ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ ರಾಣೇಬೆನ್ನೂರ ನಗರ ಸಭೆಗೆ ಉಪಾಧ್ಯಕ್ಷರಾಗಿದ್ದರು.


ದಕ್ಷಿಣ ಆಫ್ರಿಕಾದ ಸಂವಿದಾನ ರಚಿಸಿಕೊಟ್ಟು ಅಲ್ಲಿಯ ಸಂವಿಧಾನದ ಪಿತಾಮಹಾ ಅನಿಸಿಕೊಂಡಂತಹ ವ್ಯಕ್ತಿ ರಾಜಕೀಯವಾಗಿ ಸಂಪೂರ್ಣವಾಗಿ ಬೆಳೆದದ್ದು ಇದೇ ರಾಣೇಬೆನ್ನೂರಿನಲ್ಲಿ. ರಾಜಕೀಯ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಂಬಂತೆ  ನಗರ ಸಭೆಗೆ 1958 ರಲ್ಲಿ ಉಪಾಧ್ಯಕ್ಷರಾದರು. ಅವರಿಗಿದ್ದ ಅಪರಮಿತ ಜ್ಞಾನದಿಂದಾಗಿ 1975 ರಲ್ಲಿ ಹಿಂದೂಳಿದ ಆಯೋಗಕ್ಕೆ ಚೇರಮನ್ ಆಗಿ ಹಿಂದೂಳಿದ ವರ್ಗಗಳ ಜನರಿಗಾಗಿ ವರದಿಯನ್ನು ಮಂಡಿಸಿದರು. ಆ ವರದಿ ಇಂದಿಗೂ ಸಹ ಹಿಂದೂಳಿದ ವರ್ಗಗಳ ಬೈಬಲ್ ಎನಿಸಿಕೊಂಡಿದೆ. 

 ದಿ.ಎಲ್. ಜಿ ಹಾವನೂರ ಇವರುಗಳು ಈಗಿನ ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಬಡ ಸ್ವಾತಂತ್ರ ಹೋರಾಟಗಾರರ ಕುಟುಂಬದಲ್ಲಿ ಕ್ರಿ.ಶ 1925 ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸಕ್ಕರಿ ಬಾಳಾಚಾರ್ಯರ, ಶಿಶುನಾಳ ಶರೀಫ್ ಸಾಹೇಬರ, ಗಳಗನಾಥರ ಹಾಗೂ ಅಲ್ಲಮ ಪ್ರಭುಗಳ ಆಶೀರ್ವಾದ ಅವರಿಗಾಗಿತ್ತು. ಹುಟ್ಟಿದ್ದು ಹಾವೇರಿ ತಾಲೂಕಾದರೂ ಬೆಳೆದಿದ್ದು ರಾಣೇಬೆನ್ನೂರಿನಲ್ಲಿ. ಹೈಸ್ಕೂಲ್ ವಿಧ್ಯಾಭ್ಯಾಸದ ವೇಳೆ ಮುಂಬಯಿಯ ಸ್ಕೂಲ್ ಆಫ್ ಆಟ್ಸ೯ನವರು ನಡೆಸಿದ ಡ್ರಾಯಿಂಗ್ ಮತ್ತು ಪೇಂಟಿಂಗ್ ಪರೀಕ್ಷೆಯಲ್ಲಿ ರಾಣೇಬೆನ್ನೂರಿನಿಂದ ಪಾಸಾದ ವಿಧ್ಯಾರ್ಥಿ ಇವರೊಬ್ಬರೇ ಆಗಿದ್ದರು. 

