.
• ಇದೇ ರೀತಿ ಕಾಂಗ್ರೇಸ್ ಸೇರಿದ ಗಣ್ಯರಲ್ಲಿ ಹಂಸಭಾವಿಯ ತಿಮ್ಮಪ್ಪ ನೆಸ್ವಿ ಮತ್ತು ಹಾವೇರಿಯ ಸಿದ್ದಪ್ಪ ಹೊಸಮನಿ ಉಲ್ಲೇಖನಿಯರು. ನೆಸ್ವಿಯವರು ಕೃಷಿಪಧವಿದರರಾಗಿದ್ದು ಹಂಸಭಾವಿಯಲ್ಲಿ ಒಂದು ಖಾಸಗಿ ಶಾಲೆಯ ಅಧ್ಯಾಪಕರಾಗಲು ಅಲ್ಲಿಗೆ ಕೆ.ಎಫ್.ಪಾಟೀಲರು ಅಧ್ಯಾಪಕರಾಗಿ ಬಂದು ಸೇರಿ ಮೈಲಾರ ಮಹಾದೇವಪ್ಪ ಮುಂತಾದ ದೇಶಭಕ್ತ ತರುಣರನ್ನು ತಯಾರು ಮಾಡಿದರು. ಕರಿಯಪ್ಪ ಸಂಗೂರು, ಮೂರು ಸಾವಿರಪ್ಪ ಈಚಗೇರಿ ಇವರೆಲ್ಲ ತರಬೇತಾದ ಕಾರ್ಯಕರ್ತರಲ್ಲಿಯೇ ಗಣ್ಯರು. 
• ಮೈಲಾರ ಮಹಾದೇವಪ್ಪ, ತಿರುಕಪ್ಪ ಮಡಿವಾಳರ್, ವೀರಯ್ಯ ಹಿರೇಮಠ ಚಳುವಳಿಯಲ್ಲಿ ದುಮುಕಿ ಬ್ರಿಟೀಷ ಅಧಿಕಾರಿಗಳ ಗುಂಡಿಗೆ ಬಲಿಯಾದರೆ, ಹಾವೇರಿ ತಾಲ್ಲೂಕಿನ ಸಂಗೂರು ಗ್ರಾಮದ ಕರಿಯಪ್ಪನವರು ಅವರೊಡನೆ ಇದ್ದುಕೊಂಡು ಸ್ವಾತಂತ್ರ ಚಳುವಳಿಗೆ ತಮ್ಮದೇ ಆದ ಕೊಡುಗೆ ನೀಡಿದವರು. ಸಂಗೂರ ಕರಿಯಪ್ಪನವರು 1-11-1910ರಂದು ತಂದೆ ನೀಲಪ್ಪ ಹಾಗೂ ತಾಯಿ ಗಂಗವ್ವರ ಉದರದಲ್ಲಿ ಜನಿಸಿ, ಬಂಕಾಪುರದ ಕೆಂಡದಮಠದ ಮಹಾಸ್ವಾಮಿಗಳ ಆಶ್ರಯದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಮೋಟೆಬೆನ್ನೂರಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಬಂದಾಗ ಕೇಸರಿ ಹಾಗೂ ಗಾಂಧೀಜಿಯವರ ಯಂಗ್ ಇಂಡಿಯಾ ಪತ್ರಿಕೆಯಿಂದ ಪ್ರೇರೆಪಿತಗೊಂಡು ಕ್ರಿ.ಶ.1930ರಲ್ಲಿ ಡಾ|| ಎನ್.ಎಸ್.ಹರ್ಡಿಕರ ಸಾನಿಧ್ಯದಲ್ಲಿ ಸೇವಾದಳದ ಶಿಕ್ಷಣ ಪಡೆದು ಕ್ರಿ.ಶ.1933ರಲ್ಲಿ ವೈಯಕ್ತಿಕ ಚಳುವಳಿ, ಕ್ರಿ.ಶ.1937ರಲ್ಲಿ ಸಾಮೂಹಿಕ ಅಸಹಕಾರ ಚಳುವಳಿ,ಬ್ಯಾಡಗಿ ರೈಲ್ವೆ ನಿಲ್ದಾಣ ಬಸ್ಮ ಮಾಡಿದರು, ಮಾಸೂರೂ ಛಾವಡಿ ಸುಟ್ಟರು, ಅರಣ್ಯ ಅಧಿಕಾರಿಗಳ ಹಣ ಕೊಳ್ಳೆಹೊಡೆದರು, ಅಂಚೆತಂತಿ ಕತ್ತರಿಸಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಗುಪ್ತನಾಮದಿಂದ ಅಲೆದಾಡಿ ಕ್ರಿ.ಶ.1940ರಲ್ಲಿ ಮೂರಾರ್ಜಿ ದೇಸಾಯಿಯವರೊಂದಿಗೆ ಯರವಾಡ ಜೈಲು ಸೇರಿದರು.  
