ಹಾವೇರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆಯನ್ನು ತೊಲಗಿಸುವಲ್ಲಿನಡೆದ ಹೋರಾಟಗಳು(ಡಾ ಬಿ.ಆರ್.ಅಂಬೇಡ್ಕರ್‌ ನೆನಪಿಗಾಗಿ).......!!!

#ಹಾವೇರಿ_ಜಿಲ್ಲೆಯಲ್ಲಿ_ಅಸ್ಪೃಶ್ಯತೆಯನ್ನು_ತೊಲಗಿಸುವಲ್ಲಿನಡೆದ_ಹೋರಾಟಗಳು
(#ಡಾ_ಬಿ_ಆರ್_ಅಂಬೇಡ್ಕರ್‌_ನೆನಪಿಗಾಗಿ)

ಮನುವಿನ ಸಾಮಾಜಿಕ ವ್ಯವಸ್ಥೆಯಲ್ಲಿ ಚಾತುರ್ವರ್ಣದ ಹೊರಗೆ ಇದ್ದವರದೊಂದು ಮತ್ತು ಚಾತುರ್ವರ್ಣದ ಒಳಗೆ ಇದ್ದವರದು ಇನ್ನೊಂದು ಎಂಬ ಎರಡು ಸಮಾಜಿಕ ವಿಭಾಗಗಳಿದ್ದವು. ಅವುಗಳೆಂದರೆ ಬ್ರಾಹ್ಮಣ, ಕ್ಷೇತ್ರಿಯ, ವೈಶ್ಯರು, ಶೂದ್ರ ಮತ್ತು ಅಂತ್ಯಜ(ಅಸ್ಪೃಶ್ಯ). ಇವುಗಳಲ್ಲಿ ವೇದಗಳ ಪ್ರಾರಂಭ ಕಾಲದಿಂದ ಹೆಚ್ಚು ಶೋಷಣೆಗೆ ಒಳಗಾದವನು ಇದೇ ಅಂತ್ಯಜರು. ಭಾರತದಲ್ಲಿ ಬ್ರಿಟಿಷರನ್ನೊಳಗೊಂಡು ಮನುವಿನಿಂದ ನಿರೂಪಿತವಾದ ಅಸಮಾನತೆಯ ನಿಯಮವೇ ನಾಡಿನ ಶಾಸನವಾಗಿತ್ತು ಎನ್ನುವುದು ಬಹಳಷ್ಟು ವಿದೇಶಿಯರಿಗೆ ತಿಳಿದಿರಲಿಲ್ಲ.

ಮರಾಠ ಹಾಗೂ ಪೇಶ್ವೆಗಳ ಆಳ್ವಿಕೆಯಲ್ಲಿ ನಗರದೊಳಗೆ ಸಾಯಂಕಾಲ ಮೂರು ಗಂಟೆ ಮತ್ತು ಮುಂಜಾನೆ ಒಂಬತ್ತು ಗಂಟೆಯ ಮಧ್ಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅವರು 'ನಮಸ್ಕಾರ' ಎಂಬ ಪದವನ್ನು ಬಳಿಸದಂತೆ ನಿರ್ಬಂಧ ಹೇರಲಾಗಿತ್ತು. ಅವರ ಉಗುಳು ಪುರೋಹಿತಷಾಹಿಗಳ ಕಾಲಿಗೆ ತಗುಲಬಾರದು ಹೀಗಾಗಿ ಅಸ್ಪೃಶ್ಯರು ಕೊರಳಿಗೆ ಮಣ್ಣಿನ ಮಡಿಕೆ ಅಥವಾ ತೆಂಗಿನ ಚಿಪ್ಪನ್ನು ಕೊರಳಿಗೆ ಕಟ್ಟಿಕೊಳ್ಳುವುದು ಕಡ್ಡಾಯವಾಗಿತ್ತು. ಬಹುಶಃ ಹೀಗಾಗಿಯೇ ನೆಲದಲ್ಲಿ ಹುಟ್ಟುವ ಉಳ್ಳಾಗಡ್ಡಿ, ಆಲುಗಡ್ಧೆ ಮತ್ತು ಬೆಳ್ಳೊಳ್ಳಿಯನ್ನು ಪುರೋಹಿತಷಾಹಿಗಳು ತಿನ್ನುತ್ತಿದ್ದಿಲ್ಲ. ಹಬ್ಬದ ದಿನಗಳಲ್ಲಿ   ಬಟ್ಟೆ ಅಂಗಡಿಯವನು ಅಸ್ಪೃಶ್ಯರು ಬಂದರೆ ಅವರಿಗೆ ಕಡ್ಡಾಯವಾಗಿ ಹರಿದ ಬಟ್ಟೆಗಳನ್ನೇ ಕೊಡಬೇಕಾಗಿತ್ತು. ಅಸ್ಪೃಶ್ಯ ಎಂದು ಗುರುತು ಹಿಡಿಯಲು ಕಸಬರಗಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಬಿಳುವುದು ಶಾಸನವಾಗಿತ್ತು. ಮಹಾರಾಷ್ಟ್ರದಲ್ಲಿ ಆ ವ್ಯಕ್ತಿ ಕೈಗೆ ಹಾಗೂ ಕುತ್ತಿಗೆಗೆ ಕರಿ ದಾರವನ್ನು ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು. ಉನ್ನತ ಜಾತಿಯವನು ಬಂದರೆ ಅಸ್ಪೃಶ್ಯನ ನೆರಳ ಅವನ ಮೇಲೆ ಬಿಳದ ಹಾಗೆ ಮಂಡೆಯುರಬೇಕಾಗಿತ್ತು. ಕೆಲವು ಕಡೆ ಧನದ ಕೊಂಬುಗಳನ್ನು ತೆಲೆಯ ಮೇಲೆ ಹಾಕಿಕೊಂಡಿರಬೇಕಾಗಿತ್ತು. ಅವರು ಸಂಸ್ಕೃತ ಓದುವಂತಿಲ್ಲ,  ಶಾಲೆಗೆ ಹೋಗುವಂತಿರಲಿಲ್ಲಾ. ಅವರು ಜೀತದಾಳಾಗಿ ದುಡಿಯಬೇಕಾಗಿತ್ತು. ಅವರನ್ನು ಸಂತೆಯಲ್ಲಿ ತಂದು ಮಾರುವ ಮನಕುಲಕುವ ಪದ್ದತಿ ಜಾರಿಯಲ್ಲಿತ್ತು. ದೇವದಾಸಿ ಎಂಬ ಅನಿಷ್ಟ ಪದ್ದತಿಯನ್ನು ಇವರ ಮೇಲೆ ಹೇರಲಾಗಿತ್ತು. ಅವರಿಗೆ ಹುಟ್ಟಿದ ಮಕ್ಕಳು ತಂದೆಯ ಹೆಸರನ್ನು ಎಲ್ಲಿಯೂ ಬಳಿಸುವಂತಿಲ್ಲಾ ಎಂಬ ಪದ್ದತಿಗೆ ಅಪ್ಪನನ್ನೆ ನೋಡದೆ ಮಣ್ಣಲ್ಲಿ ಮಣ್ಣಾದ ಜೀವಗಳೇಷ್ಟು ಎಂಬುದಕ್ಕೆ ದಾಖಲೆಗಳಿಲ್ಲಾ. ದೇವಸ್ಥಾನಗಳಿಗೆ ನಿರ್ಬಂಧಿಸಲಾಗಿತ್ತು. ನಾಯಿಗೆ ಅವಕಾಶವಿರುವ ಕೆರೆಗೆ ಇವರನ್ನು ಬಿಟ್ಟುಕೊಳ್ಳುತ್ತಿರಲಿಲ್ಲಾ ಎಂದರೆ ಆ ಮನುಷ್ಯನು ಬದುಕುವ ಆಸೆಯನ್ನೇ ಕಳೆದುಕೊಂಡಿರಬಹುದು. 

