ಕಾಗೆನೆಲೆಯ ಇತಿಹಾಸವನ್ನು ಹೇಳುತ್ತಿವೆ ಹರಿದ ಹಾಳೆಗಳು.................!!!!??
ಕಾಗೆನೆಲೆ ಪನ್ನೆರಡು, ಬಾಸವೂರು-140 ರ ಕಂಪಣದ ಬನವಾಸಿ ದೇಶದ ' ಸಿರಿಗೆ ನೆಲವೆಂದು' ಶಾಸನಗಳಲ್ಲಿ ಉಲ್ಲೇಖವಾಗಿದೆ (ಕ್ರಿ.ಶ.1121 ರ ಶಾಸನವು.1933-34 ರಂದು ಪ್ರಕಟವಾಯಿತು). ಈ ಪುಣ್ಯ ಕ್ಷೇತ್ರ ಹಿಂದೆ ಜೈನರ ಕೇಂದ್ರವಾಗಿತ್ತು ಎಂದು ಹೇಳಲು ಇಲ್ಲಿಯ ತೀಥಾ೯ಂಕರ ವಿಗ್ರಹ ಹಾಗೂ ನಿಷೀದಿ ಕಲ್ಲುಗಳು ನಮಗೆ ಆಧಾರಗಳಾಗಿವೆ. 15 ನೇ ಶತಮಾನದಲ್ಲಿ ಈ ಸ್ಥಳವನ್ನು ಕಾಗಿನೆಲೆ ಎಂದು ಸಂಭೋದಿಸಲಾಗಿದೆ ಮುಂದೆ 18 ನೇ ಶತಮಾನದಲ್ಲಿಯು ಇದೇ ಹೆಸರು ಮುಂದುವರೆದಿದೆನ್ನಲು ನಮಗೆ ಗಜೇಂದ್ರಗಡದ ಕನಕಪ್ಪ ದಾಸರ ಮನೆಯಲ್ಲಿಯ ಹಸ್ತಪ್ರತಿ ಆಧಾರವಾಗಿದೆ (ಕನಕಪ್ಪ ದಾಸರ ಇವುರುಗಳು ಕನಕಗಿರಿಯ ಕನಕಾಚಲನ ಪರಮ ಭಕ್ತರಾಗಿದ್ದರಿಂದ ಅವರಿಗೆ ಕನಕಪ್ಪ ಎಂದು ಹೆಸರಿಡಾಗಿದೆ ಎಂಬುದು ವಿಶೇಷ ಹಾಗೇಯೇ ಇವರು ಕಾಗಿನೆಲೆಯ ಆದಿಕೇಶವನನ್ನು ಹಾಗೂ ಕನಕದಾಸರನ್ನು ತಮ್ಮ ಗ್ರಂಥದಲ್ಲಿ ಕೊಂಡಾಡಿದ್ದಾರೆ. ಹಸ್ತಪ್ರತಿ ಸುಮಾರು 250 ವಷ೯ಗಳಷ್ಟು ಹಳೆಯದಾಗಿದೆ).22 ರ ಜನೇವರಿ 1121 ರ ಶಾಸನದಲ್ಲಿ ಕಾಗೆನೆಲೆ ಎಂಬ ಹೆಸರು ಹೇಗೆ ಬಂದಿತ್ತೆಂಬುವುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ಶಾಸನದಲ್ಲಿಯ ವಿಷಯ:- ಕಾತ್ತಿ೯ಕಮಾಸದಂದಿನ ಚತುದ್ದ೯ಸಿಗುವ್ಯು೯ದೊಂದು ಸದ್ಗು ಹಾಮ್ರಿತ್ತಿಕೆಯಂತದಂ ಸವಿದ ಕಾಗೆ ಕರಂ ಬಿಳಿದಪ್ಪುದಾದೊಡಾ ಮ್ರಿತ್ತಿಕೆ ತಾನೆ ದಲು ಕನಕಯೋಗಸುಸಿದ್ದವೆನುತ್ತ ಬಲ್ಲವಕ್ಕೀ೯ತ್ತಿ೯ಸಲಿನ್ತು ಕಾಗೆನೆಲೆಯಾದುದದಲ್ಲದೆ ದೇಸೆಗಾದುದೇ ॥ ಎಂಬ ವಿಷಯವನ್ನು ವೀರಭದ್ರ ದೇವಸ್ಥಾನದ ಮುಂಭಾಗದಲ್ಲಿಯ ಶಾಸನದ 13 ಮತ್ತು 14 ನೇ ಸಾಲಿನಲ್ಲಿ ಖಂಡರಿಸಲಾಗಿದೆ.
