ಹಾವೇರಿ ಜಿಲ್ಲೆಯ ಆಭರಣಗಳು - ಡಾ.ಶಾಂತಾ.ಕಾಲವಾಡ .
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಹಾವೇರಿ ಜಿಲ್ಲೆಯು ಕರ್ನಾಟಕದ ಬಯಲುಸೀಮೆ - ಮಲೆನಾಡುಗಳ ಮಿಶ್ರಸಂಸ್ಕೃತಿಯನ್ನು ಹೊಂದಿದೆ. ಹಿರೇಕೆರೂರು - ಹಾನಗಲ್ ಮಲೆನಾಡ ಸಂಸ್ಕೃತಿಯ ಪ್ರಭಾವ ಹೊಂದಿದ್ದರೆ ಹಾವೇರಿ-ರಾಣೆಬೆನ್ನೂರು ತಾಲೂಕುಗಳು ಬಯಲುಸೀಮೆ ಪ್ರಭಾವಕ್ಕೆ ಒಳಗಾಗಿದೆ. ಸವಣೂರು-ಶಿಗ್ಗಾಂವ್ ತಾಲೂಕುಗಳು ಇಸ್ಲಾಂ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿರುವುದನ್ನು ಕಾಣಬಹುದಾಗಿದೆ.
ಹೀಗಾಗಿ ಹಾವೇರಿ ಜಿಲ್ಲೆಗೆ ವಿಶಿಷ್ಟವಾದ ಆಭರಣಗಳು ಯಾವುವು ಎಂದು ಹೇಳಲಾಗುವುದಿಲ್ಲ. ಆದರೂ ಪ್ರಾಚೀನ ಕಾಲದಿಂದ ಜಿಲ್ಲೆಯಲ್ಲಿ ಮಹಿಳೆಯರ ಸೌಂದರ್ಯವರ್ಧನೆಗೆ ಪೂರಕವಾದ ಕೆಲವು ಆಭರಣಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ.
ವಿಕಾಸದ ಆರಂಭದ ಹಂತಗಳಲ್ಲಿ ಪ್ರಕೃತಿಯ ನಿಕಟ ಒಡನಾಟದಲ್ಲಿದ್ದ ಮನುಷ್ಯ ಅಲ್ಲಿರುವ ಸುಂದರವಾದ ಬಗೆಬಗೆಯ ಹೂ ಬಳ್ಳಿ ಕಾಯಿ ಬೀಜಗಳನ್ನು ತನ್ನ ಅಲಂಕಾರಕ್ಕಾಗಿ ಬಳಸಿಕೊಂಡ. ತರವಾಯದ ದಿನಗಳಲ್ಲಿ ನವಿಲು ಗರಿ, ಹುಲಿಯುಗುರು, ಆನೆದಂತ ಇತ್ಯಾದಿ ಪ್ರಾಣಿಜನ್ಯ ವಸ್ತುಗಳನ್ನು ಆಭರಣಗಳ ರೂಪದಲ್ಲಿ ಬಳಸತೊಡಗಿದ. ವಿಕಾಸದಲ್ಲಿ ಮುಂದುವರೆದಂತೆ ಬೇಗನೆ ಹಾಳಾಗದಿರುವುದು, ಪುನಃ ಪುನಃ ಧರಿಸುವ ಅನುಕೂಲ ಇತ್ಯಾದಿ ಕಾರಣಗಳಿಂದ ಖನಿಜಜನ್ಯ ಆಭರಣಗಳತ್ತ ಮುಖ ಮಾಡಿದ. ಅಲ್ಲಿ ತಾಮ್ರ, ಹಿತ್ತಾಳೆ, ಚಿನ್ನ, ಬೆಳ್ಳಿ, ಕಬ್ಬಿಣ ಮುಂತಾದ ಲೋಹಗಳಿಂದ ಸಿದ್ಧವಾದ ಆಭರಣಗಳನ್ನು ಧರಿಸತೊಡಗಿದ. ಜೊತೆಗೆ ನವರತ್ನಗಳನ್ನು ಆಭರಣಗಳಲ್ಲಿ ಬಳಸತೊಡಗಿದ. ಈ ಆಭರಣಗಳು ಸೌಂದರ್ಯದ ಜೊತೆಗೆ ಮೂಡನಂಬಿಕೆಗಳು, ಧಾರ್ಮಿಕ ಕಾರಣಗಳು, ವೈದ್ಯಕೀಯ ವಿಚಾರಗಳು, ವಿರುದ್ಧ ಲಿಂಗದ ಸೆಳೆತ ಇತ್ಯಾದಿಗಳು ಸಹ ಆಭರಣಗಳ ವೈವಿದ್ಯತೆ ಹೆಚ್ಚಿಸಲು ಸಹಕಾರಿಯಾದವು.
