ಸಾವಿರಾರು ವರ್ಷಗಳಿಂದ ಮನುಕುಲವನ್ನು ರೋಗಗಳಿಂದ ರಕ್ಷಿಸುತ್ತಿರುವ ವೈದ್ಯರಿಗೂ, ನಗರ ಸಭೆ ನೌಕರರಿಗೂ ಹಾಗೂ ಸಿಬ್ಬಂದಿಯವರಿಗೆ ನನ್ನದೊಂದು ಸಲಾಂ...............!!!!!
ಅಂತಹ ಪ್ರಾಕೃತಿಕ ಜೀವನ ನಡೆಸಿದ ಮಾನವನ ಕುರುಹುಗಳನ್ನು ನಾವು ಹಾವೇರಿ ಜಿಲ್ಲೆಯ ಹಳ್ಳೂರು, ಫತ್ತೇಪುರ, ನಲವಾಗಲ, ನದಿಹರಳಹಳ್ಳಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಈಗಲೂ ಸಹ ನೋಡಬಹುದಾಗಿದೆ. ಪ್ರಾಕೃತಿಕ ಜೀವನದಿಂದ ಸಂಸ್ಕೃತಿಕದ ಕಡೆ ಬರುವಾಗ ಗುಹೆಯಲ್ಲಿದ್ದ ದೇವರಿಗೆ ಗುಡಿಯನ್ನು ಕಟ್ಟಿ ತಾನು ಗುಡಿಸಲಿನಲ್ಲಿ ವಾಸಿಸಲಾರಂಭಿಸಿದನು. ಜನರ ಮಧ್ಯದಲ್ಲಾದ ಜಗಳದಿಂದಾಗಿ ಬಲಿಷ್ಠನಾದವನು ಅವರ ಮೇಲೆ ಹಿಡಿತವನ್ನು ಸಾಧಿಸಿ ಅರಸನಾದನು. ಮಾನವನ ವಿಕಾಸ ಶರವೇಗದಲ್ಲಿ ಹೋಗಲಾರಂಭಿಸಿತು. ಹೊಸ ಆವಿಷ್ಕಾರಗಳಾದವು. ಪಕೃತಿಯಲ್ಲಾಗುತ್ತಿದ್ದ ವಿಕೋಪಗಳಿಗೆ ಎದೆ ಉಬ್ಬಿಸಿಕೊಂಡು ನಿಂತನು, ರೋಗಗಳ ನಿವಾರಕ್ಕೆ ಭಗವಂತನ ಮೊರೆ ಹೋದನು.
ಯಾವಾಗ ಆ ಭಗವಂತ ತನ್ನ ಕಷ್ಟಕ್ಕೆ ಕೈ ಹಿಡಿಯಲಿಲ್ಲ ಎಂದು ಅರಿತಾಗ ಭಗವಂತನನ್ನು ವೈದ್ಯನ ರೂಪದಲ್ಲಿ ಕಂಡುಕೊಂಡನು. ಅವರೇ ರಾಜವೈದ್ಯ,ನಾಟಿವೈದ್ಯ ಹಾಗೂ ಹಕೀಂ ಎಂಬ ಹೆಸರುಗಳಿಂದ ಪ್ರಚಲಿತರಾದರು. ಅರಸರು ಪ್ರಜೆಗಳ ಹಿತದೃಷ್ಟಿಯಿಂದ ವೈದ್ಯರಿಗೆ ಸಕಲ ಸೌಲಭ್ಯಗಳನ್ನು ನೀಡಿದರು. ಅಂದಿನ ಆ ದಿನಗಳಲ್ಲಿ ಆಯುರ್ವೇದ ಪಂಡಿತರಿಗೆ ಗೀಡಮೂಲಿಕೆಗಳನ್ನು ಲಂಬಾಣಿ ಹಾಗೂ ಗುಡ್ಡಗಾಡದ ಜನರು ಒದಗಿಸುತ್ತಿದ್ದರು. ಈಗಲೂ ಸಹ ಆ ಜನರು ತಮಗೆ ಬಂದ ರೋಗಗಳಿಗೆ ತಾವೇ ಮದ್ದನ್ನು ತೆಗೆದುಕೊಳ್ಳುತ್ತಿರುವುದು ವಿಶೇಷ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಹಿರೇಕೆರೂರಿನ ಬಾಳಂಬೀಡ ಗ್ರಾಮದಲ್ಲಿ "ವಿಷಪರಿಹಾರೇಶ್ವರ" ದೇವಸ್ಥಾನವನ್ನು ಕಟ್ಟಿಸಿದರು. ವಿಷ ಜಂತುಗಳು ಕಡಿದಾಗ ವಿಷಪರಿಹಾರೇಶ್ವರನಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸೇವಿಸಿದಾಗ ವಿಷದ ಪರಿಣಾಮ ಬಿರುವುದಿಲ್ಲಾ ಎಂಬ ನಂಬಿಕೆ ಅಂದಿನ ಜನರಿಗಿತ್ತು. ಕನಕದಾಸರು ಮೋಹನತರಂಗಿಣಿಯಲ್ಲಿ ಹಾಗೂ ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಆರೋಗ್ಯದ ಬಗ್ಗೆ ಗಮನಾರ್ಹ ಮಾಹಿತಿಯನ್ನು ನೀಡಿದ್ದಾರೆ. ಇದರ ಜೊತೆ ಹೊಸರಿತ್ತಿ, ಹಲಗೇರಿ ಹಾಗೂ ಇನ್ನೂ ಹಲುವಾರು ಕಡೆ ಯಂತ್ರಕಲ್ಲನ್ನು ನೋಡಬಹುದಾಗಿದೆ. ಜನರು ತಮ್ಮ ಮಕ್ಕಳಿಗೆ ಹಾಗೂ ಜಾನುವಾರುಗಳಿಗೆ ಬೇನೆ ಬಂದಾಗ ಇದನ್ನು ಸುತ್ತುವರೆಯುವುದು ಅಂದಿನ ಪದ್ದತಿಯಾಗಿತ್ತು. ಅದು ಈಗಲೂ ಸಹ ಕೆಲವಡೆ ಜೀವಂತವಾಗಿದೆ. ಬ್ರಿಟಿಷರ ಆಡಳಿತಕ್ಕೆ ಒಳಪಡುವ ಪೂರ್ವದಲ್ಲಿ ಆಯುರ್ವೇದ, ಯುನಾನಿ ಹಾಗೂ ಪ್ರಾಕೃತಿಕ ಚಿಕಿತ್ಸೆ ನಾಗರಿಕತೆಯೊಂದಿಗೆ ಬೆಳೆದು ಬಂದಿದ್ದು ಇವುಗಳನ್ನು ವೈದ್ಯಕೀಯ ಪದ್ದತಿಗಳ ತಾಯಿಬೇರು ಎನ್ನಬಹುದು. ಗ್ರಾಮೀಣ ವೈದ್ಯರು ಹಾಗೂ ಹಕೀಂರು ಅನಕ್ಷರಸ್ಥರಾಗಿದ್ದರು ಅಪಾರ ಅನುಭವಶಾಲಿಗಳಾಗಿದ್ದು ಸಾಮಾನ್ಯ ಕಾಯಿಲೆಗಳಿಗೆ ಗೀಡದ ಬೇರು, ತೊಗಟೆ, ಮಂತ್ರ ಹಾಕುವುದು ಹಾಗೂ ತಾಯತದ ಕಟ್ಟುವ ಮುಖಾಂತರ ಜನರನ್ನು ರೋಗ ಮುಕ್ತರನ್ನಾಗಿ ಮಾಡುತ್ತಿದ್ದರು.
