ಹಾವೇರಿ ಪಂಚಾಯಿತಿ ಮಾತಿನ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆ......!!!!!
ಹಾವೇರಿ ಪಂಚಾಯಿತಿ ಮಾತಿನ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆ......!!!
ಪಂಚಾಯತಿ ಮಾಡಿ ಎಲ್ಲರನ್ನು ಸಮಾದಾನ ಮಾಡುವುದು ಎಂಬುದಾಗಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಈ ಮೇಲಿನ ಮಾತು ಸಾವಿರಾರು ವರ್ಷಗಳಷ್ಟು ಪುರಾತನವಾಗಿದ್ದು ಅದು ತನ್ನ ಪಾವಿತ್ರತೆಯಿಂದ ಸುತ್ತಮುತ್ತಲಿನ ಜನಕ್ಕೆ ನ್ಯಾಯವನ್ನು ನೀಡುತ್ತಿತ್ತು.
ಹಾವೇರಿಯ ಇತಿಹಾಸ ತಿಳಿಯಬೇಕಾದರೆ ಇಲ್ಲಿ ದೊರೆತ ಶಾಸನಗಳ ಅಧ್ಯಯನ ಅವಶ್ಯಕ. ಹಾವೇರಿ ನಗರದಲ್ಲಿ ಸುಮಾರು 28 ಶಾಸನಗಳು ಪತ್ತೆಯಾಗಿವೆ. ಅವುಗಳು ಸಾವಿರಾರು ವರ್ಷಗಳ ಹಿಂದಿನ ಇಲ್ಲಿಯ ಪರಿಸರವನ್ನು, ರಾಜರ ಆಡಳಿತವನ್ನು, ಸಂಸ್ಕೃತಿಯನ್ನು , ದೇವಾಲಯಗಳನ್ನು ಹಾಗೂ ಜನರ ಸ್ಥಿತಿಗತಿಗಳನ್ನು ಎಳೆ - ಎಳೆಯಾಗಿ ಬಿಡಿಸಿಡಲು ಸಹಕಾರಿಯಾಗಿವೆ. ಹಾವೇರಿ ಹೆಸರನ್ನು ಶಾಸನಗಳಲ್ಲಿ "ಪಾವರಿ, ಹಾವರಿ, ಹಾಹರಿ, ಹಾಗೂ ನಳಪುರಿ" ಎಂದು ಉಲ್ಲೇಖಿಸಲಾಗಿದೆ.
ಕಲ್ಲುಮಂಟಪದ ಬಳಿಯಿರುವ ಕ್ರಿ.ಶ 1157 ರ ಶಾಸನದಲ್ಲಿ "ಹರಿಯುವ ನೀರಿಗೆ ಅಡ್ಡಲಾಗಿ ಹಾವೊಂದು ಬಂದಿದ್ದರಿಂದ ಕೃತಾಯುಗದಲ್ಲಿ ನಳಚಕ್ರವತಿ೯ಯು ಕೆರೆಯೊಂದನ್ನು ನಿಮಿ೯ಸಿ" ಊರೊಂದನ್ನು ಕಟ್ಟಿದನು ಎಂದಿದೆ. ಆ ಕೆರೆಯನ್ನು ಶಾಸನಗಳಲ್ಲಿ ನಳಹಲ್ಲಕೆರೆಯೆಂದು ಕರೆಯಲಾಗಿದೆ.
ಈ ವಿಷಯನ್ನಾದರಿಸಿ ಒಂದು ಶಾಸನದಲ್ಲಿ ಈ ಊರನ್ನು "ನಳಪುರಿ"ಯೆಂದು ಉಲ್ಲೇಖಿಸಲಾಗಿದೆ. ಶಾಸನ ಕವಿಯೊಬ್ಬ ಹಾವೇರಿಯನ್ನು ನಾಲ್ಕನೂರು ಜನರಿರುವ ಅಗ್ರಹಾರ, ಬ್ರಹ್ಮನ ನಿವಾಸ, ವೇದಗಳ ನೆಲೆ, ಭೂಮಿಗೊಂದು ಅಲಂಕಾರ, ವಿದ್ಯಾಧಿದೇವತೆ ಸರಸ್ವತಿಯ ನೆಲೆವೀಡೆಂದು ಹೊಗಳಿದ್ದಾನೆ.