ರಾಣೇಬೆನ್ನೂರಿನ ಕುರಬಗೇರಿಯಲ್ಲಿ ಬಾಲ್ಯದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರು. ಅವರಲ್ಲಿ ಅವರಿಗೆ ಆತ್ಮೀಯ  ಸ್ನೇಹಿತನೆಂದರೆ ನನ್ನಜ್ಜ (ತಾಯಿಯ ತಂದೆ) ಭೀಮಣ್ಣ ತಳವಾರ (ಬಿ.ಜಿ ತಳವಾರ ವಕೀಲರು). ಅವರಿಬ್ಬರೂ ತಮ್ಮ ಹೆಚ್ಚು ಕಾಲವನ್ನು ಈಗಿನ ಶಂಕರ ಟಾಕೀಸ್ ನ ಪಕ್ಕದಲ್ಲಿಯ " ಕನಪ್ಪಜ್ಜನ ಕಟ್ಟಿಗೆ" ಅಡ್ಡೆಯಲ್ಲಿ (ಈಗ ಅಲ್ಲಿ ಕರ್ನಾಟಕ ಖಾನಾವಳಿಯಿದೆ ) ಕಳೆದಿದ್ದು.

ಆ ಮನೆಗೆ ದಿ. ರಾಮ ಮನೋಹರ ಲೂಹೀಯಾ ಅವರು ಅಥಿತಿಯಾಗಿ ಬರುತ್ತಿದ್ದರೆಂಬುದು ಗಮನಾರ್ಹ(ನನ್ನ ತಂದೆ ಅವರು ಬಂದಾಗ ಅವರ ತೊಡೆ ಮೇಲೆ ಕುಳಿತುಕೊಳ್ಳುತ್ತಿದ್ದರಂತೆ). 1951 ರಲ್ಲಿ ದಿ. ಎಲ್.ಜಿ ಹಾವನೂರವರು ಬೆಳಗಾವಿಯ ಆರ್.ಎಲ್.ಎಸ್ ಕಾಲೇಜಿನಲ್ಲಿ ಎಲ್.ಎಲ್.ಬಿ ವಿಧ್ಯಾಭ್ಯಾಸವನ್ನು ಪೂಣ೯ಗೊಳಿಸಿದರು. ಎಲ್.ಜಿ ಹಾವನೂರರ ಹಿರಿಯ ಸಹೋದರನಾದ ಲಿಂಗಪ್ಪ ಹಾವನೂರರು. ಅವರು ಎಲ್.ಜಿ ಹಾವನೂರರ ಅಂದಿನ ವಿಧ್ಯಾಭ್ಯಾಸದ ಖರ್ಚುವೆಚ್ಚಗಳನ್ನು ಬರಿಸುತ್ತಿದ್ದರು. ದಿ.ಲಿಂಗಪ್ಪ ಹಾವನೂರರು "ಕನಕದಾಸರ" ಬಗ್ಗೆ ಹೆಚ್ಚು ಅಧ್ಯಾಯನ ನೆಡೆಸಿದ್ದರು. ವಿಧ್ಯಾಭ್ಯಾಸವನ್ನು ಮುಗಿಸಿಕೊಂಡು ಬಂದ ಎಲ್.ಜಿ ಹಾವನೂರರವರು ರಾಣೇಬೆನ್ನೂರಿನಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ(ದಿ.ಎಲ್.ಜಿ ಹಾವನೂರ ವಕೀಲರು ರಾಣೇಬೆನ್ನೂರ ಕೋರ್ಟ್‌ನಲ್ಲಿ ದಿ.ಎಸ್.ಎಸ್ ವಡೆಯರರವರ ಜೂನಿಯರ್. ಎನ್.ವೈ ಹನುಮಂತಪ್ಪ- ಮಾಜಿ.ಎಂ.ಪಿ ಹಾಗೂ ಮುಖ್ಯ ನಾಯಮೂರ್ತಿಗಳು, ಎಸ್.ಆರ್ ನಾಯಕ-ಮುಖ್ಯ ನಾಯಮೂರ್ತಿಗಳು ಹೈಕೋರ್ಟ, ಪ್ರೊ.ರವಿವರ್ಮಕುಮಾರ - ಅಡ್ವಕೇಟ್ ಜನರಲ್ ಕರ್ನಾಟಕ ಸರಕಾರ, ಎಂ.ಪಿ ಪ್ರಕಾಶ - ಮಾಜಿ ಉಪಮುಖ್ಯಮಂತ್ರಿ ಇವರುಗಳು ಹೈಕೋರ್ಟಲ್ಲಿ ದಿ.ಎಲ್.ಜಿ ಹಾವನೂರ ವಕೀಲರ ಶಿಷ್ಯರಾಗಿದ್ದರು) ಸಮಥ೯ ಹಾಗೂ ಒಳ್ಳೆಯ ವಕೀಲರೆಂದನಿಸಿಕೊಂಡಿದ್ದರು.

