ಇತಿಹಾಸ ಪೂರ್ವಕಾಲದಲ್ಲಿ ಕಬ್ಬಿಣದ ಆಯುದವನ್ನು ಪ್ರಥಮವಾಗಿ ಬಳಸಿದ ಹಳ್ಳೂರು.....!!
ಇತಿಹಾಸ ಪೂರ್ವಕಾಲದಲ್ಲಿ ಕಬ್ಬಿಣದ ಆಯುದವನ್ನು ಪ್ರಥಮವಾಗಿ ಬಳಸಿದ ಹಳ್ಳೂರು.....
ರಟ್ಟಿಹಳ್ಳಿಯ ಸಮೀಪದ ಗ್ರಾಮವಾದ "ಹಳ್ಳೂರು" ಇತಿಹಾಸಪೂರ್ವ ಕಾಲದ ನೆಲೆಯಾಗಿದ್ದು. ಇತಿಹಾಸ ಪ್ರಿಯರ ಆಕರ್ಷಣೆಯ ಸ್ಥಳವಾಗಿದೆ. ಇಲ್ಲಿಯ ಹಾಳಾದ ಕೋಟೆಯ ಕಲ್ಲುಗಳು, ಭಗ್ನಗೊಂಡಿರುವ ವಿಗ್ರಹಗಳು, ಮಣ್ಣಿನಲ್ಲಿ ಹುದುಗಿ ಹೋಗಿರುವ ಶಿಲಾ ಆಯುಧಗಳು ಹಾಗೂ ಮಡಿಕೆಗಳು ಕಳೆದು ಹೋದ ಇತಿಹಾಸದ ಪುಟಗಳನ್ನು ತೆರೆದಿಡುತ್ತವೆ.
ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಕಬ್ಬಿಣದ ಆಯುಧಗಳನ್ನು ಉಪಯೋಗಿಸಿದ ಮನುಜ ಕುಲದ ನೆಲೆ ಎಂಬ ಹೆಮ್ಮೆ ಈ ಗ್ರಾಮಕ್ಕಿದೆ.
ಇತಿಹಾಸದ ಕುರುಹುಗಳು: ಹಳ್ಳೂರಿನ ಸಕಲ ಕಷ್ಟಗಳ ನಿವಾರಕ ಶ್ರೀ ಲಕ್ಷ್ಮೀರಂಗನಾಥ ದೇವಸ್ಥಾನದ ಮುಂಭಾಗದಲ್ಲಿರುವ "ಗೋಸಾಸು" ಶಿಲಾ ಶಾಸನ ಇಲ್ಲಿ ರಾಷ್ಟ್ರಕೂಟರ ಆಡಳಿತವಿತ್ತು ಎಂಬುವುದನ್ನು ಖಚಿತಪಡಿಸುತ್ತದೆ. ತದನಂತರ ಬೆಳಗುತ್ತಿಯ ಸಿಂಧರು "ಹಳ್ಳೂರನ್ನು" ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತವನ್ನು ನಡೆಸಿದ್ದರು. ಅವರ ಆಡಳಿತಕ್ಕೆ ಮಾಸೂರು-12, ಉಡವಟ್ಟಿ-70 ಹಾಗೂ ಕುಂದೂರು-70 ವಿಭಾಗಗಳು ಒಳಪಟ್ಟಿದ್ದವು.
ಬೆಳಗುತ್ತಿಯ ಸಿಂಧರು ಚಾಲುಕ್ಯರ ಸಂಭಂದಿಕರಾಗಿದ್ದರು. ಈ ಮನೆತನದ ಈಶ್ವರದೇವ(ಸು:1155-1185),ಇವನ ಮಕ್ಕಳಾಗಿದ್ದ ಪಾಂಡ್ಯದೇವ ಮತ್ತು ಮಲ್ಲಿದೇವ ಹಾಗೂ ಮೊಮ್ಮಕ್ಕಳಾದ ಕೇಶವದೇವ ಮತ್ತು ಬೀರದೇವ ಕ್ರಮವಾಗಿ ಹಳ್ಳೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತವನ್ನು ನಡೆಸಿದ್ದರು ಎಂಬುದನ್ನು ರಟ್ಟಿಹಳ್ಳಿಯ ಶಾಸನ ದೃಡಪಡಿಸುತ್ತದೆ.
ಪ್ರಜೆಗಳ ಹಿತಕ್ಕಾಗಿ ಯಾವ ಗುರುತರವಾದ ಕಾರ್ಯಗಳನ್ನು ಅವರು ಮಾಡಲಿಲ್ಲ ಕಾರಣ "ಹಳ್ಳೂರು" ಮೇಲೆ ಸೇವಣರು,ಹೊಯ್ಸಳರು ಹಾಗೂ ಕಲಚೂರಿಗಳು ಪದೆ- ಪದೆ ದಂಡೆತ್ತಿ ಬರುತ್ತಿದ್ದರಿಂದ ಇವರ ವಿರುದ್ದ ಯುದ್ದ ಮಾಡುವುದರಲ್ಲಿಯೇ ಅವರು ಕಾಲಹರಣ ಮಾಡಬೇಕಾಯಿತು. ಇವರುಗಳ ಸತತ ಆಕ್ರಮಣದಿಂದಾಗಿ ಈ ಗ್ರಾಮ ಯುದ್ದ ಭೂಮಿಯಾಗಿತ್ತು.
