ಹಾವೇರಿ ನಗರಕ್ಕೆ 2500 ವಷ೯ಗಳ ಇತಿಹಾಸವಿದೆ
ಹಾವೇರಿ: ನಗರದ ಹೃದಯ ಭಾಗವಾದ ಬಸವೇಶ್ವರ ನಗರದಲ್ಲಿ ಇತಿಹಾಸ ಪೂರ್ವ ಕಾಲದ ನಿಲಸುಗಲ್ಲು ಹಾಗೂ ಇತಿಹಾಸ ಕಾದ ಶಿಲಾ ಶಾಸನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ, ಇತಿಹಾಸ ಸಂಶೋಧಕರಾದ ಡಾ. ಶರತ್‌ಬಾಬು ಹಾಗೂ ಡಾ. ರಮೇಶ ತೆವರಿ ಪತ್ತೆ ಮಾಡಿದ್ದಾರೆ.
ನಿಲಸುಗಲ್ಲು : ಬೃಹತ್ ಶಿಲಾಗೋರಿಯ ಕುರುಹು ನಿಲಸುಗಲ್ಲಾಗಿದೆ. ಇತಿಹಾಸ ಪೂರ್ವ ಕಾಲದಲ್ಲಿ ಜನರ ಗುಂಪಿನ ನಾಯಕ ಸಾವನ್ನಪ್ಪಿದಾಗ ಆತನ ನೆನಪು ಚಿರವಾಗಿರಲಿ ಎಂಬ ಉದ್ದೇಶದಿಂದ ಬೃಹತ್ ಆಕಾರದ ಶಿಲೆಯನ್ನು ನಿಲ್ಲಿಸುತ್ತಿದ್ದರು. ಇಂತಹ ಇತಿಹಾಸ ಪೂರ್ವಕಾಲದ ಕುರುಹು ಹಾವೇರಿಯ ಬಸವೇಶ್ವರ ನಗರದ ’ಬಿ’ ಬ್ಲಾಕ್‌ನಲ್ಲಿ ದೊರೆತಿದೆ. ೮ ಅಡಿ ಉದ್ದ ಹಾಗೂ ೩ ಅಡಿ ಅಗಲದ ಈ ನಿಲಸುಗಲ್ಲು ರಸ್ತೆಯ ಪಕ್ಕದಲ್ಲಿದೆ. ಕ್ರಿ. ಪೂ. ೧೨೦೦-೨೫೦ ರ ಕಾಲಘಟ್ಟಕ್ಕೆ ಸೇರಿದ ಈ ನಿಲಸುಗಲ್ಲು ಸು. ೨೫೦೦ ವರ್ಷಗಳ ಹಿಂದೆ ಜನರ ಗುಂಪೊಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.
ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಭೋಜರಾಜ ಪಾಟೀಲ ಸು. ೨೫೦೦ ವರ್ಷಗಳ ಹಿಂದೆ ಈ ಸ್ಥಳವು ಜನರು ವಾಸಿಸಲು ಅನುಕೂಲಕರವಾಗಿದ್ದಿರಬಹುದು ಹಾಗೂ ಅಲ್ಲಿಯ ಬೃಹತ್ತಾದಂತಹ ಕೆರೆಯ ನೀರಿನ ಮೇಲೆ ಅವರು ಅವಲಂಬಿತರಾಗಿರಬಹುದು. ಆದರೆ ಕೆರೆಯು ಈಗ ಮಾಯವಾಗಿದ್ದು ಆ ಭಾಗದಲ್ಲಿಯ ’ಹೊಸಕೆರೆ ಮಠ’ ಎಂಬ ಹೆಸರಿನ ಆಧಾರದ ಮೇಲೆ ಅಲ್ಲಿ ದೊಡ್ಡದಾದ ಕೆರೆಯಿತ್ತೆಂದು ಊಹಿಸಬಹುದಾಗಿದೆ. ಹಾಗೆಯೇ ಈ ಭಾಗದಲ್ಲಿ ಚೌಡಮ್ಮದೇವಿ ಎಂದು ಆರಾಧಿಸುವ ದುಂಡದಾದಂತಹ ಕಲ್ಲುಗಳನ್ನು ಸಹ ನೋಡಬಹುದಾಗಿದ್ದು. ಈ ಎಲ್ಲಾ ಆಧಾರಗಳ ಮೇಲೆ ಜನರು ಗುಂಪೊಂದು ಅಲ್ಲಿ ವಾಸಿಸಿರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಲಾಶಾಸನ: ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯ ಪಕ್ಕದಲ್ಲಿ ಶಿಲಾಶಾಸನವೊಂದಿದ್ದು ಅದನ್ನು ಸ್ಥಳೀಯರು ಪೂಜಿಸುತ್ತಿದ್ದು ಅದು ಕ್ರಿ. ಶ. ೧೭೫೯ಕ್ಕೆ ಸಂಬಂಧಿಸಿದ್ದಾಗಿದೆ. ಆ ಶಾಸನವು ಎಳು ಸಾಲುಗಳನ್ನು ಹೊಂದಿದ್ದು, ಅದರಲ್ಲಿಯ ಕೆಲವು ಅಕ್ಷರಗಳು ತೃಟಿತವಾಗಿವೆ.