1956-57 ರಂದು ರಾಣೇಬೆನ್ನೂರ ನಗರ ಸಭೆಗೆ ದಿ.ಎಸ್.ಕೆ ಬಣಗಾರವರ ಬಣದಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಾಣೇಬೆನ್ನೂರಿನ ಮೂಲೆ-ಮೂಲೆಯಿಂದ ಅದರ ಇತಿಹಾಸವನ್ನು ಹುಡುಕಿ "ನಗರ ಸಭೆಯ ಶತಮಾನೋತ್ಸವದ (1858-1958) ಅಂಗವಾಗಿ ಸ್ಮರಣ ಸಂಚಿಕೆಯನ್ನು" ತಯಾರಿಸಿ ಬಿಡುಗಡೆಗೊಳಿಸಿದರು. ಅದರಲ್ಲಿ ರಾಣೇಬೆನ್ನೂರ ಹೇಗೆ ಬೆಳೆಯಿತು ಎಂಬುದನ್ನು ಸಂಶೋಧನಾತ್ಮಕವಾಗಿ ವಿವರಿಸಿದರು. ನಗರ ಸಭೆಯ ಕಾಯ೯ವನ್ನು ಹಾಗೂ ಅದರ ಸಾಧನೆಯನ್ನು ಅದರಲ್ಲಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಬಿಂಬಿಸಿದರು. ಪ್ರಥಮವಾಗಿ ಗಂಗಾಜಲದಲ್ಲಿ ನಗರ ಸಭೆ ವತಿಯಿಂದ ಕೊಳವೆ ಬಾವಿಯನ್ನು ತಗೆಸಿದರು. 1956 ರಲ್ಲಿ ತಾವು ಹಾಗೂ ತಮ್ಮ ಸ್ನೇಹಿತರು ಕಲಿತ್ತಿದ್ದ ಮುನ್ಸಿಪಲ್ ಹೈಸ್ಕೂಲ್ ಹಳೆಯ ವಿದ್ಯಾರ್ಥಿಗಳ ಬಳಗವನ್ನು ಕಟ್ಟಿಕೊಂಡು ಹಳೆಯ ವಿದ್ಯಾರ್ಥಿಗಳ ಸಂಘವನ್ನು ಹುಟ್ಟು ಹಾಕಿದರು. ಮುನ್ಸಿಪಲ್ ಹೈಸ್ಕೂಲಿನ ಉನ್ನತಿಗಾಗಿ ಪ್ರಯತ್ನಿಸುವುದೆ ಇದರ ಮೂಲ ಉದ್ದೇಶವಾಗಿತ್ತು. ಮುಂದೆ ಅವರೇ ಆ ಸಂಸ್ಥೆಯ ಚೇರಮನರಾಗುತ್ತಾರೆ. ವಿಶೇಷವೆನೆಂದರೆ ರಾಣೇಬೆನ್ನೂರಿನ ನಗರಸಭೆಯಲ್ಲಿಯ ಪ್ರತಿ ಠರಾವುಗಳು ಅಂದು ಇಂಗ್ಲೀಷನಲ್ಲಿ ಬರೆಯಲ್ಪಡುತ್ತಿದ್ದ. ಈ ಕಾರ್ಯದ ರೊವಾರಿಗಳಾದ ದಿ.ಎಲ್.ಜಿ ಹಾವನೂರರವರನ್ನು ಅಂದಿನ ಅಧ್ಯಕ್ಷರಾಗಿದ್ದ ದಿ.ಎಸ್.ಕೆ ಬಣಗಾರವರು ಶ್ಲಾಘಿಸುತ್ತಿದ್ದರು. ದಿ.ಎಲ್.ಜಿ ಹಾವನೂರವರು ಅಂದು ನಗರಸಭೆಯ ಮುಂಭಾಗದ ಮನೆಯಲ್ಲಿಯೇ ವಾಸವಾಗಿದ್ದರು. 

