ನರಗುಂದ ಬಾಬಾಸಾಹೇಬ್ ಮಾರುವೇಷದಲ್ಲಿ ಬಂಕಾಪುರದಲ್ಲಿದ್ದನು______________!!!
ನರಗುಂದ ಬಾಬಾಸಾಹೇಬ್ ಮಾರುವೇಷದಲ್ಲಿ ಬಂಕಾಪುರದಲ್ಲಿದ್ದನು______________!!!!
ಕ್ರಿ.ಶ 1809 ರಲ್ಲಿ ಪೇಶ್ವೆ ಎರಡನೇಯ ಭಾಜೀರಾಯನು ನರಗುಂದದ ವೆಂಕಟರಾಯನ ಮಗ ಮೂರನೇಯ ದಾದಾಜಿರಾವ್ ಭಾವೆಗೆ 33 ಗ್ರಾಮಗಳ ಜಾಗಿರ್ದಾರಕಿಯನ್ನು ನೀಡಿದ್ದರು. ದಾದಾಜಿರಾವ್ ಭಾವೆಯವರ ಮಗ ಎರಡನೇಯ ಭಾಸ್ಕರರಾವ್ ಭಾವೆ. ಈತನನ್ನು ಬಾಬಾಸಾಹೇಬ್ ಭಾವೆ ಎಂದು ಕರೆಯುತ್ತಿದ್ದರು. ಮೂಲತ: ಬ್ರಾಹ್ಮಣ ಕುಲದಲ್ಲಿ ಜನಸಿದ್ದ ಬಾಬಾಸಾಹೇಬಗೆ ಸಂಸ್ಕೃತದ ಜ್ಞಾನ ರಕ್ತಗತವಾಗಿ ಬಂದಿತ್ತು. ಬಾಬಾಸಾಹೇಬ 3000 ದಿಂದ 4000 ಸಂಸ್ಕೃತ ಗ್ರಂಥಗಳನ್ನೊಳಗೊಂಡ ಸ್ವಂತ ಗ್ರಂಥಾಲಯವನ್ನು ಹೊಂದಿದ್ದನು ಹಾಗೂ ಇತನಿಗೆ ಅಪಾರ ಜ್ಞಾನವಿತ್ತೆಂದು ಬ್ರಿಟಿಷ್ ರು ದಾಖಲಿಸಿದ್ದಾರೆ. ಹೀಗಾಗಿಯೇ ಬ್ರಿಟಿಷ್ ಅಧಿಕಾರಿಗಳು ಜಮಖಂಡಿಯ ಪಟವರ್ಧನರಂತೆ ಸಂಸ್ಥಾನವನ್ನು ಮುಂದುವರಿಸಲು ಯಾವುದೇ ಆಕ್ಷೇಪವೆತ್ತಿರಲಿಲ್ಲ. ತುಂಬು ಕುಟುಂಬವನ್ನು ಹೊಂದಿದ್ದ ಈತನೂ ತಾಯಿ ಯಮುನಾಬಾಯಿ ಹಾಗೂ ಪತ್ನಿ ಸಾವಿತ್ರಬಾಯಿಯ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದನು. ವೀರನೂ ಹಾಗೂ ಚಾಣಾಕ್ಷನಾದ ಈತನಿಗೆ ಬ್ರಿಟಿಷ್‌ರ ಮೇಲೆ ಎಲ್ಲಿಲ್ಲದ ದ್ವೇಶವಿತ್ತು ಕಾರಣ ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡಿದ್ದ. ತನ್ನ ನಂತರ ಹುದ್ದೆಯನ್ನು ತನ್ನ ದತ್ತು ಮಗ ನಿರ್ವವಹಿಸಲಿ ಎಂಬ ಮಹಾದಾಸೆಯನ್ನಿಟ್ಟುಕೊಂಡಿದ್ದನು. ಆದರೆ ಬ್ರಿಟಿಷರ "ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ ಕಾಯ್ದೆ ಅವನ ನಿದ್ದೆ ಕೆಡಿಸಿತ್ತು. ಇನಾಂ ಕಮಿಶನ್ ಸದಸ್ಯನಾಗಿದ್ದ "ಮ್ಯಾನ್ಸನ್" ಇವನ ಅನೇಕ ಗ್ರಾಮಗಳನ್ನು ಕಸಿದುಕೊಂಡಿದ್ದನು. ಇದರಿಂದ ಕೆಂಡಾಮಂಡಲವಾಗಿದ್ದು, ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದನು. ಇವನ ಹೋರಾಟಕ್ಕೆ ಶಿರಹಟ್ಟಿಯ ದೇಸಾಯಿ ಕೆಂಚನಗೌಡ ಮತ್ತು ಮುಂಡರಗಿಯ ಭೀಮರಾಯನ ಸಹಮತವಿತ್ತು ಹಾಗೂ ಸ್ನೇಹಿತರಾದ ಭೀಮರಾವ್ ನಾಡಗೀರ್ ಮತ್ತು ಸೊರಟೂರಿನ ದೇಶಮುಖರ ಸಹಕಾರವಿತ್ತು.
ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ್ದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ, ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬಂದರು. ಬ್ರಿಟಿಷರ ಶಸ್ತ್ರಾಸ್ತ್ರ ಕಾಯಿದೆಯನ್ನು ತಿಳಿದುಕೊಂಡಿದ್ದ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ಸಿಗಬಾರದೆಂದು, ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ಕೋಟೆಯಲ್ಲಿಯೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. 1857 ಮೇ 29 ರಂದು ಮ್ಯಾನ್ಸನ್ "ಸೂರೆಬಾನನಲ್ಲಿ" ವಾಸ್ತವ್ಯ ಹೂಡಿದ್ದನು. ಬ್ರಿಟಿಷರ ಕುತಂತ್ರ ಬುದ್ದಿಯನ್ನು ತಿಳಿದಿದ್ದ ಬಾಬಾಸಾಹೇಬ್ ಪಲ್ಲಕ್ಕಿಯ ಮೇಲೆ ಮಲಗಿದ್ದ ಮ್ಯಾನ್ಸನ್ ಅಧಿಕಾರಿಯ ತಲೆಯನ್ನು ಕಡಿಸಿ, ಉಳಿದ ದೇಹದ ಭಾಗವನ್ನು ಬೆಂಕಿಯಲ್ಲಿ ಹಾಕಿ ತೆಲೆಯನ್ನು ನರಗುಂದದ ಕೋಟೆಯ ಬಾಗಿಲಿಗೆ ನೇತು ಬಿಟ್ಟನು.
ಅದಾಗಲೇ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಮ್ಯಾನ್ಸನ್ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ಈ ಘೋರ ಹೋರಾಟದಲ್ಲಿ ನರಗುಂದ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ಕೋಟೆ ತೊರೆದು ಹೋದ. ಈ ವಿಷಯ ತಿಳಿದ ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು.
1858 ಜೂನ್ 12ರಂದು ಸಾವಿರಾರು ಜನರ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು. ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು. ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಾವಿರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು. 1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಈ ವಿಷಯವನ್ನು ನಾವು ಬ್ರಿಟಿಷರ ದಾಖಲಾತಿಯಲ್ಲಿ ನೋಡಬಹುದು. ಅದನ್ನು ಬ್ರಿಟಿಷರು ಸಹ ಅಚ್ಚುಕಟ್ಟಾಗಿ ಗ್ರಂಥಕಾರರ ಕಡೆಯಿಂದ ಬರೆಸಿದ್ದಾರೆ ಎನ್ನಬಹುದು. ಕಾರಣ ಈ ಭಾಗದಲ್ಲಿ ಅವರ ಆಡಳಿತವನ್ನು ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಉತ್ತರ ಕರ್ನಾಟಕದ ಹುಲಿಯನ್ನು ಹಿಡಿಯದಿದ್ದರು ಆತನನ್ನು ಕೊಂದಿದ್ದೇವೆ ಎಂಬ ಪ್ರಚಾರ ಹಾಗೂ ಪ್ರಜೆಗಳ ಮನಸ್ಸಿನಲ್ಲಿ ಬ್ರಿಟಿಷರ ವಿರುದ್ದ ಧ್ವನಿಯತ್ತುವ ಯಾವುದೇ ಧ್ವನಿಯಿದ್ದರು ಅದನ್ನು ನಿಷ್ಕ್ರಿಯಗೊಳಿಸುತ್ತೇವೆ ಎಂಬುದನ್ನು ಬಿಂಬಿಸಬೇಕಾಗಿತ್ತು. ನಿಜವಾಗಲೂ ಆತನನ್ನು ಬ್ರಿಟಿಷರು ಬಂಧಿಸಿರಲಿಲ್ಲ ಬದಲಾಗಿ ಬಾಬಾಸಾಹೇಬ್ ಅವರಿಂದ ತಪ್ಪಿಸಿಕೊಂಡಿದ್ದ. ಆ ವಿಷಯವನ್ನು ಮರೆಮಾಚಲು ಅಧಿಕಾರಿಗಳು ಬೇರೆಯ ವ್ಯಕ್ತಿಯನ್ನು ಬಂಧಿಸಿ ನೇಣಿನ ಕುಣಿಕೆಯನ್ನು ಬಿಗಿದಿದ್ದರು. ತದನಂತರ ಅಧಿಕಾರಿಗಳು ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು"ನಾವು ಗಲ್ಲಿಗೇರಿಸಿದ ವ್ಯಕ್ತಿ ಬಾಬಾಸಾಹೇಬ್ ಅಲ್ಲವೆಂದು. ತಾಯಿ ಹಾಗೂ ಪತ್ನಿಯ ಆತ್ಮಹತ್ಯೆಯಿಂದ ಮನನೊಂದಿದ್ದ ಬಾಬಾಸಾಹೇಬ್ ಮನ:ಶಾಂತಿಯನ್ನರಿಸಿಕೊಂಡು ಬಂದಿದ್ದು ಹಾವೇರಿ ಜಿಲ್ಲೆಯ ಬಂಕಾಪುರದಿಂದ 2 ಕಿ.ಮೀ ದೂರದಲ್ಲಿರುವ "ಜೇರಗಟ್ಟಿಯ" ಮಠಕ್ಕೆ. ಅಲ್ಲಿಯ ಗದ್ದುಗೆಯನ್ನು ದಿನನಿತ್ಯ ಪೂಜಿಸುತ್ತಾ "ಸಿದ್ದಪತ್ರಿ"ಯನ್ನು ಸೇದುತ್ತಾ ಕಾಲವನ್ನು ಕಳೆಯುತ್ತಿದ್ದನು. ಗಡ್ಡದಾರಿ ಹಾಗೂ ಸನ್ಯಾಸಿ ವೇಶ ಧರಿಸಿದ್ದ ಇತನನ್ನು "ಬಾಬಾಸಾಹೇಬ"ಎಂದು ಯಾರು ಗುರುತಿಸುತ್ತಿರಲಿಲ್ಲಿ. ಕಳೆದು ಹೋದ ನೆನಪುಗಳು ಮರುಕಳಿಸಿದಾಗ ಬಾವುಕನಾಗಿ ಮಠದ ಮುಂದಿರುವ ಕಲ್ಲುಗಳ ಮೇಲೆ ಕಟ್ಟಿಗೆಯ ದಂಡದ ಸಹಾಯದಿಂದ ಮೇಲೇರಿ ವಿಶ್ರಮಿಸುತ್ತಿದ್ದ. ತನ್ನ ಕೊನೆಯ ದಿನಗಳನ್ನು ಆತ ಬಂಕಾಪುರದ ಜೇರುಗಟ್ಟಿಯಲ್ಲಿ ಕಳೆದು ಅದೇ ಸ್ಥಳದಲ್ಲಿ ಅಸ್ತಂಗತನಾದನು. ಈಗಲೂ ಸಹ ಬಾಬಾಸಾಹೇಬನ ಗದ್ದುಗೆಯನ್ನು, ದಂಡವನ್ನು, ಬಳಸಿದ ಚಿಲುಮೆ, ಪಾದುಕಿ ಹಾಗೂ ಬೀಸಣಿಕೆಯನ್ನು ನೋಡಬಹುದಾಗಿದೆ. ಬಾಬಾಸಾಹೇಬ ಯಾರೆಂದು ಗೊತ್ತಿಲ್ಲದ ಮುಗ್ದ ಜನರು ಅವನ ಕುರಿತಾದ ಲಾವಣಿಯನ್ನು ಇನ್ನೂ ಸ್ಥಳೀಯವಾಗಿ ಜೀವಂತವಾಗಿಸಿಕೊಂಡಿದ್ದಾರೆ.
ಬಾಬಾಸಾಹೇಬರು ತಮ್ಮ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದರು ಎಂಬ ವಿಷಯ ಕುರಿತು ಸ್ಥಳೀಯವಾಗಿ ಸಿಗುವ ಕುರುಹಗಳ ಬಗ್ಗೆ ಅಧ್ಯಾಯನವಾಗಲಿ ಎಂಬ ಅಭಿಪ್ರಾಯ ದಿ.ಡಾ.ಚೆನ್ನಕ್ಕ ಎಲಿಗಾರ (ಪಾವಟೆ) ಹಾಗೂ ಹಿರಿಯರು ಹಾಗೂ ನಿವೃತ್ ಶಿಕ್ಷಕರಾದ ಎ.ಕೆ ಅದವಾನಿಮಠರವರದ್ದಾಗಿದೆ. ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಈಗಲಾದರು ಈ ವಿಷಯ ಕುರಿತು ಅಧ್ಯಾಯನವಾಗಿ ಬಾಬಾಸಾಹೇಬ್ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದು ನನ್ನ ಒತ್ತಾಸೆ.
~~~~ ಪ್ರಮೋದ ನಲವಾಗಲ ~~~
9686168202
Comments
Post a Comment