• ಕ್ರಿ.ಶ.1940 ರಲ್ಲಿ ಸಂಗೂರ ಕರಿಯಪ್ಪನವರು ಮಹಾತ್ಮಗಾಂಧೀಜಿಯವರ ಬೆಂಬಲ ಹಾಗೂ ಆಶೀರ್ವಾದದ ಫಲವಾಗಿ ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಸಾಕುಮಗಳೆನಿಸಿದ್ದ ಹಾಗೂ ದಲಿತ ಕುಟುಂಬದಲ್ಲಿ ಜನಿಸಿದ ವೀರಮ್ಮಳನ್ನು ಮದುವೆಯಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿ ಎನಿಸಿಕೊಂಡರು. ಸುಣಕಲ್ಲ ಬೀದರಿ ಗ್ರಾಮದ ಹೊಲದಲ್ಲಿ ಹೂತಿಟ್ಟ ಕೈಬಾಂಬಗಳನ್ನು ತೆಗೆಯುವಾಗ ಸ್ಪೋಟವಾಗಿ ಜನವರಿ 1943 ರಲ್ಲಿ ಸಂಗೂರು ಕರಿಯಪ್ಪನವರ (ಎರೇಸೀಮೆಯವರ) ಕೈಗೆ ಗಾಯವಾಗಿ ದಾವಣಗೇರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಂಗೈ ಕತ್ತರಿಸಲಾಯಿತು.
ಸಿದ್ದಪ್ಪ ಹೊಸಮನಿಯವರು ಮೂಲತಃ ಕರ್ಜಗಿಯ ಪ್ರಸಿದ್ಧ ವಕೀಲರು. ಸುಭಾಸಚಂದ್ರ ಬೋಸರ ಜೊತೆ ಚಳುವಳಿಗೆ ದುಮುಕಿದವರು. ಕ್ರಿ.ಶ.1934 ರಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾದರಲ್ಲದೇ, ಕಾಂಗ್ರೇಸನಿಂದ ಕೇಂದ್ರ ಲೆಜೆಸ್ಲೇಟಿವ್ ಅಸಂಬ್ಲಿಗೆ ಆರು ಜಿಲ್ಲೆಗಳ ಪ್ರತಿನಿಧಿಯಾಗಿ ಆಯ್ಕೆಯಾದರು. ಹಾವೇರಿಯಲ್ಲಿಯ ಮುನ್ಸಿಪಲ್ ಹೈಸ್ಕೂಲಿನ ಹುಟ್ಟಿಗೂ ಕಾರಣರಾದರು. ಇವರ ಸಹೋದರ ಪರಮಣ್ಣ ಹೊಸಮನಿ ಗಟ್ಟಪರ್ತಿಗೆ ಹೋಗಿ ಸವಳು ಮಣ್ಣು ತಂದು ಉಪ್ಪು ತಯಾರಿಸಿ ಹಾವೇರಿಯಲ್ಲಿ ಮಾರಿದರು.
• ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೇಪ್ಪರು ಗಣಿತ ವಿಷಯದಲ್ಲಿ ಅತ್ಯಂತ ಪಾಂಡಿತ್ಯವನ್ನು ಹೊಂದಿದ್ದರು. 1909 ರಿಂದ 1924ರ ವರೆಗೂ ಮುರಘಾ ಮಠದ ಪ್ರಸಾದ ನಿಲಯದಲ್ಲಿದ್ದು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗುವಾಗ ಮಹಾತ್ಮಗಾಂಧೀಜಿಯವರ ದರ್ಶನದಿಂದ ಇವರ ಜೀವನಚಕ್ರವೇ ಬದಲಾಯಿತು. ವರದಾತೀರದಲ್ಲಿ ಕೊರಡೂರು ಹತ್ತಿರದ ಹೊಸರಿತ್ತಿಯಲ್ಲಿ ಇವರು ಸ್ವತಂತ್ರ ಸೇನಾನಿಗಳನ್ನು ತಯಾರು ಮಾಡಲು ಗಾಂಧೀ ಆಶ್ರಮವನ್ನು ಸ್ಥಾಪಿಸಿ ಇಡೀ ರಾಷ್ಟ್ರಕ್ಕೆ ಹೆಸರುವಾಸಿಯಾದರು. ಇಂತಹ ಕರ್ನಾಟಕದ ಉಕ್ಕಿನಮನುಷ್ಯ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದು ಅವರನ್ನು 1930ರಲ್ಲಿ ಎರಡು ಬಾರಿ ಬ್ರಿಟಿಷ ಸರ್ಕಾರ ಬಂಧಿಸಿತು.
• ಕಾನೂನು ಭಂಗ ಚಳುವಳಿಯಲ್ಲಿ ಬಂಕಾಪುರ, ಶಿಗ್ಗಾಂವಿ, ಹಾವೇರಿ ಹಾನಗಲ್, ಕಲ್ಲದೇವರು ಮತ್ತು ಬೂಡಪ್ಪನ ಹಳ್ಳಿಯಲ್ಲಿ ಸೆಂಧಿ ಗಿಡಗಳನ್ನು ಕಡಿಯುವ ಕಾನೂನು ಸತ್ಯಾಗ್ರಹ (ಅಡವಿ ಸತ್ಯಾಗ್ರಹ) ಹಾಗೂ ಸರಾಯಿ ಅಂಗಡಿ ವಿರುದ್ಧ ಪಿಕೇಟಿಂಗ್ ನಡೆಸಿದರು.
• ಶ್ರೀ ಪರಮಣ್ಣ ಹೊಸಮನಿ, ಶ್ರೀ ವೆಂಕಟೇಶ ಚವಟಿ ಮತ್ತು ಗೋವಿಂದಾಚಾರ್ಯ ಅಗ್ನಿಹೋತ್ರಿಯವರು ಮನೆ ಮನೆಗೆ ತೆರಳಿ ಯಾರೂ ಲಿಲಾವಿಗೆ ನಿಲ್ಲಬಾರದೆಂದು ಹೇಳಿದಾಗ. ಹುಲಬನ್ನಿ ಮತ್ತು ಶ್ರೀಗಂಧದ ಲಿಲಾವಿಗೆ ಹಾವೇರಿ ತಾಲೂಕಿನ ಕಬ್ಬೂರ, ಸಂಗೂರ, ನಾಗನೂರ, ಬೆಂಚಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಜನರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿತು.
• ಕಾನೂನು ಭಂಗ ಚಳುವಳಿಯು ಎಷ್ಟು ವ್ಯಾಪಕವಾಯಿತೆಂದರೆ, ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದಲ್ಲಿ ಜುಲೈ ತಿಂಗಳಲ್ಲಿ ಸತ್ಯಾಗ್ರಹ ಮಾಡಹೋದ ಕೆಲವು ಸ್ವಯಂ ಸೇವಕರನ್ನು ಸೆಂದಿಗಿಡದ ಗುತ್ತಿಗೆದಾರರು ಹೊಡೆಸಲು, ಮುಂದೆ ಶಿಗ್ಗಾಂವಿಯಲ್ಲಿ ಮುದವೀಡು ಕೃಷ್ಣರಾಯ ಮತ್ತು ಕೃಷ್ಣಾಬಾಯಿ ಪಂಜೇಕರರ ನೇತೃತ್ವದಲ್ಲಿ 800-1000 ಜನ ಕೊಡ್ಲಿದಾರಿಗಳ ಸೇನೆಯೊಂದಿಗೆ ಮಾಲೀಕರ ಮುಂದೆಯೇ 25.000 ಗಿಡಗಳನ್ನು ಉರಿಳಿಸಿದರು.
• 1930-31 ರಲ್ಲಿ ನಡೆದ ಪಿಕೇಟಿಂಗನಿಂದ ಬೇಸತ್ತ ಬ್ರಿಟೀಷÀ ಸರಕಾರ ಹಾವೇರಿಯಿಂದ 73 ಜನರನ್ನು, ರಾಣೆಬೆನ್ನೂರಿನಿಂದ 31 ಜನರನ್ನು ಮತ್ತು ಬಂಕಾಪುರದಿಂದ 16 ಜನರನ್ನು ಬಂದಿಸಿದರು.ಆದರೆ ಅಂದಿನ ಜಿಲ್ಲಾಧಿಕಾರಿಯ ಮೆದು ಧೋರಣೆಯಿಂದಾಗಿ ಯಾವ ಮಹಿಳೆಯನ್ನು ಬಂಧಿಸಲಿಲ್ಲ.
• ಜನೇವರಿ 1932 ರಲ್ಲಿ ಗುತ್ತಲದ ಕಾರ್ಯಕರ್ತರು ಆರಂಭಿಸಿದ್ದ ಗ್ರಾಮ ಸಂಘಟನಾ ದಳವನ್ನು ಪ್ರತಿಬಂದಿಸಿ ಬ್ರಿಟೀಷರು ಅದರ ಕಟ್ಟಡಕ್ಕೆ ಬೀಗ ಹಾಕಿದರು. ಹಾವೇರಿಯಲ್ಲಿ ಜನೇವರಿ 26 ಕ್ಕೆ ಮೆರವಣಿಗೆ ನಡೆಸಲು ಯತ್ನಿಸಿದ ರಾಮಕೃಷ್ಣ ಗಣಪತಿ, ಚನ್ನಬಸಯ್ಯ ಮುಂತಾದವರನ್ನು ಬಂದಿಸಲಾಯಿತು. ಜನೇವರಿ 9 ಕ್ಕೆ ಹಂಸಬಾವಿಯ 40 ವಿದ್ಯಾರ್ಥಿಗಳು ಜಂಗಲ್ ಸತ್ಯಾಗ್ರಹ ಮಾಡಲು ಆ ಪೈಕಿ ಚನ್ನಯ್ಯ ಸೂಳೇಕೇರಿಮಠ ಎಂಬ 14 ವರ್ಷದ ಹುಡುಗನಿಗೆ ಛಡಿ ಏಟು ವಿಧಿಸಿದರು. ಹಿರೇಕೆರೂರು ತಾಲೂಕಿನ “ಆರಿಕಟ್ಟಿ” ಜಂಗಲಿನಲ್ಲಿ 5000 ಜನರ ಜೊತೆ ಹೇಮಣ್ಣ ಅಂಗಡಿ, ಮೆಣಸಿನಹಾಳ ತಿಮ್ಮಣಗೌಡ, ಸಿದ್ದಪ್ಪ ಹಿರೇಮಾರ ಮುಂತಾದ 8 ಜನರು ಜಂಗಲ್ ಸತ್ಯಾಗ್ರಹಕ್ಕಾಗಿ ಬಂಧಿತರಾದರು.
• ಮಹಾತ್ಮ ಗಾಂಧೀಜಿಯವರು ಅಸ್ಪøಶ್ಯತಾ ನಿವಾರಣೆಗಾಗಿ ಉಪವಾಸ ಆರಂಭಿಸಿ ಹರಿಜನರನ್ನು ದೇವಾಲಂiÀiಗಳಿಗೆ, ಸಾರ್ವಜನಿಕ ಕೆರೆ, ಬಾವಿಗಳಿಗೆ ಕರೆದೊಯ್ಯುವ ಕಾರ್ಯಕ್ರಮಗಳಾದವು. ಗಾಂಧೀಜಿಯವರು ಹರಿಜನ ಪ್ರವಾಸ ಕೈಗೊಂಡಾಗ ಹಾವೇರಿಗೆ 1934 ಮಾರ್ಚ 1 ಕ್ಕೆ ಬಂಧರು ಅಲ್ಲಿ ಚಿತ್ರದುರ್ಗ ಸ್ವಾಮಿಗಳ ಬೇಟಿ ಆಯಿತು. ಅಲ್ಲಿಂದ ಮೋಟೆಬೆನ್ನೂರು, ಬ್ಯಾಡಗಿಗಳಿಗೆ ತೆರಳಿರಲು ಬ್ಯಾಡಗಿಯಲ್ಲಿ ಮಹಿಳೆಯರು ಹರಿಜನ ನಿಧಿಗೆ ಆಭರಣ ಕಳಚಿಕೊಟ್ಟು ಏಕತಾ ಮನೋಭಾವನೆಯನ್ನು ಮೆರೆದರು.
