ಅಳಿವಿನಂಚಿನಲ್ಲಿರುವ ಬೃಹತ್ ಶಿಲಾಗೋರಿ ಮೋಟೆಬೆನ್ನೂರನಲ್ಲಿ..........................!
ಅಳಿವಿನಂಚಿನಲ್ಲಿರುವ ಬೃಹತ್ ಶಿಲಾಗೋರಿ ಮೋಟೆಬೆನ್ನೂರನಲ್ಲಿ..........................!
1880 ರಲ್ಲಿ ಕ್ಲಿಕ್ಕಿಸಿದ ಫೋಟೋ
ಇತಿಹಾಸ ಪೂರ್ವ ಕಾಲದಲ್ಲಿ ಮಾನವನು (ಸುಮಾರು ಕ್ರಿ.ಪೂ 2300-200) ಕೃಷಿಗೆ ಯೋಗ್ಯವಾದ ಹಾಗೂ ತಾವು ಬದುಕಲು ಬೇಕಾದ ಅವಶ್ಯಕ ವಸ್ತುಗಳು ದೊರೆಯವ ಸ್ಥಳದಲ್ಲಿ ನೆಲೆಗೊಳ್ಳುತ್ತಿದ್ದನು. ಅವನು ವಾಸಿಸುತ್ತಿದ್ದ ಸ್ಥಳಗಳನ್ನು ನಾವು ಬೃಹತ್ ಶಿಲಾಗೋರಿಗಳ ಇರುವಿಕೆಯ ಆಧಾರದ ಮೇಲೆ ಆ ಸ್ಥಳಗಳನ್ನು ಇತಿಹಾಸ ಪೂರ್ವಕಾಲದ ನೆಲೆಗಳೆಂದು ಹೇಳಬಹುದು. ಇಂತಹ ಶಿಲಾಗೋರಿಗಳ ಫೋಟೋಗಳನ್ನು ತೆಗೆಯಲು ಕ್ರಿ.ಶ 1880 ರಲ್ಲಿ ಬ್ರಿಟಿಷ್ ಫೋಟೋಗ್ರಾಫರ್ 'ಹೆನ್ರಿ ಕಸೆನ್ಸ' ಧಾರವಾಡ ಜಿಲ್ಲೆಯಲ್ಲಿ ಬೃಹತ್ ಶಿಲಾಗೋರಿಗಳನ್ನು ಕೆದಕ್ಕುತ್ತಾ ಅವುಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಮಾಹಿತಿಯನ್ನು ಪುರಾತತ್ವ ಇಲಾಖೆಗೆ ಮುಟ್ಟಿಸುತ್ತಿದ್ದನು. ಸಂಶೋಧನೆಯನ್ನೆ ತನ್ನ ಪ್ರತಿನಿತ್ಯದ ಕಾಯಕವನ್ನಾಗಿ ಮಾಡಿಕೊಂಡಿದ್ದ ಈ ಇಂಗ್ಲೆಂಡ್ ಪ್ರಜೆ ಅಂದಿನ ಧಾರವಾಡ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಮೋಟೆಬೆನ್ನೂರ ಗ್ರಾಮಕ್ಕೆ ( ಇತ್ತೀಚಿಗೆ ಬ್ಯಾಡಗಿಯನ್ನು ರಾಣೇಬೆನ್ನೂರಿನಿಂದ ಪ್ರತ್ಯಕಿಸಿ ತಾಲೂಕನ್ನಾಗಿ ಘೋಷಿಸಿದರು ) ಮಧ್ಯಾಹ್ನ ಭೇಟಿ ಕೊಟ್ಟನು. 'ಬಾಚಿ' ಗುಡ್ಡದ ಸಮೀಪದಲ್ಲಿರುವ ಬೃಹತ್ ಶಿಲಾಗೋರಿಯನ್ನು ( ಸ್ಥಳೀಯರು ಇದನ್ನು "ಕಲ್ಲು ಛಾವಡಿ" ಎಂದು ಕರೆಯುತ್ತಾರೆ. ಹಿಂದೆ ಇದನ್ನು ಚಟ್ರಪ್ಪ-ಕೊಟ್ರಪ್ಪನ ಕಲ್ಲು ಎಂದು ಕರೆಯುತ್ತಿದ್ದರು) ನೋಡಿ ಕೆಲಕ್ಷಣ ಮೂಕವಿಸ್ಮಿತನಾದನು. ಕಾರಣ ಇಂತಹ ಬೃಹತ್ ಪ್ರಮಾಣದ ಗೋರಿಯನ್ನು ಆತ ಧಾರವಾಡ ಜಿಲ್ಲೆಯಲ್ಲಿ ಎಲ್ಲಿಯೂ ಸಹ ನೋಡಿರಲಿಲ್ಲವಂತೆ.
ಆ ಕ್ಷಣದಲ್ಲಿಯೇ ತನ್ನ ಕ್ಯಾಮರಾವನ್ನು ತಯಾರಿ ಮಾಡಿ, ಅಲ್ಲಿಯೇ ಪಕ್ಕದಲ್ಲಿದ್ದ ಹರಿಜನ ವ್ಯಕ್ತಿಯೊಬ್ಬನನ್ನು ಅದರ ಪಕ್ಕದಲ್ಲಿ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದನು. ಐಹೊಳೆಯ ಗಳಗನಾಥ ದೇವಾಲಯದ ಹಿಂಬದಿಯಲ್ಲಿರುವ ಬೃಹತ್ ಶಿಲಾಗೋರಿ ಹಾಗೂ ಇಲ್ಲಿಯ ಶಿಲಾಗೋರಿ ಸಾಮ್ಯತೆಯನ್ನು ಹೊಂದಿವೆ ಎಂಬ ಅವನ ಸಂಶೋಧನೆಯ ವಿಷಯ ಗಮನಾರ್ಹ. ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಫೋಟೋವನ್ನು ಗಮನಿಸಿ (ಕಲ್ಕತ್ತಾದಲ್ಲಿ ಇದೆ) ಇಂತಹ ವಿಶೇಷವಾದ ಬೃಹತ್ ಶಿಲಾಗೋರಿಯ ಸಂರಕ್ಷಣೆ ಅವಶ್ಯಕವೆಂದು ಅರಿತು ಅದರ ಸುತ್ತ ಕಟ್ಟೆಯನ್ನು ಕಟ್ಟಿ ಸಂರಕ್ಷಿಸಿದರು. ಕ್ರಮೇಣವಾಗಿ ಇಲ್ಲಿಯ ಮಾರಿಗುಡ್ಢ ಹಾಗೂ ಬಾಚಿಗುಡ್ಡಗಳಲ್ಲಿ ಜನರು ವಾಸಿಸಲಾರಂಭಿಸಿದರು. ಜನಸಂಖ್ಯೆ ಹೆಚ್ಚಾದಂತೆ ಮೋಟೆಬೆನ್ನೂರು ಬ್ರಿಟಿಷ್ ಕಾಲದಲ್ಲಿ ವ್ಯಾಪಾರಿ ಕೇಂದ್ರವಾಗಿ ಬೆಳೆಯಿತು. ಇಲ್ಲಿಯ ಶ್ರೀಗಂಧ ತೈಲ ಕರ್ನಾಟಕದಲ್ಲಿಯೇ ಪ್ರಸಿಧ್ಧಿಯನ್ನು ಹೊಂದಿತ್ತು. ರಾಷ್ಟ್ರೀಯ ಹೆದ್ದಾರಿ-04 ಕ್ಕೆ ಹೊಂದಿಕೊಂಡಂತಹ ಮೊಟೇಬೆನ್ನೂರ ಗ್ರಾಮ ಜನ ನಿಬಿಡ ಪ್ರದೇಶವಾಗಿ ಬೆಳೆಯಿತು. ಸುಮಾರು 3000 ವರ್ಷಗಳ ಹಿಂದೆ ಜನರು ಇಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸುವ ಬೃಹತ್ ಶಿಲಾಗೋರಿ ಕ್ರಮೇಣವಾಗಿ ತನ್ನ ವೈಭವವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಕ್ರಿ.ಶ 1880 ರಲ್ಲಿ ಕ್ಲಿಕ್ಕಿಸಿದ ಫೋಟೋ ಕಲ್ಕತ್ತಾದ ಮೂಸಿಯಂನಲ್ಲಿ ಇನ್ನೂ ಜೀವಂತವಾಗಿದೆ. ಅದೇ ತರಹ ನಮ್ಮ ಗ್ರಾಮದ ಹೆಮ್ಮೆಯ ಪ್ರತಿಕವಾದ ಈ ಬೃಹತ್ ಶಿಲಾಗೋರಿಯನ್ನು ನಾವು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುಬೇಕು ಎಂಬುವುದು ನನ್ನ ಅಭಿಪ್ರಾಯ.
~~ ಪ್ರಮೋದ ನಲವಾಗಲ ~~
9686168202

Comments
Post a Comment