ಹಾವೇರಿಯು ಅಂದು ಬನವಾಸಿ ಪನ್ನಿಚ್ಛಾ೯ಸಿರಕ್ಕೆ (12000 ಗ್ರಾಮಗಳನ್ನೊಳಗೊಂಡ ಪ್ರಾಂತ) ಸೇರಿದ್ದ "ಪುಲಿಗೆರೆ-300" (ಈಗಿನ ಲಕ್ಷ್ಮೇಶ್ವರ) ಜಿಲ್ಲೆಗೆ ಸೇರಿತ್ತು. ಇದೊಂದು ಮುಖ್ಯಸ್ಥಳವಾಗದೆ ಸುಂಕದಧಿಕಾರಿಯೊಬ್ಬನ ಠಾಣೆಯಾಗಿತ್ತೆಂದು ರಾಣೇಬೆನ್ನೂರ ತಾಲೂಕಿನ ಗುಡ್ಡದಾನವೇರಿ ಗ್ರಾಮದ ಶಾಸನ ತಿಳಿಸುತ್ತದೆ.
ಕ್ರಿ.ಶ 1133 ರಲ್ಲಿಯ ಶಾಸನದಲ್ಲಿ ಶಾಸನ ಕವಿ"ಕಿರಿಯಮೂಕಣ" ಹಾವೇರಿ ಎಂತಹ ರಮಣೀಯ ಸ್ಥಳದಲ್ಲಿತ್ತೆಂದು ತಿಳಿಸುತ್ತಾನೆ. ನಾಲ್ಕನೂರ ಮಹಾಜನರಿರುವ ಅಗ್ರಹಾರ ಅಂದು ವಿದ್ಯಾಕೇಂದ್ರವಾಗಿತ್ತು.
ಹಾವೇರಿಯನ್ನು ನಾಲ್ಕನೂರು ಮಹಾಜನರಿರುವ ಅಗ್ರಹಾರ, ಭೂಮಿಗೆ ಅದೊಂದು ಅಲಂಕಾರ್", ಬ್ರಹ್ಮನ ನಿವಾಸಿ, ವೇದಗಳ ನೆಲೆ ಹಾಗೂ ವಿದ್ಯಾಧಿದೇವತೆ ಸರಸ್ವತಿಯ ನೆಲೆಬೀಡು ಎಂದು ಶಾಸನ ಕವಿಗಳು ಶಾಸನಗಳಲ್ಲಿ ವರ್ಣಿಸಿದ್ದಾರೆ.
ಇಲ್ಲಿ ವಾಸಿಸುತ್ತಿದ್ದ ಮಹಾಜನರೇ "ಹಾವೇರಿ ಪಂಚಾಯಿತಿ" ಮಾತಿನ ಕರ್ತೃುಗಳು. ಈ ಮಹಾಜನರು ಪಂಡಿತರು, ಸವ೯ ಶಾಸ್ತ್ರಗಳನ್ನೂ ಬಲ್ಲಿದರೂ, ನಿಷ್ಠಾವಂತ ಧರ್ಮಾಚರಣರೂ ಹಾಗೂ ಯುದ್ಧಗಳ ಸಮಯದಲ್ಲಿ ಕತ್ತಿಯನ್ನು ಸಹ ಝಳಪಿಸುತ್ತಿದ್ದರು. ಹೀಗಾಗಿ ರಾಜರು ಇವರನ್ನು ಹೆಚ್ಚು ಗೌರವಿಸುತ್ತಿದ್ದರು.