ಸಾಮಾನ್ಯವಾಗಿ ಆಭರಣಗಳ ಅಧ್ಯಯನದ ಸಂದರ್ಭದಲ್ಲಿ ಮಹಿಳೆಯರ ಆಭರಣಗಳು, ಪುರುಷರ ಆಭರಣಗಳು, ಮಕ್ಕಳ ಆಭರಣಗಳು ಎಂದು ವಿಂಗಡಿಸಲಾಗುತ್ತದೆ. ಕೆಲವು ಆಭರಣಗಳ ಬಳಕೆ ಸ್ತ್ರೀ-ಪುರುಷರಿಬ್ಬರಲ್ಲಿಯೂ ಕಂಡುಬರುತ್ತದೆ. ಮನುಷ್ಯ ಧರಿಸುವ ಆಭರಣಗಳಲ್ಲಿ ಪ್ರತಿ ನಿತ್ಯ ಧರಿಸುವ ಆಭರಣಗಳು ಕೆಲವಾದರೇ, ವಿಶೇಷ ದಿನಗಳಲ್ಲಿ ಧರಿಸುವ ವೈವಿದ್ಯಮಯ ಆಭರಣಗಳನ್ನು ಕಾಣುತ್ತೇವೆ. ಸದರಿ ಲೇಖನದಲ್ಲಿ ಮಹಿಳೆಯರ ಕೆಲವು ಆಭರಣಗಳ ಬಗ್ಗೆ ತಿಳಿಯಬಹುದಾಗಿದೆ.
ಮಹಿಳೆ ಸ್ವಭಾವತಃ ಸೌಂದರ್ಯಪ್ರಿಯೆ. ತನ್ನ ಗುಂಪಿನಲ್ಲಿ ತಾನು ಉಳಿದವರಿಗಿಂತ ಸುಂದರವಾಗಿ, ವಿಭಿನ್ನವಾಗಿ ಗುರುತಿಸಲ್ಪಡಬೇಕು ಎಂಬುದು ಅವಳ ಸಹಜ ಹೆಬ್ಬಯಕೆ. ಹೀಗಾಗಿ ಅವಳು ಅಡಿಯಿಂದ ಮುಡಿಯವರೆಗೆ ಹಲವಾರು ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣಲು ಪ್ರಯತ್ನಿಸಿದ್ದಾಳೆ.
ಶರೀರದ ಪ್ರಧಾನ ಅಂಗ ಶಿರಸ್ಸು. ತಲೆಗೆ ಆಕರ್ಶಣೆ ನೀಳ ಕಪ್ಪು ಕೂದಲೇ ಆದರೂ, ಅದನ್ನು ವಿವಿಧ ಆಭರಣಗಳ ಮೂಲಕ ಇನ್ನಷ್ಟು ಆಕರ್ಷಕವಾಗಿಸಲು ಸಾಧ್ಯ ಎಂದು ಅವಳಿಗೆ ಗೊತ್ತು. ಬೈತಲೆಗೆ ಬೈತಲಸರ, ಬೈತಲಮಣಿ ಹಾಗು ಬೈತಲ ಪದಕಗಳನ್ನು ಸಾಂದರ್ಭಿಕವಾಗಿ ಬಳಸುತ್ತಾರೆ. ಇದನ್ನು ‘ಸೀಮಂತಮಣಿ’ ಎಂದೂ ಕರೆಯಲಾಗುತ್ತದೆ. ಅದೇ ರೀತಿ ತಲೆಯ ಮುಂಭಾಗದಲ್ಲಿ ಬೈತಲೆಯ ಎರಡೂ ಬದಿಯಲ್ಲಿ ಚಂದ್ರಕೋಲು ಮತ್ತು ಸೂರ್ಯಾಭರಣಗಳನ್ನು, ನಾಗರ ಎಂಬ ವಿಶಿಷ್ಟ ಆಭರಣವನ್ನು ತಲೆಯ ಹಿಂಬದಿ ಬಳಸುವುದನ್ನು ಕಾಣಬಹುದು. ಹೆಸರೇ ಸೂಚಿಸುವಂತೆ ಹೆಡೆಬಿಚ್ಚಿದ ಹಾವಿನ ರೀತಿಯಲ್ಲಿರುವ ಈ ಆಭರಣವನ್ನು