ಬೇಡರು ವಾಸವಾಗಿದ್ದ ಪ್ರದೇಶ ಮುಂದೆ "ಬ್ಯಾಡಗಿ" ಎಂದಾಯಿತೇ ???
ಬೇಡರು ವಾಸವಾಗಿದ್ದ ಪ್ರದೇಶ ಮುಂದೆ "ಬ್ಯಾಡಗಿ" ಎಂದಾಯಿತೇ ???........
ಹಾವೇರಿ ಜಿಲ್ಲೆಯ ಬ್ಯಾಡಗಿ ಶಾಸನಗಳಲ್ಲಿ "ಬೇಡಗೆಯ್, ಬೇಡಗೆ, ಬೆಡಗಿ ಹಾಗೂ ಬ್ಯಾಡಗೆ ಎಂದೆಲ್ಲಾ ಉಲ್ಲೇಖಿತಗೊಂಡಿದೆ. ಬೇಡಗೆ(ಬ್ಯಾಡಗಿ)ಯನ್ನು ಬೇಡ +ಕೆಯ್ ಎಂದು ಬಿಡಿಸಬಹುದು. "ಕೆಯ್" ಎಂದರೆ ಪ್ರದೇಶ ಅಥವಾ ಕೃಷಿ ಪ್ರದೇಶ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಬ್ಯಾಡಗಿ ಬೇಡರು ವಾಸಿಸುವ ಸ್ಥಳವಾಗಿತ್ತು ಎಂದು ದಿ.ಡಾ.ಎಂ.ಎಂ ಕಲಬುರ್ಗಿಯವರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಪುರಾವೆ ಎಂಬಂತೆ ಹಿಂದೆ ಇಲ್ಲಿ ಅನೇಕ ಗುಂಡಿಗಳಿದ್ದವು (ಬಹುಶಃ ಅವರು ಅಡಗಿಕೊಳ್ಳಲು ಸಹಕಾರಿಯಾಗಿದ್ದಿರಬಹುದು) ಅವುಗಳನ್ನು ಮುನ್ಸಿಪಾಲಟಿಯವರು ಮುಚ್ಚಿದರು ಎಂಬ ಮಾಹಿತಿಯನ್ನು ಕ್ರಿ.ಶ 1893 ದಾಖಲೆ ತಿಳಿಸುತ್ತದೆ.
ಬ್ಯಾಡಗಿ ಸುಮಾರು 1200 ವರ್ಷಗಳಷ್ಟು ಪ್ರಾಚಿನವಾದದ್ದು ಎಂಬುದಕ್ಕೆ ಎ.ಪಿ.ಎಂ.ಸಿ ಮಾರ್ಕೆಟನಲ್ಲಿಯ ಸಿದ್ದೇಶ್ವರ ದೇವಸ್ಥಾನದಲ್ಲಿರುವ ರಾಷ್ಟ್ರಕೂಟರ ಶಾಸನ ಮೂಕ ಸಾಕ್ಷಿಯಾಗಿದೆ. ಈ ಶಾಸನ ಕ್ರಿ.ಶ 902 ರಲ್ಲಿ ಬ್ಯಾಡಗಿಯನ್ನು "ಬುದ್ದನು" ಊರ ಗೌಡಿಕೆಯನ್ನು ಮಾಡುತ್ತಿದ್ದಾಗ "ಪಿಟ್ಟಮ್ಮೆಯು ಮಾಡಿದ ದಾನವನ್ನು ತಿಳಿಸುತ್ತದೆ. ಕ್ರಿ.ಶ 1092 ರಲ್ಲಿ " ವೀರಗಾಂಗೇರಾಯನು ಬೇಡಗೆಯ ಮಲ್ಲಿಕಾರ್ಜುನ (ಬಹುಶಃ ಬೆಟ್ಟದ ಮಲ್ಲಿಕಾರ್ಜುನ ಇರಬಹುದು) ದೇವರಿಗೆ ಕೊಟ್ಟ ದಾನದ ವಿಷಯವನ್ನು ಶಾಸನ ತಿಳಿಸುತ್ತದೆ. 