ಆದರೆ ಬ್ರಿಟಿಷರ ಆಗಮನದ ಪೂರ್ವ ನಮ್ಮ ಹಾವೇರಿ ಜಿಲ್ಲೆಯಲ್ಲಿ ಈ ಪದ್ದತಿಗಳು ಜನಜೀವನದಲ್ಲಿ ಭದ್ರವಾಗಿದ್ದವು. ಬ್ರಿಟಿಷರ ಆಗಮನದ ನಂತರ ಅಲೋಪತಿ ಔಷದಿಯು ಬ್ರಿಟಿಷರ ಸೈನಿಕ ನೆಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಕ್ರಮೇಣವಾಗಿ ಎಲ್ಲಾ ಕಡೆ ಹಬ್ಬಿಕೊಂಡಿತು. ಇದರ ಜೊತೆ ಭಾರತೀಯ ವೈದ್ಯ ಪದ್ದತಿಯಾದ ಆಯುರ್ವೇದ ಪದ್ದತಿಯಲ್ಲಿಯೂ ಅನೇಕ ಅನ್ವೇಷಣಗಳಾಗಿ ಹೊಸ ಔಷದಿಗಳನ್ನು ಕಂಡು ಹಿಡಿಯಲು ವೈದ್ಯರು ಅನೇಕ ಪ್ರಯೋಗಗಳನ್ನು ಮಾಡಲಾರಂಭಿಸಿದರು. 1877 ರಂದು ಬಾಂಬೆ ಪ್ರಸಿಡೆನ್ಸಿಗೆ (ಹಾವೇರಿ ಜಿಲ್ಲೆ ಈ ಭಾಗಕ್ಕೆ ಸೇರುತ್ತಿತ್ತು) ಭೀಕರ ಕ್ಷಾಮ ಬಂದಾಗ ಇಂಗ್ಲೆಂಡ್ ನಿಂದ ಬಂದ ಇಂಜಿನಿಯರ್ "ಎಡ್ಮಂಡ್ ಸಿಬ್ಸನ್" ಇಲ್ಲಿಯ ಭೀಕರತೆಯನ್ನು ಕಂಡು ಇಂಗ್ಲೆಂಡ್ ನಿಂದ ವೈದ್ಯರನ್ನು ಕರೆಸಿ ಶಿಗ್ಗಾಂವಿ ಜನರಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಾ ಅವರಿಗೆ ಕೆಲವು ರೋಗಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದನು. ವಿಪರ್ಯಾಸವೆಂದರೆ ಬಡ ಜನರನ್ನು ಕಂಡು ಮಮ್ಮಲು ಮರಗುತ್ತಿದ್ದ ಬ್ರಿಟಿಷ್ ಅಧಿಕಾರಿ ಕಾಲರಾಕ್ಕೆ ತುತ್ತಾಗಿ ಮದ್ದಿಲ್ಲದೆ 28 ರ ವಯಸ್ಸಿನಲ್ಲಿಯೇ ನಿಧನ ಹೊಂದಿದನು. ತನ್ನ ದೇಶವನ್ನು ಬಿಟ್ಟು ಬಂದು ಅನಾಥವಾಗಿ ಶಿಗ್ಗಾಂವಿಯಲ್ಲಿ ನಿಧನವಾದ ಸಿಬ್ಸನನ್ನು ಬ್ರಿಟಿಷ್ ಅಧಿಕಾರಿಗಳು ಬಹಳ ಜಾಗೃತಿಯಿಂದ ಶಿಗ್ಗಾಂವಿ ಪಟ್ಟಣದ "ಮೌಲಾಲಿ ನಗರದಲ್ಲಿ" ಧಫನ್ ಮಾಡಿದರು. ಬಡ ಜನರಿಗೋಸ್ಕರ ತನ್ನ ದೇಶ, ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಅನಾಥನಾಗಿ ಶಿಲುಭೆಯ ಕೆಳಗೆ ಶಾಸ್ವತ ನಿದ್ದೆಗೆ ಜಾರಿದ ಆ ವ್ಯಕ್ತಿಯ ಕಾರ್ಯ ಶ್ಲಾಘನೀಯ. ಜಿಲ್ಲೆಗೆ 1818 ಹಾಗೂ 1858 ರ ನಂತರ ಬಂದ ಕಾಲರಾ, 1862 ರ ನಂತರ ಮೇಲಿಂದ ಮೇಲೆ ಬಂದ ಚಳಿಜ್ವರ (ಮಲೇರಿಯಾ), 1898 ರ ಪ್ಲೇಗು, 1876-77 ರ ಭೀಕರ ಕ್ಷಾಮ ಹಾಗೂ 1918 ರಂದು ಬಂದ ಗುದ್ದವ್ವನ ಬೇನೆಯನ್ನು(influenza) ವೈದ್ಯರ ಹಾಗೂ ಸಿಬ್ಬಂದಿಯವರ ಸಹಕಾರ ಹಾಗೂ ಶ್ರಮದಿಂದಾಗಿ ಕೆಲವು ಸಾವು-ನೋವುಗಳ ಮಧ್ಯಯೂ ನಾವು ರೋಗಾಣುಗಳ ವಿರುದ್ದ ಜಯಶಾಲಿಯಾದೆವು. ಆ ವಿಜಯದ ಹಿಂದಿನ ರೂವಾರಿಗಳು ಇದೇ ವೈದ್ಯರು. ಹಿಂದೆ ಲಸಿಕೆ ಸಹ ಹಾಕಿಸಿಕೊಳ್ಳಲೂ ಹೆದುರುತ್ತಿದ್ದ ನಮ್ಮವರ ಮನಸ್ಸನ್ನು ಪರಿವರ್ತಿಸಲು ವೈದ್ಯರು ಹರಸಾಹಸ ಪಡಬೇಕಾಯಿತು.
ಜಾತ್ರೆಗಳಲ್ಲಿ ಬಂದ ಜನರನ್ನು ಪೊಲೀಸರ ಮುಖಾಂತರ ಹಿಡಿದುಕೊಂಡು ಬಂದು ಲಸಿಕೆ ಹಾಕಿ ರೋಗಗಳನ್ನು ತಹಬಂದಿಗೆ ತಂದರು. ಬ್ರಿಟಿಷ್ ಸರಕಾರ ಜಿಲ್ಲೆಯ ಜನರಿಗೆ ( ಅಖಂಡ ಧಾರವಾಡ ಜಿಲ್ಲೆ) ಆರೋಗ್ಯಕರ ವಾತಾವರಣ ನೀಡಲು ಕ್ರಿ.ಶ 1878 ರಲ್ಲಿ ಮುನ್ಸಿಪಲ್ ಡಿಸ್ಪೇನ್ಸರಿಯನ್ನು ಹಾವೇರಿಯಲ್ಲಿ ಪ್ರಾರಂಭಿಸಿತು. ಅಂದು ಈ ಡಿಸ್ಪೇನ್ಸರಿ ದಕ್ಷಿಣ ಧಾರವಾಡ ಭಾಗದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿತ್ತು. ಮುಂದೆ ಇದಕ್ಕೆ 1962 ರಲ್ಲಿ ಹೊಸ ಕಟ್ಟಡವನ್ನು ಕಟ್ಟಲಾಯಿತು. ರಾಣೇಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮುನ್ಸಿಪಲ್ ಡಿಸ್ಪೇನ್ಸರಿಯನ್ನು 26 ಜೂನ್ 1937 ರಲ್ಲಿ ಧಾರವಾಡ ಕಲೇಕ್ಟರ್ ವಿ.ಎಸ್ ಬೀಡೆರವರು ಉದ್ಘಾಟಿಸಿದರು. ಸವಣೂರಿನಲ್ಲಿ 1893 ರಂದು ತ್ಯಾಬ್ರಜ್ ಆಸ್ಪತ್ರೆ ಪ್ರಾರಂಭವಾಯಿತು. 1933 ರಲ್ಲಿ ಬ್ಯಾಡಗಿಯಲ್ಲಿ, 1905 ರಂದು ಹಿರೇಕೆರೂರನಲ್ಲಿ ಹಾಗೂ ಶಿಗ್ಗಾಂವಿಯಲ್ಲಿ 1940 ರಂದು ಸಮುದಾಯ ಆರೋಗ್ಯ ಕೇಂದ್ರಗಳು ಪ್ರಾರಂಭವಾದವು. ಖಾಸಗಿ ಅನುದಾನ ಆಸ್ಪತ್ರೆಗಳು ಬ್ಯಾಡಗಿ ಹಾಗೂ ಹೊಸರಿತ್ತಿಯಲ್ಲಿ ಪ್ರಾರಂಭವಾದವು. 1934 ರಲ್ಲಿ SMP ಗಳು ತಡಸ, ಹುಲಗೂರು, ದುಂಡಶಿ, ಮೇಡ್ಲೇರಿ, ಕುಪ್ಪೇಲೂರ, ತುಮ್ಮಿನಕಟ್ಟಿ, ತಸವಳ್ಳಿ, ಬೊಮ್ಮನಹಳ್ಳಿ, ಆಡೂರು, ಕುಸಗೂರು, ಗುತ್ತಲ, ಸೂರಣಿಗಿ, ಹಂಸಬಾವಿ, ಕುನ್ನೂರು, ಸೂಡಂಬಿ, ಮಾಸೂರು ಹಾಗೂ ತಡಕನಹಳ್ಳಿಗಳಲ್ಲಿ ಪ್ರಾರಂಭವಾದವು.