ಸುಂದರ ಕುಸುರಿ ಹಾಗೂ ಒಂದರಿಂದ ಏಳು ಹೆಡೆಗಳವರೆಗೆ ತಯಾರಿಸಲಾಗುತ್ತದೆ. ಇದೆ ರೀತಿ ಕೇದಿಗೆ, ಚೂಡಾಮಣಿ ಎಂಬ ಆಭರಣಗಳನ್ನು ತಲೆಯ ಹಿಂಬದಿ ಬಳಸುವುತ್ತಿದ್ದರು. ನೀಳಜಡೆಯ ಉದ್ದಕ್ಕೂ ಸಾಮಾನ್ಯರು ಹೂಗಳ ಅಲಂಕಾರವನ್ನು, ಸ್ಥಿತಿವಂತರು ಜಡೆಬಂಗಾರ, ಜಡೆಬಿಲ್ಲೆ ಮುಂತಾದ ಆಭರಣಗಳನ್ನು ಧರಿಸಿ, ತುದಿಗೆ ಕುಚ್ಚು ಅಥವಾ ಗೊಂಡೆ ಕಟ್ಟಿಕೊಂಡರೆ ಅದರ ಆಕರ್ಷಣೆ ಎಂಥವರನ್ನು ಮೋಡಿಗೊಳಿಸಬಲ್ಲದು. ನೀಳಜಡೆಯನ್ನು ಮಡಿಚಿ ತುರುಬು ಕಟ್ಟಿಕೊಂಡ ಮಹಿಳೆಯರು ಅದಕ್ಕೆ ಶಿರಪೇಚ ಎಂಬ ತುರಾಯಿ, ಬಂಗಾರದ ಮೊಗ್ಗುಗಳು ಹಾಗೂ ಸಣ್ಣ ಗುಂಡುಗಳಿಂದ ಮಾಡಿದ ಅರ್ಧಚಂಧ್ರಾಕಾರದ ಮೊಗ್ಗಿನ ಮಾಲೆಯನ್ನು ಧರಿಸಿದರೆ ಅದರ ಸೊಗಸೇ ಬೇರೆ.
‘ಪುಟ್ಟ ಮನೆಗೆ ಚಿನ್ನದ ಬಾಗಿಲು’ ಎಂಬ ಜನಪ್ರಿಯ ಒಗಟು ಹೇಳುವಂತೆ ಮುಖಕ್ಕೆ ಮೂಗು ಪ್ರಧಾನವಾದರೆ, ಮೂಗಿಗೆ ಮೂಗುತಿಯೆ ಪ್ರಧಾನ. ಮೂಗುತಿಯನ್ನು ಮುತ್ತೈದೆಯ ಐದು ಸೌಭಾಗ್ಯದ ಸಂಕೇತಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಶುಭ ಮುಹೂರ್ತದಲ್ಲಿ ಅಕ್ಕಸಾಲಿಗರಿಂದ ಮೂಗು ಚುಚ್ಚಿಸಿ, ಮೊದಲು ದಾರ, ಕಡ್ಡಿ ತಂತಿ ಇತ್ಯಾದಿಗಳಿಂದ ಅಲಂಕರಿಸಿ , ನೋವು ಕಡಿಮೆ ಆದಬಳಿಕ ಹಲವಾರು ಆಭರಣ ಧರಿಸಲು ಮೂಗು ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಮೂಗಿನ ಎಡಹೊಳ್ಳೆಗೆ ರಂಧ್ರ ಮಾಡಲಾಗುತ್ತದೆ. ಅಪರೂಪಕ್ಕೆ ಬಲಬದಿಗೂ ಚುಚ್ಚುವುದುಂಟು, ಕೆಲವು ಸಂಸ್ಕೃತಿಯಲ್ಲಿ ಎರಡು ಹೊಳ್ಳೆಗಳ ನಡುವಿನಲ್ಲಿ ರಂಧ್ರ ಚುಚ್ಚಿಸಿ ಆಭರಣ ಧರಿಸುವುದನ್ನು ಕಾಣಬಹುದು.