ಹೊಯ್ಸಳರ ರಾಣಿಯಾದ ಉಮಾದೇವಿಯು (ಬಲ್ಲಾಳನ ಹೆಂಡತಿ) ಸಹ ಸಿಂಧರ ಮೇಲೆ ಯುದ್ದ ಮಾಡಿ ಜಯಗಳಿಸಿದ್ದಳು. ಕ್ರಿ.ಶ 1198 ರಲ್ಲಿ ಎರಡನೆ ಬಲ್ಲಾಳ ಹಳ್ಳೂರಿನಲ್ಲಿದ್ದನು. ತದನಂತರ ಈ ಗ್ರಾಮವನ್ನು ಟಿಪ್ಪೂ ಸುಲ್ತಾನ, ಮರಾಠರು ಹಾಗೂ ಹಾವನೂರು ಹನುಮಂತಗೌಡÀ ತಮ್ಮ ಆಡಳಿತ ಒಳಪಡಿಸಿಕೊಂಡರು. ಬ್ರಿಟಿಷರ ಆಡಳಿತದಲ್ಲಿ ಮುಂಬಯಿ ಇಲಾಖೆಗೆ ಒಳಪಡುವ ಕೋಡ ತಾಲೂಕಿನ ಕಸಬಾವಾಗಿತ್ತು ಈ ಗ್ರಾಮ.
ಉದ್ಬವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ: ಹಳ್ಳೂರಿನ ಬೆಟ್ಟದ ಮೇಲೆ ಪುರಾತನವಾದ ಉದ್ಬವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಭೂತಪ್ಪಸ್ವಾಮಿ, ವರಹಸ್ವಾಮಿ ಹಾಗೂ ಆಂಜನೇಯ ಸ್ವಾಮಿ ಎಂಬ ನಾಲ್ಕು ದೇವಾಲಯಗಳಿವೆ. ಕಾಡಿನಲ್ಲಿ ವಾಸುತ್ತಿದ್ದ ಜನರ ಆರಾಧ್ಯ ದೈವವಾದ ಉದ್ಬವಮೂರ್ತಿಯು,ಬಹುಶಃ ಹೊಯ್ಸಳರ ಕಾಲದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಎಂಬ ಹೆಸರಿನೊಂದಿಗೆ ಪ್ರಸಿದ್ದಿಯನ್ನು ಪಡೆದಿರಬಹುದು. ಇವರ ಕಾಲದಲ್ಲಿಯೇ ಈ ಉದ್ಬವಮೂರ್ತಿಗೆ ದೇವಸ್ಥಾನ ನಿರ್ಮಾಣವಾಗಿರಬಹುದು ಎಂದು ಉಹಿಸಬಹುದಾಗಿದೆ. 15 ನೇ ಶತಮಾನದ ದಾಸಶ್ರೇಷ್ಠ ಕನಕದಾಸರು ಈ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟಿದ್ದರು ಎಂಬ ಐತಿಹ್ಯವಿದೆ. ಇದಕ್ಕೆ ಪೂರಕವೆಂಬಂತೆ ರಂಗನಾಥನ ಗರ್ಭಗುಡಿಯ ಪ್ರವೇಶದ ಎಡಭಾಗದಲ್ಲಿ ರಾಮುನುಜಾಚಾರ್ಯರ ವಿಗ್ರವಿದೆ. ಟಿಪೂವಿನ ಕಾಲದದಲ್ಲಿ ಹಾಳಾಗಿದ್ದ ರಂಗನಾಥನ ದೇವಸ್ಥಾನವನ್ನು ಕೂಡಲಗಿಯ ಸ್ವಾಮಿಗಳು ಪುನರ್ ನಿರ್ಮಾಣ ಮಾಡಿದರು. ಕಾರಣ ಹಳ್ಳೂರ ಗ್ರಾಮವನ್ನು ಹಾವನೂರಿನ ಹನುಮಂತಗೌಡನು ಮಠಕ್ಕೆ ದಾನವಾಗಿ ನೀಡಿದ್ದನು. ಶ್ರೀ ಲಕ್ಷ್ಮೀರಂಗನಾಥನ "ಹೂವಿನ ಅಪ್ಪಣೆ" ಸುತ್ತಮುತ್ತಲಿನ ಜನರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ಪಾಳು ಬಿದ್ದ ಒಂದು ವಿಗ್ರಹವನ್ನು ವಿಜಯನಗರದ ಕಾಲಕ್ಕೆ ಸೇರಿದ ಆನೆಗುಂದಿಯ ಯತಿಗಳ ವಿಗ್ರಹವೆಂದು ಡಾ.ರಮೇಶ ತೆವರಿ ಗುರುತಿಸಿದ್ದಾರೆ. ಬಹುಶಃ ಆ ಯತಿಗಳು ಈ ಸ್ಥಳದಲ್ಲಿ ತಪಸ್ಸು ಗೈದಿರಬಹ್ಮದೆಂದು ಅಂದಾಜಿಸಿದ್ದಾರೆ.