ಈ ವ್ಯವಸ್ಥೆ ನಮ್ಮ ಹಾವೇರಿ ಜಿಲ್ಲೆಯನ್ನೊಳಗೊಂಡಂತೆ ಸಂಪೂರ್ಣ ಹಿಂದೂಸ್ತಾನದಲ್ಲಿ ಅಂದು ಗಟ್ಟಿಯಾಗಿ ನೆಲೆಗೊಂಡಿತ್ತು. ಇದನ್ನು ವಿರೋಧಿಸುವರ ಮಾರಣಹೋಮ ನಡೆದಿತ್ತು. ತುಳಿತಕ್ಕೊಳಗಾದ ಈ ಶೂದ್ರ ಸಮಾಜವನ್ನು ಮೇಲೆತ್ತಲು ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರಲ್ಲಿ ರಮಾನುಜಾಚಾರ್ಯರು, ಬಸವಣ್ಣನವರು, ಮಹಾತ್ಮ ಗಾಂಧಿಯವರು, ಡಾ.ಬಿ.ಆರ್ ಅಂಬೇಡ್ಕರ್‌, ಡಾ.ಬಾಬು ಜಗಜೀವನ್ ರಾಮ್, ಮಹಾತ್ಮ ಪುಲೆ, ಶಾವು ಮಹಾರಾಜ, ಮೈಸೂರ ಮಹಾರಾಜರು, ಎಲ್.ಜಿ ಹಾವನೂರ, ರಾಮನೋಹರ ಲೂಹಿಯಾ  ಹಾಗೂ ಅನೇಕರು. 

ಇವರ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬ ಮಹಾದಾಸೆಯಿಂದ ಡಾ.ಬಿ.ಆರ್. ಅಂಬೆಡ್ಕರ್ ಅವರು ದೇಶಾದ್ಯಂತ ಹೋರಾಟದ ಹೊಸ ಅಲೆಯನ್ನೆ ಸೃಷ್ಠಿಸಿದರು. ಕರ್ನಾಟಕದಲ್ಲಿ ಇದರ ವ್ಯಾಪಕತೆ ಹೆಚ್ಚಾಗಿದ್ದು ಮಹಾತ್ಮ ಗಾಂಧಿಯವರಿಂದಾಗಿ. 

ಹಾವೇರಿ ಜಿಲ್ಲೆಯಲ್ಲಿ ಇತಿಹಾಸ ಪೂರ್ವಕಾಲದಿಂದಲೂ ಶೂದ್ರರ ಸಂಖ್ಯೆ ಹಳ್ಳೂರು, ಮೊಟೇಬೆನ್ನೂರ, ಹಿರೇಬಾಸೂರ, ಬಂಕಾಪುರ, ಅಗಡಿ, ಕಾಕೋಳ, ಕಾಗಿನೆಲೆ, ಹನುಮಾಪುರ, ಚೌಡಯ್ಯದಾನಪುರ ಹಾಗೂ ರಟ್ಟಿಹಳ್ಳಿಯಲ್ಲಿ ಹೇರಳವಾಗಿತ್ತು. ಅವರ ಕುರುಹುಗಳು ಅಲ್ಲಿ ಇನ್ನೂ ಜೀವಂತವಾಗಿವೆ. ರಾಣೇಬೆನ್ನೂರಿನ 9 ನೇ ಶತಮಾನದ ಶಾಸನದಲ್ಲಿ ಇಲ್ಲಿಯ ಹರಿಜನಕೇರೆಯನ್ನು "ಮಾಸಿಯಗೆರೆ" ಎಂದು ಕರೆಯಲಾಗಿದೆಯೆಂದರೆ ಅವರು ಈ ಪ್ರದೇಶದಲ್ಲಿಯೂ ವಾಸವಾಗಿದ್ದರು ಎನ್ನಬಹುದು. 