ಮೂಗಿನ ಆಭರಣಗಳಲ್ಲಿ ಪ್ರಮುಖವಾಗಿ ಮೂಗುತಿ, ನತ್ತು, ಬುಲಾಕು, ಬೇಸರಿ, ಬೊಟ್ಟು, ನಕ್ಷತ್ರ, ಗಾಡೆ ಮುಂತಾದವುಗಳು ಹಾವೇರಿ ಜಿಲ್ಲೆಯ ಮಹಿಳೆಯರ ಮೂಗನ್ನಲಂಕರಿಸಿವೆ. ‘ಬೀಗತಿ ಇಲ್ಲದ ಮನೆ, ಮೂಗುತಿ ಇಲ್ಲದ ಮೋರೆ’ ಎಂಬ ಗಾದೆಮಾತು ಮೂಗುತಿಯ ಮಹತ್ವವನ್ನು ವಿವರಿಸಿದರೂ ಇಂದು ಕ್ರಮೇಣ ಇವೆರಡೂ ಹೆಚ್ಚಾಗುತ್ತಿರುವುದು ವಿಪರ್ಯಾಸ.
ಮೂಗಿನ ಆಭರಣಗಳಷ್ಟೇ ವೈವಿಧ್ಯಮಯವಾಗಿವೆ ಕಿವಿಯ ಆಭರಣಗಳು. ಮೂಗಿನ ಆಭರಣ ಸದಾ ಒಂಟಿಯಾಗಿದ್ದರೆ ಕಿವಿಯ ಆಭರಣಗಳು ಯಾವಾಗಲೂ ಜೋಡಿಗಳಲ್ಲಿ ಇರುತ್ತವೆ. ವಾಲಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಓಲೆ ಕಿವಿಯ ಪ್ರಮುಖ ಆಭರಣ. ‘ವಾಲಿಯ ಇಟಗೊಂಡು ಒಳಗಿರೇ ಕಂದವ್ವ , ವಾಲಿಗೆ ನಿನ್ನ ಒಲವಿಗೆ / ನಿಮ ರಾಯ ಓದೋ ಹೊತ್ತೀಗೆ ಮರತಾನ’ ಎಂಬ ತ್ರಿಪದಿ ವಾಲಿಯ ಆಕರ್ಷಣೆಗೆ ನಿದರ್ಶನ. ಇದರಲ್ಲಿ ತಾಳೋಲೆ, ಬೆಂಡೋಲೆ, ಬಿಚ್ಚೋಲೆ, ಪಚ್ಚೋಲೆ, ಕೇದಿಗೆಯೋಲೆ, ತೆಂಗಿನೋಲೆ, ಝುಮಕಿ, ಲೋಲಾಕು ಎಂದು ಹಲವು ಪ್ರಬೇಧಗಳಿವೆ. ಈ ಎಲ್ಲ ಆಭರಣಗಳು ಪ್ರಾಥಮಿಕವಾಗಿ ಕಿವಿಯ ಕೆಳಭಾಗದ ರಂಧ್ರಕ್ಕೆ ಧರಿಸುವ ಆಭರಣಗಳು. ಶಿಗ್ಗಾಂವ ತಾಲೂಕಿನ ಬಂಕಾಪುರ ಹಾಗೂ ಸವಣೂರು ತಾಲೂಕಿನ ಕೆಲವು ಗ್ರಾಮೀಣ ಮಹಿಳೆಯರು ಕಿವಿಗೆ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಹಾಕಿಸಿಕೊಂಡು ಇವುಗಳಿಗೆ ಕಿವಿಯುಂಗುರ, ಬಾವಲಿ, ತಾಲ್ಲೂಕ. ಚೌಕಳಿ, ಅಗಸಿಕಡ್ಡಿ, ಹುಜುರ, ಬುಗುಡಿ ಮುಂತಾದ ಆಭರಣಗಳನ್ನು ಕಿವಿಯತುಂಬ ಧರಿಸುವುದನ್ನು ಕಾಣಬಹುದು, ಇದು ಸಾಲದೆಂಬಂತೆ ಮೇಲಿನ ಮತ್ತು ಕೆಳಗಿನ ಆಭರಣಗಳ ನಡುವೆ ಮಿಂಚುಪಟ್ಟಿಯನ್ನು ಧರಿಸುವುದನ್ನೂ ಕಾಣಬಹುದು. ಒಂದರಿಂದ ಏಳು ರಂಧ್ರಗಳನ್ನು ಚುಚ್ಚಿಸಿಕೊಂಡು ಅವುಗಳ ತುಂಬ ಆಭರಣಗಳನ್ನು ಧರಿಸಿದ ಕಿವಿ ನೋಡಲು ಅದೆಷ್ಟು ಚೆಂದ! ಮಹಿಳೆಯನ್ನು ನೋಡಿದತಕ್ಷಣ ಮೊದಲು ಗಮನಿಸುವುದು ಅವಳ ಕೊರಳ ಭಾಗವನ್ನು. ಖಾಲೀ ಕೊರಳನ್ನು ಅಮಂಗಲದ ಸಂಕೇತ ಎಂದು ಪರಿಗಣಿಸಿ, ಒಂದಲ್ಲ ಒಂದು ಆಭರಣ ಧರಿಸುವುದು ಹೆಚ್ಚೂ ಕಡಿಮೆ ಕಡ್ಡಾಯ. ಆದಕಾರಣ ಕೊರಳ ಆಭರಣಗಳಲ್ಲಿ ಕಂಡುಬರುವ ವೈವಿಧ್ಯ ಅಗಣಿತ. ಸಾಮಾನ್ಯವಾಗಿ ಕೊರಳ ಆಭರಣಗಳನ್ನು ಹಾರ, ಸರ, ಮಾಲೆ ಎಂದು ಕರೆಯಲಾಗುತ್ತದೆ. ಮಾಲೆಗಳಲ್ಲಿ ಕಂಠಮಾಲೆ, ಜೋಮಾಲೆ, ಮೋಹನಮಾಲೆಗಳು ; ಹಾರಗಳಲ್ಲಿ ಕಂಠೀಹಾರ, ಚಂದ್ರಹಾರ, ತೋರಹಾರ, ತಾರಾಹಾರ, ಚಪಲಹಾರಗಳು ; ಸರಗಳಲ್ಲಿ ಎಕ್ಕಸರ, ಮಣಿಸರ, ಅವಲಕ್ಕೀಸರ, ಪುತ್ಥಳೀಸರ, ಪವನಸರ, ಚಕ್ರಸರ, ಕಾಸಿನಸರ, ಬೋರಮಾಳ, ಕಟ್ಟಾಣೀಸರ, ಗೆಜ್ಜೆಸರಗಳು, ಇವನ್ನು ಹೊರತುಪಡಿಸಿ ಪಟ್ಟಿಗೆ, ಸರಿಗೆ, ಅಡ್ಡಿಕೆ, ಕಂಠೀ, ಕಟ್ಟಾಣಿ, ಚಿತ್ತಾಕು, ಟೀಕಿಗಳು ಜಿಲ್ಲೆಯ ಮಹಿಳೆಯರ ಕೊರಳ ಸೌಂದರ್ಯವನ್ನು ಹೆಚ್ಚಿಸಿವೆ. ಈ ಸರಗಳಲ್ಲಿ ಒಂದರಿಂದ ಏಳರವರೆಗೆ ಎಳೆಗಳನ್ನು ಕಾಣಬಹುದು. ಇವೆಲ್ಲದರ ಜೊತೆಗೆ ಧಾರೇಮಣಿ, ಗರತೀಮಣಿ, ಗುಳದಾಳಿ , ತಾಳಿ ಎಂದೆಲ್ಲ ಕರೆಯಲಾಗುವ ಮಾಂಗಲ್ಯವು ಸೌಭಾಗ್ಯದ ಸಂಕೇತವಾಗುವುದರ ಜೊತೆಗೆ ತನ್ನ ರಚನಾ ವೈವಿಧ್ಯದ ಕಾರಣದಿಂದ ಸೌಂದರ್ಯಪ್ರಜ್ಞೆಯ ನಿದರ್ಶನವೂ ಆಗಿದೆ . ಹಾನಗಲ್ಲ ತಾಲೂಕಿನ ಹಿರೇಬಾಸೂರಿನ ಮಾಸ್ತಿಕಲ್ಲಿನಲ್ಲಿ ಚಿತ್ರಿತವಾದ ಸತಿಯು ಕುತ್ತಿಗೆ ಮುಚ್ಚುವಂತೆ ಧರಿಸಿದ ಕಂಠೀಹಾರ ಹಾಗೂ ಹೊಟ್ಟೆಯ ತನಕ ದೀರ್ಘವಾಗಿ ನೇತಾಡುತ್ತಿರುವ ಮುತ್ತಿನ ಹಾರಗಳು ಆಕರ್ಷಕವಾಗಿವೆ. ಈ ಸರ-ಮಾಲೆ-ಹಾರಗಳದ್ದು ಒಂದು ಲೋಕವಾದರೆ ಇವುಗಳ ನಡುವೆ ನೇತಾಡುವ ಪದಕಗಳದ್ದೇ ಇನ್ನೊಂದು ಲೋಕ. ಹಲವು ರೂಪ, ಸ್ವರೂಪಗಳಲ್ಲಿ ಕಂಡುಬರುವ ಪದಕಗಳು ಎದೆಯ ಮಧ್ಯದಲ್ಲಿ ಸ್ಥಾಪಿತವಾಗಿ ಹಾರದ ಸೌಂದರ್ಯವನ್ನು ಇಮ್ಮಡಿಸುವುದರ ಜೊತೆಗೆ ನೋಡುಗರ ಕಣ್ಮನ ಸೆಳೆಯುತ್ತವೆ.
ಸಾಮಾನ್ಯವಾಗಿ ಹೆಣ್ಣಿನ ಆಕರ್ಷಣೆಯಲ್ಲಿ ಪ್ರಧಾನ ಸ್ಥಾನ ಅವಳ ಸೊಂಟಕ್ಕೆ. “ಸೊಂಟದ ವಿಷ್ಯ, ಬ್ಯಾಡವೋ ಶಿಷ್ಯ” ಎಂದು ಎಷ್ಟೇ ಹೇಳಿದರೂ ಅದನ್ನು ವರ್ಣಿಸದ ಕವಿಯಿಲ್ಲ, ಚಿತ್ರಿಸದ ಕಲಾವಿದನಿಲ್ಲ, ಸುಂದರವಾಗಿ ಕೆತ್ತದ ಶಿಲ್ಪಿಯಿಲ್ಲ. ಆಕರ್ಷಣೆಯ ಈ ಕೇಂದ್ರವನ್ನು ವಿವಿಧ ಆಭರಣಗಳಿಂದ ಅಲಂಕರಿಸಿ ಅದರ ಸೆಳೆತವನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವನ್ನು ಮಹಿಳೆ ಎಂದಿಗೂ ತಪ್ಪಿಸಲಾರಳು. ಸೊಂಟದ ಆಭರಣಗಳು ಸೌಂದರ್ಯವರ್ಧನೆಯ ಜೊತೆಗೆ ನಡುವಿನ ಆಕಾರವನ್ನು ರೂಪಿಸುವ ಹಾಗೂ ಬಟ್ಟೆಯು ಜಾರದಂತೆ ಗಟ್ಟಿಯಾಗಿ ಹಿಡಿದಿಡುವ ಕೆಲಸವನ್ನು ನಿರ್ವಹಿಸುವ ಕಾರಣ ಹೆಚ್ಚಿನ ಮಹತ್ವವನ್ನು ಪಡೆದಿವೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಳಕೆಯಾಗುವ ಸೊಂಟದ ಆಭರಣಗಳನ್ನು ಗಮನಿಸಿದಲ್ಲಿ ಸೊಂಟಪಟ್ಟಿ ಪ್ರಮುಖವಾಗಿ ಕಂಡುಬರುತ್ತದೆ. ಇದರಲ್ಲಿ ಗುಂಡಿನಪಟ್ಟಿ, ಗೆಜ್ಜೆಪಟ್ಟಿ, ನಾಗಪಟ್ಟಿ, ಸುರಳೀಪಟ್ಟಿಗಳೆಂದು ಹಲವು ವಿಧಗಳು. ಈ ಪಟ್ಟಿಗಳಲ್ಲದೆ ಡಾಬು, ಒಡ್ಯಾಣ, ಕಾಂಚೀಧಾಮ, ನೇವಳ, ಮೇಖಲೆ, ಝಲ್ಲ ಇತ್ಯಾದಿ ಕಲಾತ್ಮಕ ಆಭರಣಗಳು ಸುಂದರಿಯರ ಸೊಂಟವನ್ನು ಹಿತವಾಗಿ ಬಳಸಿರುವುದು ಕಂಡುಬರುತ್ತದೆ.