ಸುಭಾಷಚಂದ್ರ ಬೋಸರು ಕೆಲವು ಬಿನ್ನಾಭಿಪ್ರಾಯಗಳಿಂದಾಗಿ “ಫಾರ್ವರ್ಡ ಬ್ಲಾಕ್” ಸ್ಥಾಪಿಸಿದರು ಮುಂದೆ 1939 ಜುಲೈ ತಿಂಗಳಲ್ಲಿ ಪ್ರಚಾರಕ್ಕಾಗಿ ಬ್ಯಾಡಗಿ, ಹಾವೇರಿಗಳಿಗೂ ತೆರಳಿದರು. ಶ್ರೀ ಸಿದ್ದಪ್ಪ ಹೊಸಮನಿಯವರು “ಕರ್ನಾಟಕ ಫಾರ್ವರ್ಡ ಬ್ಲಾಕ್” ನ ಅಧ್ಯಕ್ಷರು ಹಾಗೂ ಪಾಟೀಲ ಕಲ್ಲನಗೌಡರು ಕಾರ್ಯದರ್ಶಿಗಳಾದರು.
• ಹಾನುಗಲ್‍ನಿಂದ ಕನ್ನೇಶ್ವರ ರಾಮನು ಬ್ರಿಟೀಷರ ಸಂಪತ್ತನ್ನು ಲೂಟಿಮಾಡಿ ಬಡವರಿಗೆ ಹಂಚುತ್ತಿದ್ದನು. ಇವನ ಉಪಟಳ ಬ್ರಿಟೀಷರಿಗೆ ಈ ಭಾಗದಲ್ಲಿ ಹೆಚ್ಚಾಯಿತು.
• 1942 ರಲ್ಲಿ ನಡೆದ ಕ್ವೀಟ್ ಇಂಡಿಯಾ ಚಳುವಳಿ ಬಿಸಿ ನಮ್ಮ ಜಿಲ್ಲೆಗೂ ತಲುಪಿತು ಹಿರೇಕೆರೂರಲ್ಲಿ ಕರಿಯಪ್ಪ ಸಂಗೂರ, ರಾಣೆಬೆನ್ನೂರಲ್ಲಿ ತಿಮ್ಮನಗೌಡ್ರ ಮೆಣಸಿನಹಾಳ ಹಾಗೂ ಹಾವೇರಿಯಲ್ಲಿ ಮೈಲಾರ ಮಹಾದೇವಪ್ಪನವರ ಗುಂಪುಗಳು ತಮ್ಮೊಂದಿಗೆ 20-30 ಜನರನ್ನು ತೆಗೆದುಕೊಂಡು ಸಂಪರ್ಕ ಸಾಧನಗಳನ್ನು ನಾಶಪಡಿಸುವುದು. ಎಲ್ಲಾ ಗ್ರಾಮದಫ್ತರಗಳನ್ನು ಸುಡುವುದು, ಡಾಕ್ ಬಂಗ್ಲೆಯನ್ನು (ಅಂಚೆ) ಸುಡುವುದು, ಕಂದಾಯ ಸಂಗ್ರಹಣೆ ಮಾಡುವ ಕೇಂದ್ರಗಳನ್ನು ಸುಡುವುದು, ತಮ್ಮ ವಿರುದ್ಧ ಬರುವ ಪೋಲಿಸರನ್ನು ನಿಶಸ್ತ್ರಗೊಳಿಸುವುದು, ಮೇಲ್ ಬ್ಯಾಗಗಳನ್ನು ಅಪಹರಿಸುವುದೆ ಇವರ ಕಾರ್ಯವಾಗಿ ಮುಂದೆ ಭೂಗತ ಕಾರ್ಯಕರ್ತರಾಗಿ ರೈಲು, ಬಸ್ಸು, ಬಳಸದೆ ನಡೆದೆ ಪ್ರಯಾಣ ಮಾಡುತ್ತಾ, ಹಗಲು ಬೆಟ್ಟ, ಗುಡ್ಡ, ಅಡವಿ, ಜೋಳದ ಬೆಳೆಯ ನಡುವೆ ಆಶ್ರಯ, ಊಟ ಸಿಕ್ಕರೆ ಉಂಟು, ಇಲ್ಲವಾದರೆ ಇಲ್ಲ ಇವರ ಬಂಧನಕ್ಕೆ ಸುಳಿವು ನೀಡಿದವರಿಗೆ ಬ್ರಿಟೀಷ ಸರಕಾರ ಬಹುಮಾನ ಘೋಷಿಸಿತು.