ನಾಲ್ಕನೂರ ಮಹಾಜನರಿಂದಾಗಿ ಹಾವೇರಿಯು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ತನ್ನ ವಿಶಿಷ್ಟವಾದ ಪಂಚಾಯಿತಿಗೆಯಿಂದ ಪ್ರಸಿದ್ದಿಯನ್ನು ಹೊಂದಿತ್ತು. ರಾಜ ಮಹಾರಾಜರ ಕಾಲದಲ್ಲಿ ನ್ಯಾಯದ ತೀರ್ಪುಗಳಿಗೆ ಅರಸನು ರಾಜ್ಯದ ಅತ್ಯುಚ್ಛಧಿಕಾರಿಯಾಗಿದ್ದನು, ಮಂತ್ರಿಗಳು, ವಿದ್ವಾಂಸರು ಮತ್ತು ಧರ್ಮಗುರುಗಳೊಡನೆ ಆಲೋಚಿಸಿ ತೀರ್ಪಿನ ನಿರ್ಣಯವನ್ನು ಕೈಗೊಳ್ಳುತ್ತಿದ್ದನು.
ವಿಪರ್ಯಾಸವೆಂದರೆ “ಹಾವೇರಿ ಪಂಚಾಯಿತಿ” ಎಂಬ ರೂಢಿ ಮಾತಿನ ಅರ್ಥವನ್ನು ಅನೇಕರು ತಮ್ಮದೆ ರೀತಿಯಲ್ಲಿ ಅರ್ಥೈಸುತ್ತಾರೆ. ಆದರೆ ಇದರ ಇತಿಹಾಸ “ಸೇಉಣರ (ದೇವಗಿರಿ ಯಾದವರು) ಕಾಲದಷ್ಟ ಹಳೆಯದಾಗಿದೆ.
ಸೇಉಣರು ತಮ್ಮ ರಾಜ್ಯವನ್ನು ನರ್ಮದೆಯಿಂದ ತುಂಗಭದ್ರೆವರೆಗೆ ವಿಸ್ತರಿಸಿ ಆಳ್ವಿಕೆಯನ್ನು ನಡೆಸಿದರು.
ತುಂಗಭದ್ರೆಯು ಹೊಯ್ಸಳ ಮತ್ತು ಸೇಉಣ ಅರಸರ ಗಡಿರೇಖೆಯಾಗಿತ್ತು.
ಸೇಉಣರು ತಮ್ಮ ಅಧಿಕಾರವನ್ನು ವಿಕೇಂದ್ರಿಕರಿಸಿ ಆಡಳಿತವನ್ನು ಸುಲಭಗೊಳಿಸಿದ್ದರು. ಇವರ ಆಡಳಿತದ ಬಹುಮುಖ್ಯ ಅಂಶವೆಂದರೆ “ಗ್ರಾಮಸಭೆಗಳು.” ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ
ಗ್ರಾಮಸಭೆಗಳಿದ್ದು, ಅದು ಮಹಾಜನರುಗಳನ್ನು ಒಳಗೊಂಡಿರುತ್ತಿತ್ತು ಮಹಾಜನರೆಂದರೆ- ದೊಡ್ಡವರು,
ಹಿರಿಯರು, ಶ್ರೇಷ್ಠರು, ಪೂಜ್ಯರು, ವಿದ್ವಾಂಸರು, ಧರ್ಮಜ್ಞ ಎಂದರ್ಥ).
ಆ ಕಾಲದಲ್ಲಿ ಸೆಉಣರು ಸುಮಾರು ಸಾವಿರ ವರ್ಷಗಳಷ್ಟು ಹಿಂದೆಯೇ "ಹಾವೇರಿಯಲ್ಲಿ ಅಗ್ರಹಾರವನ್ನು ನಿರ್ಮಿಸಿ "400" (ನಾಲ್ಕನೂರು) ಮಹಾಜನರನ್ನು ಈ ಪ್ರದೇಶದಲ್ಲಿ
ವ್ಯಾಜ್ಯಗಳು ನಡೆದಾಗ ಅವುಗಳ ನ್ಯಾಯನಿರ್ಣಯಕ್ಕಾಗಿ ನಿಯೋಜನೆಗೊಳಿಸಿದ್ದರು.
