ಮಾಯದಂಥ ಮಳೆ ಬಂತಣ್ಣಾ... ಮದಗಾದ ಕೆರೆಗೆ..!!!
ಮಾಯದಂಥ ಮಳೆ ಬಂತಣ್ಣಾ... ಮದಗಾದ ಕೆರೆಗೆ..!
ಈ ಮೇಲಿನ ಜನಪದದ ಸಾಲಿನಲ್ಲಿನ ಕಥಾನಾಯಕಿಯ ತ್ಯಾಗದ ಕಥೆಯನ್ನು ಹೇಳುವ ಮದಗದ ಕೆರೆಯು ಇರುವುದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದಿಂದ ಸುಮಾರು 4 ಕಿ.ಮೀ. ದೂರದಲ್ಲಿ. ಮಲ್ಲನಗೌಡರು ಕಟ್ಟಿಸಿದ ಕೆರೆಗೆ ನೀರು ಬರದೇ ಇದ್ದಾಗ ಜೋಯಿಸರನ್ನು ವಿಚಾರಿಸಿದಾಗ ಗೊತ್ತಾಗಿದ್ದು ತನ್ನ ಮುದ್ದಿನ ಸೊಸೆಯನ್ನ ಜನರ ಕಲ್ಯಾಣಕ್ಕಾಗಿ ಕೆರೆಗೆ ಬಲಿ ಕೊಡುವದ್ದಾಗಿತ್ತು.
ಲೋಕ ಕಲ್ಯಾಣಕ್ಕಾಗಿ ನಿಷ್ಕಲ್ಮಷ ಮನಸ್ಸಿನಿಂದ ‘ಕೆರೆಗೆ ಹಾರ’ವಾದ ಮಹಾತಾಯಿ ಕೆಂಚಮ್ಮದೇವಿಯ ತ್ಯಾಗ ಮನೋಭಾವದಿಂದ ಹುಟ್ಟಿದ ಕೆರೆ ಇದಾಗಿದೆ ಎಂಬುದು ನಮಗೆ ಜಾನಪದ ಗೀತೆಯ ಮುಖಾಂತರ ಗೊತ್ತಾಗುತ್ತದೆ. ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿಯಿಂದ ಮಾಸೂರಿಗೆ ಪ್ರಯಾಣ ಬೆಳೆಸಿ ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿ ಹಚ್ಚು-ಹಸಿರಾದ ಕಾಡಿನ ಮಧ್ಯದೊಳಗೆ ಪ್ರವೇಶಿಸಿದಾಗ ಎಡಭಾಗದಲ್ಲಿ ವಿಶಾಲವಾದ ಈ ಕೆರೆಯನ್ನು ನೋಡಬಹುದು.
ಕೆರೆಯ ಬಲಭಾಗದ ಗುಡ್ಡದ ಮೇಲೆ ಹಾಳುಬಿದ್ಧಂತಹ ಕೋಟೆಯೊಂದಿದ್ದು ಅದರ ತುದಿಯಿಂದ ಸಂಪೂರ್ಣವಾದ ಕೆರೆಯನ್ನು ವೀಕ್ಷಿಸಬಹುದಾಗಿದೆ. ಮುಂದೆ ಸಾಗುತ್ತಾ ನಡೆದರೆ ನೀರಿನ ಭೋರ್ಗರೆಯುವ ಶಬ್ಧ ನಮ್ಮ ಕಿವಿಯ ಮೇಲೆ ಬೀಳಲಾರಂಭಿಸುತ್ತದೆ. ಈ ಕೆರೆಯ ನೀರು ಗುಡ್ಡದ ಇಕ್ಕೆಲಗಳಲ್ಲಿ ಹರಿದು ಬಂದು ಜಲಪಾತವನ್ನು ನಿರ್ಮಾಣ ಮಾಡಿ ಕುಮಧ್ವತಿಯ ಮಡಿಲನ್ನು ಸೇರುತ್ತದೆ.
ನೀರು ರಭಸವಾಗಿ ಹರಿಯುವ ಪರಿಣಾಮವೆಂಬಂತೆ ನೀರಿನ ಹನಿಗಳು ಮೈಮೇಲೆ ಬಿದ್ದಾಗ ಮನಸ್ಸಿಗೆ ಮುದವನ್ನು ನೀಡುತ್ತದೆ. ಪಕ್ಷಿಗಳ ಚಿಲಿ-ಪಿಲಿ, ಜಲಪಾತದ ಶಬ್ಧ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸದೇ ಇರುವುದಿಲ್ಲ. ಗುಡ್ಡದ ಮೇಲೊಂದು ತಿರುಪತಿ ವೆಂಕಟೇಶ್ವರ ದೇವಾಲಯವಿದ್ದು, ಅಲ್ಲಲ್ಲಿ ಭಗ್ನವಾದ ವಿಗ್ರಹಗಳು ಬಿದ್ದಿರುವುದನ್ನು ನೋಡಬಹುದು. ಬ್ರೀಟಿಷರು ಗುಡ್ಡವನ್ನು ಕೊರೆದು ಸುರಂಗ ಮಾರ್ಗದ ಮುಖಾಂತರ ನೀರು ಹರಿಯುವ ಹಾಗೆ ಮಾಡಿರುವುದನ್ನು ಶಾಸನದಲ್ಲಿ ಉಲ್ಲೇಖಿಸಿರುವರು.