1902 ರ ಕುಂಚೂರ ಶಾಲಾ ದಾಖಲಾತಿಯಲ್ಲಿ ಹಾಗೂ ಶತಮಾನವನ್ನು ಪೂರೈಸಿದ ಹಾವೇರಿ ಜಿಲ್ಲೆಯ ಅನೇಕ ಶಾಲಾ ದಾಖಲೆಗಳಲ್ಲಿ "ಅಸ್ಪೃುಶ್ಯ" ಎಂಬ ಶಬ್ದ ಈಗಲೂ ಸಹ ಶೋಷಣೆಯ ಕಥೆಯನ್ನು ಜೀವಂತವಾಗಿಟ್ಟುಕೊಂಡಿವೆ.

1933 ರ ಅಂತ್ಯದಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ಗಾಂಧೀಜಿಯವರು ಹರಿಜನ ನಿಧಿಯನ್ನು ಸಂಗ್ರಹಿಸಲು ಹಾಗೂ ಅವರಿಗೆ ಕೆರೆಗೆ ಹಾಗೂ ದೇವಸ್ಥಾನಗಳಿಗೆ ಮುಕ್ತ ಅವಕಾಶ ದೊರೆಯುವಂತೆ ಮಾಡಲು ಜನಜಾಗೃತಿಗಾಗಿ 1/03/1934 ರಂದು ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಆವರಣಕ್ಕೆ ಅಕ್ಕಿಆಲೂರ, ದೇವಿಹೊಸೂರ ಮಾರ್ಗವಾಗಿ ಬಂದಿದ್ದರು. ಅಂದು ರವೀಂದ್ರನಾಥ ಟ್ಯಾಗೋರವರ ತೈಲಚಿತ್ರವನ್ನು ಅನಾವರಣಗೊಳಿಸಿ ಹರಿಜನರಿಗೆ ಈ ಶಾಲೆಯಲ್ಲಿ ಮುಕ್ತಅವಕಾಶ ನೀಡಬೇಕೆಂದರು( ಈ ಹೈಸ್ಕೂಲನಲ್ಲಿ ಪಾಸಾದ ಪ್ರಥಮ ಹರಿಜನ ವಿದ್ಯಾರ್ಥಿ ವೈ.ಆರ್.ನರಗುಂದ), ಹಾಗೇಯೇ ಇಲ್ಲಿಯ ಹೊಂಡಕ್ಕೆ ಹಾಗೂ ದೇವಸ್ಥಾನಗಳಿಗೂ ಅವರನ್ನು ಬಿಟ್ಟುಕೊಳ್ಳಬೇಕೆಂದು ಜನರಿಗೆ ತಿಳಿಹೇಳಿದರು. ಅಂದು ಬ್ಯಾಡಗಿ ಹಾಗೂ ಮೋಟೆಬೆನ್ನೂರಿನಲ್ಲಿ ಇದೆ ಮಾತನ್ನು ಪುನರಾವರ್ತನೆಗೊಳಿಸಿದರು. ರಾತ್ರಿಯ ವೇಳೆ ಹೊಂಡದ ಮಠದಲ್ಲಿ ಜಯದೇವ ಜಗದ್ಗುರುಗಳೊಡನೆ ಸಮಾಲೋಚನೆ ನಡೆಸಿ ಬಸವಣ್ಣನವರ ತತ್ತ್ವ ಸಿದ್ದಾಂತಗಳನ್ನು ಕೊಂಡಾಡಿ ಕಾಗಿನೆಲೆಯ ರಸ್ತೆಯಲ್ಲಿರುವ ಮುರಘ ಮಠದಲ್ಲಿ ವಾಸ್ತವ್ಯ ಹೂಡಿದರು. ಇದಕ್ಕಿಂತ ಮೊದಲು ಹೊಸಮನಿ ಸಿದ್ದಪ್ಪನವರು ಹರಿಜನರು ತಮ್ಮ ಮನೆಯ ತುಂಬಾ ಅಡ್ಡಾಡಲು ಅವಕಾಶ ನೀಡಿದ್ದರು. ಹೀಗಾಗಿಯೇ ಅವರ ಮಗಳ ಮದುವೆಯನ್ನು ಅಡ್ಡಾಡಿ ಮಾಡಿದ್ದು ಇದೇ ಶೂದ್ರ ವರ್ಗದವರು ಎಂದು ಎಲ್ಲರ ಮುಂದೆ ಇವರನ್ನು ಪ್ರೀತಿಯಿಂದ ಕೊಂಡಾಡುತ್ತಿದ್ದರು. ಸಂಗೂರ ಕರಿಯಪ್ಪನವರು ಗಾಂಧೀಜಿಯವರ ಪ್ರೇರಣೆಯಿಂದಲೆ ಅಂತರಜಾತಿ ವಿವಾಹವಾದದ್ದು ಸ್ಮರಣಿಯ. ಗಾಂಧೀಜಿಯವರು "ಠಕ್ಕರಭಾಪು" ಅವರ ಅಧ್ಯಕ್ಷತೆಯಲ್ಲಿ ' ಅಖಿಲ ಭಾರತ ಹರಿಜನ ಸೇವಕ ಸಂಘ' ರಚಿಸಿ ಹಿರೇಕೆರೂರ ತಾಲೂಕಿ ಕಛ್ಚವಿ ಗ್ರಾಮದ ಸರದಾರ ವೀರನಗೌಡರನ್ನು ಕರ್ನಾಟಕ ಶಾಖೆಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಹುಬ್ಬಳ್ಳಿಯ ಹರಿಜನ ಬಾಲಿಕಾಶ್ರಮದ ಕಾರ್ಯದರ್ಶಿಯನ್ನಾಗಿ ಮಾಡಿದರು. ಈ ಆಶ್ರಮಕ್ಕೆ ಮೋಟೆಬೆನ್ನೂರ, ಬ್ಯಾಡಗಿ, ಹೊಸರಿತ್ತಿ, ಕೊರಡುರು, ಕರ್ಜಗಿ, ರಾಣೇಬೆನ್ನೂರ, ಹಂಸಬಾವಿ ಹಾಗೂ ಮುಂತಾದ ಪ್ರದೇಶಗಳಿಂದ ಹರಿಜನ ವಿದ್ಯಾರ್ಥಿನಿಯರನ್ನು ಶಿಕ್ಷಿತರನ್ನಾಗಿ ಮಾಡಲಾಯಿತು. ಕಾಕೋಳ, ಹಾವೇರಿ, ಕೊರಡುರ, ಸಂಗೂರ, ಹೊಸರಿತ್ತಿ, ಮುಂತಾದ ಊರುಗಳಲ್ಲಿ ಹರಿಜನ ಆಶ್ರಮಗಳು ಪ್ರಾರಂಭವಾದವು. 1936 ರಲ್ಲಿ ಅಖಿಲ ಭಾರತ ಹರಿಜನ ಸೇವಕ ಸಂಘದ ಅದ್ಯಕ್ಷರು (ಅವರ ಹೆಸರು ಬಾವಿಯ ಫಲಕದಲ್ಲಿ ಇನ್ನೂ ಜೀವಂತವಾಗಿದೆ) ಒಂದು ಸಾವಿರ ರೂಪಾಯಿ ಮಂಜೂರ ಮಾಡಿದರು. ಈ ಹಣದಿಂದ 'ಕಾಕೋಳ' ಗ್ರಾಮದಲ್ಲಿ ಸರ್ವರ ಉಪಯೋಗಕ್ಕಾಗಿ ಬಾವಿಯೊಂದನ್ನು ತೊಡಲಾಯಿತು. ರಾಣೇಬೆನ್ನೂರನಲ್ಲಿ ಹನುಮಂತನಾಯ್ಕ.ದೊ.ನಲವಾಗಲ ಮುಂದಾಳತ್ವದಲ್ಲಿ 1928 ರಿಂದ ಅಸ್ಪೃಶ್ಯ ಹಾಗೂ ದೇವದಾಸಿ ಎಂಬ ಅನಿಷ್ಟ ಪದ್ದತಿಯ ವಿರುದ್ದ ಹೋರಾಟ ಪ್ರಾರಂಭವಾಯಿತು. ಇಲ್ಲಿಯ ಬಾವನ ಮಠದಲ್ಲಿ ಚೌಡವ್ವ ಎಂಬವಳಿಗೆ 'ಮುತ್ತನ್ನು' ಕಟ್ಟುತ್ತಿರುವಾಗ ಅದನ್ನು ಖಂಡಿಸಿ ಮುನಸುಬ್ ಕೋರ್ಟ್‌ನಲ್ಲಿ ದಾವಾ ಹೂಡಿ ವಿಜಯಶಾಲಿಗಳಾದರು. ಇವರಿಗೆ ಸತತವಾಗಿ ಕುರುಬರ ಕರಿಯಪ್ಪ ಹುಚ್ಚಣ್ಣನವರ ಬೆಂಬಲ ನೀಡುತ್ತಿದ್ದದ್ದು ಸ್ಮರಣಿಯ. 1946 ರಲ್ಲಿ ರಾಣೇಬೆನ್ನೂರ ತಾಲೂಕು ಮತಕ್ಷೇತ್ರದಲ್ಲಿ ನಡೆದ ಮುಂಬಯಿ ವಿಧಾನ ಸಭೆಯ ಚುಣಾವಣೆಯಲ್ಲಿ ಶಿಕ್ಷಿತರಲ್ಲದ ಅಸ್ಪೃಶ್ಯ ಮಹಿಳೆಯಾದ 'ಸಾಂಬ್ರಾಣಿ ಎಲ್ಲವ್ವ' ಮಹಿಳಾ ಮೀಸಲು ಕ್ಷೇತ್ರದಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷರ ಪತ್ನಿಯನ್ನು ಸೋಲಿಸಿದ್ದನ್ನು ಗಮನಿಸಿದಾಗ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೋರಾಟದ ಪ್ರತಿಫಲ ಇದಾಗಿದೆ ಎನಿಸುತ್ತದೆ. 1956 ರಲ್ಲಿ ಇಂದಿರಾಗಾಂಧಿಯವರ ಪ್ರವಾಸದ ಪ್ರತಿಫಲವಾಗಿ ರಾಣೇಬೆನ್ನೂರನಲ್ಲಿ, ಹನುಮನಮಟ್ಟಿಯಲ್ಲಿ ಹಾಗೂ ನೂಕಾಪುರದಲ್ಲಿ ಹರಿಜನರಿಗಾಗಿ ಮನೆ ನಿರ್ಮಾಣಗೊಂಡವು. ಇತ್ತೀಚಿಗೆ    ತುಳಿತಕ್ಕೊಳಗಾದ ಆ ಜನರು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಾಮಜಿಕ ಸ್ಥಿತಿಗತಿಯಲ್ಲಿ ಸದೃಡರಾಗುತ್ತಿದ್ದಾರೆಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ ಹೋರಾಟದ ಪ್ರತಿಫಲವೆನ್ನಬಹುದು.  ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸರ್ವರಲ್ಲಿಯು ಸಮಾನತೆಯನ್ನು ತರುವುದು, ನೆಲೆಯಿಲ್ಲದ ಈ ಕುಲಕೆ ಬೆಲೆಕೊಡದೆ ಅತ್ಯಮೂಲ್ಯವಾದ ಮಾನವಿಯ ಧರ್ಮಗಳನ್ನು ಜಗಕೆ ಸಾರುವ ಉದ್ದೇಶಕ್ಕಾಗಿ ಅವರ ಜಯಂತೋತ್ಸವ ಬೇಕಾಗಿದೆ.

 - ಪ್ರಮೋದ ಎಸ್.ನಲವಾಗಲ-
    ~~~9686168202~~~

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!