12ನೇ ಶತಮಾನದಲ್ಲಿ ತುರುಗಳನ್ನು (ಆಕಳುಗಳನ್ನು) ಪರಸ್ಥಳದವರು ಕದ್ದುಕೊಂಡು ಹೋಗುತ್ತಿರುವಾಗ ಅವರೊಡನೆ "ಸೋವಗಾವುಂಡನು" ಹೋರಾಡಿ ಪ್ರಾಣವನ್ನು ಕಳೆದುಕೊಂಡನು. ಬ್ಯಾಡಗಿಯ ಮಡಿವಳರ ಯೋದನೊಬ್ಬ ಕುಂಚೂರು ಕಾಳಗದಲ್ಲಿ ಕ್ರಿ.ಶ 1228 ರಲ್ಲಿ ಮಡಿದನು. ಬ್ಯಾಡಗಿಯ ಗೌಡಿಕೆಗಾಗಿ ವ್ಯಾಜ್ಯ ನಡೆದಾಗ ಹೊಮ್ಮರಡಿ ಗ್ರಾಮದ ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಬಗೆಹರಿಸಿಕೊಂಡರು. ಕಾಕೋಳ ಮಾರ್ಗದ ಶಿಬಾರ ಸಮೀಪದಲ್ಲಿಯ ಶಾಸನದಲ್ಲಿ (ಸುಮಾರು 15 ನೇ ಶತಮಾನ) ಅರಸರು ಬ್ಯಾಡಗಿಯ "ವೀರಸೆಟ್ಟಿಗೆ ಗೌಡಕಿಯನ್ನು ನೀಡಿ ಮಾನ್ಯದ ಹೊಲವನ್ನು ಕೊಟ್ಟ ವಿಷಯವನ್ನು ತಿಳಿಸುತ್ತದೆ. ಬ್ಯಾಡಗಿ ನಗರದ ಪುರಾತನ ದೇವಾಲಯಗಳೆಂದರೆ ಸಿದ್ದೇಶ್ವರ(ರಾಷ್ಟ್ರಕೂಟರ ಕಾಲದ್ದು), ವೀರಭದ್ರೇಶ್ವರ, ಕಲ್ಮೇಶ್ವರ ಹಾಗೂ ರಾಮೇಶ್ವರ ದೇವಸ್ಥಾನಗಳು (ರಾಮಲಿಂಗ ದೇವಸ್ಥಾನ). ತದನಂತರ ಗೋಣಿಬಸವೇಶ್ವರ, ಆಂಜನೇಯ, ಕಾಳಿಕಾದೇವಿ, ಬನಶಂಕರಿ, ಸಂಗಮೇಶ್ವರ(ಪಾರ್ವತಿ-ಪರಮೇಶ್ವರ), ಶಿರಡಿ ಸಾಯಿಬಾಬಾ, ದಾನಮ್ಮ, ಮಾರಿಕಾಂಬ, ತರಿಕೇರಿ ದುರ್ಗಾದೇವಿ, ದ್ಯಾಮವ್ವ, ತಿರುಪತಿ ತಿಮ್ಮಪ್ಪ ಹಾಗೂ ರೇಣುಕಾ ಎಲ್ಲಮ್ಮ ದೇವಸ್ಥಾನಗಳು ಹುಟ್ಟಿಕೊಂಡವು. ಇಲ್ಲಿ ಮೂರು ಮಠಗಳಿದ್ದು, ಒಂದು ವೃಂದಾವನವಿದೆ(ರಾಘವೇಂದ್ರ ಮಠದಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ಜೌದಂಬರ ವೃಕ್ಷವಿದೆ) ಮುಪ್ಪಿನಸ್ವಾಮಿ ಮಠ, ಸಿಂದಗಿ ಪಟ್ಟದೇವರ ಮಠ ಹಾಗೂ ಹಿರೇಮಠಗಳಲ್ಲಿ ವಿರಕ್ತಮಠವಾದ ಮುಪ್ಪಿನಸ್ವಾಮಿ ಮಠವು ಪ್ರಸಿದ್ದಿಗೆ ಬಂದ ಮಠವಾಗಿದೆ. ಈ ಮಠಕ್ಕೆ 23ನೇ ಪೀಠಾಧ್ಯಕ್ಷರಾಗಿ ಇವರು ಬಂದ ನಂತರ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರಿಗೆ ಪುನಃ ಪಟ್ಟ ಲಭಿಸುವಂತೆ ಆಶಿರ್ವದಿಸಿದ್ದರು.