ಶಾಸನದಲ್ಲಿಯ ವಿಷಯದ ಬಾವಾಥ೯:-ಕರಿಯ ಕಾಗೆಯೊಂದು ತನ್ನ ಇಷ್ಟವಾದುದ್ದನೆಲ್ಲವನ್ನು ತೊರೆದು ಆತ್ಮ ಶುದ್ದಿ ಮಾಡಿಕೊಳ್ಳಲು ಕಾತಿ೯ಕಮಾಸದ ಚತುರ್ದಶಿಯಂದು ಸಿಗುವ ಪುಣ್ಯ ಭೂಮಿಯ ಮಣ್ಣನ್ನು ಸವಿದಾಗ ಕರಿ ಕಾಗೆಯು ಬಿಳಿಯಾಯಿತು. ಪುಣ್ಯ ಭೂಮಿಯ ಮಣ್ಣು ತನಗೆ ಕನಕಯೋಗ ಸಿದ್ದಿಯಾಯಿತು ಎಂದು ತಿಳಿಯಿತು ಎಂದು ಬಲ್ಲವರು ಹೇಳುತ್ತಾ ಅದರ ಕೀರ್ತಿಯ ಫಲವಾಗಿ ಕಾಗೆನೆಲೆಯಾಯಿತೊ ಹೊರತು ಸೊಗಸಿಗಲ್ಲ(ಚಂದಕಲ್ಲ) ಎಂದು ತಿಳಿಸುತ್ತಿರುವುದು ಗಮನಾಹ೯. ಸೋಮವಾರದ ದಿನದಂದು ಖಂಡರಿಸಲಾದ ಈ ಶಾಸನದಲ್ಲಿ ಕಾಳೇಶ್ವರದೇವಗೆ ದೀಪ ಹಾಗೂ ದೂಪಕ್ಕಾಗಿ ಮತ್ತು ಕಂಬದ ಸೂಳೆಯರಿಗಾಗಿ ಗದ್ದೆಯನ್ನು ದಾನವನ್ನಾಗಿ ಸ್ಥಳೀಯ ಮಹಾಪ್ರಭುಗಳಾದ ಬಮ್ಮ೯ಗಾವುಂಡ ಹಾಗೂ ಚೀಲಗಾವುಂಡರು ನೀಡಿದರು ಎಂದು ತಿಳಿಸಿದೆ.12 ನೇ ಶತಮಾನದ ಪ್ರಾರಂಭದಲ್ಲಿ ಇಲ್ಲಿ ನಾಟ್ಯ ಶಾಲೆಗಳು ಹಾಗೂ ವಿದ್ಯಾಥಿ೯ಗಳಿಗೆ ವಿದ್ಯಾಕೇಂದ್ರಗಳಿದ್ದವು. ಆದಿಕೇಶವನ ವಿಗ್ರಹವನ್ನು ಸಂತ ಕನಕದಾಸರು ಕಾಗಿನೆಲೆಯಲ್ಲಿ ಪ್ರತಿಷ್ಠಾಪನೆ ಮಾಡಿದರು. ಆದಿಕೇಶವನ ದೇವಸ್ಥಾನ ಹಿಂದೆ ಹಳೆಯ ಕಟ್ಟಡವನ್ನು ಹೊಂದಿದ್ದು 66 ಫೂಟ್ ಉದ್ದ ಹಾಗೂ 23 ಫೂಟ್ ಅಗಲದಲ್ಲಿ ಕಟ್ಟಡವಿದ್ದು ದ್ವಾರಮಂಟಪದಲ್ಲಿ 12 ಕಂಬಗಳಿದ್ದವು.ಈಗ ಹಳೆಯ ಕಟ್ಟಡವನ್ನು ಸಂಪೂಣ೯ವಾಗಿ ಬದಲಿಸಿ ಬಹು ಸುಂದರವಾಗಿ ಹೊಸ ರೂಪವನ್ನು ನೀಡಲಾಗಿದೆ. ಹಳೆಯ ಕಾಗೆನೆಲೆಯ ನರಸಿಂಹ ದೇವಾಲಯದಲ್ಲಿ ರಾಷ್ಟ್ರಕೂಟರ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅವಶೇಷಗಳನ್ನು ನಾವು ನೋಡಬಹುದಾಗಿದೆ. ಹಿಂದೆ ಈ ದೇವಾಲಯದ ದ್ವಾರಮಂಟಪದಲ್ಲಿ(ಚಂದ್ರಶಾಲೆ) ಕಟ್ಟಿಗೆಯ ಕಂಬಗಳು ಇದ್ದವು ಎಂದು ಬ್ರಿಟಿಷ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ದೇವಾಲಯದ ಪ್ರವೇಶ ಮೆಟ್ಟಿಲಿನ ಮೇಲೆ ಕೊಂಡಪ್ಪ ಹಾಗೂ ವೆಂಕಪ್ಪ ಎಂದು ನಾಗರ ಶೈಲಿಯ ಸಂಸ್ಕೃತ ಭಾಷೆಯಲ್ಲಿ ಖಂಡರಿಸಲಾಗಿದೆ. 1893 ರ ಬ್ರಿಟಿಷರ ದಾಖಲೆಯಲ್ಲಿ ಈ ದೇವಾಲಯವನ್ನು ಅವರುಗಳೆ ನಿಮಿ೯ಸಿದರು ಎಂದು ನಮೂದಿಸಲಾಗಿದೆ. ಚಂದ್ರಗುತ್ತಿಯಲ್ಲಿ ಹಾಗೂ ಇಕ್ಕೇರಿಯಲ್ಲಿಯ ಮೆಟ್ಟಿಲುಗಳನ್ನು ಗಮನಿಸಿದಾಗ ಇದೇ ತರಹ ಅಕ್ಷರಗಳನ್ನು ಹಾಸುಗಲ್ಲುಗಳ ಮೇಲೆ ಕೆತ್ತಲಾಗಿದೆ. ಈ ವಿಷಯವನ್ನಾದರಿಸಿ ಕೆಲವು ಸಂಶೋಧಕರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.