ಭುಜದಿಂದ ಮೊಣಕೈವರೆಗಿನ ಭಾಗವನ್ನು ತೋಳು ಎಂದು ಕರೆಯಲಾಗುತ್ತದೆ. ದೇಹದ ಉಷ್ಣತೆ ನಿವಾರಿಸಲು ಪಂಚಲೋಹ, ತಾಮ್ರ ಇತ್ಯಾದಿಗಳಿಂದ ಮಾಡಿದ ಬಳೆಗಳನ್ನು ತೋಳಿಗೆ ಧರಿಸುವ ರೂಡಿ ಪ್ರಾಚೀನ ಕಾಲದಿಂದಲೂ ಇದ್ದು, ಬರಬರುತ್ತಾ ಇದರಲ್ಲಿ ಸೌಂದರ್ಯಪ್ರಜ್ಞೆ ಮೇಳೈಸಿಕೊಂಡು ಹಲವಾರು ರೀತಿಯ ತೋಳಿನ ಆಭರಣಗಳು ಆವಿಷ್ಕಾರಗೊಂಡವು. ತೋಳ್ಬಳೆ, ತೋಳಬಂಧಿ, ಸನಿಕೆಬಂದಿ, ಕೇಯೂರ, ನಾಗಮುರಗಿ, ವಂಕಿ, ಚಳಕಿ, ತೋಳಸರಿಗೆ, ಮುರಡಿ ಸರಪಳಿ, ಚೂಡೆ ಮುಂತಾದವು ಪ್ರಮುಖ ತೋಳಿನ ಆಭರಣಗಳಾಗಿವೆ.
ಮೊಣಕೈಯಿಂದ ಮಣಕಟ್ಟಿನ ವರೆಗಿನ ಭಾಗ ಮುಂಗೈ. ಈ ಭಾಗವನ್ನು ಸಹ ಹಲವಾರು ಆಭರಣಗಳಿಂದ ಅಲಂಕೃತಗೊಳಸಿದ್ದನ್ನು ಕಾಣಬಹುದಾಗಿದೆ. ಬಳೆಗಳು ಅತ್ಯಂತ ಪ್ರಾಚೀನ ಹಾಗೂ ಸಾಂಪ್ರದಾಯಕ ಮುಂಗೈ ಆಭರಣಗಳು, ನಂತರದ ದಿನಗಳಲ್ಲಿ ಪಾಟಲಿ, ಬಿಲವಾರ, ಗೋಟು, ಕಡಗ, ಕಂಕಣ, ತೋಡೆ, ಪೋಚೆ, ಚಳಿಕೆ ಎಂಬ ಹಲವು ಆಭರಣಗಳು ಮುಂಗೈಯನ್ನು ಅಲಂಕರಿಸಿವೆ.
ಕೈಬೆರಳುಗಳಿಗೆ ಉಂಗುರಗಳು ಪ್ರಮುಖ ಆಭರಣಗಳು. ಬಳಕೆಯಾದ ಲೋಹವನ್ನಾಧರಿಸಿ ಚಿನ್ನದುಂಗುರ, ಬೆಳ್ಳಿಯುಂಗುರ, ತಾಮ್ರದುಂಗುರ, ರತ್ನದುಂಗುರ, ಹರಳಿನುಂಗುರ, ವಜ್ರದುಂಗುರ, ನಾಣ್ಯದುಂಗುರ ಎಂಬ ಪ್ರಕಾರಗಳನ್ನು ಹಾಗೂ ರೂಪರಚನೆಯನ್ನಾಧರಿಸಿ ಮುದ್ರೆಯುಂಗುರ, ನಾಗರುಂಗುರ, ಸುತ್ತುಂಗುರ, ವಂಕಿಯುಂಗುರ, ಹೂವಿನುಂಗುರ, ಕಳಾವರದುಂಗುರ ಮುಂತಾದವು ಪ್ರಮುಖವಾಗಿವೆ.