ಹೊರಮಠದಲ್ಲಿ ಇವರ ಸುಂದರವಾದ ಗದ್ದುಗೆ ಕ್ರಿ.ಶ 1903 ರಲ್ಲಿ ನಿರ್ಮಾಣವಾಯಿತು. ಬ್ಯಾಡಗಿಯಲ್ಲಿಯ ಪುರಾತನವಾದ ಓಣಿಗಳೆಂದರೆ ಹೊಂಡದ ಓಣಿ, ದಂಡಿನ ಪೇಟೆ, ಚಾವಡಿ ಓಣಿ, ಶೆಟ್ರ ಓಣಿ, ಹಳೆಬೆಣ್ಣಿ ಪೇಟೆ, ಗಾಂಧಿನಗರ(ಮಹಾತ್ಮಾ ಗಾಂಧಿಯವರು ಹರಿಜನರನ್ನು ಭೇಟಿಯಾಗಲು ಬಂದಿದ್ದರು), ಸೂಗಿಓಣಿ, ಹಳೆಮೆಣಸಿನಕಾಯಿ ಪೇಟೆ, ವೈಶ್ಯರಗಲ್ಲಿ, ತಳವಾರ ಓಣಿ, ಆರ್ಯರ ಓಣಿ ಹಾಗೂ ಹೂಗಾರ ಗಲ್ಲಿ. ಇವುಗಳಲ್ಲಿ ಹಳೆಮೆಣಸಿನಕಾಯಿ ಪೇಟೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಕಾರಣ ದೇಶದಲ್ಲಿಯೇ ಇಲ್ಲಿಯ ಮೆಣಸಿನಕಾಯಿಗೆ ಉತ್ತಮವಾದ ಬೆಲೆ ಸಿಗುತ್ತಿತ್ತು ಹೀಗಾಗಿ ಇದನ್ನರಿತ ಬ್ರಿಟಿಷ್ ಸರ್ಕಾರ ಮೆಣಸಿನಕಾಯಿ ಮಾರ್ಕೆಟ್ ಹುಟ್ಟಲು ಪ್ರೇರಣೆ ನೀಡಿತು. ಮುಂದೆ ಭಾರತ ಸ್ವಾತಂತ್ರಗೊಂಡ ನಂತರ 15-02-1948 ರಂದು ದಿ.ಅಗ್ರಕಲ್ಚರಲ್ ಪ್ರೊಡ್ಯೂಸ್ ಮಾರ್ಕೆಟ್ ಕಮಿಟಿ" ಹುಟ್ಟಿತು. ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಯನ್ನು ಸದಸ್ಯರ ಅಭಿಪ್ರಾಯದಂತೆ ಪ್ರತಿ ಸೋಮವಾರ ಹಾಗೂ ಗುರುವಾರ ಮೆಣಸಿನಕಾಯಿ ವ್ಯಾಪರವಾಗುವಂತೆ ನಿರ್ಣಯಿಸಲಾಯಿತು. ಹಿಂದೆ ಪ್ರತಿ ಶನಿವಾರದ ಸಂತೆಯಲ್ಲಿ ಅಕ್ಕಿ, ಮೊಲ್ಯಾಸಿಸ್, ದಿನಸಿಗಳನ್ನು ಹಾಗೂ ಮೆಣಸಿನಕಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು.
ರಾಣೇಬೆನ್ನೂರ ತಾಲೂಕಿನಲ್ಲಿಯೇ ಅತಿ ಪ್ರಮುಖವಾದ ಸಂತೆಯೆಂದು 1847 ರಲ್ಲಿ ದಾಖಲಿಕರಿಸಲಾಯಿತು. ಮಿಶ್ರಕೋಟಿಯ ಕಾಳಪ್ಪ.ಬಡಿಗೇರ ಹಾಗೂ ಬಸವಣೇಪ್ಪ ಬಡಿಗೇರ ಇವರು ಹುಬ್ಬಳ್ಳಿಯ ಶ್ರೀ ಸಿದ್ದಾರೂಡರ ಕಟ್ಟಿಗೆಯ ವಿಗ್ರಹವನ್ನು ಕೆತ್ತಲಾರಂಭಿಸಿದಾಗ ಫ್ಲೇಗನ ಉಪಟಳ ಬಹಳವಿದ್ದರಿಂದ ಬಯಭೀತರಾಗಿದ್ದರು. ಇದನ್ನು ತಿಳಿದ ಮಹಾಸ್ವಾಮಿಗಳು ಅವರ ದಂತವನ್ನು ಬಡಿಗೇರರವರಿಗೆ ನೀಡಿ ಭಯ ಪಡಬೇಡಿ ಸೊಂಕು ಈಗ ನಿಮ್ಮನ್ನು ಎನೂ ಮಾಡಲು ಸಾದ್ಯವಿಲ್ಲಾವೆಂದು ತಿಳಿಸಿದರು. ಅವರು ಕೊಟ್ಟ ದಂತ ಕಂತಿಯ ರೂಪವನ್ನು ಪಡೆದು ಲಿಂಗ ರೂಪವನ್ನು ತಾಳಿ ಕಾಳಪ್ಪಜ್ಜರ ಮೊಮ್ಮಗನಾದ ಸೂಗಿ ಓಣಿಯ ಜಯಶ್ರೀ ಪೋಟೊ ಸ್ಟುಡಿಯೋ ಮಾಲಿಕರಾದ ದಿ.ಉಮೇಶ ಬಡಿಗೇರರವರ ಮನೆಯಲ್ಲಿ ಇನ್ನೂ ಜೀವಂತವಾಗಿದೆ. ರಾಣೇಬೆನ್ನೂರ ತಾಲೂಕಿಗೆ ಸೇರುತ್ತಿದ್ದ ಬ್ಯಾಡಗಿಯಲ್ಲಿ ಕ್ರಿ.ಶ 1879 ರಲ್ಲಿ ಮುನ್ಸಿಪಾಲಟಿ ಜನ್ಮ ತಾಳಿತು. 1882-83 ರಲ್ಲಿ ಸುಂಕದಕಟ್ಟಿ, ಮನೆಗಳ ತೆರೆಗೆ ಹಾಗೂ ಇತರ ಮೂಲಗಳಿಂದ ಬಂದ ಉತ್ಪನ್ 4828 ರೂಪಾಯಿಗಳಾಗಿದ್ದವು. ಇಲ್ಲಿ ಸುಮಾರು ನಾಲ್ಕು ಜಕಾತಿಗಳಿದ್ದವು. ಸುಂಕದ ಅಧಿಕಾರಿಗಳು ವಾಸಿಸುವ ಸ್ಥಳ ಸುಂಕದಕೇರಿಯಾಗಿತ್ತು. ಆದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.
ಬ್ರಿಟಿಷ್ ಸರ್ಕಾರದ ಅಧಿಕಾರಿಗಳನ್ನು ಹಾಗೂ ಬಡವರನ್ನು ಸುಲಿದು ತಿನ್ನುತ್ತಿದ್ದ ಕೆಲ ಶ್ರೀಮಂತರ ಮನೆಗಳನ್ನು "ಕುರವತ್ತಿ ಕಳ್ಳ"ಎಂಬ ವ್ಯಕ್ತಿ ಕಳವು ಮಾಡಿ ಬಡವರಿಗೆ ಹಂಚುತ್ತಿದ್ದನು. ಅವನು ಬಡವರ ಕಣ್ಮನಿಯಾಗಿದ್ದನೆಂತೆ. ಅಂತವನನ್ನು ಬ್ರಿಟಿಷರು ಬಂಧಿಸಿ ಚಾವಡಿಗೆ ಕಟ್ಟಿ ಹಾಕಿ ಕೊಲ್ಲಲ್ಪಟ್ಟರಂತೆ ಎನ್ನುವ ಬಡವರ ಹೀರೋನ ಕಥೆ ಇನ್ನೂ ಹಿರಿಯರ ಮನಸ್ಸಿನಲ್ಲಿ ಜೀವಂತವಾಗಿದೆ. 1881 ರ ಜನಗಣತಿಯ ಪ್ರಕಾರ ಬ್ಯಾಡಗಿಯ ಜನಸಂಖ್ಯೆ ಕೇವಲ 4117. ಇಲ್ಲಿಯ ರಸ್ತೆಯಲ್ಲಿಯ ಗುಂಡಿಗಳನ್ನು ಹಾಗೂ ಖಾಲಿ ಜಾಗಾದಲ್ಲಿರುವ ಗುಂಡಿಗಳನ್ನು ಸ್ಥಳಿಯ ಮುನ್ಸಿಪಾಲಟಿ ಮುಚ್ಚಿದ್ದನ್ನು ಕಂಡು ಬ್ರಿಟಿಷ್ ಸರ್ಕಾರ ಆ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು. ಮುನ್ಸಿಪಾಲಟಿಯು ಅಂದು ಆರು ನೀರಿನ ತೊಟ್ಟೆ ಹಾಗೂ ಒಂದು ಬಾವಿಯ ಮೂಲಕ ಸಾರ್ವಜನಿಕರಿಗೆ ನೀರನ್ನು ಸರಬರಾಜು ಮಾಡುತ್ತಿತ್ತು.
ಮುನ್ಸಿಪಾಲಟಿಯ ಸದಸ್ಯರಿಗಾಗಿ 20-03-1931ರಂದು ವಿಶ್ರಾಂತಿ ಕೋಠಡಿಯನ್ನು ದಿ.ಎಂ.ಸಿ.ಶೆಟ್ಟರ ಉದ್ಘಾಟಿಸಿದರು. ಬಾವಿಯ ನೀರನ್ನು ಉಪಯೋಗಿಸಿಕೊಂಡು ಅಂದು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಅಡಿಕೆ ಹಾಗೂ ಎಲೆಗಳನ್ನು ಹೆಚ್ಚಾಗಿ ಬೆಳೆಯತ್ತಿದ್ದರು. ಅಂದು ಕೇವಲ ಎರಡು ಶಾಲೆಗಳು ಮಾತ್ರವಿದ್ದವು. ಸಾರ್ವಜನಿಕರಿಗೆ ಬ್ರಿಟಿಷ್ ಸರ್ಕಾರ ಪೊಸ್ಟ ಆಫೀಸ್ ತೆರೆದಿತ್ತು. 1903 ರಲ್ಲಿ "ನ್ಯೂ ಇಂಗ್ಲೀಷ್ ಸ್ಕೂಲ್" ಎಂಬ ಹೆಸರಿನಿಂದ ಶಾಲೆ ಪ್ರಾರಂಭವಾಯಿತು. ಮುಂದೆ ಮುನ್ಸಿಪಾಲಟಿಯ ಇದರ ಜವಾಬ್ದಾರಿ ತೆಗೆದುಕೊಂಡ ಮೇಲೆ ಇದನ್ನು" ಮುನ್ಸಿಪಲ್ ಇಂಗ್ಲಿಷ್ ಸ್ಕೂಲ್" ಎಂದು ನಾಮಕರಣ ಮಾಡಲಾಯಿತು. ಇದರ ಕಟ್ಟಡದ ಶಂಕುಸ್ಥಾಪನೆಯನ್ನು 02/02/1925 ರಂದು ಧಾರವಾಡ ಕಲಕ್ಟರಾದ "ಜೆ.