ಅದೇನೆಂದರೆ ಮೆಟ್ಟಿಲುಗಳನ್ನು ದಾನಿಗಳು ಕಟ್ಟಿಸಿದಾಗ ಅವರ ಹೆಸರುಗಳು ಅದರ ಮೇಲೆ ಹಾಕುತ್ತಾರೆ. ಇಂತಹ ಮೆಟ್ಟಿಲುಗಳನ್ನು ಭಕ್ತರು ತುಳಿದು ನಡೆದಾಗ ದಾನಿಗಳಿಗೆ ಪುಣ್ಯ ಲಭಿಸುತ್ತದೆ ಹೀಗಾಗಿ ಆ ಕಾಯ೯ಕ್ಕೆ ದಾನಿಗಳು ಮುಂದಾಗುತ್ತಾರೆಂದು ತಿಳಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕಾಗಿನೆಲೆ 'ಕೋಡ' ತಾಲೂಕಿಗೆ ಸೇರಿತ್ತು. ಕ್ರಿ.ಶ 1881ರಲ್ಲಿ 1232 ಜನರು ಈ ಗ್ರಾಮದಲ್ಲಿ ವಾಸವಾಗಿದ್ದರು. ಲಕ್ಷ್ಮಿ ನರಸಿಂಹ ದೇವಾಲಯದ ಅಚ೯ಕರಿಗೆ ಪೂಜೆ ಹಾಗೂ ಜಾತ್ರೆಯಂದು ಕಟ್ಟಿಗೆ ರಥೋತ್ಸವ ನಡೆಸಲು ವಷ೯ಕ್ಕೆ 494 ರೂಪಾಯಿಗಳ ಧನಸಹಾಯವನ್ನು ಅಂದಿನ ಬ್ರಿಟಿಷ್ ಸರಕಾರ ನೀಡುತ್ತಿತ್ತು. ಈ ದೇವಸ್ಥಾನದ ಒಳಭಾಗದಲ್ಲಿ ಅನೇಕ ವಿಗ್ರಹಗಳಿದ್ದು ಅವುಗಳಲ್ಲಿಯ ಕುಮಾರ ರಾಮನ ತೃುಟಿತ ವಿಗ್ರಹವು ವಿಶೇಷತೆಯನ್ನು ಸಾರುವಂತಿದೆ.ಇಲ್ಲಿಯ ಕಲ್ಲ್ಮೇಶ್ವರ,ಮಳಿಮಲ್ಲೇಶ್ವರ, ಕಪೂ೯ರೇಶ್ವರ,ಸಂಗಮೇಶ್ವರ,ವೀರಭದ್ರೇಶ್ವರ ಸೋಮೇಶ್ವರ ಹಾಗೂ ಕಾಳಹಸ್ತೇಶ್ವರ ದೇವಾಲಯಗಳು ತಮ್ಮದೆ ಇತಿಹಾಸವನ್ನು ಹೊಂದಿವೆ. ವಿಶೇಷವಾಗಿ ಸಂಗಮೇಶ್ವರ ದೇವಸ್ಥಾನದಲ್ಲಿಯ ಗದ್ದುಗೆಯ ಆಶಿವಾ೯ದವನ್ನು ಪಡೆಯಲು ಕೊಡೆಕಲ್ ಹಾಗೂ ಸುರಪುರ ಭಾಗದಿಂದ ಅವರ ವಂಶಸ್ಥರು ಹಾಗೂ ಅನೇಕ ಭಕ್ತರ ದಂಡು ಇಲ್ಲಿಗೆ ಹರಿದು ಬರುತ್ತದೆ. ಉಡುಪಿಯ ಭಂಡಾರಿಮಠದ ಯತಿಗಳು ಸಮಾದಿಯಾಗಿದ್ದರಿಂದ ಹಿಂದೆ ಅಲ್ಲಿ ವೃಂದಾವನ ಕಟ್ಟಿಸಲಾಗಿದೆ. ಅದಕ್ಕೆ ಬಳಿಸಿದ ಮೂರು ಕಂಬಗಳಲ್ಲಿ ನಾವು ಲಿಪಿಗಳನ್ನು ಕಾಣಬಹುದು. ಬಹುಶಃ ಅದಕ್ಕೆ ಬಳಿಸಿರುವ ಕಲ್ಲಿನ ಕಂಬಗಳು ಜೈನ ಬಸದಿಗೆ ಸಂಬಂಧ ಪಟ್ಟಿರಬಹುದು. ಕ್ರಿ.