ಶಾಸನದಲ್ಲಿಯ ವಿಷಯ: ಹಾವೇರಿ ’ಮಟ್ಟಿಯ ಗೋಣಿಬಸವಣ್ಣ ದೇವರ ಗುಡಿಗೆ’ ಹಾಕಿದ ಸೂಸ್ತಿ ಸರ್ವಮಾನ್ಯದ ಹೊಲವನ್ನು ಶಾಲಿವಾಹನ ಶಕ ೧೬೮೧ ರ ಬಹುಳ ೧೪ ರಂದು ( ಕ್ರಿ.ಶ ೧೭೫೯ ರ, ಬಹುಶ: ಮಹಾಶಿವರಾತ್ರಿಯೆಂದು) ಕೊಟ್ಟಿದ್ದನ್ನು ಸೂಚಿಸುತ್ತದೆ. ’ಮಟ್ಟಿ’ ಎಂದರೆ ಬಹುಶ: ಈಗಿನ ಬಸವೇಶ್ವರನಗರವನ್ನು ಒಳಗೊಂಡಂತಹ ನಾಗೇಂದ್ರನಮಟ್ಟಿಯಾಗಿರಬಹುದು. ಅಲ್ಲಿಯ ಗೋಣಿಬಸವಣ್ಣ ದೇವರಗುಡಿಯೆಂದರೆ ನಾಗೇಂದ್ರಮಟ್ಟಿ ಕೆರೆಯ ಪಕ್ಕದಲ್ಲಿರುವ ಈಗಿನ ಬಸವಣ್ಣದೇವರ ಗುಡಿಯಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಆ ಬಸವಣ್ಣದೇವರಿಗೆ ನೀಡಿದ ದಾನವನ್ನು ಸೂಚಿಸುವ ಗಡಿಕಲ್ಲೊಂದು ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಕಾಲೇಜಿನ ಆವರಣದಲ್ಲಿದೆ. ಅದನ್ನು ಸ್ಥಳಿಯರು ಲಿಂಗಮುದ್ರೆಕಲ್ಲೆಂದು ಕರೆಯುವರು.
ಸು. ೨೫೦೦ ವರ್ಷಗಳಷ್ಟು ಹಳೆಯದಾದ ಇತಿಹಾಸವನ್ನು ಹಾವೇರಿ ನಗರವು ಹೊಂದಿದೆ ಎಂದು ತಿಳಿಸುವ ಹಾಳಾಗಿ ಬಿದ್ದಿರುವ ನಿಲಸುಗಲ್ಲು ಹಾಗೂ ಶಿಲಾಶಾಸನವನ್ನು ಸಂರಕ್ಷಿಸುವ ಕೆಲಸವಾಗಬೇಕೆಂಬುದು ಸಂಶೋಧಕರ ಅಭಿಲಾಷೆಯಾಗಿದೆ.
Comments
Post a Comment