ಪುರಾತನ ಕಾಲದ ದೇವಾಲಯಗಳು ವಿಶಾಲವಾಗಿದ್ದು ದೊಡ್ಡಮಂಟಪಗಳನ್ನು ಒಳಗೊಂಡಿರುತ್ತಿತ್ತು. ಇದಕ್ಕೆ ಕಾರಣ ನ್ಯಾಯ ಏಜಾರಣಿ ಸಭೆಗಳು ಇಂತಹ ಪವಿತ್ರ ಸ್ಥಳಗಳಲ್ಲಿಯೆ ನೆಡೆಯುತ್ತಿದ್ದವು (ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ, ವಿರಭದ್ರೇಶ್ವರ ದೇವಸ್ಥಾನ ಮತ್ತು ರಾಣಿಬೆನ್ನೂರ, ಬಂಕಾಪುರದಲ್ಲಿರುವ ಅನೇಕ ದೇವಸ್ಥಾನಗಳು).
ಇಂತಹ ನ್ಯಾಯ ನಿರ್ಣಯಕ್ಕೆ ಘನತೆ ಮತ್ತು ಪಾವಿತ್ರ್ಯತೆ ಬರುತ್ತಿತ್ತು. "ಹಾವೇರಿ ಪಂಚಾಯಿತಿಗೆ” ತನ್ನದೆ ಆದ ವಿಶೇಷ
ಸ್ಥಾನವಿತ್ತು ಅದಕ್ಕೆ ಕಾರಣ ಇದೇ "400" (ನಾಲ್ಕನೂರು) ಮಹಾಜನರ ನ್ಯಾಯ ತೀರ್ಪಿನ ಶೈಲಿ, ಅವರು
ಕೈಗೊಳ್ಳುತ್ತಿದ್ದ ಕಠಿಣ ರೀತಿಯ ತಿರ್ಮಾನಗಳು ಹಾಗೂ ತಪ್ಪು ಮಾಡಿದವರನ್ನು ತಮ್ಮ ತಪ್ಪಿನಿಂದ
ತಪ್ಪಿಸಿಕೊಳ್ಳಲು ಅವಕಾಶ ಕೊಡುತ್ತಿರಲಿಲ್ಲ.
ವ್ಯಾಜ್ಯದಲ್ಲಿ ಸಾಕ್ಷಾಧಾರಗಳು ಇಲ್ಲದಿದ್ದಾಗ ಅವರು ದೈವಸಹಾಯಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಅಂದರೆ ದೈವ ಸಹಾಯದಿಂದ ಪಕ್ಷ ಮತ್ತು ಪ್ರತಿಪಕ್ಷಗಳ ಪ್ರಾಮಾಣಿಕತೆಯನ್ನು “ಆಣೆ” (ಪ್ರಮಾಣದ) ಮುಖಾಂತರ ವ್ಯಾಜ್ಯಗಳನ್ನು ನಿರ್ಣಯಿಸುತ್ತಿದ್ದರು. ಇನ್ನಿತರ ಸಮಯದಲ್ಲಿ ವ್ಯಾಜ್ಯದ ಕಠಿಣತೆಯನ್ನಾಧರಿಸಿ ಸಪ್ತ ಅಥವಾ ಎಳು ದಿವ್ಯಗಳನ್ನು ಅವಲಂಬಿಸಿ ತೀರ್ಪನ್ನು ನೀಡುತ್ತಿದ್ದರು.
ಸಪ್ತ ದಿವ್ಯಗಳೆಂದರೆ ಕೊಪ್ಪ (ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈಯನ್ನು ಅದ್ದುವುದು), ತಂಡುಲ (ನೆನೆಸಿದ ಅಕ್ಕಿಯನ್ನು ಮುಕ್ಕುವುದು), ಕಾದ ಕಬ್ಬಿಣ ಅಥವಾ ಕೆಂಡವನ್ನು ಹಿಡಿಯುವುದು, ತಪ್ತಮಾಶ (ಕುದಿಯುವ ತುಪ್ಪದ ಪಾತ್ರೆಯಿಂದ ಚಿನ್ನದ ಉಂಗುರವನ್ನು
ಮೇಲೆತ್ತುವುದು), ಜಲ (ನೀರಿನಲ್ಲಿ ಬಹಳ ಸಮಯದವರೆಗೆ ಮುಳಿಗಿ ಕುಳಿತುಕೊಳ್ಳುವುದು) ಮತ್ತು ವಿಷ (ವಿಷವನ್ನು
ತಿನ್ನುವುದು).