ಮಾಂಟೀಥ್ ಎಸ್ಕ್ವರ್" ನೆರವೆರಿಸಿದರು. 1955 ರಲ್ಲಿ ಈ ಶಾಲಾ-ಹೈಸ್ಕೂಲ್ ಸಂಕೀರ್ಣಕ್ಕೆ "ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳ ಹೆಸರನ್ನಿಡಲಾಯಿತು". ದಿ.ಪಾಟೀಲ ಪುಟ್ಟಪ್ಪನವರು, ಸಾಹಿತಿಗಳಾದ ಹಿರೇಮಲ್ಲೂರ ಈಶ್ವರ್, ಅರಣ್ಯ ಮಂತ್ರಿಗಳಾಗಿದ್ದ ವಿಜಯಶಂಕರ ಹೊನ್ನಬಂಡಾರ (ಬಿನ್ನಾಳ), ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾಗಿದ್ದ ಡಾ.ಡಿ.ಎಂ. ನಂಜುಂಡಪ್ಪನವರ ಶ್ರೀಮತಿಗಳಾದ ಶಾಂತಮ್ಮನವರು, ಮಾಜಿ ಶಾಸಕರಾದ ಶ್ರೀ ಸುರೇಶಗೌಡ್ರ.ಬಿ.ಪಾಟೀಲರು ಹಾಗೂ ಇನ್ನೂ ಅನೇಕ ವಿದ್ವಾಂಸರು ಹಾಗೂ ಗಣ್ಯ ವರ್ತಕರು ಇದೆ ಶಾಲಾ-ಹೈಸ್ಕೂಲ್ ವಿದ್ಯಾರ್ಥಿಗಳು ಎಂಬುದು ಇಲ್ಲಿಯ ಶಿಕ್ಷಕರಿಗೆ ಹೆಮ್ಮೆಯ ವಿಷಯವಾಗಿದೆ. 04/02/1954 ರಂದು "ಬ್ಯಾಡಿಗಿ ಮುನ್ಸಿಪಲ್ ಶ್ರೀ ಲಿಂಗರಾಜ ಪೇಠಾವಾಚನಾಲಯ"ಕ್ಕೆ ಅಂದಿನ ಮೈಸೂರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆ.ಹನುಮಂತಯ್ಯನವರು ಅಡಿಗಲ್ಲನ್ನಿಟ್ಟರು. ಮಹತ್ಮಾ ಗಾಂಧೀಜಿಯವರು ಅಸ್ಪೃಶ್ಯರಿಗೆ ಶಾಲೆಗಳಿಗೆ, ದೇವಾಲಯಗಳಿಗೆ ಹಾಗೂ ಸಾರ್ವಜನಿಕ ಬಾವಿಗಳಿಗೆ ಅವಕಾಶವನ್ನು ನೀಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು 01/03/1934 ರಂದು ಬ್ಯಾಡಗಿಯ ಹರಿಜನಕೇರೆಗೆ ಬಂದಿದ್ದರು. ಮೇನ್ ಮಾರ್ಕೆಟ್ ನಲ್ಲಿ ಜನರನ್ನೂದ್ದೇಶಿಸಿ ಮಾತನಾಡಿದರು. ಯುವಕರಿಗೆ ಸ್ಪೂರ್ತಿಯಾಗಿದ್ದ "ಸುಭಾಸಚಂದ್ರ ಬೋಸ್" ತನ್ನ ಗೆಲುವಿಗೆ ಕಾರಣರಾದ ಬ್ಯಾಡಗಿ ಜನತೆಗೆ ಶುಭ ಕೊರಲು 31/07/1939 ರಂದು ನಗರಕ್ಕೆ ಭೇಟಿ ಕೊಟ್ಟಿದ್ದರು.