ಅವರು ನಗರಸಭೆಯನ್ನು ಹಾಗೂ ಸಾರ್ವಜನಿಕ ಕೆಲಸವನ್ನು ಎಷ್ಟು ಪ್ರೀತಿಸುತ್ತಿದ್ದರೆಂಬುದು ಈ ವ್ಯಕ್ತಿತ್ವದ ಮೇಲೆ ನಮಗೆ ತಿಳಿಯುತ್ತದೆ. ಈ ಹಿಂದೆ ನಗರ ದೇವತೆಯಾದ ಚೌಡೇಶ್ವರಿದೇವಿಯ ಜಾತ್ರೆ ಈಗಿನ ತಳವಾರ ಓಣಿಯಲ್ಲಿ ನಡೆಯುತ್ತಿತ್ತು. ಅಲ್ಲಿ ಜನರ ಸಮೂಹ ಬೃಹತ್ ಪ್ರಮಾಣದಿಂದ ಕೂಡುತ್ತಿತ್ತು. ಇದನ್ನರಿತ ಎಲ್.ಜಿ ಹಾವನೂರರವರು ಆ ಜಾತ್ರೆಯನ್ನು ಮಾತ್ರ ಊರು ಹೊರಗಡೆ ನಡೆಯುವಂತೆ ವ್ಯವಸ್ಥೆ ಮಾಡಿದರು.

ಕಮದೋಡ ರಸ್ತೆಯಲ್ಲಿರುವ ನೂಲಿನ ಗಿರಣಿಯ ಹುಟ್ಟಿಗೆ ಕಾರಣಿಭೂತರು ಇವರೇ ಆಗಿದ್ದಾರೆ. ದಿ.ರಾವುಫಖಾನ್ ರಬ್ಬಾನಿಯವರ ಅತಿ ನೆಚ್ಚಿನ ವಕೀಲರೆಂದರೆ ಎಲ್.ಜಿ.ಹಾವನೂರರವರು. ಅಂತಹ ರಬ್ಬಾನಿಯವರ ಮನ:ವೊಲಿಸಿ ದಿ.ಕೆ.ಎಫ್ ಪಾಟೀಲರಿಗೆ ಪ್ರೇರೆಪಿಸಿ ರಾಜರಾಜೇಶ್ವರಿ ಮಠದಿಂದ ತಿರೂಚಿ ಮಹಾಸ್ವಾಮಿಗಳನ್ನು ಕರೆಯಿಸಿ ವಿದ್ಯಾರ್ಥಿನಿಯರಿಗಾಗಿ ಶಿಕ್ಷಣ ಕೇಂದ್ರವನ್ನು ತೆಗಿಸಲ್ಪಟ್ಟರು. ಮುಂದೆವರಿದೂ ತಾವೇ ಪದವಿ ಕಾಲೇಜನ್ನು ಮಾನ್ವಿ ಕಂಪನಿಯ ಹತ್ತಿರ ಪ್ರಾರಂಭಿಸಿದರು. 