ಆ ಸಮಯದಲ್ಲಿ ಆರೋಪಿಯ ಮೇಲೆ ಇವುಗಳು ಪರಿಣಾಮ ಬೀರದಿದ್ದಾಗಿ ಅವನನ್ನು ನಿರಪರಾದಿಯಂದು ತಿರ್ಮಾನಿಸುತ್ತಿದ್ದರು. ಇದಕ್ಕಾಗಿಯೇ ಅವರು ನ್ಯಾಯದ ತೀರ್ಪಿನ ಪೂರ್ವದಲ್ಲಿ ವಾದಿ ಮತ್ತು ಪ್ರತಿವಾದಿಗಳಿಂದ "ಆಣಿ ಓಲೆಯನ್ನು (affidavit) ತೆಗೆದುಕೊಂಡು ತಮ್ಮ ನಿರ್ಣಾಯಕ್ಕೆ ಬದ್ಧರಾಗಿರಲು ಸೂಚಿಸುತ್ತಿದ್ದರು.
ಈ ಪ್ರದೇಶದ ಸುತ್ತಮುತ್ತಲಿನ ಜನರು ತಮ್ಮ ವ್ಯಾಜ್ಯವನ್ನು ಹಾವೇರಿ ಅಗ್ರಹಾರದ ಮಹಾಜನರ ಹತ್ತಿರ ಬಗೆಹರಿಸಿಕೊಳ್ಳುತ್ತಿದ್ದರು. ಇಂತಹ ಶಿಪಿನ ಮೂಲಗಳ ಆಧಾರವನ್ನು ಹುಡುಕುತ್ತಾ ಹೋದಾಗ ಇಂದಿಗೂ
ಸಹ ಇಂತಹ ಪಂಚಾಯಿತಿಗಳು ಹಾವೇರಿಯ ವೀರಭದ್ರೇಶ್ವರ, ಪುರಸಿದ್ದೇಶ್ವರ ಮತ್ತು ಇಜಾರಿಲಕಮಾಪುರದ ದೇವಸ್ಥಾನಗಳಲ್ಲಿ ಆಗಾಗ ನೆಡೆಯುತ್ತಿರುತ್ತವೆ ಎನ್ನುವುದೆ ವಿಶೇಷ.
ಮಹಾಜನರು ಕನ್ಯಾಯತಿರ್ಮಾನದ ವೇಳೆ ಪಾವಿತ್ರ್ಯತೆ ಮತ್ತು ಶುಭ್ರತೆಯನ್ನು ಕಾಪಾಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ
ಹಾವೇರಿಯ“ಅಗ್ರಹಾರ" ಬಾವಿಯು ಮೂಲ ಸಾಕ್ಷಿಯಾಗಿದೆ (ಆದರೆ ಈಗ ಇದನ್ನು ಮುಚ್ಚಲಾಗಿದೆ). ಮಾಗಾವಿ ಪೇಟ್ರೊಲ್ ಬಂಕಿನ ಮುಂಭಾಗದಲ್ಲಿರುವ ತೇರು ಬೀದಿ ಹನುಮಂತ ದೇವರ ಮೂಲ ಅರ್ಚಕರು "ಮಹಾಜನರಾಗಿದ್ದರೆಂಬ" ಪ್ರತೀತಿ ಇನ್ನೂ ಜೀವಂತವಾಗಿದೆ.
ಪ್ರಾಚೀನ ಕಾಲದಲ್ಲಿ ಹಾವೇರಿಯಲ್ಲಿ ಮಹಾಜನರು ನೀಡುತ್ತಿದ್ದ ನ್ಯಾಯಯುತವಾದ ತೀರ್ಪಿನಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ "ಹಾವೇರಿ ಪಂಚಾಯಿತಿ" ಎಂದು ಪ್ರಸಿದ್ದಿಯನ್ನು ಪಡೆದಿತ್ತು.
#ಪ್ರಮೋದ_ನಲವಾಗಲ
9686168202
Comments
Post a Comment