• ವೀರಯೋದ ಮೆಣಸಿನಹಾಳ ತಿಮ್ಮನಗೌಡ್ರು 8-10-1911ರಂದು ತಂದೆ ಹನಮಗೌಡ್ರು ತಾಯಿ ನೀಲಮ್ಮನ ಮಗನಾಗಿ ರಾಣೆಬೆನ್ನೂರು ತಾಲೂಕು ಮೆಣಸಿನಹಾಳ ಗ್ರಾಮದಲ್ಲಿ ಜನಸಿದರು. ಏಳನೆÀಯ ತರಗತಿಯವರೆಗೆ ತುಮ್ಮಿನಕಟ್ಟಿಯಲ್ಲಿ ವ್ಯಾಸಂಗ ಮುಗಿಸಿದರು. ದಷ್ಟಪುಷ್ಟ ದೇಹವನ್ನು ಹೊಂದಿದ್ದ ಇವರು ಕುಸ್ತಿಪಟುವಾಗಿದ್ದರು. 1930ರಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುಭಾಸಚಂದ್ರ ಭೋಸರ ಪ್ರೇರಣೆಯಿಂದ ದುಮುಕಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಬ್ರಿಟೀಷರು ಕಂಡಲ್ಲಿ ಗುಂಡು ಎಂಬ ಆದೇಶವನ್ನು ದಿಕ್ಕರಿಸಿ, ಆಸ್ಟ್ರೇಲಿಯಾ ಸೈನಿಕರು ಮೆಣಸಿನಹಾಳ ಮುತ್ತಿದಾಗಲು ಅವರಿಗೆ ಸಿಗದೆ ತಮ್ಮ ಅಗರ್ಭ ಶ್ರೀಮಂತಿಕೆಯನ್ನು ಬದಿಗೊತ್ತಿ ಬೂಗತವಾದರು. ಫೆಬ್ರುವರಿ 10 ರ 1943 ರಲ್ಲಿ ಕುಪ್ಪೆಲೂರಿನ ಗ್ರಾಮ ಚಾವಡಿಯಲ್ಲಿ ಸಂಗ್ರಹಿಸಿಟ್ಟ ಕಂದಾಯವನ್ನು ಅಪಹರಿಸಲು ಯತ್ನಿಸುವಾಗ ಮೆಣಸಿನಹಾಳ ತಿಮ್ಮನಗೌಡ್ರು ಮತ್ತು ಪೋಲಿಸರ ನಡುವೆ ತಿಕ್ಕಾಟ ನಡೆದಾಗ ರಾತ್ರಿಯ ವೇಳೆ ಬಗಲ ಚೀಲದಲ್ಲಿ ಇಟ್ಟಿದ್ದ ಕೈಬಾಂಬು ಸಿಡಿದು ತೀವ್ರವಾಗಿ ಗಾಯಗೊಂಡರು ಮುಂದೆ ಸರಿಯಾದ ಚಿಕಿತ್ಸೆ ಪಡೆಯಲಾಗದೆ ಭೂಗತವಾಗಿದ್ದಲೇ ತೀರಿಕೊಂಡರು. ಅವರ ಪಾರ್ಥಿವ ಶರೀರವನ್ನು ರಾಣೆಬೆನ್ನೂರು ನ್ಯಾಯಾಲಯದ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಗೌರವದೊಂದಿಗೆ ಸಮಾಧಿ ಮಾಡಲಾಯಿತು. 