ವಾಲ್ಮೀಕಿ ಕೈಗಾರಿಕಾ ತರಬೇತಿ ಕೇಂದ್ರದ ಹುಟ್ಟುವಿಗೂ ಇವರೇ ಕಾರಣಿಭೂತರು. ಹೆರಿಗೆ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಶಂಖುಸ್ಥಾಪನೆಯನ್ನು ಅಂದಿನ ಮೈಸೂರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್ ನಿಜಲಿಂಗಪ್ಪನವರ ಅಮೃತ ಹಸ್ತದಿಂದ ಮಾಡಿಸಿದರು. ಪರಸ್ಥಳದಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗಾಗಿ ಇವರ ಕಾಲಾವಧಿಯಲ್ಲಿಯೇ ವಿದ್ಯಾರ್ಥಿ ನಿಲಯಗಳು ತೆಲೆ ಎತ್ತಿ ನಿಂತವು. ನಗರ ಸಭೆಯ ವತಿಯಿಂದ ಹೊಸನಗರವೆಂಬ ಬಡಾವಣೆಯ ಇವರ ಆಡಳಿತದ ಅವಧಿಯಲ್ಲಿ ಹುಟ್ಟಿಕೊಂಡಿತು. 

ಇಲ್ಲಿ ನಗರಸಭೆಯ ವತಿಯಿಂದ ಸೈಟಗಳನ್ನು ಮಾಡಿ ಮಾರಲಾಯಿತು. ತುಂಗಭದ್ರ ನದಿಯಿಂದ ನೀರು ತರುವ ಯೋಜನೆಯ ನಕ್ಷೆ ಇವರ ಆಡಳಿತ ಅವಧಿಯಲ್ಲಿ ತಯಾರಾಯಿತು. ಸುಮಾರು 22 ಮೈಲು ಡಾಂಬರ್, ಕಾಂಕ್ರಿಟ್ ಹಾಗೂ ಮುರಂ ರಸ್ತೆ ರಾಣೇಬೆನ್ನೂರ ಪ್ರಮುಖ ನಗರಗಳಲ್ಲಾಯಿತು. 1960 ರ ಜೂನ್ ತಿಂಗಳಲ್ಲಿ ನಗರ ಸಭೆ ಆಸ್ಪತ್ರೆಗೆ ಎಕ್ಸರೇ ಪ್ಲಾಂಟ್ ಸರಕಾರದಿಂದ ಬರುವ ಹಾಗೆ ನೋಡಿಕೊಂಡರು. ದಿ.ಬಸಪ್ಪ ಗುಡ್ಡದವರ ಮೇಲೆ ಹೆಚ್ಚು ಗೌರವವನ್ನಿಟ್ಟಿದ್ದ ಹಾವನೂರ ವಕೀಲರು ಅವರ ಪುತ್ರರನ್ನು ಪ್ರೇರೆಪಿಸಿ ತಂದೆಯ ಸ್ಮರಣಾರ್ಥವಾಗಿ ಸಾರ್ವಜನಿಕ ಭವನ ಕಟ್ಟಲು ಹೇಳಿ ಅವರಿಂದ  25 ಸಾವಿರ ರೂಪಾಯಿಗಳನ್ನು ನಗರಸಭೆಗೆ ಕೊಡಿಸಿದರು. 