ಕಾಲಿನ ಆಭರಣಗಳಲ್ಲಿ ಗೆಜ್ಜೆಗಳು ಪ್ರಮುಖವಾಗಿವೆ. ತೋಡೆ, ಕಡಗ, ನೂಪುರ, ಪೈಜಣ, ಅಂದುಗೆ, ರುಳಿ, ಸರಪಳಿ, ತಾಗಡ ಇವು ಕಾಲಿನ ಆಭರಣಗಳಲ್ಲಿ ಪ್ರಮುಖವಾಗಿವೆ. ಅದೆ ರೀತಿ ಕಾಲ್ಬೆರಳುಗಳಿಗೆ ಸೌಭಾಗ್ಯದ ಸಂಕೇತವಾಗಿ ಕಾಲುಂಗುರಗಳು ಬಳಕೆಯಾದರೆ, ಅಲಂಕಾರಿಕವಾಗಿ ರನ್ ಜೋಡು, ವಾರಮೀನ, ಸುರುಳಿ, ಪಿಲ್ಲೆ, ಇವು ಕಾಲಿನ ವಿವಿಧ ಬೆರಳುಗಳನ್ನು ಅಲಂಕರಿಸುವ ಭಾಗ್ಯ ಪಡೆದಿವೆ.
ಒಟ್ಟಿನಲ್ಲಿ ಆರಂಭದಲ್ಲಿ ನಂಬಿಕೆ, ಸಂಪ್ರದಾಯ, ವೈದ್ಯಕೀಯ ಕಾರಣಗಳಿಂದ ಬಳಕೆಗೆ ಬಂದ ಆಭರಣಗಳು ಕಾಲಕ್ರಮೇಣ ತಮ್ಮ ಸ್ವರೂಪ ವೈವಿದ್ಯತೆಯಿಂದ ರೂಪಗೊಂಡ ರೀತಿ ನಿಬ್ಬೆರಗುಗೊಳಿಸುವಂತಿದೆ. ಸಾಂಪ್ರದಾಯಿಕ ಲೋಹದ ಸ್ಥಾನವನ್ನು ಇಂದು ಪ್ಲಾಸ್ಟಿಕ್ ಅಲಂಕರಿಸಿದೆ. ‘ನಿರಾಭರಣ ಸೌಂದರ್ಯ’ ಪರಿಕಲ್ಪನೆ, ಮಹಿಳೆಯ ಪಾತ್ರ ಬದಲಾವಣೆ, ಸಾಮಾಜಿಕ ಸ್ಥಿತ್ಯಂತರ ಇತ್ಯಾದಿ ಕಾರಣಗಳಿಂದ ಈ ಆಭರಣಗಳು ಕ್ರಮೇಣ ಕಾಲಗರ್ಭದಲ್ಲಿ ಮರೆಯಾಗುತ್ತಿವೆ. ಆದರೂ ಮದುವೆ ಮುಂತಾದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಪೆಟ್ಟಿಗೆ ತಳಸೇರಿದ್ದ ಆಭರಣಗಳು ಹೊರಬಂದು ಮತ್ತೆ ಸ್ತ್ರೀಯ ಅಂಗಾಂಗಳನ್ನೇರಿ ಅವಳ ಅಂದವನ್ನು ಹೆಚ್ಚಿಸುತ್ತಿವೆ. ಆದರೆ ಇಂಥ ಸಂದರ್ಭಗಳು ತೀರ ಅಪರೂಪವಾಗುತ್ತಿವೆ. ಬರುವ ದಿನಗಳಲ್ಲಿ ಆಭರಣಗಳಂತೆ ಅವುಗಳ ಹೆಸರುಗಳೂ ಸಹ ಕಣ್ಮರೆಯಾಗಬಹುದು. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
# ಡಾ. ಶಾಂತಾ ಕಾಲವಾಡ #
ಹಿರಿಯ ಉಪನ್ಯಾಸಕರು
ಸ.ಪ.ಪೂ.ಕಾಲೇಜು ಹಾವೇರಿ
Comments
Post a Comment