• ಹಾವೇರಿಯಲ್ಲಿ 1942 ರ ಸೆಪ್ಟಂಬರ್ 9ಕ್ಕೆ ಹರತಾಳ ಆಚರಿಸಿದರು. ಅಕ್ಟೋಬರ 2 ಕ್ಕೆ ಗಾಂಧಿ ಜಯಂತಿ ಆಚರಿಸಿ ಮೆರವಣಿಗೆ ನಡೆಸಿದ 11 ವಿದ್ಯಾರ್ಥಿಗಳಿಗೆ ಶಿಕ್ಷೆಯಾಯಿತು. 15-2-1943 ರಂದು ಶಾಲಾ ದಾಖಲೆಗಳನ್ನು ಹಾವೇರಿಯಲ್ಲಿ ಸುಡಲಾಯಿತು. ಹಂಸಬಾವಿ ಶಾಲೆಯ ವಿದ್ಯಾರ್ಥಿಗಳು ಹಲವು ದಿನ ಮೆರವಣಿಗೆ ಸಭೆ ನಡೆಸಿದರು. ಶಿಗ್ಗಾಂವಿಯಲ್ಲಿ ಸೆಪ್ಟಂಬರ್ 20 ಕ್ಕೆ ಪ್ರಭಾತ ಫೇರಿ ನಡೆಸಿದ್ದಕ್ಕೆ 16 ವಿದ್ಯಾರ್ಥಿಗಳನ್ನು ಬಂದಿಸಿದರು.
• 1942 ಅಕ್ಟೋಬರ್ 2 ರಂದು 80 ಜನರು ಬಸ್ ನಿಲ್ಲಿಸಿ ಮೇಲ್ ಬ್ಯಾಗ್ ಅಪಹರಿಸಿದರು ಇದೆ ಅವಧಿಯಲ್ಲಿ 50 ಜನರ ಗುಂಪು ರಟ್ಟಿಹಳ್ಳಿಯ ಪಿ.ಡಬ್ಲು.ಡಿ ಬಂಗ್ಲೆಯನ್ನು ಸುಟ್ಟರು.
• ಪೋಲಿಸರನ್ನು ಬೆದರಿಸಲು ಸ್ವತಂತ್ರ ಯೋಧರು ಪಿಸ್ತೂಲು, ಕೈಬಾಂಬುಗಳನ್ನು ಹೊಂದಿದ್ದರು. ಆದರೆ ಯಾರಿಗೂ ಪ್ರಾಣಹಾನಿ ಮಾಡಿದವರಲ್ಲ.
• ಕರ್ನಾಟಕದಲ್ಲಿ ಮರಾಠಿಗರನ್ನು ಆರ್ಯರು (ರಾಣಿಬೆನ್ನೂರ ತಾಲೂಕು ಆರೆಮಲ್ಲಾಪುರ ಗ್ರಾಮ ಉದಾಹರಣೆ) ಎಂದು ಕರೆಯುತ್ತಿದ್ದರು. ಇಂತಹ ಸಮಯದಲ್ಲಿ ಸ್ವಾತಂತ್ರ ಹೋರಾಟಗಾರರಿಗೆ ರಾಣೆಬೆನ್ನೂರಿನ ಮುದವಿಡು ಕೃಷ್ಣರಾಯರು “ಧಾರವಾಡ ವೃತ್ತ” ಎಂಬ ಮರಾಠಿ ಪತ್ರಿಕೆಯ ಸಂಪಾದಕರಾಗಿ ಜನರನ್ನು ಪ್ರೇರೆಪಿಸುತ್ತಿದ್ದರು. ಹೀಗೆ ಇನ್ನು ಅನೇಕ ಸ್ವಾತಂತ್ರ ಹೋರಾಟಗಾರರು ಬ್ರಿಟೀಷರ ವಿರುದ್ಧ ಅನೇಕ ವಿಧದಲ್ಲಿ ಹೊರಾಟ ನಡೆಸಿ ಅವರ ಕಪಿಮುಷ್ಟಿಯಿಂದ ನಮ್ಮನ್ನು ಸ್ವತಂತ್ರಗೊಳಿಸಿದ್ದಾರೆ. ಇಂತಹ ಸ್ವಾತಂತ್ರವನ್ನು ನಾವು ಮತ್ತೆ ಪರಕಿಯರ ಕೈಗೆ ಒಪ್ಪಿಸದೆ ನಮ್ಮ ದೇಶವನ್ನು ಸರ್ವಾಂಗಿಣ ರೀತಿಯಲ್ಲಿ ಉತ್ತುಂಗಕ್ಕೇರಿಸಬೇಕಾಗಿದೆ. ಇದು ನಮ್ಮೆಲ್ಲರ ಕರ್ತವ್ಯವಾಗಿದೆ.