ನಗರ ಸೌಂದರ್ಯಕ್ಕಾಗಿ ರೈಲ್ವೆ ಸ್ಟೇಷನ್ ಬಳಿಯ ರಸ್ತೆ ಅಗಲಿಕರಣಗೊಂಡಿತು. ಸಾರ್ವಜನಿಕ ಹೂದೋಟ ಮತ್ತು ಮಕ್ಕಳವನಗಳು ಹುಟ್ಟಿಕೊಂಡವು. ಮಹಾತ್ಮ ಗಾಂಧಿ ರಸ್ತೆಯನ್ನು ರೈಲ್ವೆ ನಿಲ್ದಾಣದಿಂದ ಅಂಚೆ ಕಛೇರಿಯವರೆಗೆ ವಿಸ್ತಾರಗೊಳಿಸಿ ಎರಡು ಸರ್ಕಲ್ ಗಳನ್ನು ಕಟ್ಟಿಸಲಾಯಿತು. ನಗರಸಭೆ ವತಿಯಿಂದ ಅಶೋಕ ಸ್ತಂಭದ ಸರ್ಕಲ್ 36 ಸಾವಿರ ರೂಪಾಯಿ ವೆಚ್ಚಗಳಿಂದ ಅಂದು ನಿರ್ಮಿಸಲಾಯಿತು. ವಾಚನಾಲಯಗಳ ಜಿರ್ಣೋದ್ದಾರ, ಹೊಸ ಗರಡಿಮನಿಗಳ ನಿರ್ಮಾಣ ಇವರ ಕಾಲದಲ್ಲಿ ಆದವು. ಬ್ಯಾಟಮಿಟನ್ ಕ್ರೀಡಾಪಟುಗಳಿಗಾಗಿ ಒಂದು ಸಂಘವನ್ನು ಪ್ರಥಮವಾಗಿ ಇವರೇ ಹುಟ್ಟುಹಾಕಿದರು. ಸೈಕಲ್ ಏರಿಕೊಂಡು ರಾಣೇಬೆನ್ನೂರನ್ನು ಸಂಚರಿಸಿ, ನಗರದ ಜನತೆಯ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಂಡರು. ಬಿಡುವಿನ ವೇಳೆಯಲ್ಲಿ ಬಳ್ಳಾರಿ ಸಹುಕಾರ, ದೊಡ್ಡಗುಬ್ಬಿ ಶಂಕರರಾವ (ಮಾಜಿ ಸಚಿವರು) ಹಾಗೂ ಗೆಳೆಯ ಭೀಮಣ್ಣನೊಡನೆ ಬ್ಯಾಂಟಮಿಟನ್ ಆಡುತ್ತಿದ್ದರು. ಮಿತ್ರನಾದ ಬ್ಯಾಡಗಿ ಸಾಹುಕಾರನೊಡನೆ "ಶಕ್ತಿ ಟಾಕೀಸ್" ನಲ್ಲಿ ಗೆಳೆಯರೆಲ್ಲರು ಸೇರಿಕೊಂಡು ಫಿಲ್ಮ್ ನೋಡುತ್ತಿದ್ದರು. ಎಷ್ಟು ದೊಡ್ಡಮಟ್ಟದಲ್ಲಿ ಬೆಳೆದರು ಗೆಳೆಯರನ್ನು ಮರೆಯುತ್ತಿರಲಿಲ್ಲ. 

ದಿ.ಎಲ್.ಜಿ ಹಾವನೂರರವರು ರಾಣೇಬೆನ್ನೂರಿಗಾಗಿ ಹಗಲಿರಳು ದುಡಿದರು. ಮುಂದೆ ಕುಟುಂಬ ನಿರ್ವಹಣೆಗಾಗಿ  ಸಂಗಮ ಟಾಕೀಸ್ ನ ಹತ್ತಿರವಿದ್ದು ಮನೆಯನ್ನು ತೊರೆದು  ಬೆಂಗಳೂರಿಗೆ ತೆರಳಿದರು. ಅಲ್ಲಿ ಕೆಲವು ಕಾಲ ಕಷ್ಟವನ್ನು ಅನುಭವಿಸಿದರಾದರೂ ಅವರ ಜಾಣ್ಮೆ ಅವರನ್ನು ಬಹು ಬೇಗ ಕೈಹಿಡಿಯಿತೇನ್ನಬಹುದು.ಇವರ ಜಾಣ್ಮೆಯನ್ನರಿತ ಸರಕಾರವು ಬೆಂಗಳೂರಿನ ಸರಕಾರಿ ಲಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ನಿವ೯ಹಿಸುವಂತೆ 1962 ರಲ್ಲಿ ಸೂಚಿಸಿತು. 1977- 78 ರ ಸಾಲಿನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1975 ರಲ್ಲಿ ಹಿಂದೂಳಿದ ವಗ೯ಗಳ ಆಯೋಗಕ್ಕೆ ಚೇರಮನರಾಗಿ ಆಯ್ಕೆಯಾಗಿ "ಹಾವನೂರ ವರದಿಯನ್ನು ಮಂಡಿಸಿ ದೇಶ ವಿಖ್ಯಾತರಾದರು.