ಇತಿಹಾಸ ಪೂರ್ವ ಕಾಲದ ನೆಲೆ: 1963 ರಲ್ಲಿ ಸಂಶೋಧಕರಾದ ಎಂ.ಎಸ್ ನಾಗರಾಜರಾವ್ ಹಳ್ಳೂರಿನ ಕೋಟೆಯ ಭಾಗದಲ್ಲಿ ಉತ್ಖನನ ನಡೆಸಿ ನವಶಿಲಾಯುಗದ ಅನೇಕ ಕುರುಹುಗಳನ್ನು ಪತ್ತೆ ಮಾಡಿದ್ದರು. ಇಲ್ಲಿಯ ಆದಿವಾಸಿ ಜನರ ಗುಂಪೆÇಂದು ಕಬ್ಬಿಣದ ಆಯುಧವನ್ನು ಉಪಯೋಗಿಸಿದ್ದರು ಎನ್ನಲು ಅನೇಕ ಕಬ್ಬಿಣದ ಆಯುಧಗಳು ಇಲ್ಲಿ ದೊರೆತ್ತಿದ್ದವು. ಈ ಸಂಶೋಧನೆ ದಕ್ಷಿಣ ಭಾರತದಲ್ಲಿಯ ಸಂಶೋಧಕರಿಗೆ ಸಂಚಲನವನ್ನು ಮೂಡಿಸಿತ್ತು. ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದ ಹಿಂಭಾಗದಲ್ಲಿ "ಹುಲಿಗವಿಯಿದ್ದು" ಅಲ್ಲಿಯ ಕಲ್ಗುಳಿಗಳು ಹಾಗೂ ಮುಂಭಾಗದಲ್ಲಿಯ ನಾಲ್ಕು ನಿಲಿಸುಗಲ್ಲುಗಳು ನವಶಿಲಾಯುಗದ ಪೂರ್ವ ಕಾಲದ ಜನರ ಕುರುಹುಗಳಾಗಿವೆ ಎಂದು ಸಂಶೋಧಕ ಪ್ರಮೋದ ನಲವಾಗಲ ತಿಳಿಸಿದ್ದಾರೆ.
ಬಹುಶಃ ಕೋಟೆಯ ಭಾಗದಲ್ಲಿಯ ನವಶಿಲಾಯುಗದ ಜನರಕ್ಕಿಂತ ಮೊದಲು ಇಲ್ಲಿ ಒಂದು ಜನಾಂಗ ವಾಸವಾಗಿತ್ತು ಎನ್ನಲು ಅನೇಕ ಸಾಕ್ಷಗಳು ದೊರೆಯುತ್ತವೆ ಎಂದು ತಿಳಿಸಿದ್ದಾರೆ. ಆದರೆ ಸೂಕ್ಷ್ಮ ಶಿಲಾಯುಗದ ಆರಂಭ ಕಾಲದ ಜನರು ವಾಸವಾಗಿದ್ದ ಕುರುಹುಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಕೋಟೆಯ ಭಾಗದಲ್ಲಿಯ ಹಾಳು ಮಣ್ಣನ್ನು ಇತಿಹಾಸದ ಅರಿವು ಇಲ್ಲದವರು ಹಾಳು ಮಾಡುತ್ತಿದ್ದದ್ದು ವಿಷಾದದ ಸಂಗತಿ. ಅಲ್ಲಿ ದೊರೆಯವ ಕೈಕೊಡಲಿಗಳನ್ನು, ಮಣ್ಣಿನ ಮಡಿಕೆಗಳನ್ನು ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸುವಲ್ಲಿ ಸಂಭಂದಪಟ್ಟ ಇಲಾಖೆಯವರು ಗಮನಹರಿಸಬೇಕು.ಇಲ್ಲಿಯ ಕೋಟೆ ಭಾಗವನ್ನು ಅಭಿವೃದ್ದಿಪಡಿಸಿ, ಇಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುವುದು ಉಚಿತವೆಂದು ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಸೇವಾ ಸಮಿತಿಯ ಚೇರಮನ್ ಬಿ.ಎಮ್.ಮೆಣಸಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
# ಪ್ರಮೋದ ನಲವಾಗಲ #
9686168202


Comments
Post a Comment