ದಿ.ಕೆ.ಎಫ್ ಪಾಟೀಲರ ಪರಮಾಪ್ತ ಶಿಷ್ಯನಾಗಿದ್ದ ಮೈಲಾರ ಮಹಾದೇವಪ್ಪನವರು ಆ ಕಾರ್ಯಕ್ರಮದ ಮುಂಚೂಣಿಯನ್ನು ವಹಿಸಿಕೊಂಡಿದ್ದರು. ಅಂದು ಅಪೂರ್ಣಗೊಂಡಿದ್ದ ಶ್ರೀ ಜಗದ್ಗುರು ಜಯದೇವ ಹಾಲನಲ್ಲಿ ಅಭಿಮಾನಿಗಳನ್ನು ಕುರಿತು ಭಾಷಣ ಮಾಡಿದ್ದರು. ಹೀಗಾಗಿ ಅಲ್ಲಿಯ ಮುಂದಿನ ಸರ್ಕಲ್ ಇನ್ನೂ "ಸುಭಾಸಚಂದ್ರ ಬೋಸ್"ರ ಹೆಸರನ್ನು ಜೀವಂತವಾಗಿಟ್ಟುಕೊಂಡಿದೆ. 1957 ರ ವಿಧಾನಸಭಾ ಚುಣಾವಣೆಯಲ್ಲಿ ರಾಣೇಬೆನ್ನೂರ ದ್ವಿಸದಸ್ಯರನ್ನು ಹೊಂದಿತ್ತು(ಬ್ಯಾಡಗಿಯನ್ನೊಳಗೊಂಡಂತೆ). ಆ ಚುಣಾವಣೆಯಲ್ಲಿ ದಿ.ಕೆ.ಎಫ್. ಪಾಟೀಲರು ಹಾಗೂ ದಿ.ಸಾಂಬ್ರಾಣಿ ಯಲ್ಲವ್ವಾ ವಿಜಯಶಾಲಿಗಳಾದರು. 1961 ರಲ್ಲಿ ದ್ವಿಸದಸ್ಯತ್ವವನ್ನು ರದ್ದು ಮಾಡಿ ಬ್ಯಾಡಗಿಯನ್ನು ಎಕಸದಸ್ಯ ಕ್ಷೇತ್ರವನ್ನಾಗಿ ಮಾಡಲಾಯಿತು.
ಬ್ಯಾಡಗಿ ತನ್ನ ಮೆಣಸಿನ ವ್ಯಾಪರದಿಂದಾಗಿ ವಾಣಿಜ್ಯ ನಗರವೆಂಬ ಕಿರ್ತಿ ಪಡೆಯಿತು. ದೇಶದ ಜನರಿಗೆ ಖಾರವನ್ನು ಪೂರೈಸಲು ಸುಮಾರು 50 ಖಾರವನ್ನು ತಯಾರಿಸುವ ಕಾರ್ಖಾನೆಗಳು ತೆಲೆ ಎತ್ತಿದವು. ಕೆಲಸವಿಲ್ಲದ ಕೈಗಳಿಗೆ ಕೆಲಸವನ್ನು ನೀಡಿತು. ಪ್ರಸಿದ್ದವಾದ ಮಸಾಲಾ ಕಂಪನಿಗಳಿಗೆ ಇಲ್ಲಿಯ ಖಾರದಪುಡಿ ಅನಿವಾರ್ಯವೆನಿಸಿತು. ವ್ಯಾಪರಕ್ಕಾಗಿ ಬಂದ ವ್ಯಾಪಾರಿಗಳನ್ನು ಉಪಚರಿಸಲು ಪ್ರಭಾತ ಭವನ, ಕೃಷ್ಣವಿಲಾಸ, ಸರ್ಕಲ್ ರೆಸ್ಟೊರೆಂಟ್, ಮೀನಾಕ್ಷಿ ಭವನ, ದರಬಾರ್ ಹೋಟೆಲ್, ಬೆಳಕೇರಿ ಹೋಟೆಲ್, ಗುರುಕೃಪಾ ಹಾಗೂ ಅನೇಕ ಹೋಟೆಲಗಳು ಹುಟ್ಟಿಕೊಂಡವು. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸೊಲಾರ್ ಪ್ಲ್ಯಾಂಟ್ ಸುಮಾರು 150 ಎಕರೆ ಜಮೀನನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾರಂಭಿಸಿ ಉದ್ಯೋಗವನ್ನು ಸೃಷ್ಟಿಸಲಾರಂಭಿಸಿತು. ಮೆಣಸಿನಕಾಯಿಂದ ಔಷದಿ ತಯಾರಿಸುವ ಘಟಕಗಳು ಪ್ರಾರಂಭವಾದವು. ಹೀಗೆ ಸಮೃದ್ಧವಾಗಿ ಬ್ಯಾಡಗಿ ಬೆಳೆಯುತ್ತಾ ಸಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.
~~ ಪ್ರಮೋದ ನಲವಾಗಲ ~~
ಹವ್ಯಾಸಿ ಇತಿಹಾಸ ಬರಹಗಾರ
9686168202
Comments
Post a Comment