ಬೇಡ,ನಾಯಕ,ನಾಯಕಮಕ್ಕಳ,ವಾಲ್ಮೀಕಿಯರನ್ನು ಪರಶಿಷ್ಟ ಪಂಗಡಕ್ಕೆ(ST) ಸೇರಿಸಬೇಕು ಎನ್ನುವುದು ಅವರ ಬಹುಮುಖ್ಯ ವಿಷಯವಾಗಿತ್ತು. ಈ ಕುರಿತು ಮಾಜಿ ಸಚಿವರಾಗಿದ್ದ ಬೂಟಾಸಿಂಗರೊಡನೆ ಬಹು ಕಾಲ ಚಚಿ೯ಸಿದ್ದರು. ರಾಣೇಬೆನ್ನೂರಿನ ಸಮೀಪದ ಕೋಡಿಯಾಳ ಹೊಸಪೇಟೆಯಲ್ಲಿ ಬಿರ್ಲಾ ಕಂಪನಿಯು ತೆಲೆಯೆತ್ತಲು ಬಹು ಮುಖ್ಯ ಪಾತ್ರವಹಿಸಿದ್ದರು. 1980 ರಲ್ಲಿ ಕಾನೂನು ಹಾಗೂ ಹಿಂದೂಳಿದ,ಅಲ್ಪಸಂಖ್ಯಾತ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. 

1980 ರಲ್ಲಿ ಜರ್ಮನ್ ಹಾಗೂ ಯುಗೊಸ್ಲಾವಿಯ ದೇಶಗಳಲ್ಲಿ ನಡೆದ ಜಾಗತಿಕ ಕಾನೂನು ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  ರಾಣೇಬೆನ್ನೂರ ಭಾಗಕ್ಕೆ ಬಂದಾಗ ಗೆಳೆಯರನ್ನು ಆಗಾಗ ಭೆಟ್ಟಿ ಮಾಡುತ್ತಿದ್ದರು. ದಿನಗಳು ಉರುಳಿದವು, ಹಳೆಯ ನೀರು ಹೋಗಿ ಹೊಸ ನೀರು ಬರಲಾರಂಭಿಸಿತು. ಎಲ್.ಜಿ ಹಾವನೂರರವರು ರಾಣೇಬೆನ್ನೂರ ನಗರದ ಹಿರಿಮೆಯನ್ನು ಕನಾ೯ಟಕದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯುರುವಂತೆ ಮಾಡಿದ್ದಾರೆ. ಇ.ಎಸ್ ವೆಂಕಟರಾಮಯ್ಯ, ಚಂದ್ರಜೀತ ಯಾದವ, ರಾಮಜೋಯಿಸ, ಪ್ರೊ.ಮಾಕ೯ಗ್ಯಾಲಂಟರ, ಪ್ರೊ.ಜಾಜ೯ ಸ್ಟೇಟಾಂಟನ ಹಾಗೂ ಅನೇಕರ ಪ್ರೀತಿಗೆ ಪಾತ್ರರಾಗಿದ್ದರು.ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ ಎಂದು ಪ್ರಸಿದ್ದಿ ಪಡೆದ ಇವರುಗಳು ರಾಣೇಬೆನ್ನೂರಿಗಾಗಿ ತಮ್ಮ ಜೀವನವನ್ನೆ ಸಣ್ಣಗಾಗಿಸಿದರಾದರೂ ಅವರ ಹೆಸರನ್ನು ಹೇಳುವ ನಗರವಾಗಲಿ, ದೊಡ್ಡದಾದ ವೃತ್ತವಾಗಲಿ ಅಥವಾ ಅವರ ಮೂರ್ತಿಯಾಗಲಿ ನಗರದಲ್ಲಿರದಿರವುದು  ವಿಷಾದದ ಸಂಗತಿ.          
              ----- ಪ್ರಮೋದ ನಲವಾಗಲ -----
                         9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!