• ಸಿದ್ದಪ್ಪ ಚನ್ನಬಸಪ್ಪ ಸಿಂಧೂರ ಇವರು ಗುದ್ಲೇಪ್ಪ ಹಳ್ಳಿಕೇರಿ,ಸರ್ದಾರ ಈರನಗೌಡ ಪಾಟೀಲ, ಹೊಸಮನಿ ಸಿದ್ದಪ್ಪ, ಟಿ.ಆರ್.ನೇಸ್ವಿ, ಮೈಲಾರ ಮಹಾದೇವಪ್ಪ, ಸಂಗೂರು ಕರಿಯಪ್ಪ, ಆರ್.ಆರ್.ದಿವಾಕರ ಮುಂತಾದ ದಿಗ್ಗಜರ ಪ್ರಭಾವದಿಂದ ಭಾರತದ ಸ್ವತಂತ್ರ ಹೋರಾಟದಲ್ಲಿ ದುಮುಕಿ, ಇವರು ಸ್ವತಂತ್ರ ಹೋರಾಟಗಾರರಿಗೆ ತನು,ಮನ,ಧನದಿಂದ ಸಹಾಯ ಮಾಡಿದ್ದಲ್ಲದೇ ವಿದೇಶ ವಸ್ತುಗಳ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಪಾನನಿರೋಧ, ಕರಾನಿರಾಕರಣೆ, ಅಶ್ಪುಷ್ಯತಾ ನಿವಾರಣೆ ಮುಂತಾದ ಹತ್ತು ಹಲವು ಸಾಮಾಜಿಕ ರಾಜಕೀಯ ಹೋರಾಟಗಳಲ್ಲಿ ತೊಡಗಿಸಿಕೊಂಡು 1941 ರಲ್ಲಿ ಬಂಧಿಗಳಾಗಿ ಆರು ತಿಂಗಳ ಕಾಲ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಪುನಃ 1942 ರ ಚಲೆಜಾವ್ ಚಳುವಳಿಯಲ್ಲಿ ಬಂಧಿಸಲ್ಪಟ್ಟರು.
• ಶ್ರೀ ಪುಟ್ಟಪ್ಪ ಸಿದ್ದಲಿಂಗಪ್ಪಗೌಡ ಪಾಟೀಲರು ಕ್ರಿ.ಶ 1942ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳುವಳಿಯ ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ಮುಖಂಡರಾಗಿದ್ದರು. 1942 ಅಗಷ್ಟ 9ರಂದು ಬ್ರಿಟಿಷ ಅದ್ಯಾಪಕರಿಗೆ ಬಲವಂತವಾಗಿ ಗಾಂಧಿ ಟೋಪಿಗೆ ಹಾಕಿ ಧಾರವಾಡದ ಗಮನ ಸೆಳೆದು ಕಾಲೇಜಿನಿಂದ ಹೋರಹಾಕಲ್ಪಟ್ಟರು.
ಹೀಗೆ ಅನೇಕ ಹೋರಾಟಗಾರರ ಬಲಿದಾನ ಹಾಗೂ ಅಹಿಂಸಾತ್ಮಕದ ಪರಿಣಾಮವಾಗಿ ಭಾರತ ದೇಶವು 15/08/1947 ರಂದು ಸ್ವಾತಂತ್ರಗೊಂಡಿತು.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!