ಶ 1121ರ ಶಾಸನದಲ್ಲಿ ಬರುವ ಕಾಗೆನೆಲೆಯ ಕಾಳಿಸೆಟ್ಟಿ ಮಾಡಿಸಿದ ಬ್ರಹ್ಮೇಶ್ವರ ದೇವಾಲಯ ಬಹುಶಃ ಈಗಿನ ಕಲ್ಮೇಶ್ವರ ದೇವಸ್ಥಾನವಿರಬಹುದು ಎನಿಸುತ್ತದೆ. ಈಗಿನ ಸೋಮೇಶ್ವರ ದೇವಾಲಯವೆ ಶಾಸನದ ಗ್ರಾಮೇಶ್ವರ ದೇವಾಲಯ ಆಗಿರಬಹುದು.
ಉಗುರಮೂನವ೯ರ(ಎಲೆ ಕಟ್ಟು ಮಾಡುವರ), ಕೊನೆಯಕಾರರ(ಬಹುಶಃ ಗೊನೆ ಇಳಿಸುವವರು), ಐನೂರಾನಾಲ್ವರ, ಅಂಬಲಿಗಸಾಸಿವ೯ರ, ಬಣಂಜಿಗರೈನೂವ೯ರ, ಅಡುಕೆ ಹೆರುವರ ಸಂಘಗಳು ಇಲ್ಲಿ ಚಾಕುಚಕ್ಯತೆಯಿಂದ ಕಾಯ೯ ನಿವ೯ಹಿಸುತ್ತಿದ್ದವು ಹಿಂದೆ ಹಿರಿಯ ಕೆರೆಯ ಅಕ್ಕ-ಪಕ್ಕದಲ್ಲಿ ತೋಟಗಳಿದ್ದವು. ಈಗ ಅಡಿಕೆ ತೋಟಗಳು ಕಡಿಮೆಯಾಗಿದ್ದರೂ, ಅಡಿಕೆಗಳನ್ನು ಬೇರೆಯ ಕಡೆಯಿಂದ ತಂದು ವಿಶೇಷವಾಗಿ ಹದಗೊಳಿಸುತ್ತಾರೆ.ಕನಕ ಗುರು ಪೀಠದಿಂದಾಗಿ ಭಕ್ತಿಯ ನೆಲೆಯಾಗಿದೆ ಈ ಕಾಗಿನೆಲೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಕಠಿಣ ಪರಿಶ್ರಮದಿಂದ ಈಗ ಇದೊಂದು ದೇಶದಲ್ಲಿಯೇ ಗುರುತಿಸುವಂತಹ ಪ್ರವಾಸಿ ತಾಣವಾಗಿ ಮಾಪ೯ಟ್ಟಿದೆಯಂದರೆ ತಪ್ಪಾಗಲಾರದು. ನಾನು ಕ್ಷೇತ್ರ ಅಧ್ಯಾಯನಕ್ಕೆ ತೆರಳಿದಾಗ ನನ್ನ ಜೊತೆ ಸದಾ ಬೆನ್ನೆಲುಬಿನ ಹಾಗೆ ನಿಂತು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ಕನ್ನಡ ಪ್ರಾಧ್ಯಾಪಕರಾದ ಡಾ.ರಮೇಶ ತೆವರಿಯವರಿಗೂ ಹಾಗೂ ಸನಿಹದಲ್ಲಿಯೆ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಿರುವ ಮಿತ್ರನಾದ ಕಾಂತೇಶ ಗೂಡಿಹಾಳರಿಗೆ ಅನಂತ ಅನಂತ ಧನ್ಯವಾದಗಳು.
ಪ್ರಮೋದ ನಲವಾಗಲ 9686168202
Comments
Post a Comment