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಈ ಜಲಪಾತವು ಇನ್ನೂ ಎರಡು ತಿಂಗಳವರೆಗೂ ಮೈದುಂಬಿ ಹರಿಯುವುದು ವಿಶೇಷ. ಜಲಪಾತ ವೀಕ್ಷಿಸುವುದರೊಂದಿಗೆ ಇದರ ಸುತ್ತಮುತ್ತಲೂ ಇನ್ನೂ ಅನೇಕ ಪುಣ್ಯಕ್ಷೇತ್ರಗಳನ್ನು ಸಹ ನಾವು ನೋಡಬಹುದಾಗಿದೆ. ಅವುಗಳೆಂದರೆ ರಟ್ಟಿಹಳ್ಳಿಯ ಪುರಾತನ ಕಂದಂಬೇಶ್ವರ ದೇವಸ್ಥಾನ, ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ದರ್ಶನ ಪಡೆಯುತ್ತಿದ್ದ ಹಳ್ಳೂರು ಗ್ರಾಮದ ರಂಗನಾಥ ದೇವಾಲಯ, ಕಣವಿಸಿದ್ದಗೇರಿಯ ಓಂ ಬೆಟ್ಟ ಹಾಗೂ ದೇವಸ್ಥಾನ, ಮಾಸೂರಿನಲ್ಲಿಯ ಪುರತಾನ ಸ್ಥಳಗಳನ್ನು ವೀಕ್ಷಿಸಿ, ಜ್ಞಾನದ ಸಂಪತ್ತನ್ನು ಪಡೆಯುವದರೊಂದಿಗೆ ರಜೆಯ ಮಜಾವನ್ನು ಸವಿಯಬಹುದಾಗಿದೆ.
ಐತಿಹಾಸಿಕ ಹಿನ್ನಲೆ:
‘ಮದಗ’ ಶಬ್ಧವನ್ನು ಗಮನಿಸಿದಾಗ ಇದೊಂದು ‘ಕೆರೆಗೆ ಕಾಲುವೆ ನಿರ್ಮಿಸಿದ ಪ್ರದೇಶ’ ಅಥವಾ ‘ತೋಬ’ ಎಂಬ ಅರ್ಥ ಕೊಡುತ್ತದೆ. ಜಾನಪದದ ಗೀತೆಯ ಹಿನ್ನಲೆಯಲ್ಲಿ ಅವಲೋಕಿಸಿದಾಗ ಮಹಾತಾಯಿ ಕೆಂಚಮ್ಮದೇವಿ ಕೆರೆಗೆ ಹಾರವಾಗುವ ಮುಖಾಂತರ ಮಲ್ಲನಗೌಡರು ಇದನ್ನು ನಿರ್ಮಿಸಿದರು. ಎಂಬ ಪ್ರತೀತಿ ಇದೆ. ಐತಿಹಾಸಿಕ ಉಲ್ಲೇಖಗಳನ್ನು ನೋಡುವುದಾದರೆ ವಿಜಯನಗರದ ಕೃಷ್ಣದೇವರಾಯನ ಸಾಮಂತ ಕೆಳದಿ ಸದಾಶಿವನಾಯಕನ ಆದೇಶದಂತೆ ಬಂಕಾಪುರದ ಮಾದಣ್ಣ ಒಡೆಯರ್ ಇದನ್ನು ಕಟ್ಟಿಸಿದರು.
ಕ್ರಿ.ಶ. 1635ರಲ್ಲಿ ಮೊಹಮದ್ ಷಾಹನ ಅಧಿಕಾರಿ ಮೊಹಮದ್ ಖಾನ್ ಕೆರೆಯನ್ನು ಪುನರ್ ಜೀರ್ಣೋದ್ಧಾರಗೊಳಿಸಿದನು. ಕ್ರಿ.ಶ. 1862ರಲ್ಲಿ ಅಂಗ್ರೇಜಿ ಸರಕಾರದ ಇಂಜಿನೀಯರ್ ಕ್ಯಾಪ್ಟನ್ ಪ್ಲೇಫೇರ್‍ನು ಮಿಸ್ಟರ್ ವಿಠಲ್ ಭವಾನಿಯ ಸಹಾಯದೊಂದಿಗೆ ಗುಡ್ಡವನ್ನು ಕೊರೆದು ಸುರಂಗ ನಿರ್ಮಾಣ ಮಾಡಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟನು ಎಂಬುದು ಅಲ್ಲಿನ ಶಾನನವೊಂದು ತಿಳಿಸುತ್ತದೆ. ಇಂತಹ ರಮಣೀಯ ಜಲಪಾತವಿರುವ ಪ್ರದೇಶವನ್ನು ಗುರುತಿಸಿ ಇನ್ನೂ ಹೆಚ್ಚಿ ಅಭಿವೃದ್ಧಿಪಡಿಸಿದರೆ ಈ ಕ್ಷೇತ್ರವು ರಾಜ್ಯದ ಮೂಲೆ-ಮೂಲೆಗಳಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
- ಪ್ರಮೋದ ಎಸ್. ನಲವಾಗಲ
9686168202

Comments
Post a Comment