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯವರು ರೋಗಿಗಳ ಸೇವೆ ಭಗವಂತನ ಸೇವೆಯೆಂದು ತಿಳಿದು ಅವರು ರೋಗಕ್ಕೆ ಚಿಕಿತ್ಸೆಯನ್ನು ಕೊಡುತ್ತಿದ್ದರು. "ವೈದ್ಯೋದೇವಭವ" ಎಂಬ ಮಾತು ಜನರ ಬಾಯಲ್ಲಿ ಹುಟ್ಟಿಕೊಂಡಿತು. ಸುಮಾರು 1878 ರ ಅಸುಪಾಸು ಜಿಲ್ಲೆಯಲ್ಲಿ ಮುನ್ಸಿಪಾಲಟಿಗಳು ಹುಟ್ಟಿಕೊಂಡವು ಇದರ ಸಿಬ್ಬಂದಿಯವರು ಸಹ ಜನರು ವಾಸಿಸುತ್ತಿದ್ದ ವಾತಾವರಣವನ್ನು ಸೂಚಿಗೊಳಿಸುವುದೊರೊಂದಿಗೆ, ನೀರು ಸರಬರಾಜು ಮಾಡುವುದು, ರಸ್ತೆಗಳಿಗೆ ಗರಸನ್ನು ಹಾಕುವುದು ಹಾಗೂ ಸೂರ್ಯಾಸ್ಥವಾದೊಡೊನೆ ಕಂದಿಲಗಳನ್ನು ಬೆಳಗಿಸುವಂತ ಮುಖ್ಯ ಕಾರ್ಯಗಳನ್ನು ಮಾಡುತ್ತಿದ್ದರು. ಈಗಲೂ ಸಹ ಜನರ ಆರೋಗ್ಯವನ್ನು ಕಾಪಾಡಲು ತಮ್ಮ ಪ್ರಾಣವನ್ನೇ ಮುಡುಪಾಗಿಡುತ್ತಿರುವ ನಗರ ಸಭೆಯ ನೌಕರರಿಗೂ, ವೈದ್ಯರಿಗೂ ಹಾಗೂ ಸಿಬ್ಬಂದಿಯರಿಗೂ ನನ್ನದೊಂದು ಸಲಾಂ............................................!!!!!!!!!!!!!!!
~~~~~~ ಕರೋನಾ ವೈರಸ್ ತನ್ನ ಸಂತಾನೋತ್ಪತ್ತಿಗೆ ಮನುಷ್ಯನ ಶ್ವಾಶಕೋಶವನ್ನು ಹುಡುಕುತ್ತಿದೆ. ಮದ್ದಿಲ್ಲದ ಈ ವೈರಾಣು ಒಬ್ಬರಿಂದೊಬ್ಬರಿಗೆ ರೋಗವನ್ನು ಹರಡುತ್ತಿದೆ. ರೋಗಕ್ಕೆ ಪೂರ್ಣ ವಿರಾಮವನ್ನಿಡಬೇಕಾದರೆ ಹಾಗೂ ವೈರಸ್ ಸಂತಾನೋತ್ಪತ್ತಿಗೆ Break ಹಾಕಬೇಕಾದರೆ ನಾವು ಮನೆಯಲ್ಲಿರುವುದೆ ಸೂಕ್ತ. ಕರೋನಾ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲಾ ಸಹಕರಿಸೋಣಾ ~~~~~~~~~~
#### ಲೇಖನವನ್ನು ವಿಶೇಷವಾಗಿ ಕರೋನ ವಿರುದ್ದ ಹೋರಾಡುತ್ತಿರುವ ವೈದ್ಯರಿಗೂ, ಸಿಬ್ಬಂದಿಯವರಿಗೂ, ನಗರಸಭೆ ನೌಕರರಿಗೂ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಸಮರ್ಪಿಸುತ್ತಿದ್ದೆನೆ ####
~~~~~~ ಪ್ರಮೋದ ನಲವಾಗಲ ~~~~~~~~
9686168202
Comments
Post a Comment